Advertisement

ಕರಡಕಲ್‌ ಕೆರೆಗೆ “ಅಭಿವೃದ್ದಿಯ ಯೋಗ”

04:26 PM Mar 16, 2022 | Team Udayavani |

ಲಿಂಗಸುಗೂರು: ಊರಿನ ಗಲೀಜು ತುಂಬಿಕೊಂಡು ಕಸದ ಬುಟ್ಟಿಯಾಗಿದ್ದ ಪಟ್ಟಣದ ಐತಿಹಾಸಿಕ ಕರಡಕಲ್‌ ಕೆರೆಗೆ ಅಭಿವೃದ್ಧಿಗೆ ಯೋಗ ಕೂಡಿ ಬಂದಿದೆ. ಇತಿಹಾಸ ಪ್ರಸಿದ್ಧ ಈ ಕೆರೆಯನ್ನು 3ನೇ ಬಿಲ್ಲಮನು (ಕ್ರಿ.ಶ.1025-1050) ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಹೈದ್ರಾಬಾದ್‌ ನಿಜಾಮರು ಹಾಗೂ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ಲಿಂಗಸುಗೂರು ಅನ್ನು ಜಿಲ್ಲಾ ಕೇಂದ್ರವನ್ನಾಗಿಸಿ ತಮ್ಮ ದಂಡಿನ ತಾಣವನ್ನಾಗಿ ಮಾಡಿ ವಿಹಾರಕ್ಕಾಗಿ ಈ ಕೆರೆಗೆ ಬರುತ್ತಿದ್ದರು. ಸೈನಿಕರು ಕುದುರೆಗಳಿಗೆ ನೀರೊದಗಿಸಲು ಈ ಕೆರೆಯನ್ನು ಉಪಯೋಗಿಸುತ್ತಿದ್ದರು.

ಸಂಜೆ ಹೊತ್ತು ಕೆರೆಯ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳಲು ಹಾಗೂ ವಿಹರಿಸಲು ಕೆರೆಯ ದಡದಲ್ಲಿ ಎತ್ತರದಲ್ಲಿ ಮಹಲೊಂದನ್ನು ನಿರ್ಮಿಸಲಾಗಿದ್ದು, ಅದು ಅಧಿಕಾರಿಗಳ ಕ್ಲಬ್‌ ಗಾಗಿ ಬಳಲಾಗುತ್ತಿದೆ. ರಾಂಪುರ ಏತ ನೀರಾವರಿ ಕಾಲುವೆಯಿಂದ ಹರಿಯುವ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಈ ಕೆರೆಗೆ ಬಿಡುತ್ತಿರುವುದರಿಂದ ನೀರಿನಿಂದ ತುಂಬಿಕೊಂಡು ಸುಂದರವಾಗಿ ಕಾಣುತ್ತಿದೆ ಅಲ್ಲದೇ ಸುತ್ತಮುತ್ತಲಿನ ಅಂತರ್ಜಲವೂ ಹೆಚ್ಚಿದೆ.

6.43 ಕೋಟಿ ರೂ. ಅನುದಾನ

224 ಎಕರೆ ವಿಶಾಲ ಹೊಂದಿರುವ ಕರಡಕಲ್‌ ಕೆರೆಗೆ ಊರಿನ ಚರಂಡಿ ನೀರು ಸೇರುತ್ತಿರುವುದರಿಂದ ಹಾಗೂ ತ್ಯಾಜ್ಯವನ್ನು ಕೆರೆಯಲ್ಲಿ ಹಾಕುತ್ತಿರುವುದರಿಂದ ಕೆರೆಯ ದಡದಲ್ಲಿ ಸಂಚರಿಸಿದರೆ ಸಾಕು ದುರ್ನಾತ ಬೀರುತ್ತಿದ್ದು, ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಈ ಬಗ್ಗೆ ಗಮನ ಹರಿಸಿದ ಶಾಸಕ ಶಾಸಕ ಡಿ.ಎಸ್‌. ಹೂಲಗೇರಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಕೆಲವು ತಿಂಗಳ ಹಿಂದಷ್ಟೇ ಚಾಲನೆ ನೀಡಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ ನಾಲ್ಕು ಹಂತದಲ್ಲಿ 6.43 ಕೋಟಿ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿದೆ.

