Advertisement

ಒತ್ತುವರಿಗೆ ಬೆಂಗಾವಲಾದ ಮರಳು ಮಾಫಿಯಾ : ಮರಳು ದೋಚಲು ನಾ ಮುಂದೆ ತಾ ಮುಂದೆ

03:29 PM Sep 03, 2020 | sudhir |

ಬಾಗಲಕೋಟೆ: ನಾಲ್ಕು ಜಿಲ್ಲೆಗಳ ಜೀವನಾಡಿ ಮಲಪ್ರಭೆ ನದಿಯ ಒತ್ತುವರಿದಾರರಿಗೆ ಮರಳು ಮಾಫಿಯಾ ದೊಡ್ಡ ಬೆಂಗಾವಲಾಗಿ ನಿಂತಿದೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿವೆ. ಹೌದು. 40 ವರ್ಷಗಳ ಹಿಂದೆ ಮಲಪ್ರಭಾ ನದಿಯ ವೈಭವ ಬಲು ಜೋರಾಗಿತ್ತು. ಈ ನದಿಯ ಮರಳಿಗೆ ಚಿನ್ನದಂತೆ ಬೆಲೆಯೂ ಇದೆ.ಭಾರಿ ಬೇಡಿಕೆಯೂ ಇದೆ. ಅದರಲ್ಲೂ ಭೀಮಾ, ಕೃಷ್ಣಾ ನದಿಯ ಮರಳಿನಂತೆ ಕಪ್ಪು ಮರಳು ಈ ನದಿಯಲ್ಲಿ ಸಿಗಲ್ಲ. ಹೀಗಾಗಿ ಕಳೆದ ಹಲವು ವರ್ಷಗಳಿಂದ ಮರಳು ಮಾಫಿಯಾದಿಂದ ಇಡೀ ನದಿಯ ಒಡಲು ಸಂಕಷ್ಟಕ್ಕೆ ಸಿಲುಕಿದೆ.

Advertisement

ಏಳು ತಾಲೂಕಿನಲ್ಲಿ ಚಿನ್ನದ ಬೆಲೆ ಪಡೆದ ಮರಳು:
ಮಲಪ್ರಭಾ ನದಿ ಪಾತ್ರದ ಬೆಳಗಾವಿ ಜಿಲ್ಲೆಯ ರಾಮದುರ್ಗ, ಬಾಗಲಕೋಟೆ ಜಿಲ್ಲೆಯ ಬಾದಾಮಿ, ಗುಳೇದಗುಡ್ಡ ಹಾಗೂ ಹುನಗುಂದ, ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕುಗಳಲ್ಲಿ ಅತಿ ಹೆಚ್ಚು ನಿಯಮಾನುಸಾರ ಮರಳುಗಾರಿಕೆ ಹೆಸರಲ್ಲಿ ಅಕ್ರಮ ಮಾಫಿಯಾ ಜಾಲವಿದೆ. ನದಿ ಪಾತ್ರದ ಏಳು ತಾಲೂಕಿನಲ್ಲಿ ಮಲಪ್ರಭೆಯ ಮರಳು ಮಾಫಿಯಾ, ಒತ್ತುವರಿದಾರರಿಗೆ ಬೆಂಗಾವಲಾಗಿ, ಪಟ್ಟಾ ಭೂಮಿಗೆ ಅಘೋಷಿತ ಮಾಲಿಕರಾಗಿ ನದಿಯ ಒಡಲು ತುಂಬುವ ಮರಳು ದೋಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಬಹಿರಂಗ ಸತ್ಯ ಕೂಡ.

