Advertisement

ದ.ಕ.-ಉಡುಪಿ :ನಾನ್‌ ಸಿಆರ್‌ಝೆಡ್‌ ಮರಳುಗಾರಿಕೆಗೆ ನಿಯಮ ಸಡೀಲಿಕರಣ ಪ್ರಸ್ತಾಪ

09:38 AM Sep 14, 2019 | Sriram |

ಬೆಂಗಳೂರು :ದ.ಕ. ಹಾಗೂ ಉಡುಪಿ ಸೇರಿದಂತೆ ಕರಾವಳಿಯಲ್ಲಿ ತಲೆದೋರಿರುವ ಮರಳು ಸಮಸ್ಯೆ ಪರಿಹಾರಕ್ಕಾಗಿ ಸೆ.12ರಂದು ವಿಧಾನ ಸೌಧದಲ್ಲಿ ಸಭೆ ಕರೆಯಲಾಗಿತ್ತು ಹಾಗೂ ಇದರ ಮುಂದುವರಿದ ಭಾಗವಾಗಿ ಶುಕ್ರವಾರವೂ ವಿಧಾನ ಸೌಧದಲ್ಲಿ ಮರಳು ಮತ್ತುಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Advertisement

ಶುಕ್ರವಾರದ ಸಭೆಯಲ್ಲಿ 2010-11ರ ಮರಳು ನೀತಿಯಿಂದ ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ ಎಂಬುದನ್ನು ಒತ್ತಿ ಹೇಳಿದ ಜಿಲ್ಲೆಯ ಶಾಸಕರು ,ಮರಳು ನೀತಿಯನ್ನು ಸಡಿಲೀಕರಣ ಮಾಡುವಂತೆ ಮನವಿ ಮಾಡಿದರು.

ನಾನ್‌ ಸಿಆರ್‌ಝೆಡ್‌ ಪ್ರದೇಶದಲ್ಲಿ ಟೆಂಡರ್‌ ಬದಲಾಗಿ ಟೆಂಪರರಿ ಪರ್ಮಿಟ್‌ ನೀಡಿ ಪಾರಂಪರಿಕ ಮರಳುಗಾರಿಕೆ ಮಾಡುವವರಿಗೆ ಅವಕಾಶ ಮಾಡಿಕೊಡಬೇಕು. ಈಗಿರುವ ಮರಳು ದಿಬ್ಬವನ್ನು ಕನಿಷ್ಟ 5 ಎಕ್ರೆ ಬೇಕೇಂಬ ನಿಯಮವನ್ನು ಸಡಲೀಕರಿಸಿ 50 ಸೆಂಟ್ಸ್‌ ಇರುವವರೆಗೂ ಅವಕಾಶ ನೀಡಬೇಕು.ಮಳೆಗಾಲದಲ್ಲಿ ಮಣ್ಣು ಮರಳಾಗುವುದರಿಂದ ನಾನ್‌ ಸಿಆರ್‌ಝೆಡ್‌ನ‌ಲ್ಲಿ ನೀರಿನ ಒಳ ಹಾಗೂ ಹೊರಗಿನ ಮರಳು ತೆಗೆಯಲು ಅವಕಾಶ ನೀಡಬೇಕು ಎಂಬುದನ್ನೂ ಸಚಿವರ ಗಮನಕ್ಕೆ ತರಲಾಯಿತು.ಇದಕ್ಕಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು 2 ದಿನಗಳೊಳಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಸೂಚಿಸಿದರು.

ಪಾರಂಪಾರಿಕ ಮರಳುಗಾರಿಕೆಯ ಬಗ್ಗೆ ರಾಜ್ಯದ ಮರಳು ನೀತಿಯಲ್ಲಿ ಗುಜರಾತ್‌ನ ಮರಳು ನೀತಿಯ ಕುರಿತು ಉಲ್ಲೇಖ ಇರುವುದರಿಂದ ,ಗುಜರಾತ್‌ ಮರಳು ನೀತಿಯನ್ನು ಕರ್ನಾಟಕದಲ್ಲಿ ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ವಾರದೊಳಗೆ ಗುಜರಾತ್‌ಗೆ ತೆರಳಿ ಅಧ್ಯಯನ ನಡೆಸಿ ಪೂರಕ ಅಂಶಗಳ ವರದಿ ಸಲ್ಲಿಸುವಂತೆಯೂ ಸಚಿವರು ಸೂಚಿಸಿದರು.

ಅದರಂತೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕ ಮಹೇಶ್ವರ ರಾವ್‌,ಕಾರ್ಕಳ ಶಾಸಕ ಸುನೀಲ್‌ ಕುಮಾರ್‌.ಉಡುಪಿ ಶಾಸಕ ರಘುಪತಿ ಭಟ್‌,ಪುತ್ತೂರು ಶಾಸಕ ಸಂಜೀವ ಮಠಂದೂರು,ಕುಮಟಾ ಶಾಸಕ ದಿನಕರ ಶೆಟ್ಟಿ ಅವರನ್ನೊಳಗೊಂಡ ತಂಡವನ್ನು ಅಧ್ಯಯನಕ್ಕಾಗಿ ರಚಿಸಲಾಗಿದೆ.ವಾರದೊಳಗೆ ಗುಜರಾತ್‌ನ ಮರಳು ನೀತಿಯ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ಸಚಿವ ಸಿ.ಸಿ.ಪಾಟೀಲ್‌ ಸೂಚಿಸಿದರು.

Advertisement

ಮರಳು ಸಮಸ್ಯೆ ಕುರಿತು ಜಿಲ್ಲೆಯ ನಿಯೋಗ ಗುರುವಾರ ಬೆಂಗಳೂರಿಗೆ ತೆರಳಿ ಕರಾವಳಿಯ ಶಾಸಕರಿಗೆ ಪೂರಕ ಮಾಹಿತಿ ಹಾಗೂ ಸಮಸ್ಯೆಗಳ ಕುರಿತು ವಿವರಣೆ ನೀಡಿದರು.

ನಿಯೋಗದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು,ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್‌ ರೈ ಕೆಡೆಂಜಿ,ಜಿ.ಪಂ.ಮಾಜಿ ಸದಸ್ಯ ನವೀನ್‌ ಕುಮಾರ್‌ ಮೇನಾಲ,ಸವಣೂರು ಗ್ರಾ.ಪಂ.ಸದಸ್ಯ ಪ್ರಕಾಶ್‌ ಕುದ್ಮನಮಜಲು, ಸುರೇಶ್‌ ಕುಂಡಡ್ಕ ಪೆರಾಬೆ,ತೀರ್ಥರಾಮ ಕೆಡೆಂಜಿ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್‌ ಕುಮಾರ್‌ ,ಜಿನ್ಸಿ ನೆಲ್ಯಾಡಿ,ಪೇಸ್‌ನ ಮಾಜಿ ಅಧ್ಯಕ್ಷ ವಸಂತ ಭಟ್‌ ಪುತ್ತೂರು,ರಾಘವೇಂದ್ರ ಭಟ್‌ ಕೆದಿಲ ಮೊದಲಾವರಿದ್ದರು.

ಕರಾವಳಿ ಭಾಗದ ಮರಳು ಸಮಸ್ಯೆ ಕುರಿತಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಶಾಸಕರಾದ ಸಂಜೀವ ಮಠಂದೂರು,ಎಸ್‌ ಅಂಗಾರ,ಉಮಾನಾಥ ಕೋಟ್ಯಾನ್‌,ಡಾ.ಭರತ್‌ ಶೆಟ್ಟಿ,ವೇದವ್ಯಾಸ ಕಾಮತ್‌,ರಾಜೇಶ್‌ ನಾೖಕ್‌,ಸುಕುಮಾರ ಶೆಟ್ಟಿ,ಹಾಲಾಡಿ ಶ್ರೀನಿವಾಸ ಶೆಟ್ಟಿ,ಲಾಲಾಜಿ ಮೆಂಡನ್‌, ಹರೀಶ್‌ ಪೂಂಜಾ ,ದಿನಕರ ಶೆಟ್ಟಿ ಸಚಿವರ ಮುಂದಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next