Advertisement

ಮರಳು ತನಿಖಾ ಠಾಣೆ ಈಗ ಪೋಲಿಗಳ ಅಡ್ಡೆ !

03:23 PM Nov 19, 2018 | Team Udayavani |

ಚಿಕ್ಕಮಗಳೂರು: ಅಕ್ರಮ ಮರಳು ಸಾಗಾಣಿಕೆ ತಡೆಗೆಂದು ತೆರೆಯಲಾಗಿದ್ದ ಮರಳು ತನಿಖಾ ಠಾಣೆಗಳು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿವೆ. ಈಗಲೂ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಮರಳಿಗಾಗಿ ಬಡ ಜನತೆ ಈಗಲೂ ಪರಿತಪಿಸುತ್ತಲೇ ಇದ್ದಾರೆ. ಈ ಹಿಂದೆ ಅಕ್ರಮ ಮರಳು
ಸಾಗಣೆ ತಡೆಯುವ ಉದ್ದೇಶದಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಮರಳು ತನಿಖಾ ಠಾಣೆ ತೆರೆಯಲಾಗಿತ್ತು. ಅದಕ್ಕಾಗಿ ಶೆಡ್‌ಗಳನ್ನು ನಿರ್ಮಿಸಲಾಗಿತ್ತು. 

Advertisement

ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ ಭಾಗದಲ್ಲಿ ಹೇರಳವಾಗಿ ಸಿಗುವ ಮರಳನ್ನು ಅಕ್ರಮವಾಗಿ ಬೆಂಗಳೂರಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕಲು ಜಿಲ್ಲೆಯ ಮರಳು ಸಾಗಾಣಿಕೆಯ ಆಯಕಟ್ಟಿನ ಜಾಗದಲ್ಲಿ ಮರಳು ತನಿಖಾ ಠಾಣೆಗಳನ್ನು ತೆರೆದರು. ಅಲ್ಲಿಗೆ ಒಬ್ಬ ಸಿಬ್ಬಂದಿ ನೇಮಿಸಲಾಗಿತ್ತು. ಅದಾದ ನಂತರ ಮರಳು ಅಕ್ರಮ ಪೂರೈಕೆಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿತ್ತು. ಮರಳು ದಂಧೆಕೋರರು ಸಾಗಾಣಿಕೆ ಸ್ಥಗಿತಗೊಳಿಸಿದರು. ಆದರೆ, ತಮ್ಮ ತೋಟ, ಗದ್ದೆಗಳಲ್ಲಿ ಹೇರಳವಾಗಿ ದಾಸ್ತಾನು ಮಾಡಿ ಅವಕಾಶ ದೊರೆತರೆ ಪೂರೈಕೆ ಮಾಡಲು ಇನ್ನೊಂದು ಮಾರ್ಗ ಕಂಡುಕೊಂಡರು. 

ಜಿಲ್ಲಾಧಿಕಾರಿಗಳು ಇಂತಹ ಅಕ್ರಮ ದಾಸ್ತಾನನ್ನು ಪತ್ತೆ ಹಚ್ಚಲು ವಿವಿಧ ಇಲಾಖೆ ಸಹಕಾರ ಪಡೆದು ಕೆಲವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರು. ಡಿಸಿ ಕಚೇರಿಯಲ್ಲೇ ಮರಳು ವಿತರಣಾ ಕೇಂದ್ರ ತೆರೆದು ಅಲ್ಲಿ ಅಗತ್ಯವಿರುವವರಿಗೆ ಸೂಕ್ತ ದಾಖಲೆ ಪಡೆದು ಮರಳು ಪೂರೈಕೆ ಮಾಡಲಾಗುತ್ತಿತ್ತು.

ಅನೈತಿಕ ತಾಣ: ಮರಳು ನೀತಿ ರಚಿಸಿದಾಗಲೂ ರಾಜ್ಯದ ವಿವಿಧೆಡೆಗಳಲ್ಲಿ ಮರಳಿನ ಸಮಸ್ಯೆ ಹಾಗೆಯೇ ಉಳಿದು ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ, ಹಾಗೂ ವಿವಿಧ ಸಂಘಟನೆಗಳ ಒತ್ತಾಯದ ಮೇರೆಗೆ 2017-18 ರಲ್ಲಿ ಮರಳು ನೀತಿಯನ್ನು ರಾಜ್ಯ ಸರ್ಕಾರ ಬದಲಿಸಿತು.

ಮರಳು ನೀತಿ ಬದಲಾವಣೆಯಾದ ನಂತರ ಜಿಲ್ಲೆಯ ವಿವಿಧ ಕಡೆ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ್ದ ಮರಳು ತನಿಖಾ ಠಾಣೆಗಳು ಬರಿದಾದವು. ಬೇಕಾದವರು ಮೇಲ್ಛಾವಣೆ ದೋಚಿದರೆ, ಮತ್ತೆ ಕೆಲವು ತನಿಖಾ ಠಾಣೆಯಲ್ಲಿ ಅವುಗಳನ್ನು ಅನೈತಿಕ ಚಟುವಟಿಕೆ ತಾಣಗಳನ್ನಾಗಿ ಮಾರ್ಪಾಡು ಮಾಡಿಕೊಂಡರು. ಗುಂಡು, ತುಂಡಿನ ಪಾರ್ಟಿ ಮಾಡುವುದು, ಇಸ್ಪೀಟ್‌ ಆಡುವುದು ಮತ್ತಿತರೆ ಅನೈತಿಕ ಚಟುವಟಿಕೆ ತಾಣಗಳಾಗಿ ಬದಲಾದವು. 

