Advertisement
ಆಂಗ್ಲ ಭಾಷೆಯ ಪ್ರಭಾವದಿಂದ ಎಷ್ಟೋ ಭಾಷೆಗಳು ಅವನತಿಯತ್ತ ಸಾಗುತ್ತಿದೆ. ಇದಕ್ಕೆ ಕೊಂಕಣಿ ಭಾಷೆಯೂ ಹೊರತಾಗಿಲ್ಲ . ಈ ದೃಷ್ಟಿಯಿಂದ ಕೊಂಕಣಿ ಭಾಷೆಯನ್ನು ಉಳಿಸಿ, ಬೆಳೆಸಬೇಕು, ಕೊಂಕಣಿ ಭಾಷೆಯಲ್ಲಿ ಸಾಹಿತ್ಯದ ಕೃಷಿ ನಿರಂತರವಾಗಿ ನಡೆಯಬೇಕು, ಕೊಂಕಣಿ ಸಮುದಾಯದ ಕಲೆ – ಸಂಸ್ಕೃತಿ ಉಳಿಯಬೇಕೆಂಬ ಸದಾಶಯದಿಂದ 21-4-1994ರಂದು “ಕೊಂಕಣಿ ಸಾಹಿತ್ಯ ಅಕಾಡೆಮಿ’ ಕರ್ನಾಟಕ ಸರಕಾರದಿಂದ ಸ್ಥಾಪನೆಯಾಯಿತು.
Related Articles
Advertisement
ಕೊಂಕಣಿ ಸಾಹಿತ್ಯ, ಸಂಸ್ಕೃತಿ, ಭಾಷೆ, ಶಿಕ್ಷಣ, ಸಮುದಾಯದ ಬೆಳವಣಿಗೆಗೆ 25 ವರ್ಷಗಳಿಂದ “ಕೊಂಕಣಿ ಸಾಹಿತ್ಯ ಅಕಾಡೆಮಿ’ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷ ಅಕಾಡೆಮಿ ಕೊಂಕಣಿ ಸಾಹಿತ್ಯ, ಕಲೆ ಹಾಗೂ ಜಾನಪದ ಈ ಮೂರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಸಾಧಕರನ್ನು ಗುರುತಿಸಿ, ಗೌರವಿಸುವ ಕಾರ್ಯಕ್ರಮವನ್ನು ಅಕಾಡೆಮಿಯು ರಾಜ್ಯಾದ್ಯಂತ ನಡೆಸಿಕೊಂಡು ಬರುತ್ತಿದೆ. 1995ರಿಂದ 2018ರ ವರೆಗೆ ಒಟ್ಟು 97 ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವರೆಗೆ ಒಟ್ಟು 62 ಪುಸ್ತಕಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಅಕಾಡೆಮಿಯ ಸತತ ಪ್ರಯತ್ನದಿಂದ ಕರ್ನಾಟಕದಲ್ಲಿ ಕೊಂಕಣಿ ಕಲಿಕೆ ಅಭಿವೃದ್ಧಿಯಲ್ಲಿದೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ಮತ್ತು ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ವಿದ್ಯಾರ್ಥಿಗಳು ಕೊಂಕಣಿಯನ್ನು ಐಚ್ಛಿಕ ಭಾಷೆಯಾಗಿ ಕಲಿಯುತ್ತಿದ್ದಾರೆ. ಹಂಪನ ಕಟ್ಟೆಯ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಸ್ನಾತಕೋತ್ತರದಲ್ಲಿ ಕೊಂಕಣಿ ಮೊಳಕೆಯೊಡೆದಿದೆ. ಅಕಾಡೆಮಿ ವತಿಯಿಂದ ಕೊಂಕಣಿ ಎಂ.ಎ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುತ್ತಿದೆ.
