Advertisement

12 ಬ್ಲಾಕ್‌ಗಳಲ್ಲಿ ಇಂದಿನಿಂದ ಮರಳುಗಾರಿಕೆ ಸ್ಥಗಿತ

01:11 AM Oct 16, 2019 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದ 22 ಮರಳು ದಿಬ್ಬಗಳ ಪೈಕಿ ಮೊದಲ ಹಂತದಲ್ಲಿ ಮರಳುಗಾರಿಕೆ ಆರಂಭಗೊಂಡಿದ್ದ 12 ಮರಳು ದಿಬ್ಬಗಳಲ್ಲಿ ಪರವಾನಿಗೆ ಅವಧಿ ಅ.15ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಸ್ಥಗಿತಗೊಳ್ಳಲಿದೆ.

Advertisement

2ನೇ ಹಂತದಲ್ಲಿ 10 ದಿಬ್ಬಗಳ ಮರಳುಗಾರಿಕೆಗೆ ಪರವಾನಿಗೆ ನೀಡಲಾಗಿದ್ದು, ಅವಧಿ ಡಿ.25ಕ್ಕೆ ಪೂರ್ಣಗೊಳ್ಳಲಿದೆ. ಹೀಗಾಗಿ ಈ 10 ದಿಬ್ಬ ಬಿಟ್ಟು ಜಿಲ್ಲೆಯಲ್ಲಿ ಬುಧವಾರದಿಂದ ಮರಳುಗಾರಿಕೆಗೆ ಅವಕಾಶವಿರುವುದಿಲ್ಲ. ಹೊಸದಾಗಿ ಬೇಥಮೆಟ್ರಿಕ್‌ ಸರ್ವೇ ನಡೆದು, ಮರಳು ದಿಬ್ಬ ಗುರುತಿಸಿ, ಪರಿಸರ ಇಲಾಖೆಯ ಅನುಮತಿ ಪಡೆದ ಬಳಿಕ ಆರಂಭಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆಗಳಿಗೆ ಕನಿಷ್ಠ ಸುಮಾರು 2ತಿಂಗಳು ಬೇಕು. ಹೀಗಾಗಿ ಮುಂದಿನ ಫೆಬ್ರವರಿ ಮಧ್ಯಭಾಗದಲ್ಲಷ್ಟೇ ಮರಳುಗಾರಿಕೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.

ಕಳೆದ ಬಾರಿಯ ಸರ್ವೇಯಲ್ಲಿ ನೇತ್ರಾವತಿಯಲ್ಲಿ ಒಟ್ಟು 13 ಬ್ಲಾಕ್‌ಗಳನ್ನು ಗುರುತಿಸಿ, 4,30,357 ಮೆ. ಟನ್‌ ಮರಳು ಇದ್ದು, 43,027 ಲಾರಿ ಲೋಡ್‌ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ಫಲ್ಗುಣಿ ನದಿಯಲ್ಲಿ ಒಟ್ಟು 9 ಬ್ಲಾಕ್‌ಗಳನ್ನು ಗುರುತಿಸಿ 4,20,270 ಮೆ. ಟನ್‌ ಮರಳಿದ್ದು, 42,027 ಲಾರಿ ಲೋಡ್‌ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ಒಟ್ಟು 22 ಬ್ಲಾಕ್‌ಗಳಲ್ಲಿ 105 ಮಂದಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು.

ಬೇಥಮೆಟ್ರಿಕ್‌ ಸರ್ವೇಗೆ ಟೆಂಡರ್‌
ಹೊಸದಾಗಿ ಮರಳುದಿಬ್ಬ ಗುರುತಿಸಲು ಸರ್ವೇಗಾಗಿ ಜಿಲ್ಲಾಡಳಿತ ಈಗಾಗಲೇ ಟೆಂಡರ್‌ ಕರೆದಿದೆ. ಮೀನು ಸಂತಾನೋತ್ಪತ್ತಿ ಹಿನ್ನೆಲೆಯಲ್ಲಿ ಈ ಬಾರಿಯೂ ಜೂನ್‌ನಿಂದ ಜು. 31ರ ವರೆಗೆ ಮರಳುಗಾರಿಕೆಗೆ ನಿಷೇಧವಿದ್ದು, ಆಗಸ್ಟ್‌ ಪ್ರಥಮ ವಾರದಿಂದ ಮತ್ತೆ ಆರಂಭಗೊಂಡಿತ್ತು.

ಉಡುಪಿ: 21,130 ಮೆ. ಟನ್‌ ಮರಳು ತೆರವು
ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಇಲ್ಲಿಯ ವರೆಗೆ 21,130 ಟ್ರಿಕ್‌ ಟನ್‌ ಮರಳು ತೆರವುಗೊಳಿಸಲಾಗಿದೆ. ಜಿಲ್ಲೆಯ ಸಿಆರ್‌ಝಡ್‌ನ‌ಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು 138 ಜನರಿಗೆ ಅನುಮತಿ ಸಿಕ್ಕಿದೆ. ಇವರಲ್ಲಿ 117 ಜನರ ಪರವಾನಿಗೆ ಐಎಲ್‌ಎಂಎಸ್‌ನಲ್ಲಿ ನೋಂದಣಿಯಾಗಿದ್ದು, ಉಳಿದ 21 ಪರವಾನಿಗೆದಾರರ ನೋಂದಣಿ ಪ್ರಗತಿಯಲ್ಲಿದೆ. ಮರಳು ವಾಹನ ವಶ ಅ. 14ರಂದು ಮಂಗಳೂರಿನಿಂದ ಕಾರ್ಕಳ ಮಾರ್ಗದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನವೊಂದನ್ನು ಕಾರ್ಕಳದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಡುಪಿ ಮತ್ತು ದ.ಕ. ಜಿಲ್ಲೆಯಿಂದ ಹೊರ ಜಿಲ್ಲೆಗೆ ಮರಳು ಸಾಗಾಟಕ್ಕೆ ನಿಷೇಧವಿದೆ. ಹೊರ ಜಿಲ್ಲೆಗೆ ಮರಳು ಸಾಗಾಟ ಮಾಡುವವರ ವಿರುದ್ಧ ಕೇಸು ದಾಖಲಾಗಲಿದೆ.

Advertisement

ಸಿಆರ್‌ಝಡ್‌ ವಲಯದ 12 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಪರವಾನಿಗೆ ಮಂಗಳವಾರ ಮುಕ್ತಾಯಗೊಂಡಿದೆ. ಇನ್ನುಳಿದ 10 ಬ್ಲಾಕ್‌ಗಳ ಅವಧಿ ಡಿಸೆಂಬರ್‌ವರೆಗೆ ಇದ್ದು, ಮರಳುಗಾರಿಕೆ ಮುಂದುವರಿಯಲಿದೆ. ಹೊಸದಾಗಿ ಬೇಥಮೆಟ್ರಿಕ್‌ ಸರ್ವೇಗೆ ಟೆಂಡರ್‌ ಕರೆಯಲಾಗಿದೆ.
– ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next