Advertisement

ಜಿಲ್ಲೆಯಲ್ಲಿ ನಡೆಯುವ ದತ್ತಜಯಂತಿ ಕಾರ್ಯಕ್ರಮ ಹಾಗೂ ಚುನಾವಣೆ, ಮತ್ತಿತರೆ ಕಾರ್ಯಕ್ರಮಗಳ ಸಂದರ್ಭ ಇದೇ ಮರಳು ತನಿಖಾ ಠಾಣೆಗಳನ್ನು ಪೊಲೀಸ್‌ ಇಲಾಖೆ ಚೆಕ್‌ಪೋಸ್ಟ್‌ ಆಗಿ ಬಳಸಿಕೊಳ್ಳುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿರುವ ಮರಳು ತನಿಖಾ ಠಾಣೆಗಳ ಶೀಟ್‌ಗಳನ್ನು ಕದ್ದೊಯ್ದಿದ್ದು ಅಕ್ಕಪಕ್ಕದಲ್ಲಿ ಮದ್ಯದ ಬಾಟಲಿಗಳು,
ತಿಂಡಿ ಪೊಟ್ಟಣಗಳು ರಾಶಿಯಾಗಿ ಬಿದ್ದಿವೆ. ಇವುಗಳ ದುರಸ್ತಿ ಅಥವಾ ಬಳಕೆ ಮಾಡಿಕೊಳ್ಳಲು ಯಾವುದೇ ಇಲಾಖೆ ಮುಂದೆ ಬಂದಿಲ್ಲ. ಇ- ಟೆಂಡರ್‌ ಮೂಲಕ ಮರಳು ಪೂರೈಕೆಯಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಮರಳು ತನಿಖಾ ಠಾಣೆಗಳನ್ನು ಮುಚ್ಚಿದ್ದು ಮರಳು ದಂಧೆಕೋರರ ಅಕ್ರಮಕ್ಕೆ ಹಾದಿ ಸುಗಮವಾದಂತಾಗಿದೆ.

ಈ ಬಗ್ಗೆ ಸಂಬಂಧಿಸಿದ ಇಲಾಖೆ ಮರಳು ತನಿಖಾ ಠಾಣೆಗಳನ್ನು ಬಳಕೆ ಮಾಡಿಕೊಳ್ಳಬೇಕು ಅಥವಾ ಶೆಡ್‌ ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ ಭಾಗದಲ್ಲಿ ಹೇರಳವಾಗಿ ಸಿಗುವ ಮರಳನ್ನು ಅಕ್ರಮವಾಗಿ ಬೆಂಗಳೂರಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕಲು ಆಯಕಟ್ಟಿನ ಜಾಗದಲ್ಲಿ ಮರಳು ತನಿಖಾ ಠಾಣೆಗಳನ್ನು ತೆರೆದರು. ಅಲ್ಲಿಗೆ ಒಬ್ಬ ಸಿಬ್ಬಂದಿ ನೇಮಿಸಲಾಗಿತ್ತು. ನಂತರ ಮರಳು ಅಕ್ರಮ ಪೂರೈಕೆಗೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿತ್ತು.

ಈ ಹಿಂದೆ ಮರಳು ನೀತಿಯ ಪ್ರಕಾರ ಆಗ ಮರಳು ತನಿಖಾ ಠಾಣೆಗಳನ್ನು ತೆರೆಯುವುದು ಅಗತ್ಯವಾಗಿತ್ತು. ಈಗ 2017-18 ರ ಮರಳು ನೀತಿಯ ಪ್ರಕಾರ ಅವುಗಳ ಅಗತ್ಯತೆ ಕಂಡುಬರುವುದಿಲ್ಲ. ಈಗ ಇ-ಟೆಂಡರ್‌ ಮೂಲಕ ಮರಳು ಪೂರೈಕೆ, ವ್ಯವಹಾರ ನಡೆಯುತ್ತಿದೆ. ಜಿಲ್ಲಾಡಳಿತದ ವಿವಿಧ ಕಾರ್ಯಕ್ರಮಗಳಲ್ಲಿ ಇದೇ ತನಿಖಾ ಠಾಣೆಗಳನ್ನು ಬಳಸಿಕೊಳ್ಳಬಹುದು. ಕೆಲವು ಕಡೆ ದುಸ್ತಿಯಲ್ಲಿವೆ. ಅದನ್ನು ಸರಿಪಡಿಸಲಾಗುವುದು  ಎಂ.ಕೆ. ಶ್ರೀರಂಗಯ್ಯ, ಜಿಲ್ಲಾಧಿಕಾರಿ 

ಎಸ್‌.ಕೆ.ಲಕ್ಷ್ಮೀಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next