Advertisement

China ಮೇಲೆ ನಿರ್ಬಂಧ ದಾಳಿ

11:35 PM Aug 09, 2023 | Team Udayavani |

ಆ್ಯಪ್‌ಗಳಿಂದ ಹಿಡಿದು, ಈಗಿನ ಚೀನ ಉತ್ಪಾದಿತ ವಸ್ತುಗಳ ಮೇಲೆ ಆಮದು ಮಿತಿ ಹೇರುವ ತನಕ ಭಾರತ, ಮಾರುಕಟ್ಟೆ ಮೇಲಿನ ಚೀನ ಪ್ರಾಬಲ್ಯವನ್ನು ಇಳಿಸುವ ಕೆಲಸ ಮಾಡುತ್ತಿದೆ. ವಿದೇಶಿ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳ ಆಮದು ಮೇಲಿನ ಮಿತಿಯಿಂದ‌ ಮೇಕ್‌ ಇನ್‌ ಇಂಡಿಯಾಗೆ ಉತ್ತೇಜನ ಸಿಗಲಿದೆ ಎಂಬುದು ಭಾರತದ ವಾದ. ಹಾಗಾದರೆ ಕೇಂದ್ರದ ಈ ನಿರ್ಧಾರಗಳಿಂದ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳ ಬೆಲೆ ಏರಲಿದೆಯೇ? ಚೀನಕ್ಕೆ ಯಾವ ರೀತಿಯ ಪೆಟ್ಟು ಬೀಳಬಹುದು?

Advertisement

ಕೇಂದ್ರದ ನಿರ್ಧಾರವೇನು?

ಇತ್ತೀಚೆಗಷ್ಟೇ ಕೇಂದ್ರ ಸರಕಾರವು ವಿದೇಶಗಳಲ್ಲಿ ಉತ್ಪಾದನೆಯಾದ ಆಲ್‌ ಇನ್‌ ಒನ್‌ ವೈಯಕ್ತಿಕ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗ್ಳು, ಟ್ಯಾಬ್ಲೆಟ್‌ಗಳ ಆಮದು ಮೇಲೆ ಮಿತಿ ಹೇರುವ ಬಗ್ಗೆ ಘೋಷಣೆ ಮಾಡಿದೆ. ಈ ನಿರ್ಧಾರವು ನ.1ರಿಂದ ಜಾರಿಗೆ ಬರಲಿದೆ. ಭಾರತದಲ್ಲೇ ಉತ್ಪಾದನೆಯಾಗುವ ವಸ್ತುಗಳ ಉತ್ತೇಜನಕ್ಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟನೆಯನ್ನೂ ನೀಡಿದೆ. ಜತೆಗೆ ಈ ವಲಯದಲ್ಲಿ ಚೀನದ ಪ್ರಾಬಲ್ಯವನ್ನು ಕಡಿಮೆ ಮಾಡಬೇಕು ಎಂಬುದು ಕೇಂದ್ರದ ಪ್ರಮುಖ ಧ್ಯೇಯ. ಇನ್ನು ಮುಂದೆ ಈ ರೀತಿಯ ವಸ್ತುಗಳನ್ನು ತರಿಸಿ ಕೊಳ್ಳಬೇಕಾದರೆ, ಕೇಂದ್ರ ಸರಕಾರದಿಂದ ಪರವಾನಿಗೆ ಪಡೆಯಬೇಕು. ಸರಕಾರದ ಮೂಲಗಳು ಹೇಳುವ ಪ್ರಕಾರ, ನಂಬಿಕಸ್ತ ದೇಶಗಳಿಂದ ಮಾತ್ರ ಆಮದು ಮಾಡಿಕೊಳ್ಳಲು ಈ ತಂತ್ರದ ಮೊರೆ ಹೋಗಿದೆ.

ಆಮದು ನಿರ್ಬಂಧದ ಪರಿಣಾಮವೇನು?

