Advertisement
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಕೆಲವೊಂದು ಜಿಲ್ಲೆಗಳಲ್ಲಿ ಮರಳೇ ಇಲ್ಲ. ಅಂತಹ ಜಿಲ್ಲೆಯಲ್ಲಿ ಎಂ. ಸ್ಯಾಂಡ್ ಬಳಕೆಗೆ ನಾವು ಒತ್ತು ನೀಡುತ್ತಿದ್ದೇವೆ. ಮರಳು ಲಭ್ಯ ಇರುವ ಜಿಲ್ಲೆಗಳಲ್ಲಿ ಮಾತ್ರ ಸಾಮಾನ್ಯ ಮರಳು ಬಳಕೆಗೆ ಒತ್ತು ನೀಡಿದ್ದೇವೆ. ಎಂ.ಸ್ಯಾಂಡ್‌ಗಿಂತ ಸಾಮಾನ್ಯ ಮರಳು ಅಕ್ರಮವೇ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪೊಲೀಸರು, ಮಧ್ಯವರ್ತಿಗಳಿಂದ ಜನತೆಗೆ ಸುಲಭವಾಗಿ ಮರಳು ಸಿಗುತ್ತಿಲ್ಲ. ಹಲವು ಶಾಸಕರು ತಮ್ಮ ಸಮಸ್ಯೆಗಳನ್ನು ನಮ್ಮ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಮರಳು ನೀತಿಗೆ ನಾವು ಹೊಸ ರೂಪ ಕೊಡಲಿದ್ದೇವೆ ಎಂದರು.
Related Articles
Advertisement
ಜಿಲ್ಲೆಯಲ್ಲಿ 133 ಗ್ರಾನೈಟ್, 33 ಕಲ್ಲು ಗಣಿಗಾರಿಕೆಗಳಿವೆ. ಆದರೆ ಉತ್ಪಾದನೆಯಲ್ಲಿ ಕಡಿಮೆ ಇದ್ದು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿಂದೆ ಇದ್ದ ರೀತಿ ಅಕ್ರಮ ಕಂಡು ಬಂದಾಗ ದಂಡ ವಿಧಿಸದೇ ಪ್ರಕರಣ ದಾಖಲಿಸಲಾಗುತ್ತದೆ. ಹಾಗಾಗಿ ಪರಿಸರಕ್ಕೆ ಹಾನಿಯಾಗದ ರೀತಿ ಹಾಗೂ ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡಬೇಕಿದ್ದು, ಈ ಬಗ್ಗೆ ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಬ್ಲಾಸ್ಟಿಂಗ್ ಬಗ್ಗೆ ರಕ್ಷಣಾಧಿಕಾರಿಗಳು ನಿಗಾವಹಿಸಬೇಕು ಎಂದು ಸಚಿವರು ಸೂಚಿಸಿದರು.
ನದಿ, ಹಳ್ಳ, ಖಾಸಗಿ ಪಟ್ಟಾ ಭೂಮಿಗಳಲ್ಲಿ ಮರಳು ಲಭ್ಯವಿದ್ದರೆ ಮರಳು ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗುತ್ತದೆ. ಜಿಲ್ಲಾಧಿಕಾರಿ ಮೂಲಕ ಎಲ್ಲಾ ನಿಯಮಾವಳಿ ಮತ್ತು ಷರತ್ತುಗಳನ್ನು ಪೂರೈಸಿದರೆ ಈ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು. ಇದನ್ನು ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೇ 3-4 ತಿಂಗಳೊಳಗಾಗಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಶಾಸಕರಾದ ಅಮರೇಗೌಡ ಬಯ್ನಾಪುರ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಎನ್‌ಎಂಡಿಸಿ ನಿರ್ದೇಶಕ ಪ್ರಸನ್ನ ಕುಮಾರ, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಉಪವಿಭಾಗಾಧಿಕಾರಿ ಸಿ.ಡಿ. ಗೀತಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಎಸ್.ಆರ್. ರಾವಳ ಇತರರಿದ್ದರು.
6 ಪುಟ್ಟಿ ಮರಳಿಗೆ ಕೇಸ್ ಮಾಡಿದ್ದಾರೆ:
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮರಳು ದಂಧೆ ಜೋರಾಗಿದೆ. ನಮಗೆ ಪರವಾನಗಿ ಪಡೆದು ಮರಳು ಕೊಡಿ ಎಂದರೂ ಕೊಡುತ್ತಿಲ್ಲ. ಟ್ರ್ಯಾಕ್ಟರ್, ಎತ್ತಿನ ಬಂಡಿ ಮೇಲೆ ಪೊಲೀಸರು ಕೇಸ್ ಮಾಡುತ್ತಿದ್ದಾರೆ. ಇತ್ತೀಚೆಗೆ 6 ಪುಟ್ಟಿ ಮರಳು ಹಾಕಿಕೊಂಡು ಹೋಗಿದ್ದ ರೈತನ ಮೇಲೆ ಕೇಸ್ ಮಾಡಿದ್ದಾರೆ ಎಂದು ಶಾಸಕ ಬಸವರಾಜ ದಢೇಸುಗೂರು ಅವರು ಸಚಿವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು. ನಮಗೆ ಕ್ಷೇತ್ರದಲ್ಲಿ ಮರಳಿನ ಸಂಬಂಧ ಸಾಕಾಗಿ ಹೋಗಿದೆ. ಈ ಕುರಿತು ಅಧಿವೇಶನದಲ್ಲಿಯೇ ಚರ್ಚೆ ಮಾಡಿದ್ದೇನೆ. ಆದರೂ ಸಮಸ್ಯೆ ಬಗೆ ಹರಿದಿಲ್ಲ. ತುಂಗಭದ್ರಾ ಎಡದಂಡೆ ಭಾಗದಲ್ಲಿ ಮರಳು ಇದೆ. ಆದರೆ ಜನರಿಗೆ ತೆಗೆದುಕೊಂಡು ಹೋಗಲು ಬಿಡುತ್ತಿಲ್ಲ. ಕೂಡಲೇ ನಮಗೆ ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿಗಳಿಗೆ ವಿನಾಯಿತಿ ನೀಡಬೇಕೆಂದು ಒತ್ತಾಯ ಮಾಡಿದರು.
