Advertisement
ಯಾವುದೇ ಗುರುವಿಲ್ಲದೆ, ಆನ್‌ಲೈನ್ ಸಾಮಗ್ರಿಗಳನ್ನೇ ಬಳಸಿಕೊಂಡು ಕನ್ನಡ ಲಿಪಿ, ಸಂಭಾಷಣೆ, ತುಳು ಸಂಭಾಷಣೆಯನ್ನು ಕಲಿತಿದ್ದಾರೆ 23ರ ಹರೆಯದ ಸ್ಯಾಮುಯೆಲ್ ಡ್ರಾಗೊಮೈರ್. ಅವರ ತುಳು ಕಲಿಕೆಗೆ ನೆರವಾದವರು ಕೆಲವು ಶೆಟ್ಟಿ ಮತ್ತು ಪೂಜಾರಿ ಸ್ನೇಹಿತರು. ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿರುವ ಕನ್ನಡ, ತುಳು ಸಾಮಗ್ರಿಗಳನ್ನು ಶೋಧಿಸಿ, ಆಸಕ್ತಿಯಿಂದ ಕಲಿತಿದ್ದಾರೆ. ಸದ್ಯ ಅವರ ತುಳು ಹೇಗಿದೆಯೆಂದರೆ ತುಳುವರು ಎಲ್ಲಾದರೂ ಆಂಗ್ಲಪದ ಬಳಸಿದರೂ ಅದಕ್ಕೆ ತುಳುವಿನಲ್ಲೇ ಉತ್ತರಿಸುವಷ್ಟರ ಮಟ್ಟಿಗೆ. “ಮೂಲು ಮೋಸ್ಕಿಟೋಸ್ ಉಂಡಾ’ ? ಎಂದು ಕೇಳಿದರೆ “ಉಮಿಲ್ ಉಂಡು’ ಎಂದು ನಗುತ್ತಾರೆ.
ವಾರದ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿರುವ ಸ್ಯಾಮ್ ಸದ್ಯದಲ್ಲೇ ಮಂಗಳೂರಿಗೆ ಬರಲಿದ್ದಾರೆ. ಭಾಷೆ, ಸಂಸ್ಕೃತಿಗಳ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಅವರು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದಕ್ಕೆ ಮಂಗಳೂರಿಗೆ ಬರುತ್ತಾರೆ. ನಾಲ್ಕು ತಿಂಗಳು ಇಲ್ಲೇ ಇದ್ದುಕೊಂಡು ತುಳುನಾಡಿನ ಬಗ್ಗೆ ಆಳವಾಗಿ ಕಲಿತುಕೊಳ್ಳುವ ಉಮೇದಿನಲ್ಲಿದ್ದಾರೆ. ತನ್ನದೇ ಯುಟ್ಯೂಬ್ ಚಾನೆಲ್‌ನಲ್ಲಿ ತಾನು ಕನ್ನಡ, ತುಳು ಕಲಿತ ವಿಚಾರವನ್ನು ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಎಂಜಿನಿಯರಿಂಗ್ ವಿದ್ಯಾರ್ಥಿ
ನಾರ್ತ್ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಡಾಟಾ ಅನೆಲಿಟಿಕ್ಸ್ ಎಂಜಿನಿಯರಿಂಗ್‌ನಲ್ಲಿ ಎಂ.ಎಸ್. ಮಾಡುತ್ತಿರುವ ಸ್ಯಾಮ್ ಪೋರ್ಚುಗೀಸ್ ಭಾಷೆ ಬಲ್ಲರು. ತುಳು, ಕನ್ನಡ ಕಲಿಯುತ್ತಿದ್ದೇನೆ, ತುಳುವಿಗಾಗಿಯೇ ಪ್ರತ್ಯೇಕ ಯುಟ್ಯೂಬ್ ಚಾನೆಲ್ ಮಾಡಿದ್ದೇನೆ ಎಂದು ತಮ್ಮ ವಿವರದಲ್ಲಿ ತಿಳಿಸಿದ್ದಾರೆ.