Advertisement

ಚೆಲ್ಹೇರಿ ಬಳಿ ತೆಲಂಗಾಣ ವ್ಯಕ್ತಿಗಳಿಂದ ಮರಳು ಅಕ್ರಮ ಸಾಗಾಟ

12:23 PM Mar 21, 2019 | Team Udayavani |

ಸೈದಾಪುರ: ರಾಜ್ಯದ ಗಡಿ ಅಂಚಿನಲ್ಲಿರುವ ಚೆಲ್ಹೇರಿ ಗ್ರಾಮದ ದೊಡ್ಡ ಹಳ್ಳದಿಂದ ಅಕ್ರಮವಾಗಿ ಮರಳು ತುಂಬಿದ ತೆಲಂಗಾಣ ರಾಜ್ಯದ ಟ್ರ್ಯಾಕ್ಟರ್‌ಗಳನ್ನು ತಡೆಯಲು ಹೋದ ಗ್ರಾಮ ಲೆಕ್ಕಾಧಿಕಾರಿ ಹಸನ್‌ ಪಟೇಲ್‌ ಅವರಿಗೆ ಬೆದರಿಕೆ ಹಾಕಿದ್ದಲ್ಲದೆ ರೈತ ಬನ್ನಪ್ಪ ಅವರ ಮೇಲೆ ಹಲ್ಲೆ ಮಾಡಿದ ಘಟನೆ ಮಂಗಳವಾರ ನಡೆದಿದೆ.

Advertisement

ಗುರುಮಠಕಲ್‌ ತಾಲೂಕು ವ್ಯಾಪ್ತಿಗೆ ಸೇರಿದ ಚೆಲ್ಹೇರಿ ಗ್ರಾಮದ ಮೂಲಕ ಹರಿಯುವ ದೊಡ್ಡ ಹಳ್ಳ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯದ ಗಡಿಭಾಗದಲ್ಲಿದೆ. ಅಕ್ರಮವಾಗಿ ಮರಳು ತುಂಬುತ್ತಿರುವ ಸುದ್ದಿ ತಿಳಿದ ಗ್ರಾಮ ಲೆಕ್ಕಾಧಿಕಾರಿ ಹಸನ್‌ ಪಟೇಲ್‌ ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಗ್ರಾಮ ಸಹಾಯಕ ಶೇಖರ ಹಾಗೂ ಕೆಲ ರೈತರೊಂದಿಗೆ ಸ್ಥಳಕ್ಕೆ ಧಾವಿಸಿದರು. ಗ್ರಾಮದ ಸರ್ವೆ ನಂಬರ್‌ 176ರಲ್ಲಿ ಮರಳು ತುಂಬಿದ ಟ್ರ್ಯಾಕ್ಟರ್‌ಗಳನ್ನು ಕಂಡು ಮೇಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಜಪ್ತಿ ಮಾಡಲು ಮುಂದಾದರು. ಅಷ್ಟೋತ್ತಿಗಾಗಲೇ ಪೊಲೀಸ್‌ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದರು. 

ಇದರಿಂದ ಎಚ್ಚೆತ್ತುಕೊಂಡ ತೆಲಂಗಾಣ ರಾಜ್ಯದ ಮರಳುಗಳ್ಳರು ಕರೆ ಮಾಡಿ ಇಪ್ಪತ್ತಕ್ಕೂ ಅಧಿಕ ತಮ್ಮವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಬೆದರಿಕೆ ಹಾಕಿದ್ದಲ್ಲದೆ ಹಲ್ಲೆ ಮಾಡಿದರು. ಈ ವೇಳೆ ಗಡಿ ಅಂಚಿನ ಎರಡೂ ಗ್ರಾಮಸ್ಥರ ಮಧ್ಯೆ ವಾಗ್ವಾದ ವಿಕೋಪಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಪ್ರವೇಶಿಸಿದ ಪೊಲೀಸರ ಮೇಲೂ ಮರಳುಗಳ್ಳರು ರೇಗಾಡಿದ ಪ್ರಸಂಗ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಚೆಲ್ಹೇರಿ ಸೀಮೆಗೆ ಸೇರಿದೆ ಹಳ್ಳ: ಕರ್ನಾಟಕದ ಸರ್ವೇ ದಾಖಲೆಗಳ ಪ್ರಕಾರ ದೊಡ್ಡಹಳ್ಳ ನಮ್ಮ ರಾಜ್ಯದ ಚೆಲ್ಹೇರಿ ಸೀಮೆಗೆ ಸೇರಿದ್ದಾಗಿದೆ. ಗಡಿ ಅಂಚಿನ ಹತ್ತಾರು ಗ್ರಾಮಗಳ ಜನರು ಹಳ್ಳದ ಅಂಚಿನಲ್ಲಿ ಕೊಳವೆಬಾವಿ ಕೊರೆದು ವ್ಯವಸಾಯ ಮಾಡುತ್ತಿದ್ದಾರೆ. ಆದರೆ ತೆಲಂಗಾಣ ರಾಜ್ಯದ ಗಡಿ ಅಂಚಿನ ಉಟ್ಟೂರು ಮಂಡಲದ ಗ್ರಾಮಗಳ ಜನರು ಹಳ್ಳದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಾರೆ. ಇದನ್ನು ನಮ್ಮ ರಾಜ್ಯದ ಜನರು ತಡೆಯಲು ಹೋದಾಗ ಹಲ್ಲೆ ಗಲಭೆಗಳು ನಡೆಯುತ್ತವೆ.