ಮರಳು ಕಳ್ಳತನ ಮಾಡುತ್ತೇವೆ: ಬಯ್ನಾಪೂರ
ನಮಗೆ ಎಲ್ಲಿಯೂ ಮರಳು ಸಿಗುತ್ತಿಲ್ಲ. ಜನರ ಮನೆ, ಆಶ್ರಯ ಮನೆ ಸೇರಿದಂತೆ ಇತರೆ ಕಾರ್ಯಕ್ಕೆ ಎಲ್ಲೂ ಮರಳು ಇಲ್ಲದಂತಾಗುತ್ತಿದೆ. ಆದರೆ ಅನಧೀಕೃತವಾಗಿ ಮರಳು ಸಾಗಾಟ ನಡೆದಿದೆ. ಸಣ್ಣಪುಟ್ಟ ರೈತರು ಟ್ರ್ಯಾಕ್ಟರ್‌ನಲ್ಲಿ ಮರಳು ತುಂಬಿಕೊಂಡು ಹೋದರೆ ಅವರ ಮೇಲೆ ಕೇಸ್ ದಾಖಲಿಸಿ ಮೂರು ತಿಂಗಳು ಠಾಣೆಯಲ್ಲಿ ವಾಹನ ನಿಲ್ಲುವಂತೆ ಮಾಡುತ್ತಿದ್ದಾರೆ. ನೀವು ನಮಗೆ ನಿಯಮ ಸರಳೀಕರಣ ಮಾಡಿಕೊಡಿ. ಇಲ್ಲವೇ ನಾವು ಮರಳು ಕಳ್ಳತನ ಮಾಡುತ್ತೇವೆ ಎಂದು ಕುಷ್ಟಗಿ ಶಾಸಕ ಅಮರೆಗೌಡ ಬಯ್ನಾಪೂರ ಹೇಳಿದರು. ಮರಳು ನೀತಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯಿಲ್ಲ. ಮರಳು ಸಂಬಂಧಿಸಿದಂತ ನಿಯಮಾವಳಿ ಬಗ್ಗೆ ಸರಿಯಾಗಿ ತಿಳಿದುಕೊಂಡಿಲ್ಲ. ಸಣ್ಣ ವಾಹನದಲ್ಲೂ ತೆಗೆದುಕೊಂಡು ಹೋದರೆ 25 ಸಾವಿರ ರೂ. ಗಟ್ಟಲೇ ದಂಡ ಹಾಕುತ್ತಿದ್ದಾರೆ. ಪೊಲೀಸರು, ಗುತ್ತಿಗೆದಾರರು ಇದೊಂದು ದಂಧೆ ಮಾಡಿಕೊಂಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದಕ್ಕೆ ಶಾಮೀಲಾಗಿದ್ದಾರೆ. ಅವರೊಂದಿಷ್ಟು ಇವರಿಗೆ ಕೊಡ್ತಾರೆ. ಇವರು ಸುಮ್ಮನಿರುತ್ತಾರೆ. ಇವರ ಕಾರ್ಯ ವೈಖರಿಗೆ ಸಾಕಾಗಿ ಹೋಗಿದೆ ಎಂದು ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಬಯ್ನಾಪೂರ ಗುಡುಗಿದರು.
ಮರಳು ಅಕ್ರಮಕ್ಕೆ ಮಿತಿಯೇ ಇಲ್ಲ: ಪರಣ್ಣ
ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಅಕ್ರಮಕ್ಕೆ ಮಿತಿಯೇ ಇಲ್ಲದಂತಾಗಿದೆ. ಪೊಲೀಸರು ಸೇರಿದಂತೆ ಗಣಿ ಇಲಾಖೆ ಅಧಿಕಾರಿಗಳೇ ಇದಕ್ಕೆ ಶಾಮೀಲಾಗಿ ಕೆಲಸ ಮಾಡುತ್ತಿದ್ದಾರೆ. ಜನಕ್ಕೆ ಮರಳು ಸಿಗುತ್ತಿಲ್ಲ. ಆದರೆ ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯಕ್ಕೆ ಅತಿ ಸಲೀಸಾಗಿ ಮರಳು ಸಾಗಾಟ ಮಾಡಲಾಗುತ್ತಿದೆ. ಇದಕ್ಕೆ ಮಾತ್ರ ಕಡಿವಾಣವಿಲ್ಲದಂತಾಗಿದೆ. ಆದರೆ ಇಲ್ಲಿನ ರೈತ ಮರಳು ತೆಗೆದುಕೊಂಡು ಹೋದರೆ ಅವರ ಮೇಲೆ ಕೇಸ್ ಹಾಕ್ತಾರೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.