ಅಧಿಕಾರಿಗಳ ಕೈಬಿಸಿ: ಮರಳು ಮಾಫಿಯಾದಲ್ಲಿ ದೊಡ್ಡ ದೊಡ್ಡ ಕೈಗಳಿವೆ. ಜಿಲ್ಲಾಡಳಿತ ಭವನದಿಂದ ಹಿಡಿದು ನದಿ
ದಂಡೆಯ ಭೂ ಮಾಲೀಕರವರೆಗೂ ಮರಳು ವ್ಯವಹಾರ ನಡೆಸುವವರು ಕೈಬಿಸಿ ಮಾಡುತ್ತಾರೆ. ಹೀಗೆ ಕೈಬಿಸಿ ಕಂಡವರೆಲ್ಲ, ಪ್ರಕೃತಿದತ್ತವಾಗಿ ಬಂದ ನದಿಯ ಒಡಲು ಹಾಳಾದರೂ ಚಿಂತೆಯಿಲ್ಲ, ನಮಗೊಂದಿಷ್ಟು ಸಿಕ್ಕಿತಲ್ಲ ಎಂಬ ದುರಾಶೆಯಲ್ಲಿದ್ದಾರೆ. ಇಂತಹ ದುರಾಶೆಯ ಫಲವಾಗಿಯೇ ವರ್ಷದಿಂದ ವರ್ಷಕ್ಕೆ ನದಿಯ ಗಾತ್ರ ಕಿರಿದಾಗುತ್ತಿದೆ. ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್‌ ಇಲಾಖೆ ಸಹಿತ ಹಲವು ಇಲಾಖೆಗಳು ಗಟ್ಟಿ ಮನಸ್ಸು ಮಾಡಿದರೆ ಮರಳು ವ್ಯವಹಾರ, ಅಕ್ರಮದ ದಾರಿಯಿಂದ ಹೊರ ಬರಲು ಸಾಧ್ಯವಿದೆ. ಆದರೆ, ಒಬ್ಬರು ಪ್ರಾಮಾಣಿಕರಿದ್ದರೆ, ಮತ್ತಿಬ್ಬರು ಈ ವ್ಯವಹಾರಕ್ಕೆ ಕೈ ಜೋಡಿಸುವವರೇ ಹೆಚ್ಚು. ಹೀಗಾಗಿ ನಾನೊಬ್ಬ ಗಟ್ಟಿತನ ತೋರಿದರೆ ಆಗೋದೇನು ಎಂಬ ಉದಾಸೀನತೆ ಬಹುತೇಕರಲ್ಲಿದ್ದು, ಇದು ಅಕ್ರಮ ಮರಳು ಗಣಿಗಾರಿಕೆಗೆ ಇಂಬು ನೀಡಿದೆ.

10 ಸಾವಿರ ಎಕರೆ ಒತ್ತುವರಿ: ಮಲಪ್ರಭಾ ನದಿ ಸಂರಕ್ಷಣೆಗಾಗಿ ಕಳೆದ 40 ವರ್ಷಗಳಿಂದ ಹೋರಾಟ ನಡೆದಿದೆ. ಗುಳೇದಗುಡ್ಡ ಮತ್ತು ರಾಮದುರ್ಗದಲ್ಲಿ ಹುಟ್ಟಿಕೊಂಡ ಈ ಹೋರಾಟ, ಇದೀಗ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ವಿಸ್ತರಿಸಿದೆ. ಆದರೆ, ಇದಕ್ಕೆ ಮಠಾಧೀಶರು, ಸಂಘ-ಸಂಸ್ಥೆಗಳು, ಪ್ರಗತಿಪರರು ಬೆಂಬಲ ನೀಡಿ, ಹೋರಾಟಕ್ಕಿಳಿಯಬೇಕಿದೆ. ಮುಖ್ಯವಾಗಿ ನಾಲ್ಕು ಜಿಲ್ಲೆಗಳ, ಎಲ್ಲ ರಾಜಕೀಯ ಪಕ್ಷಗಳ ನಾಯಕರಲ್ಲಿ ರಾಜಕೀಯ ಇಚ್ಛಾಸಕ್ತಿ ಮೂಡಬೇಕು. ನಾವು ಸೃಷ್ಟಿಸದ ನದಿಯ ನಾಶಕ್ಕೆ, ನಾವೇಕೆ ಕಾರಣರಾಗಬೇಕು-ಪ್ರಕೃತಿ ನೀಡಿದ ನದಿಯೆಂಬ ಜೀವಜಲ ವಿನಾಶವಾಗಬಾರದೆಂಬ ಭಾವನೆ ಮೊದಲು ಬರಬೇಕಿದೆ.

