Advertisement

ಮರಳು ದಂಧೆ: ಖಾಸಗಿ ದೂರು ದಾಖಲು

11:22 AM Sep 13, 2019 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಮೂಗುದಾರ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು, ಯಲಬುರ್ಗಾ ತಾಲೂಕೊಂದರಲ್ಲೇ 32 ಖಾಸಗಿ ಪಟ್ಟಾದಾರರು ಸೇರಿದಂತೆ ಮರಳು ಪಡೆದ ಇಬ್ಬರು ಗುತ್ತಿಗೆದಾರರು, ಎನ್‌ಎಚ್ ಪಿಡಿ, ನೈಋತ್ಯ ರೈಲ್ವೇ ಹಿರಿಯ ಅಧಿಕಾರಿ ಮೇಲೆ ಯಲಬುರ್ಗಾ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ.

Advertisement

ಹೌದು.. ಜಿಲ್ಲಾಧಿಕಾರಿ ಸುನೀಲ್ಕುಮಾರ ಅವರ ಕಾರ್ಯ ವೈಖರಿ ದಂಧೆಕೋರರು ನಿದ್ದೆಗೆಡುವಂತೆ ಮಾಡಿದೆ. ಜಿಲ್ಲಾದ್ಯಂತ ಮರಳು ದಂಧೆ ಮಿತಿ ಮೀರಿ ನಡೆಯುತ್ತಿದೆ. ಇದಕ್ಕೆ ಕಡಿವಾಣವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಳ್ಳ, ನದಿ ಪಾತ್ರಗಳನ್ನೂ ಬಿಡದೇ ದಂಧೆ ತನ್ನ ಜಾಲ ಹಬ್ಬಿಸಿದೆ. ಜಿಲ್ಲಾಡಳಿತ ಎಷ್ಟೇ ನಿಯಂತ್ರಣಕ್ಕೆ ತಂದರೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ದಂಧೆಗೆ ಸಾಥ್‌ ನೀಡುತ್ತಿದ್ದಾರೆ ಎನ್ನುವ ಆಪಾದನೆ ಕೇಳಿ ಬಂದಿತ್ತು. ಅಕ್ರಮದ ಮೇಲೆ ನಿಯಂತ್ರಣ ಹಾಕದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದನ್ನರಿತ ಜಿಲ್ಲಾಡಳಿತ ಈ ಬಾರಿ ಖಾಸಗಿ ಜಮೀನುಗಳ ಮಾಲೀಕರ ಮೇಲೆ ಕೇಸ್‌ ಮಾಡಿದೆ.

32 ಜಮೀನುದಾರರ ಮೇಲೆ ಕೇಸ್‌: ಯಲಬುರ್ಗಾ ತಾಲೂಕಿನಲ್ಲಿ ಕಂದಾಯ ಇಲಾಖೆಯಿಂದ ವರದಿ ಪಡೆದು ಖಾಸಗಿ ಜಮೀನಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳು ಗಣಿಗಾರಿಕೆಗೆ ಪರವಾನಗಿ ಪಡೆಯದೇ ಮರಳು ಎತ್ತುವಳಿ ಮಾಡುತ್ತಿದ್ದು, ಸರ್ಕಾರದ ರಾಜಸ್ವಕ್ಕೆ ನಷ್ಟ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಜಮೀನಿನಲ್ಲಿ ಬೃಹದಾಕಾರದ ತಗ್ಗುಗಳನ್ನು ನಿರ್ಮಿಸಿ ಜನ ಹಾಗೂ ಜಾನುವಾರುಗಳ ಜೀವಕ್ಕೆ ಕುತ್ತು ತರುವಂತೆ ದಂಧೆ ನಡೆಸಿದ್ದನ್ನು ಗಮನಿಸಿ, ತಹಶೀಲ್ದಾರ್‌ ವರದಿ ಆಧರಿಸಿ 32 ಜಮೀನುಗಳ ಮಾಲೀಕರ ಮೇಲೆ ಖಾಸಗಿ ಕೇಸ್‌ ದಾಖಲಿಸಿದೆ. ಮೆ. ಬಿಎಸ್ಸಿಪಿಎಲ್ ಇನ್ಫಾಸ್ಟ್ರಕ್ಚರ್‌ ಕಂಪನಿ ವ್ಯವಸ್ಥಾಪಕ ಹಾಗೂ ರೇಲ್ವೆ ವಿಶೇಷ ಗುತ್ತಿಗೆದಾರ ಅಯ್ಯಪ್ಪು ರಡ್ಡಿ ವಿರುದ್ಧವೂ ದೂರು ದಾಖಲಾಗಿದೆ.

ಗುತ್ತಿಗೆದಾರ, ಅಧಿಕಾರಿಗಳ ಮೇಲೆ ಕೇಸ್‌: ಯಲಬುರ್ಗಾ ತಾಲೂಕಿನಲ್ಲಿ ಅಕ್ರಮ ಮರಳನ್ನು ಹೊಸಪೇಟೆ-ಗದಗ ರಸ್ತೆ ನಿರ್ಮಾಣಕ್ಕೆ ಮರಳು ಪಡೆದ ಗುತ್ತಿಗೆ ಕಂಪನಿ, ಮರಳು ಪಡೆಯುವಲ್ಲಿ ಪರಿಶೀಲನೆ ಮಾಡದೇ ನಿರ್ಲಕ್ಷ ್ಯ ವಹಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ, ಇನ್ನೂ ಗದಗ-ವಾಡಿ ರೈಲ್ವೇ ಯೋಜನೆಗೆ ಮರಳು ಪಡೆದ ಗುತ್ತಿಗೆದಾರ ಹಾಗೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ ನೈಋತ್ಯ ರೈಲ್ವೇ ಇಲಾಖೆಯ ಕಾಮಗಾರಿ ವಿಭಾಗದ ಮುಖ್ಯ ಅಭಿಯಂತರನ ವಿರುದ್ಧವೂ ಖಾಸಗಿ ದೂರು ದಾಖಲಿಸಿದ್ದು ಗಮನಾರ್ಹ ಸಂಗತಿ.