ಕಳೆದ ವರ್ಷ ಜನವರಿಯಲ್ಲಿ ಇಂತಹದ್ದೇ ಪ್ರಸಂಗ ನಡೆದಾಗ ಎರಡೂ ರಾಜ್ಯಗಳ ಕಂದಾಯ ಅಧಿಕಾರಿಗಳು ಗಡಿ ವಿಸ್ತರಣೆ ನಕಾಶೆ ಪರಿಶೀಲಿಸಿದಾಗ ಗೊಂದಲ ಕಂಡ ಬಂದಿದೆ. ಗಡಿ ಸಮಸ್ಯೆ ಇತ್ಯರ್ಥವಾಗುವ ತನಕ ಎರಡೂ ರಾಜ್ಯಗಳ ಜನರು ಹಳ್ಳದಿಂದ ಮರಳು ಸಾಗಾಣಿಕೆ ಮಾಡುವಂತಿಲ್ಲ ಎಂಬ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೂ ತೆಲಂಗಾಣ ರಾಜ್ಯದವರಿಂದ ಮರಳು ಅಕ್ರಮ ಸಾಗಾಟ ಮಾತ್ರ ನಿಂತಿಲ್ಲ.
 
ರೈತನ ತಲೆಗೆ ಏಟು ಅಕ್ರಮವಾಗಿ ಮರಳು ಸಾಗಾಟದ ಬಗ್ಗೆ ಹಳ್ಳದ ಪಕ್ಕದಲ್ಲಿ ಜಮೀನು ಹೊಂದಿರುವ ಚೇಲ್ಹೇರಿ ಗ್ರಾಮದ ರೈತ ಬನ್ನಪ್ಪನೇ ಮಂಗಳವಾರ ಕಂದಾಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾನೆ ಎಂದು ಕೋಪಗೊಂಡ ತೆಲಂಗಾಣ ರಾಜ್ಯದ ಮರಳುಗಳ್ಳರು ಸಲಿಕೆಯಿಂದ ತಲೆಗೆ ಹೊಡೆದರು. ಇದರಿಂದ ಗಂಭೀರ ಗಾಯಗೊಂಡ ಬನ್ನಪ್ಪನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ. ನಿಷೇಧದ ಮಧ್ಯೆಯೂ ಚೇಲ್ಹೇರಿ ಗ್ರಾಮದ ಸರ್ವೆ ನಂಬರ್‌ 176ರಲ್ಲಿ ತೆಲಂಗಾಣ ರಾಜ್ಯದವರು ಅಕ್ರಮವಾಗಿ ಮರಳು ತುಂಬುತ್ತಿರುವ ಬಗ್ಗೆ ಮೇಲಾಧಿಕಾರಿ ಹಾಗೂ ಪೊಲೀಸ್‌ ಇಲಾಖೆಗೆ ಸುದ್ದಿ ತಿಳಿಸಿದ ನಾನು ಸ್ಥಳಕ್ಕೆ ಭೇಟಿ ನೀಡಿ ಮರಳು ಸಾಗಾಟ ಮಾಡದಂತೆ ಸೂಚಿಸಿದೆ. ಆದರೆ ನಮ್ಮ ಮಾತಿಗೆ ಕಿವಿಗೊಡದೆ ಮರಳು ದಂಧೆಕೋರರು ಬೆದರಿಕೆ ಹಾಕಿದ್ದಲ್ಲದೆ ರೈತ ಬನ್ನಪ್ಪನ ಮೇಲೆ ಹಲ್ಲೆ ಮಾಡಿದರು. ಕ್ರೂರತನಕ್ಕಿಳಿದ ತೆಲಂಗಾಣದ ಜನರನ್ನು ಕಂಡು ಜೀವ
ಭಯವಾಯಿತು. 
 ಹಸನ್‌ ಪಟೇಲ್‌, ಗ್ರಾಮ ಲೆಕ್ಕಾಧಿಕಾರಿ ಅಜಲಾಪುರ.

Advertisement

ಕರ್ನಾಟಕ-ತೆಲಂಗಾಣ ಗಡಿಯಲ್ಲಿರುವ ಚೇಲ್ಹೇರಿ ಹಳ್ಳದಿಂ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ತೆಲಂಗಾಣದ ಟ್ರ್ಯಾಕ್ಟರ್‌ಗಳನ್ನು ತಡೆಯಲು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಮರಳು ಸಾಗಾಟ ಪರಿಶೀಲಿಸುತ್ತ ಬೇರಡೆ ಇದ್ದ ಸಂದರ್ಭದಲ್ಲಿ ಜನರ ಮಧ್ಯೆ ವಾಗ್ವಾದ ಹೆಚ್ಚಿ ರೈತನ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗಳು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 ಸುಶೀಲಕುಮಾರ ಪಾಟೀಲ, ಪಿಎಸ್‌ಐ ಸೈದಾಪುರ

ಭೀಮಣ್ಣ ಬಿ. ವಡವಟ್‌

Advertisement

Udayavani is now on Telegram. Click here to join our channel and stay updated with the latest news.

Next