ಇನ್ನು ಮುಂದೆ ಭಾರತಕ್ಕೆ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಮತ್ತು ಕೆಲವು ರೀತಿಯ ವೈಯಕ್ತಿಕ ಕಂಪ್ಯೂಟರ್‌ಗಳನ್ನು ಭಾರತಕ್ಕೆ ತರಿಸಿಕೊಳ್ಳುವ ಮುನ್ನ ಪರವಾನಿಗೆ ಪಡೆಯಬೇಕು. ಹೀಗಾಗಿ ಆಗ ತಾನೇ ಮಾರುಕಟ್ಟೆಗೆ ಪರಿಚಯಿಸಲಾಗುವ ವಸ್ತುಗಳು ಭಾರತಕ್ಕೆ ಬರಲು ಸಾಕಷ್ಟು ದಿನಗಳು ಬೇಕಾಗುತ್ತವೆ. ಆದರೆ ಈ ವಸ್ತುಗಳನ್ನು ಇ-ಕಾಮರ್ಸ್‌ ವೆಬ್‌ ಸೈಟ್‌ಗಳ ಮೂಲಕ ಖರೀದಿಸಲು ಯಾವುದೇ ನಿರ್ಬಂಧವಿಲ್ಲ. ಇವುಗಳನ್ನು ಪರವಾನಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ, ಬೆಂಚ್‌ಮಾರ್ಕಿಂಗ್‌, ಅಸೆಸ್‌ಮೆಂಟ್‌, ರಿಪೇರಿ ಮತ್ತು ಪುನರ್‌ ರಫ್ತು ಅಥವಾ ವಸ್ತುವಿನ ಅಭಿವೃದ್ಧಿಗೆ ಸಂಬಂಧಿಸಿದ 20 ವಸ್ತುಗಳನ್ನೂ ಹೊರಗಿಡಲಾಗಿದೆ.

Advertisement

ಆಮದು ಮೇಲೇಕೆ ನಿರ್ಬಂಧ?

ಕೇಂದ್ರ ಸರಕಾರ ಹೇಳುವ ರೀತಿ ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿರುವ ಇಂಥ ವಸ್ತುಗಳ ಉತ್ಪಾದಕರಿಗೆ ಹೆಚ್ಚಿನ ಉತ್ತೇಜನ ನೀಡುವುದು. 2023ರ ಎಪ್ರಿಲ್‌-ಜೂನ್‌ ಅವಧಿಯಲ್ಲಿ ಭಾರತ 19.7 ಬಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಇದು ಪ್ರತೀ ವರ್ಷ ಶೇ.6ರಷ್ಟು ಹೆಚ್ಚಾಗುತ್ತದೆ. ಅಲ್ಲದೆ ಚೀನದಿಂದ ಬರುವ ವಸ್ತುಗಳ ಪ್ರಮಾಣ ಶೇ.1.5ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಮೊಬೈಲ್‌ ಫೋನ್‌ಗಳ ಆಮದು ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದರಿಂದ ಇವುಗಳ ಉತ್ಪಾದನೆ ಇಲ್ಲೇ ಹೆಚ್ಚಾಯಿತು. ಈ ಮೂಲಕ ಸ್ಥಳೀಯವಾಗಿ ಲಾಭವಾಯಿತು ಎಂಬ ವಾದ ಕೇಂದ್ರ ಸರಕಾರದ್ದಾಗಿದೆ. ಅಂದರೆ ಕಳೆದ ವರ್ಷ ಭಾರತದಲ್ಲಿ 38 ಬಿಲಿಯನ್‌ ಡಾಲರ್‌ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ಉತ್ಪಾದಿಸಲಾಗಿದೆ.

ಕಂಪೆನಿಗಳ ಮೇಲೇನು ಪರಿಣಾಮ?

ಭಾರತದಲ್ಲಿ ಹೆಚ್ಚು ಬಳಕೆ ಮಾಡುವ ಬ್ರ್ಯಾಂಡ್‌ಗಳೆಂದರೆ, ಸ್ಯಾಮ್‌ಸಂಗ್‌, ಎಚ್‌ಪಿ, ಡೆಲ್‌, ಏಸಲ್‌, ಎಲ್‌ಜಿ, ಆ್ಯಪಲ್‌ ಮತ್ತು ಲೆನೆವೋ. ಇವುಗಳಲ್ಲಿ ಬಹುತೇಕ ವಸ್ತುಗಳನ್ನು ಚೀನದಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಕೇಂದ್ರದ ನಿರ್ಬಂಧ ನಿರ್ಧಾರದಿಂದ ಈ ಕಂಪೆನಿಗಳು ಭಾರತದಲ್ಲೇ ಇವುಗಳ ಉತ್ಪಾದನೆಗೆ ಮುಂದಾಗಬಹುದು.

