Advertisement

ಪಟ್ಟು ಬಿಡದ ಪ್ರತಿಭಟನಕಾರರು; ಊಟವನ್ನೂ ಸ್ಥಳಕ್ಕೆ ತರಿಸಿದರು

06:00 AM Oct 23, 2018 | |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸಬೇಕೆಂದು ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಿತು. ಸಾವಿರದಷ್ಟು ಕಾರ್ಮಿಕರು, ಮಾಲಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಬೆಳಗ್ಗಿನಿಂದಲೇ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡರು. ಮಧ್ಯಾಹ್ನದ ವರೆಗೂ ಸುಡುಬಿಸಿಲಿನಲ್ಲಿಯೇ ಪ್ರತಿಭಟನೆ ನಡೆಸಿ ಅನಂತರ ಮರಗಳ ನೆರಳಿನಡಿ ಕುಳಿತು ಡಿಸಿ ವಿರುದ್ಧ ಘೋಷಣೆಗಳನ್ನು ಕೂಗಿದರು.

Advertisement

ಲಾರಿ ಸಮೇತ ಪ್ರತಿಭಟಿಸುವ ಯತ್ನ ವಿಫ‌ಲ 
ಸಾವಿರಕ್ಕೂ ಮಿಕ್ಕಿದ ಲಾರಿಗಳ ಸಮೇತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬರುವ ಬಗ್ಗೆ ಲಾರಿ ಮಾಲಕರು ನಿರ್ಧರಿಸಿದ್ದರು. ಆದರೆ ಅವರ ಯೋಜನೆಯ ಮಾಹಿತಿ ಪೊಲೀಸರಿಗೆ ತಿಳಿದ ಪರಿಣಾಮ  ಲಾರಿಗಳು ಉಡುಪಿ ನಗರ ಪ್ರವೇಶಿಸದಂತೆ ರವಿವಾರ ತಡರಾತ್ರಿಯೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.  ಉದ್ಯಾವರ, ಎಂಜಿಎಂ ಕಾಲೇಜು ಬಳಿ ಬ್ಯಾರಿಕೇಡ್‌ಗಳನ್ನು, ಕೆಲವೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆದು ಲಾರಿಗಳಿಗೆ ತಡೆಯೊಡ್ಡಲಾಯಿತು. ನೂರಾರು ಲಾರಿಗಳನ್ನು ರವಿವಾರ ತಡರಾತ್ರಿ ಮತ್ತು ಸೋಮವಾರ ಬೆಳಗ್ಗೆ  ಉದ್ಯಾವರ, ಎಂಜಿಎಂ, ಕೋಟ, ಬ್ರಹ್ಮಾವರ ಮೊದಲಾದೆಡೆ ರಸ್ತೆ ಬದಿಯಲ್ಲಿಯೇ ನಿಲುಗಡೆ ಮಾಡಲಾಯಿತು. ಕಾರ್ಕಳ ಭಾಗದವರ ಲಾರಿಗಳನ್ನು ಕಾರ್ಕಳ ತಾಲೂಕು ಕಚೇರಿ ಬಳಿ ತಡೆಹಿಡಿಯಲಾಯಿತು.


ಬ್ರಹ್ಮಾವರ, ಕುಂದಾಪುರ, ಬೈಂದೂರು ಮೊದಲಾದ ಪ್ರದೇಶಗಳ ಟಿಪ್ಪರ್‌ ಮಾಲಕರು ಟಿಪ್ಪರ್‌ ಸಹಿತ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಪೊಲೀಸ್‌ ಇಲಾಖೆ ಅವಕಾಶ ನೀಡದ ಹಿನ್ನಲೆಯಲ್ಲಿ ವಾಹನಗಳನ್ನು ಬ್ರಹ್ಮಾವರದಿಂದ ಉಪ್ಪಿನಕೋಟೆ ತನಕ ಸಾಲಾಗಿ ನಿಲ್ಲಿಸಲಾಯಿತು.