ಅಕಾಡೆಮಿ ವತಿಯಿಂದ ಪುಸ್ತಕ ಪ್ರಕಟನೆ ಮತ್ತು ಮಾರಾಟ, ಗ್ರಂಥಾಲಯ ಅಭಿವೃದ್ಧಿ ಇತ್ಯಾದಿ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ. ಸಾಹಿತ್ಯದ ವಿವಿಧ ಪ್ರಕಾರಗಳಾದ ಕತೆ, ಕಾದಂಬರಿ, ಮಹಾಕಾವ್ಯ, ಕವಿತೆ, ಲೇಖನ ಸಂಗ್ರಹ, ಜೀವನ ಚರಿತ್ರೆ, ಫೆಲೋಶಿಪ್ ಅಧ್ಯಯನ, ವ್ಯಾಕರಣ, ಪ್ರವಾಸ ಸಾಹಿತ್ಯ, ಆರ್ಥಿಕ ಮಾಹಿತಿ, ಶಿಶು ಸಾಹಿತ್ಯ, ಸ್ತ್ರೀಯರ ಸಾಹಿತ್ಯ, ಅನುವಾದ, ವಿಜ್ಞಾನ, ಜನಪದ ಹಾಡುಗಳು, ಗಮಕ ಹಾಡುಗಳು, ಕೃಷಿ ಮಾಹಿತಿ, ನಾಟಕ, ಸಮುದಾಯ ಅಧ್ಯಯನ, ದಿನಬಳಕೆಯ ಪದಕೋಶ ಹೀಗೆ ವಿವಿಧ ಪ್ರಕಾರಗಳ ವೈವಿಧ್ಯತೆಯನ್ನು ಅಳವಡಿಸಿ ಪುಸ್ತಕ ಪ್ರಕಟಿಸಲಾಗುತ್ತಿದೆ.ಇದುವರೆಗೆ ಅಕಾಡೆಮಿ ವತಿಯಿಂದ 263 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಲೇಖಕರಿಗೆ ಗೌರವ ಧನದ ಜೊತೆಗೆ 25 ಪುಸ್ತಕಗಳನ್ನು ಹಾಗೂ ಮಾರಾಟಕ್ಕೆ ಶೇ. 50 ರಿಯಾಯಿತಿಯಲ್ಲಿ 100 ಪುಸ್ತಕಗಳನ್ನು ನೀಡಲಾಗುತ್ತಿದೆ. ಕೊಂಕಣಿ ಸಾಹಿತಿಗಳು ಮುದ್ರಿಸಿ ಪ್ರಕಟಿಸಿರುವ ಪುಸ್ತಕಗಳನ್ನು ಸಹ ಅಕಾಡೆಮಿ ವತಿಯಿಂದ ಶೇ. 20 ರಿಯಾಯಿತಿಯೊಂದಿಗೆ ರೂ.2000 ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಪ್ರೋತ್ಸಾಹಿಸಲಾಗುತ್ತಿದೆ. ಕೊಂಕಣಿ ಸಮುದಾಯದ ಅನುಪಮ ಜನಪದ ಹಾಡು, ನೃತ್ಯಗಳು ನಶಿಸಿ ಹೋಗದೆ ಅವುಗಳನ್ನು ಮೂಲರೂಪದಲ್ಲಿ ಉಳಿಸಿ ಬೆಳೆಸುವ, ಅರಿವು ಮೂಡಿಸುವ ಕೆಲಸ ಕಾರ್ಯಗಳು ಅಕಾಡೆಮಿಯಿಂದ ನಡೆಯುತ್ತಿವೆ. ಈ ರೀತಿ ಬಹು ಆಯಾಮಗಳಿಂದ ಜನೋಪಯೋಗಿ ಕೆಲಸ ಮಾಡುತ್ತಿರುವ “ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ’ಗೆ ಈಗ 25ರ ಹರೆಯ. ಅಕಾಡೆಮಿಯ ಈ ಬೆಳ್ಳಿಹಬ್ಬವನ್ನು ಹಾಗೂ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಾರ್ಕಳದ ಶಾಲೆಯ ಆವರಣದಲ್ಲಿ ಫೆ. 22 ಮತ್ತು 23ರಂದು ಆಚರಿಸಬೇಕೆಂದು ಅಕಾಡೆಮಿ ನಿರ್ಧರಿಸಿದೆ. ಫೆ.23 ಸಾಯಂಕಾಲ 4.30ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಬೆಳ್ಳಿಹಬ್ಬದ ಸಂದರ್ಭದಲ್ಲಿ 25 ಕೊಂಕಣಿ ಸಾಧಕರನ್ನು ಹಾಗೂ ಅಕಾಡೆಮಿಯ 6 ಜನ ಪೂರ್ವ ಅಧ್ಯಕ್ಷರನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರತಿನಿಧಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ, ಆಯುರ್ವೇದ ಗಿಡಮೂಲಿಕೆಗಳ ಹಾಗೂ ದೇಶಿಯ ಗೋತಳಿಗಳ ಪ್ರದರ್ಶನಗಳನ್ನೂ ಏರ್ಪಡಿಸಲಾಗಿದೆ. ರೆಡ್‌ಕ್ರಾಸ್ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. – ಡಾ| ಕೆ. ಜಗದೀಶ ಪೈ