ಖಾಸಗಿ ದೂರು ಏಕೆ?: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಠಾಣೆಯಲ್ಲಿ ಅಕ್ರಮ ಮರಳು ದಂಧೆ ನಡೆಸುವ ಬಗ್ಗೆ ದೂರು ನೀಡಬಹುದಿತ್ತು. ಆದರೆ ಖಾಸಗಿ ದೂರು ನೀಡಿರುವುದಲ್ಲರೂ ವಿಶೇಷತೆ ಅಡಗಿದೆ. ಸರ್ಕಾರಿ ಜಮೀನಿನಲ್ಲಿ ಮರಳು ದಂಧೆ ನಡೆಸಿದ್ದರೆ ಠಾಣೆಯಲ್ಲಿ ದೂರು ನೀಡಿ,

Advertisement

ದಂಡ ಹಾಕಲು ಅಧಿಕಾರವಿದೆ. ಆದರೆ ಮರಳು ದಂಧೆ ಖಾಸಗಿ ಜಮೀನಿನಲ್ಲಿ ನಡೆಸಿದ್ದರಿಂದ ಜಮೀನುದಾರರನ್ನು ಕಳ್ಳರು ಎನ್ನುವಂತಿಲ್ಲ. ಆದರೆ ಗಣಿ ಮತ್ತು ಖನಿಜ(ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, ಪ್ರಕಾರ ಕರ್ನಾಟಕ ಭೂ ಕಂದಾಯ ಅಧಿನಿಯಮ-1964ರ ನಿಯಮ ಉಲ್ಲಂಘಿಸಿದ್ದರಿಂದ ಸರ್ಕಾರದ ರಾಜಸ್ವಕ್ಕೆ ಭಾರಿ ಪ್ರಮಾಣದ ನಷ್ಟ ಮಾಡಿದನ್ನೇ ಆಧಾರವಾಗಿಸಿ ದೂರು ದಾಖಲು ಮಾಡಲಾಗಿದೆ.

ದಂಡ: 32 ಪಟ್ಟಾದಾರರು ತಗ್ಗು ತೆಗೆದಿರುವ ರೀತಿಯಲ್ಲಿ ಮರಳು ದಂಧೆ ನಡೆಸಿದ್ದಾರೆ. ಇದರಿಂದ 20,65,500 ಮೆಟ್ರಿಕ್‌ ಟನ್‌ನಷ್ಟು ಮರಳು ಎತ್ತುವಳಿ ಮಾಡಲಾಗಿದೆ. ಇದರ ಲೆಕ್ಕಾಚಾರದಲ್ಲಿ ಪ್ರತಿ ಟನ್‌ಗೆ 32 ರೂ.ನಂತೆ 6,60,96,000 ರಾಜಸ್ವ ನಷ್ಟವಾಗಿದೆ. ಪರವಾನಗಿ ಪಡೆದು ಮರಳುಗಾರಿಕೆ ನಡೆಸಿದ್ದರೆ ಇಷ್ಟು ಪ್ರಮಾಣದ ರಾಜಸ್ವ ಸರ್ಕಾರಕ್ಕೆ ಬರುತ್ತಿತ್ತು. ಇದರೊಟ್ಟಿಗೆ ಎಂಎಂಆರ್‌ಡಿ ಕಾಯ್ದೆ ಉಲ್ಲಂಘನೆ ಮಾಡಿ ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೇ ಕೃಷಿಯೇತರ ಚಟುವಟಿಕೆಗೆ ಬಳಕೆ ಮಾಡಿಕೊಂಡು ಪಟ್ಟಾ ಜಮೀನಿನಲ್ಲಿ ಗುಂಡಿಗಳನ್ನು ತೆಗೆದಿದ್ದರಿಂದ ಐದು ಪಟ್ಟು ದಂಡ ಹಾಕಿದರೆ ಬರೊಬ್ಬರಿ 20,65,500 ರೂ. ದಂಡ ಅವರು ತೆರಬೇಕಾಗುತ್ತದೆ. ಇದೆಲ್ಲವನ್ನು ಗಮನಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ದಿಲೀಪ್‌ ಕುಮಾರ ಅವರು ಖಾಸಗಿ ದೂರು ನೀಡಿದ್ದಾರೆ.

ದುರ್ಘ‌ಟನೆಯಿಂದ ಎಚ್ಚೆತ್ತರು: ಜಿಲ್ಲೆಯ ನವಲಿ ಬಳಿ ಖಾಸಗಿ ಜಮೀನಿನಲ್ಲಿ ಮರಳು ದಿಬ್ಬ ಕುಸಿದು ಮೂರು ಮಕ್ಕಳು ಮೃತಪಟ್ಟ ಪ್ರಕರಣದಿಂದ ಎಚ್ಚೆತ್ತ ಜಿಲ್ಲಾಡಳಿತ ಖಾಸಗಿ ಪಟ್ಟಾದಾರರಿಗೆ ಬಿಸಿ ಮುಟ್ಟಿಸಿದೆ. ಕೋಟಿ ಕೋಟಿ ನಷ್ಟವಾಗಿದ್ದು, ಕೋರ್ಟ್‌ಗೆ ಇಲಾಖೆಗಳ ವರದಿ ಆಧರಿಸಿಯೇ ದೂರು ದಾಖಲಿಸಿದೆ.

 

•ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next