ಡಿಸಿ ಆಗಮಿಸಲು ಪಟ್ಟು
“ಡಿಸಿ ಡೌನ್‌ ಡೌನ್‌…’ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸ್‌ ಅಧಿಕಾರಿಗಳು ಪ್ರಯತ್ನಿಸಿದರು. “ಜಿಲ್ಲಾಧಿಕಾರಿಯವರು ಪ್ರತಿಭಟನೆಯನ್ನು ಗಮನಿಸುತ್ತಿದ್ದಾರೆ. 4-5 ಮಂದಿ ತೆರಳಿ ಮನವಿ ಸಲ್ಲಿಸಿ ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದ್ದಾರೆ’ ಎಂದು ಡಿವೈಎಸ್‌ಪಿ ಜೈಶಂಕರ್‌ ಪ್ರತಿಭಟನಕಾರರಿಗೆ ತಿಳಿಸಿದರು. ಆದರೆ ಇದಕ್ಕೆ ಒಪ್ಪದ ಪ್ರತಿಭಟನಾಕಾರರು “ನಾವು ಇಲ್ಲಿ ಸಾವಿರ ಸಂಖ್ಯೆಯಲ್ಲಿ ನೆರೆದಿದ್ದೇವೆ. ಈಗಾಗಲೇ ಹತ್ತಾರು ಬಾರಿ ಡಿಸಿಗೆ ಮನವಿ ಸಲ್ಲಿಸಿದ್ದೇವೆ. ಈಗ ಅವರೇ ಬಂದು ನಮ್ಮ ನೋವು ಕೇಳಲಿ’ ಎಂದು ಪಟ್ಟು ಹಿಡಿದರು. ಮಧ್ಯಾಹ್ನದ ಊಟವನ್ನು ಕೂಡ ಪ್ರತಿಭಟನಾ ಸ್ಥಳಕ್ಕೆ ತರಿಸಿಕೊಳ್ಳಲಾಯಿತು.


ಮಂಗಳೂರಿನಿಂದ ಅಕ್ರಮ ಸಾಗಾಟ
ಉಡುಪಿ ಜಿಲ್ಲೆಯಲ್ಲಿ ಕಳೆದ 6 ತಿಂಗಳುಗಳಿಂದ ಲಾರಿ, ಟೆಂಪೋ ಮಾಲಕರು, ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಮಂಗಳೂರಿನಿಂದ ಮರಳು ಅಕ್ರಮವಾಗಿ ಉಡುಪಿಗೆ ಬರುತ್ತಿದೆ. ಇಲ್ಲಿ ಮರಳುಗಾರಿಕೆ ನಡೆಯುತ್ತಿದ್ದಾಗ ಮೇ ತಿಂಗಳಿನಲ್ಲಿ ನಾವು ಒಂದು ಲೋಡ್‌ ಮರಳನ್ನು 7ರಿಂದ 8 ಸಾವಿರ ರೂ.ಗಳಿಗೆ ನೀಡುತ್ತಿದ್ದೆವು. ಈಗ ಮಂಗಳೂರಿನಿಂದ ಬರುತ್ತಿರುವ ಮರಳಿಗೆ ಜನರು 18ರಿಂದ 20 ಸಾವಿರ ರೂ.ಪಾವತಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ/ಟೆಂಪೋ ಮಾಲಕರ ಸಂಘ ಕಟಪಾಡಿ ಇದರ ಅಧ್ಯಕ್ಷ ಚಂದ್ರಪೂಜಾರಿ ಈ ಸಂದರ್ಭದಲ್ಲಿ  ಹೇಳಿದರು. 

ಹೊಗೆ ಧಕ್ಕೆ ಪರವಾನಿಗೆದಾರರ ಜತೆ ಹೊಕೈ
ಕಾರ್ಮಿಕರು, ಲಾರಿ ಮಾಲಕರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಎದುರಿನಲ್ಲಿಯೇ ಜಿಲ್ಲಾಧಿಕಾರಿ ಕಚೇರಿಯೊಳಗೆ ತೆರಳಿ ಮರಳು ತೆಗೆಯಲು ಪರವಾನಿಗೆ ಪಡೆದುಕೊಂಡು ಬಂದ ಹೊಗೆ ಧಕ್ಕೆಯ ಪರವಾನಿಗೆದಾರರ ವಿರುದ್ಧ ಪ್ರತಿಭಟನಾಕಾರರು ತೀವ್ರ ಅಸಮಾಧಾನ ನಡೆಸಿ ತರಾಟೆಗೆ ತೆಗೆದುಕೊಂಡರು. “ನಾವು ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ನೀವು ನಿಮ್ಮಷ್ಟಕ್ಕೆ ಪರವಾನಿಗೆ ಪಡೆದುಕೊಂಡು ಬರುತ್ತಿದ್ದೀರಿ’ ಎಂದು ಪ್ರತಿಭಟನಾಕಾರರು ಹೇಳಿದರು. ಈ ಸಂದರ್ಭ ತಳ್ಳಾಟ, ಕೈ ಕೈ ಮಿಲಾಯಿಸಿದ ಘಟನೆಯೂ ನಡೆಯಿತು. ಅನಂತರ ಪೊಲೀಸರು ಮಧ್ಯಪ್ರವೇಶಿಸಿ ಧಕ್ಕೆ ಪರವಾನಿಗೆದಾರರನ್ನು ವಾಪಸ್ಸು ಜಿಲ್ಲಾಧಿಕಾರಿ ಕಚೇರಿ ಆವರಣದೊಳಗೆ ಭದ್ರತೆಯಲ್ಲಿ ಕರೆದೊಯ್ದರು. “ನಮ್ಮ ಪ್ರತಿಭಟನೆಯನ್ನು ಧಕ್ಕೆ ಪರವಾನಿಗೆದಾರರು ಬೆಂಬಲಿಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.ಎಎಸ್‌ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ಕೋಟದಿಂದ 80ಕ್ಕೂ ಹೆಚ್ಚು ಟಿಪ್ಪರ್‌ಗಳು 
ಕೋಟ:  
ರವಿವಾರ ರಾತ್ರಿ ಕೋಟದಿಂದ  80ಕ್ಕೂ ಹೆಚ್ಚು ಟಿಪ್ಪರ್‌ಗಳು ಉಡುಪಿ ಕಡೆಗೆ ಹೊರಟಿದ್ದವು. ಪೊಲೀಸರು ಅವುಗಳನ್ನು ಸಾಸ್ತಾನ  ಟೋಲ್‌ಗೇಟ್‌ನಲ್ಲಿ ತಡೆಯಲು ಯತ್ನಿಸಿ ವಿಫಲರಾದರು.

