Advertisement

ಮರಳಿಗಾಗಿ “ಸ್ಯಾಂಡ್‌ ಬಜಾರ್‌’ಮೊಬೈಲ್‌ ಆ್ಯಪ್‌!

11:31 PM May 24, 2019 | mahesh |

ಮಂಗಳೂರು: ಕಟ್ಟಡ ಕಾಮಗಾರಿಗೆ ಮರಳು ಅಗತ್ಯವಿರುವ ಗ್ರಾಹಕರು ಇನ್ನು ಮರಳಿಗಾಗಿ ಹುಡುಕುವ ಅಗತ್ಯವಿಲ್ಲ. “ಸ್ಯಾಂಡ್‌ ಬಜಾರ್‌’ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡುವ ಮೂಲಕ ಜಿಲ್ಲಾಡಳಿತವು ನಾಗರಿಕರ ನೆರವಿಗೆ ಬಂದಿದೆ. ಇದೀಗ ಗ್ರಾಹಕರು ತಾವಿರುವ ಜಾಗದಿಂದಲೇ ಅಗತ್ಯವಿರುವಷ್ಟು ಮರಳು ಬುಕ್ಕಿಂಗ್‌ ಮಾಡಬಹುದು! ಆ್ಯಪ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ 43 ಜನರು ಮರಳು ಬುಕ್ಕಿಂಗ್‌ ಮಾಡಿದ್ದಾರೆ. 18 ಜನರಿಗೆ ಮರಳು ಸರಬರಾಜು ಮಾಡಲಾಗಿದೆ.

Advertisement

ಬುಕ್ಕಿಂಗ್‌ ಹೇಗೆ?
ಗ್ರಾಹಕರು ಮೊಬೈಲ್‌ನಲ್ಲಿ “ಸ್ಯಾಂಡ್‌ ಬಜಾರ್‌’ ಆ್ಯಪ್‌ ಡೌನೊಡ್‌ ಮಾಡಬೇಕು. ಬಳಿಕ ಸಂಪೂರ್ಣ ವಿಳಾಸ, ಮರಳು ಎಲ್ಲಿಗೆ ಪೂರೈಕೆ ಮಾಡಬೇಕು ಎಂಬಿತ್ಯಾದಿ ವಿವರ ನಮೂದಿಸಬೇಕು. ಆಧಾರ್‌ ನಂಬರ್‌ ನಮೂದಿಸಿ ಹತ್ತಿರವಿರುವ ಮರಳು ಧಕ್ಕೆ ಸ್ಥಳವನ್ನು ಟೈಪ್‌ ಮಾಡಿ ಕಳುಹಿಸಬೇಕು. ಈ ಸಂದರ್ಭ ಒಟಿಪಿ ಬರಲಿದ್ದು, ಆ್ಯಪ್‌ ಮುಖೇನ ಮರಳು ಸಾಗಾಟದ ದರ ಸಂದೇಶ ಬರಲಿದೆ. ಈ ಮೊತ್ತವನ್ನು ಪೇಟಿಎಂ, ನೆಟ್‌ಬ್ಯಾಕಿಂಗ್‌ ಮುಖೇನ ಸಂದಾಯ ಮಾಡಬೇಕು. ಹಣ ಸಂದಾಯವಾದ ಕೂಡಲೇ ಮೊಬೈಲ್‌ ಸಂದೇಶ ಬರಲಿದ್ದು ಅದನ್ನು ಸಂಬಂಧಪಟ್ಟ ಮರಳು ಧಕ್ಕೆಯ ಗಮನಕ್ಕೆ ತರಬೇಕು. ಜತೆಗೆ ಧಕ್ಕೆಗೆ ಕಂಟ್ರೋಲ್‌ ರೂಂನಿಂದ ಸಂದೇಶ ಹೋಗಲಿದೆ. ಇದರ ಆಧಾರದ ಮೇಲೆಯೇ ಮರಳು ಸಾಗಾಟ ನಡೆಯಲಿದೆ.

ಮಧ್ಯವರ್ತಿಗಳ ಹಾವಳಿ, ದರ ಏರಿಳಿತ ಸೇರಿದಂತೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದು
ಕೊಳ್ಳಲು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. ಮರಳು ಬುಕ್ಕಿಂಗ್‌ ನೋಂದಾವಣೆಯಿಂದ ಹಿಡಿದು ಹಣಪಾವತಿ, ಮರಳು ಬುಕ್ಕಿಂಗ್‌, ವಾಹನ ಬುಕ್ಕಿಂಗ್‌, ಮರಳು ಲಾರಿ ಸಾಗಾಟವಾಗುವ ಟ್ರಾಕಿಂಗ್‌ ಸ್ಟೇಟಸ್‌ ಹಂತಹಂತವಾಗಿ ಸ್ಯಾಂಡ್‌ ಬಜಾರ್‌ ಆ್ಯಪ್‌ನಲ್ಲಿ ದೊರೆಯಲಿದ್ದು, ಗ್ರಾಹಕರ ಮಾಹಿತಿಗೆ ಅನುಕೂಲವಾಗಲಿದೆ. ಬುಕ್ಕಿಂಗ್‌ ಮಾಹಿತಿ,

ಗ್ರಾಹಕರ ಮಾಹಿತಿ, “ಗೂಗಲ್‌ ಮ್ಯಾಪ್‌ ವಿವ್‌’ ಮುಖೇನ ಮರಳು ಧಕ್ಕೆಯ ವಿವರವೂ ಸಿಗಲಿದೆ.
ಆ್ಯಪ್‌ನಲ್ಲಿ ಬುಕ್ಕಿಂಗ್‌ ಮಾಡಿದ ಮರಳನ್ನು ನಿಗದಿತ ಸಮಯದೊಳಗೆ ಸಂಬಂಧಪಟ್ಟ ಮರಳು ಲಾರಿಯವ ಸಾಗಾಟ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಒಂದು ವೇಳೆ ವಿಳಂಬ ಮಾಡಿದರೆ ಆ ಲಾರಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ನಿರಂತರ ಮೂರು ಬಾರಿ ಇದೇ ರೀತಿ ಲೋಪವಾದರೆ ಆ ಲಾರಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನದಿ ದಡದಿಂದ ಮನೆಬಾಗಿಲಿಗೆ
ಶೋರ್‌ ಟು ಎವಿರಿ ಡೋರ್‌- (ನದಿ ದಡದಿಂದ ಮನೆಬಾಗಿಲಿಗೆ) ಎಂಬ ಸ್ಲೋಗನ್‌ನಲ್ಲಿ “ಸ್ಯಾಂಡ್‌ ಬಜಾರ್‌’ ಆ್ಯಪ್‌ ತಯಾರಿಸಲಾಗಿದೆ. ಈ ಯೋಜನೆ ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದ್ದು, ಭೂವಿಜ್ಞಾನ ಮತ್ತು ಗಣಿ ಇಲಾಖೆ ನಿರ್ವಹಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next