Advertisement

ಸಮೃದ್ಧ ಸಾಹಸ!

12:26 PM Dec 02, 2017 | |

ಸಾಧಿಸುವ ಛಲವೊಂದಿದ್ದರೆ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಎಡಗಾಲು ಅಂಗವೈಕಲ್ಯಕೊಳಗಾದ ಸಮೃದ್ಧ್ ಮಂಡಿ ಸಾಕ್ಷಿಯಾಗಿದ್ದಾರೆ. ದಿನದಿಂದ ದಿನಕ್ಕೆ ಸಮೃದ್ಧ್ ಈಜು ಸ್ಪರ್ಧೆಯಲ್ಲಿ ಪ್ರಭುತ್ವ ಸಾಧಿಸುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಳ್ಳಾರಿಯ ಕೀರ್ತಿಪತಾಕೆಯನ್ನು ಹಾರಿಸುತ್ತಿದ್ದಾರೆ.

Advertisement

ವಯಸ್ಸಿಗೆ ಅನುಗುಣವಾಗಿ ಬೆಳೆಯುತ್ತಿರುವ ದೇಹ, ಎರಡೂ ಕಾಲುಗಳ ನಡುವಿನ ಅಸಮಾನತೆ, ಎಡಗಾಲಿನ ಊನ ಸರಿಪಡಿಸಲು ನಾಲ್ಕು ಮೂಳೆ ಉದ್ದವಾಗಿಸುವ ಶಸ್ತ್ರ ಚಿಕಿತ್ಸೆಗಳು. ದೈಹಿಕ, ಮಾನಸಿಕ ನೋವು. ಇವುಗಳ ನಡುವೆ ಈಜು ತರಬೇತಿ ಪಡೆದ ಸಮೃದ್ಧ್ ಛಲ ಬಿಡದೇ ಈಜನ್ನೇ ಉಸಿರನ್ನಾಗಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ.

10ನೇ ತರಗತಿಯ ವಿದ್ಯಾರ್ಥಿಯಾದ ಸಮೃದ್ಧ್ ಮಂಡಿ, ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ 17ನೇ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಶಿಪ್‌ನ 100 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಹಾಗೂ 50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗೆದ್ದಿದ್ದಾರೆ.

ಬಾಲ್ಯದ ಬೇನೆ
ಬಳ್ಳಾರಿಯ ವಿದ್ಯಾನಗರದ ಟೌನ್‌ಶಿಪ್‌ನಲ್ಲಿರುವ ಜಿಂದಾಲ್‌ ವಿದ್ಯಾ ಮಂದಿರ್‌ನಲ್ಲಿ ಸಮೃದ್ಧ್ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ತಂದೆ ಸತೀಶ್‌ಚಂದ್ರ ಜೆಎಸ್‌ಡಬ್ಲೂé ಸ್ಟೀಲ್ಸ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಸಮೃದ್ಧ್ನ ಎಡಗಾಲು ಬಾಲ್ಯದಿಂದಲೇ ಊನವಾಗಿದ್ದು, ಬಲಗಾಲಿನಂತೆ ಬೆಳವಣಿಗೆ ಆಗಲಿಲ್ಲ. ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದ ಸಮೃದ್ಧ್ ನನ್ನು ಕಳೆದ ಏಳು ವರ್ಷದ ಹಿಂದೆ ಪೋಷಕರಾದ ಸತೀಶ್‌ಚಂದ್ರ ಹಾಗೂ ನಂದಿನಿ ಜಿಂದಾಲ್‌ ನ್ಪೋರ್ಟ್ಸ್ ಕ್ಲಬ್‌ಗ ಸೇರಿಸಿದರು. ಅಲ್ಲಿ ಈಜು ಸ್ಪರ್ಧೆಯನ್ನು ಆರಂಭಿಸಿದ ಸಮೃದ್ಧ್ ಇದೀಗ ಭರವಸೆಯ ಈಜುಗಾರನಾಗಿ ರೂಪುಗೊಳ್ಳುತ್ತಿದ್ದಾರೆ.

Advertisement

ಸಾಧನೆಯ ಹಾದಿ
ಕೋಚ್‌ ಶ್ರೀನಿವಾಸುಲು ನಾಯ್ಡು ಅವರ ಮಾರ್ಗದರ್ಶನದಲ್ಲಿ ಸಮೃದ್ಧ್ ತನ್ನ ಅಂಗವೈಕಲ್ಯವನ್ನು ಮೀರಿ ಉತ್ತಮ ಸಾಧನೆ ಮಾಡಲು ಆರಂಭಿಸಿದ್ದಾನೆ. ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾನೆ.

2013ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿರುವುದು. ಈ ವರ್ಷ ರಾಜಸ್ಥಾನದ ಉದಯಪುರದಲ್ಲಿ ನಡೆದ 16ನೇ ರಾಷ್ಟ್ರ ಮಟ್ಟದ ಈಜು ಚಾಂಪಿಯನ್‌ಶಿಪ್‌ನ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವುದು ಸಮೃದ್ಧ್ ಸಾಧನೆ.

ಮಗನ ಸಾಧನೆಗೆ ಪೋಷಕರು ನೀರೆರೆದಿದ್ದಾರೆ. ಅಂಗವೈಕಲ್ಯ ಇರುವ ತಮ್ಮ ಪುತ್ರ ಸಾಮಾನ್ಯ ಮಕ್ಕಳಂತೆ ಬೆಳೆಯಲಿ ಎಂಬ ಏಕೋದ್ದೇಶದೊಂದಿಗೆ ತಮ್ಮೆಲ್ಲಾ ಶ್ರಮಗಳನ್ನು ಹಾಕುತ್ತಿದ್ದಾರೆ.

ಅಪ್ಪ, ಅಮ್ಮಂದಿರ ಪ್ರೋತ್ಸಾಹ, ಶ್ರೀನಿವಾಸುಲು ನಾಯ್ಡು ಸರ್‌ ಅವರ ತರಬೇತಿಯ ನೆರವಿನಿಂದ ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ 1 ಬೆಳ್ಳಿ, 2 ಕಂಚಿನ ಪದಕ ಗೆದ್ದಿದ್ದೇನೆ. ನನ್ನ ಸಾಧನೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಬೇಕೆಂಬ ಉತ್ಸಾಹ ನನ್ನಲ್ಲಿದೆ.
 ಸಮೃದ್ಧ್ ಮಂಡಿ, ಅಂಗವಿಕಲ ಈಜುಪಟು.

ಎಂ.ಮುರಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next