Advertisement

ರಾತ್ರೋರಾತ್ರಿ ಕಾರ್ಯಾಚರಣೆ 
ಮೊದಲೇ ಸಿದ್ಧವಾಗಿದ್ದ  ಟಿಪ್ಪರ್‌ ಮಾಲಕರು, ಚಾಲಕರು  ರಾತ್ರಿ ಸುಮಾರು 11 ಗಂಟೆಗೆ ಕೋಟದಿಂದ ಉಡುಪಿ ಕಡೆಗೆ  ಸಾಲುಗಟ್ಟಿ ಹೊರಟರು. ಅನಂತರ ಸಾಸ್ತಾನ ಟೋಲ್‌ಗೇಟ್‌ನಲ್ಲಿ  ಪೊಲೀಸರು ಇವರನ್ನು  ತಡೆಯುವ ಯತ್ನ ಮಾಡಿದರು. ಆದರೆ ಸಿಬಂದಿ ಕೊರತೆಯಾದ್ದರಿದ ಅದು ಸಾಧ್ಯವಾಗಲಿಲ್ಲ. ಅನಂತರ ಬ್ರಹ್ಮಾವರದಲ್ಲಿ ಬಿಗಿ ಬಂದೋಬಸ್ತ್ನಲ್ಲಿ  ಇವುಗಳನ್ನು ವಶಕ್ಕೆ ಪಡೆಯಲಾಯಿತು.

ಒಳದಾರಿಯ ಮೂಲಕ ಪಯಣ
ಸಾಸ್ತಾನ ಟೋಲ್‌ಗೇಟ್‌ನಲ್ಲಿ  ಚೆಕ್‌ ಪೋಸ್ಟ್‌  ನಿರ್ಮಿಸಿ ಮುಂದೆ ಸಾಗದಂತೆ ತಡೆಯೊಡಲಾಯಿತು.  ಈ ಸಂದರ್ಭ ಟೋಲ್‌ಗೇಟ್‌ನಿಂದ ಸ್ವಲ್ಪ ಹಿಂದೆ ಯಡ ಬೆಟ್ಟು ಗ್ರಾಮೀಣ ರಸ್ತೆಯ ಮೂಲಕ ಸಾಗಿ ಪಾಂಡೇಶ್ವರ ರಸ್ತೆಯಲ್ಲಿ  ಪೊಲೀಸರಿಗೆ ತಿಳಿಯದಂತೆ ಹಲವು ಟಿಪ್ಪರ್‌ಗಳು ಬ್ರಹ್ಮಾವರ ತಲುಪಿದವು.  ಹೀಗಾಗಿ ಕೇವಲ ನಾಲ್ಕೈದು ಲಾರಿಗಳನ್ನು ಮಾತ್ರ ತಡೆಯುವಲ್ಲಿ ಪೊಲೀಸರು ಸಫಲರಾದರು.

ಟೋಲ್‌ ನಿರಾಕರಣೆ 
ಟೋಲ್‌ಗೇಟ್‌ನಲ್ಲಿ  ಶುಲ್ಕ ಕೇಳಲು ಮುಂದಾದ ಸಿಬಂದಿ ವಿರುದ್ಧ ಟಿಪ್ಪರ್‌ ಮಾಲಕರು, ಚಾಲಕರು ಆಕ್ರೋಶ ವ್ಯಕ್ತಪ ಡಿಸಿದರು. ಸಾಮಾಜಿಕ ಸಮಸ್ಯೆಯೊಂದರ ಕುರಿತು ಹೋರಾಟಕ್ಕಾಗಿ ತೆರಳುತ್ತಿದ್ದು  ಟೋಲ್‌ ನೀಡುವುದಿಲ್ಲ ಎಂದು ಮುಂದೆ ಸಾಗಿದರು.

Advertisement

Udayavani is now on Telegram. Click here to join our channel and stay updated with the latest news.

Next