ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ವಿಭಿನ್ನ ಮತ್ತು ಪ್ರಯೋಗಾತ್ಮಕ ಚಿತ್ರಗಳು, ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ನಟರಲ್ಲಿ ಸಂಚಾರಿ ವಿಜಯ್ ಕೂಡ ಒಬ್ಬರು. ಕೋವಿಡ್ ಲಾಕ್‌ಡೌನ್ ಬಳಿಕ “ಆಕ್ಟ್ – 1978′ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟ ಸಂಚಾರಿ ವಿಜಯ್, ಈಗ ಮತ್ತೂಂದು ವಿಭಿನ್ನ ಚಿತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಆ ಚಿತ್ರದ ಹೆಸರು “ಅವಸ್ಥಾಂತರ’.
ಈ ಚಿತ್ರದಲ್ಲಿ ಸಂಚಾರಿ ವಿಜಯ್ ತೊಳಲಾಟದಲ್ಲಿರುವ ಹರೆಯದ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಜಿ. ದೀಪಕ್ ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಮೂವೀ ವಾಕ್ಸ್’ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ಇತ್ತೀಚೆಗೆ “ಅವಸ್ಥಾಂತರ’ ಚಿತ್ರದ ಮುಹೂರ್ತ ನಡೆಸಿರುವ ಚಿತ್ರತಂಡ, ಚಿತ್ರೀಕರಣಕ್ಕೆ ಅಣಿಯಾಗಿದೆ. ಇದೇ ವೇಳೆ ಚಿತ್ರದ ಬಗ್ಗೆ ಒಂದಷ್ಟು ಮಾತನಾಡಿದ ಚಿತ್ರತಂಡ, “ಹದಿಹರೆಯದ ಯುವಕನೊಬ್ಬನಲ್ಲಿ ಅರಿವಿಲ್ಲದಂತೆ ಹುಟ್ಟಿಕೊಳ್ಳುವ ಬಯಕೆಗಳು, ಕಾಮನೆಗಳುಆತನನ್ನು ಹೇಗೆ ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ. ಅದರಿಂದ ಏನೇನು ಸಂಕಷ್ಟಗಳು, ಅನಾಹುತಗಳು ನಡೆಯುತ್ತದೆ ಎನ್ನುವುದರ ಸುತ್ತ ಈ “ಅವಸ್ಥಾಂತರ’ ಸಿನಿಮಾ ಸಾಗಲಿದೆ. ಇಡೀ ಸಿನಿಮಾ ತಿಳಿಹಾಸ್ಯದ ಮೂಲಕ ತೆರೆಮೇಲೆ ತೋರಿಸುತ್ತಿದ್ದೇವೆ. ಜೊತೆಗೆ ಅರ್ಥಪೂರ್ಣ ಸಂದೇಶ ಕೂಡ ಇರಲಿದೆ’ ಎಂದಿದೆ.
ಇದನ್ನೂ ಓದಿ:ಎಷ್ಟು ವರ್ಷ ಆಯ್ತು ಅನ್ನೋದಕ್ಕಿಂತ ಏನ್ ಕೊಡ್ತೀವಿ ಅನ್ನೋದು ಮುಖ್ಯ: ಪೊಗರು ಧ್ರುವ ಮಾತು
ಇನ್ನು “ಅವಸ್ಥಾಂತರ’ ಚಿತ್ರದಲ್ಲಿ ಸಂಚಾರಿ ವಿಜಯ್‌ಗೆ ನಾಯಕಿಯಾಗಿ ಕಿರುತೆರೆ ನಟಿ ರಂಜನಿ ರಾಘವನ್ ಜೋಡಿಯಾಗುತ್ತಿದ್ದಾರೆ. “ಪ್ರೀತಿಯಲ್ಲಿ ಬಿದ್ದಾಗ ಎದುರಾಗಬಹುದಾದ ಅವಸ್ಥೆಗಳು, ಅವಾಂತರಗಳನ್ನು ಸಂಪ್ರದಾಯಸ್ಥ ಹುಡುಗಿಯೊಬ್ಬಳು ಬದುಕಿನಲ್ಲಿ ಹೇಗೆ ನಿಭಾಯಿಸುತ್ತಾಳೆ’ ಅನ್ನೋದು ರಂಜನಿ ಪಾತ್ರವಂತೆ. ಉಳಿದಂತೆ ದಿಶಾ ಕೃಷ್ಣಯ್ಯ, ಪ್ರದೀಪ್, ರೋಹಿಣಿ, ಲಕ್ಷ್ಮೀ ಭಾಗವತರ್ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಅವಸ್ಥಾಂತರ’ ಚಿತ್ರದ ಟೈಟಲ್‌ಗೆ “ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಎಂಬ ಅಡಿ ಬರಹವಿದ್ದು, ಚಿತ್ರದ ಟೈಟಲ್‌ಗೂ ಅಡಿಬರಹಕ್ಕೂ ಸಂಬಂಧವೇನು ಅನ್ನೋದನ್ನ ಚಿತ್ರದಲ್ಲಿ ಹೇಳಲಿದ್ದೇವೆ ಎನ್ನುವುದು ಚಿತ್ರತಂಡದ ಮಾತು.
ಸದ್ಯ ಮುಹೂರ್ತ ನಡೆಸಿರುವ “ಅವಸ್ಥಾಂತರ’ ಚಿತ್ರತಂಡ, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದೆ. ಚಿತ್ರದ ಎರಡು ಹಾಡುಗಳಿಗೆ ಬಿ. ಜೆ ಭರತ್ ಸಂಗೀತ ಸಂಯೋಜಿಸತ್ತಿದ್ದಾರೆ. ಚಿತ್ರಕ್ಕೆ ನಂದಕಿಶೋರ್ ಛಾಯಾಗ್ರಹಣ, ಶೇಷು ಸಂಕಲನವಿದೆ. ಚಿತ್ರತಂಡದ ಪ್ಲಾನ್ ಪ್ರಕಾರ ಇದೇ ವರ್ಷದ ಕೊನೆಯೊಳಗೆ “ಅವಸ್ಥಾಂತರ’ ಥಿಯೇಟರ್‌ಗೆ ಬರಲಿದೆ.