ಕಣಕುಂಬಿಯಿಂದ ಹಿಡಿದು ಕೂಡಲಸಂಗಮದವರೆಗೆ 10 ಸಾವಿರ ಎಕರೆ ನದಿ ಒತ್ತುವರಿಯಾಗಿದೆ. ಸ್ವತಃ ಡಿಸಿಎಂ ಗೋವಿಂದ ಕಾರಜೋಳರು ಹೇಳುವಂತೆ ಹಿಂದಿನ ದಾಖಲೆಗಳ ಪ್ರಕಾರ, ನದಿ 135 ಮೀಟರ್‌ ಅಗಲವಾಗಿ ಹರಿಯುತ್ತಿತ್ತು. 40 ಸಾವಿರ ಕ್ಯೂಸೆಕ್‌ ನೀರು ಹರಿಯುವ ಸಾಮರ್ಥ್ಯವೂ ಇದೆ. ಆದರೀಗ 5 ಸಾವಿರ ಕ್ಯೂಸೆಕ್‌ ನೀರು ಬಿಟ್ಟರೂ ಅಕ್ಕಪಕ್ಕದ ಹೊಲಕ್ಕೆ ನುಗ್ಗುತ್ತಿದೆ
ಎಂದಿದ್ದಾರೆ. ಅಂದರೆ ಸದ್ಯ ನದಿಯ ಪಾತ್ರ ಇರುವುದು ಕೇವಲ 8ರಿಂದ 15 ಮೀಟರ್‌ ಮಾತ್ರ.

Advertisement

ಮಲಪ್ರಭಾ ನದಿ 40 ವರ್ಷಗಳ ಹಿಂದೆ ವಿಶಾಲವಾಗಿ ಹರಿಯುತ್ತಿತ್ತು. ನದಿಯಲ್ಲಿ ಯಾವಾಗ ಮರಳು ಅಕ್ರಮ ಶುರುವಾಯಿತೋ
ಆಗಿನಿಂದ ಒತ್ತುವರಿಯೂ ಜೋರಾಯಿತು. ನದಿ ಒತ್ತುವರಿದಾರರು, ಅಕ್ರಮ ಮರಳು ವ್ಯವಹಾರ ನಡೆಸುವವರಿಗೆ ರಾಜಕೀಯ
ನಾಯಕರೇ ಬೆಂಗಾವಲಾಗಿ ನಿಂತಿರು. ಪರಿಣಾಮ ಈಗ ನದಿ ಭಾರಿ ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಹೀಗೆ ಬಿಟ್ಟರೆ, ಮಹದಾಯಿ ಯೋಜನೆ ಜಾರಿಯಾದ ಬಳಿಕ, ಪ್ರವಾಹದ ತೀವ್ರತೆ ಇನ್ನೂ ಹೆಚ್ಚಾಗಲಿದೆ. ಈಗಲೇ ಸರ್ಕಾರ ಎಚ್ಚೆತ್ತುಕೊಂಡು ನದಿ ಒತ್ತುವರಿ ತೆರವುಗೊಳಿಸಬೇಕು.
– ಅಶೋಕ ಚಂದರಗಿ, ಅಧ್ಯಕ್ಷರು, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ

ನದಿ ಒತ್ತುವರಿ ತೆರವುಗೊಳಿಸಲು ಸುಮಾರು 800ರಿಂದ ಸಾವಿರ ಕೋಟಿ ಬೇಕು. ಬಜೆಟ್‌ನಲ್ಲಿ ಹಣ ಮೀಸಲಿಟ್ಟು ಹಂತ
ಹಂತವಾಗಿ ಒತ್ತುವರಿ ತೆರವುಗೊಳಿಸಬೇಕು. ಬಳಿಕ ಒತ್ತುವರಿ ಮಾಡಿದವರ ಬೇರೆ ಭೂಮಿಯ ಉತಾರಗೆ ಬೋಜಾ ಕೂಡಿಸಿ
ಅವರಿಂದಲೇ ಹಣ ವಸೂಲಿ ಮಾಡಬೇಕು. ಆಗ ಮುಂದೆ ನದಿ ಒತ್ತುವರಿ ಮಾಡದಂತೆ ಕಠಿಣ ಸಂದೇಶ ಹೋಗಲಿದೆ.
– ಮಾರುತಿ ಚಂದರಗಿ, ಅಧ್ಯಕ್ಷರು, ನಾಗರಿಕ ಹಿತರಕ್ಷಣೆ ಸಮಿತಿ, ರಾಮದುರ್ಗ

– ಶ್ರೀಶೈಲ.ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next