Advertisement

ಮಾದರಿ ಕೆರೆಗೆ ಪಣ

ಜಿಲ್ಲೆಯಲ್ಲಿ ದೊಡ್ಡ ಕೆರೆಯಾದ ಕರಡಕಲ್‌ ಕೆರೆ ಅಭಿವೃದ್ಧಿಗೊಳಿಸುವ ಹಿನ್ನೆಲೆಯಲ್ಲಿ ವಿವಿಧ ಕೆರೆಗಳ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಜಿಲ್ಲೆಯಲ್ಲೇ ಮಾದರಿ ಕೆರೆಯನ್ನಾಗಿ ಮಾಡುವ ಪಣ ತೊಡಲಾಗಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದ ಕೈಗಾರಿಕೆ ಕಚೇರಿ ಹತ್ತಿರದಿಂದ ಒಳಾಂಗಣ ಕ್ರೀಡಾಂಗಣದ ಮುಖ್ಯ ರಸ್ತೆವರೆಗೂ ವಾಯು ವಿಹಾರಕ್ಕೆ 900 ಮೀಟರ್‌ ಉದ್ದ ವಾಕಿಂಗ್‌ ಟ್ರ್ಯಾಕ್‌ ಜತೆಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ವಾಕಿಂಗ್‌ ಟ್ರ್ಯಾಕ್‌ ಉದ್ದಕ್ಕೂ ಸೋಲಾರ್‌ ವಿದ್ಯುತ್‌ ದೀಪಗಳು, ಡಿವೈಎಸ್ಪಿ ಕಚೇರಿ ಭಾಗದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಲಾಗುತ್ತಿದೆ. ಅಲ್ಲಿ ಎರಡು ನೀರಿನ ಕಾರಂಜಿಗಳು, ಮಕ್ಕಳ ಆಟಿಕೆ ಸಾಮಗ್ರಿಗಳು ಉದ್ಯಾನವನ, ಬಯಲು ರಂಗಮಂದಿರ, ಗಾರ್ಡನ್‌ನಲ್ಲಿ ತಿರುಗಾಡಲು ಇಲ್ಲಿಯೂ ಕೂಡ ವಾಕಿಂಗ್‌ ಟ್ರ್ಯಾಕ್‌ ಮಾಡಲಾಗುತ್ತಿದೆ. ಕ್ಯಾಂಟೀನ್‌, ಶೌಚಾಲಯಗಳು ನಿರ್ಮಿಸಿ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಕಾಮಗಾರಿ ಭರದಿಂದ ಸಾಗಿದೆ.

ಕೆರೆಯ ಡಿವೈಎಸ್ಪಿ ಕಚೇರಿ ಭಾಗದಲ್ಲಿ ಈಗಾಗಲೇ ಕಾಂಪೌಂಡ್‌ ನಿರ್ಮಿಸಲಾಗಿದ್ದು, 900 ಮೀಟರ್‌ ಉದ್ದ ವಾಕಿಂಗ್‌ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ನಡೆದಿದೆ. ಬೋಟಿಂಗ್‌ ನಿಲುಗಡೆ ಸ್ಥಳಗಳನ್ನು ಮಾಡಲಾಗುತ್ತಿದೆ. ಈ ಎಲ್ಲ ಪ್ರಯತ್ನ ಸರಿದಾರಿಯಲ್ಲಿ ಸಾಗಿದರೆ ನಾಗರಿಕರು ಸಹಕಾರ ನೀಡಿ ಕೆರೆ ಸಂರಕ್ಷಣೆಗೆ ಕಾಳಜಿ ವಹಿಸಿದರೆ ತಿಪ್ಪೆಯಂತೆ ಗೋಚರಿಸುವ ಐತಿಹಾಸಿಕ ಕೆರೆ ಸ್ವಚ್ಛತೆ ಹಾಗೂ ಸೌಂದರ್ಯೀಕರಣದಿಂದ ಕಂಗೊಳಿಸಲಿದೆ.

ಲಿಂಗಸುಗೂರು ಪಟ್ಟಣದಲ್ಲಿ ಸುಂದರ ದೊಡ್ಡ ಕೆರೆ ಇದೆ. ವರ್ಷಪೂರ್ತಿ ನೀರು ಇರುತ್ತೆ. ಅದಕ್ಕೆ ಪೂರ್ವ ದಿಕ್ಕಿನಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡು ಪಾರ್ಕ್‌, ವಾಕಿಂಗ್‌ ರಸ್ತೆ, ವಾಯುವಿಹಾರಕ್ಕೆ ಅನುಕೂಲವಾಗುವಂತೆ ಗಾರ್ಡನ್‌ ವ್ಯವಸ್ಥೆ ಹಾಗೂ ಬೋಟಿಂಗ್‌ ವ್ಯವಸ್ಥೆ ಮಾಡಲಾಗುತ್ತಿದೆ. -ಡಿ.ಎಸ್‌. ಹೂಲಗೇರಿ, ಶಾಸಕರು ಲಿಂಗಸುಗೂರು ಕರಡಕಲ್‌

ಕೆರೆ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ನಾಲ್ಕು ಹಂತದಲ್ಲಿ ಒಟ್ಟು 6.43 ಕೋಟಿ ರೂ. ಬಿಡುಗಡೆಯಾಗಿದೆ. ಅದರಂತೆ ಕಾಮಗಾರಿ ನಡೆದಿದೆ. -ಸೈಯದ್‌ ವಾಸೀಮ್‌, ಕಿರಿಯ ಅಭಿಯಂತರ ಆರ್‌ಡಿಪಿಆರ್‌, ಲಿಂಗಸುಗೂರು

-ಶಿವರಾಜ್‌ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next