ಚೀನದಿಂದ ಎಲೆಕ್ಟ್ರಾನಿಕ್‌ ವಸ್ತುಗಳ ಆಮದು ಮೌಲ್ಯ

2019  2023ರ ವರೆಗೆ ಚೀನದಿಂದ ಆಮದು ಮಾಡಿಕೊಂಡ ಎಲೆಕ್ಟ್ರಾನಿಕ್‌ ವಸ್ತುಗಳ ಮೌಲ್ಯ 19,433 ಮಿಲಿಯನ್‌ ಡಾಲರ್‌. ಅದೇ ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದು 13,506 ಮಿಲಿಯನ್‌ ಡಾಲರ್‌.

ಚೀನ ಮೇಲೆ ಭಾರತದ 5 ಸರ್ಜಿಕಲ್‌ ಸ್ಟ್ರೈಕ್‌

1 ಆಟೋಮೊಬೈಲ್‌ ಕಂಪೆನಿ ಹೂಡಿಕೆ

ಇತ್ತೀಚೆಗಷ್ಟೇ ಕೇಂದ್ರ ಸರಕಾರವು ಚೀನದ ಆಟೋಮೊಬೈಲ್‌ ಕಂಪೆನಿ ಬಿವೈಡಿಯ 1 ಬಿಲಿಯನ್‌ ಡಾಲರ್‌ ಹೂಡಿಕೆ ಪ್ರಸ್ತಾವವನ್ನು ತಿರಸ್ಕರಿಸಿತು. ಇದು ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸುವ ಉದ್ದೇಶ ಹೊಂದಿತ್ತು.

2 ಗ್ರೇಟ್‌ ವಾಲ್‌ ಮೋಟಾರ್‌ ಹೂಡಿಕೆ

ಕಳೆದ ವರ್ಷ ಚೀನದ ಪ್ರಸಿದ್ಧ ಇನ್ನೊಂದು ಆಟೋಮೊಬೈಲ್‌ ಕಂಪೆನಿ ಗ್ರೇಟ್‌ ವಾಲ್‌ ಮೋಟಾರ್‌ ಕಂಪೆನಿಯ 1 ಬಿಲಿಯನ್‌ ಡಾಲರ್‌ ಹೂಡಿಕೆ ಪ್ರಸ್ತಾವವನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ಹೀಗಾಗಿ ಭಾರತದಲ್ಲಿನ ಈ ಕಂಪೆನಿಯ ಎಲ್ಲ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿ ಕಂಪೆನಿ ಮುಚ್ಚಲಾಯಿತು.

3 ಕ್ಸಿಯೋಮಿ ಆಸ್ತಿ ಜಪ್ತಿ

ಕಳೆದ ವರ್ಷ ಭಾರತದ ಆರ್ಥಿಕ ಅಪರಾಧಗಳ ಮಂಡಳಿಯ ಕ್ಸಿಯೋಮಿ ಕಂಪೆನಿಯ 670 ಮಿಲಿಯನ್‌ ಡಾಲರ್‌ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಕೊಂಡಿತು. ವಿದೇಶಿ ಕಂಪೆನಿಗೆ ಅಕ್ರಮವಾಗಿ ದೇಣಿಗೆ ರೂಪದಲ್ಲಿ ರಾಯಲ್ಟಿ ವರ್ಗಾವಣೆ ಮಾಡುತ್ತಿದೆ ಎಂಬ ಆರೋಪದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

4 ಮೊಬೈಲ್‌ ಆ್ಯಪ್‌ ನಿಷೇಧ

ಚೀನದ ಟಿಕ್‌ಟಾಕ್‌ ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್‌ ಆ್ಯಪ್‌ಗಳನ್ನು ಕೇಂದ್ರ ಸರಕಾರ ನಿಷೇಧಿಸಿತು. ಭಾರತದ ಭದ್ರತೆಗೆ ಧಕ್ಕೆ ತರುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

5 ಹೂಡಿಕೆ ಮೇಲೆ ಕಣ್ಣು

2020ರಿಂದಲೂ ಚೀನ ಕಂಪೆನಿಗಳ ಭಾರತದಲ್ಲಿನ ಹೂಡಿಕೆ ಮೇಲೆ ಒಂದು ಹದ್ದಿನ ಕಣ್ಣಿಟ್ಟಿದೆ. ಸರಕಾರದ ಭದ್ರತಾ ಕ್ಲಿಯರೆನ್ಸ್‌ ಇಲ್ಲದೇ ಚೀನದ ಕಂಪೆನಿಯಿಂದ ಯಾವುದೇ ಹೂಡಿಕೆ ಸ್ವೀಕಾರ ಮಾಡುವಂತಿಲ್ಲ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಭಾರತದಲ್ಲಿ ಚೀನದ ಹೂಡಿಕೆ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next