ಮಂಗಳೂರು : ನದಿಗಳಿಂದ (ಸಿಆರ್‌ಝಡ್ ವ್ಯಾಪ್ತಿ) ಮರಳು ದಿಬ್ಬಗಳನ್ನು ತೆರವು ಮಾಡಿದರೆ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗಲಿದ್ದು, ಅನುಮತಿ ನೀಡಬಾರದು ಎಂದು ಮೀನುಗಾರರ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಬೆಂಗ್ರೆ ಫಾಲ್ಗುಣಿ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ಅಬ್ದುಲ್ ತಯ್ಯುಬ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನದಿಗಳಲ್ಲಿರುವ ಮರಳು ದಿಬ್ಬಗಳನ್ನು ತೆರವು ಮಾಡಿದರೆ ಪಾಚಿ, ಮರುವಾಯಿ, ಚಿಪ್ಪು ಮತ್ತು ಸಿಗಡಿ ಸಂತತಿ ನಾಶವಾಗುತ್ತದೆ. ಇದರಿಂದಾಗಿ ಮೀನುಗಾರರ ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ. ಈಗಾಗಲೇ ನದಿಯಲ್ಲಿ ಮೀನಿನ ಅಭಾವ ಉಂಟಾಗಿದೆ.
ಮರಳುಗಾರಿಕೆಯಿಂದ ಆದ ಆಳದಲ್ಲಿ ಮೀನುಗಾರಿಕೆ ನಡೆಸುವಾಗ ಮೀನುಗಾರರ ಜೀವಹಾನಿಯಾಗುವ ಅಪಾಯವೂ ಇದೆ. ಹಾಗಾಗಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರುಳುದಿಬ್ಬ ತೆರವಿಗೆ ಅನುಮತಿ ನೀಡಬಾರದು. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಹೇಳಿದರು.
ನೇತ್ರಾವತಿ, ಗುರುಪುರ, ಫಲ್ಗುಣಿ ನದಿಗಳಲ್ಲಿ ತೆರವು ಮಾಡುವಂತಹ ಯಾವುದೇ ಮರಳು ದಿಬ್ಬ ಇಲ್ಲ. ದೋಣಿಗಳ ಸಂಚಾರಕ್ಕೂ ಅಡ್ಡಿಯಾಗುತ್ತಿಲ್ಲ. ಆದರೆ ಜಿಲ್ಲಾಧಿಕಾರಿಯವರ ನೇತೃತ್ವದ ಸಮಿತಿ ನೇತ್ರಾವತಿಯಿಂದ ಕೂಳೂರು ವರೆಗೆ 17 ಮರಳು ದಿಬ್ಬಗಳಿವೆ ಎಂದು ಹೇಳುತ್ತಿದೆ. ಅವರು ಮಾಡಿರುವ ಸಮೀಕ್ಷೆ ಸಮರ್ಪಕವಾಗಿಲ್ಲ. ಆ ಸಮಿತಿಯಲ್ಲಿ ಮೀನುಗಾರರು ಇಲ್ಲ. ನದಿಗಳ ದಿಬ್ಬ ತೆರವಿಗೆ ಅನುಮತಿ ನೀಡಿದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಅಬ್ದುಲ್ ತಯ್ಯುಬ್ ತಿಳಿಸಿದರು.
ದ.ಕ. ಸಾಂಪ್ರದಾಯಿಕ ನದಿ ಮೀನುಗಾರರ ಸಂಘದ ಜತೆ ಕಾರ್ಯದರ್ಶಿ ರಿತೇಶ್ ಡಿ’ಸೋಜಾ ಮಾತನಾಡಿ, ನೇತ್ರಾವತಿ ಸೇತುವೆಯಿಂದ ಮೇಲ್ಭಾಗ ಹಾಗೂ ಕೂಳೂರು ಸೇತುವೆಯಿಂದ ಮೇಲ್ಭಾಗದಲ್ಲಿ ಮರಳುಗಾರಿಕೆ ನಡೆಸಿದರೆ ತೊಂದರೆಯಾಗದು ಎಂದು ಹೇಳಿದರು.
ದ.ಕ. ಸಾಂಪ್ರದಾಯಿಕ ನದಿ ಮೀನುಗಾರರ ಸಂಘದ ಉಪಾಧ್ಯಕ್ಷ ಲೋಕೇಶ್ ಡಿ., ಕಾರ್ಯದರ್ಶಿ ನವೀನ್ ಸಾಲ್ಯಾನ್, ಪ್ರೇಮ್ ಪ್ರಕಾಶ್ ಡಿ’ಸೋಜಾ ಉಪಸ್ಥಿತರಿದ್ದರು.