ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್ ವಲಯದಲ್ಲಿ ಹೊಸದಾಗಿ ಮರಳು ದಿಬ್ಬ ಗುರುತಿಸಲು ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿ ಬೇಥಮೆಟ್ರಿಕ್ ಸರ್ವೇ ಮುಕ್ತಾಯಗೊಂಡಿದೆ.
ಶಾಂಭವಿ ನದಿಯಲ್ಲಿ ಸರ್ವೇ ಒಂದೆರಡು ದಿನಗಳಲ್ಲಿ ಪ್ರಾರಂಭಗೊಳ್ಳಲಿದ್ದು, ಇದು ಪೂರ್ಣಗೊಂಡ ಕೂಡಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಕಳೆದ ವರ್ಷ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಗುರುತಿಸಿದ್ದ ಎಲ್ಲ 22 ದಿಬ್ಬಗಳ ಪರವಾನಿಗೆ ಅವಧಿ ಎರಡು ಹಂತಗಳಲ್ಲಿ ಮುಕ್ತಾಯಗೊಂಡಿತ್ತು. ಪ್ರಥಮ ಹಂತದಲ್ಲಿ ಪರವಾನಿಗೆ ನೀಡಿರುವ 12 ಮರಳು ದಿಬ್ಬಗಳಲ್ಲಿ ಅ. 15ರಂದು ಮತ್ತು ಎರಡನೇ ಹಂತದಲ್ಲಿ ಪರವಾನಿಗೆ ನೀಡಿರುವ 10 ದಿಬ್ಬಗಳಲ್ಲಿ ಮರಳುಗಾರಿಕೆ ಡಿ. 26ಕ್ಕೆ ಕೊನೆಗೊಂಡಿತ್ತು. ಇದರೊಂದಿಗೆ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಬೇಥಮೆಟ್ರಿಕ್ ಸರ್ವೇ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯು ನೇತ್ರಾವತಿ ಮತ್ತು ಫಲ್ಗುಣಿ ನದಿಗಳಲ್ಲಿ ಸರ್ವೇ ಪೂರ್ಣಗೊಳಿಸಿದೆ. ಶಾಂಭವಿಯಲ್ಲಿ ಸರ್ವೇ ನಡೆಸಿ ವರದಿಯನ್ನು 10 ದಿನಗಳೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ಗಣಿ ಇಲಾಖಾ ಮೂಲಗಳು ತಿಳಿಸಿವೆ.
ವರದಿಯನ್ನು ಎನ್‌ಐಟಿಕೆಗೆ ಒಪ್ಪಿಸಿ ಅಲ್ಲಿಂದ ತಾಂತ್ರಿಕ ವರದಿಯನ್ನು ಪಡೆಯಲಾಗುತ್ತದೆ. ಈ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಸಿಆರ್‌ಝಡ್, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ 7 ಮಂದಿಯ ಸಮಿತಿ ಪರಿಶೀಲಿಸಿ ಬೆಂಗಳೂರಿನಲ್ಲಿರುವ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಇಲಾಖೆ ವಿಭಾಗಕ್ಕೆ (ಕೆಸಿಝಡ್‌ಎಂ) ಕಳುಹಿಸಿಕೊಡಲಿದೆ. ಅಲ್ಲಿಂದ ಪರಿಸರ ವಿಮೋಚನ ಪತ್ರ ಲಭ್ಯವಾದ ಬಳಿಕ 7 ಮಂದಿಯ ಸಮಿತಿ ವಿವಿಧ ಮಾನದಂಡಗಳನ್ನು ಪರಿಶೀಲಿಸಿ ಹೊಸದಾಗಿ ಈ ಪ್ರದೇಶದಲ್ಲಿ ಮರಳುಗಾರಿಕೆಗೆ ಪರವಾನಿಗೆಗಳನ್ನು ನೀಡುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಕನಿಷ್ಠವೆಂದರೆ ಸುಮಾರು 2 ತಿಂಗಳು ತೆಗೆದುಕೊಳ್ಳುವ ಸಾಧ್ಯತೆಗಳಿದ್ದು, ಮುಂದಿನ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಪ್ರಥಮ ವಾರದಲ್ಲಿ ಮರಳು
ಗಾರಿಕೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ ನೇತ್ರಾವತಿ ಮತ್ತು ಫಲ್ಗುಣಿ ನದಿಯ ಸಿಆರ್‌ಝಡ್ ವಲಯದ 22 ಬ್ಲಾಕ್‌ಗಳಲ್ಲಿ ಒಟ್ಟು 105 ಮಂದಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು.
ಜಿಲ್ಲೆಯಲ್ಲಿ ಸದ್ಯ ಮರಳು ಲಭ್ಯ
ದ.ಕ. ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮರಳು ಸಮಸ್ಯೆ ಹೆಚ್ಚು ಬಾಧಿಸಿಲ್ಲ. ಪ್ರಸ್ತುತ ನಾನ್‌ಸಿಆರ್‌ಝಡ್ ವಲಯದಲ್ಲಿ 5 ಕಡೆ ಮರಳುಗಾರಿಕೆ ಚಾಲನೆಯಲ್ಲಿದೆ. ತುಂಬೆ ಡ್ರೆಜ್ಜಿಂಗ್‌ನಿಂದಲೂ ಮರಳು ಲಭಿಸಿದೆ.