Advertisement

Samudra Puja: ಮಂಗಳೂರು, ಮಲ್ಪೆಯಲ್ಲಿ ಮತ್ಸ್ಯ ಸಮೃದ್ಧಿಗಾಗಿ ಸಮುದ್ರ ಪೂಜೆ

12:48 PM Sep 01, 2023 | Team Udayavani |

ಪಣಂಬೂರು/ ಮಲ್ಪೆ: ಮೀನುಗಾರಿಕೆ ನಡೆಸುವಾಗ ಯಾವುದೇ ತೊಂದರೆಗಳು ಎದುರಾಗದಂತೆ ಗಂಗಾಮಾತೆಯನ್ನು ಪ್ರಾರ್ಥಿಸಿ ನಡೆಸುವ ವಿಶೇಷ ಸಮುದ್ರಪೂಜೆಯು ಗುರುವಾರ ತಣ್ಣೀರುಬಾವಿ ಮತ್ತು ಮಲ್ಪೆಯ ಕಡಲ ಕಿನಾರೆಯಲ್ಲಿ ನಡೆಯಿತು.

Advertisement

ತಣ್ಣೀರುಬಾವಿಯಲ್ಲಿ
ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾ (ಕದ್ರಿ) ವತಿಯಿಂದ ಸಭಾದ ಅಧ್ಯಕ್ಷ ಸುಭಾಸ್‌ಚಂದ್ರ ಕಾಂಚನ್‌ ನೇತೃತ್ವದಲ್ಲಿ ತಣ್ಣೀರುಬಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕದ್ರಿ ಗೋರಕ್ಷಕನಾಥ ಜೋಗಿ ಮಠದ ರಾಜಯೋಗಿ ಶ್ರೀ ನಿರ್ಮಲಾನಾಥಜೀ ಮಹಾರಾಜ್‌ ಅವರು ಹಾಲು, ಪುಷ್ಪ ಮತ್ತು ತೆಂಗಿನಕಾಯಿಯನ್ನು ಕಡಲಿಗೆ ಸಮರ್ಪಿಸಿ ಪ್ರಾರ್ಥಿನೆ ಸಲ್ಲಿಸಿದರು. ಬಳಿಕ ಆಶೀರ್ವಚನ ನೀಡಿ, ಹಲವಾರು ವರ್ಷಗಳಿಂದ ಮೀನುಗಾರರು ಗಂಗೆಮಾತೆಯನ್ನು ಪೂಜಿಸುತ್ತಿರುವುದು ಸಂತಸದ ವಿಷಯ. ಮೀನುಗಾರರನ್ನು ರಕ್ಷಿಸಿ, ಅಭಿವೃದ್ಧಿ ಮತ್ತು ಸಂಪತ್ತು ನೀಡಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ಏಳುಪಟ್ಣ ಮೊಗವೀರ ಸಭಾ (ಉರ್ವ) ಇದರ ಅಧ್ಯಕ್ಷ ಲೋಕೇಶ್‌ ಸುವರ್ಣ ಶುಭ ಹಾರೈಸಿದರು.

ಪ್ರತೀ ಗ್ರಾಮದಿಂದ ಹಾಲು ಮತ್ತು ತೆಂಗಿನಕಾಯಿ ಸಂಗ್ರಹಿಸಿ ಭಜನೆ ಕಾರ್ಯಕ್ರಮದೊಂದಿಗೆ ಬೊಕ್ಕಪಟ್ಣದ ಶ್ರೀ ಬ್ರಹ್ಮ ಬೊಬ್ಬರ್ಯ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಅನಂತರ ತಣ್ಣೀರುಬಾವಿ ಕಡಲ ಕಿನಾರೆಗೆ ತೆರಳಿ ಪೂಜೆ ಸಲ್ಲಿಸಲಾಯಿತು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ನಾರಾಯಣ ಕೋಟ್ಯಾನ್‌, ದ.ಕ. ಮೊಗವೀರ ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ, ಸಂಯುಕ್ತ ಸಭಾ ಉಪಾಧ್ಯಕ್ಷ ಹೇಮಚಂದ್ರ ಸಾಲಿಯಾನ್‌, ಪ್ರಧಾನ ಕಾರ್ಯದರ್ಶಿ ಶ್ಯಾಮಸುಂದರ್‌ ಕಾಂಚನ್‌, ಜತೆ ಕಾರ್ಯದರ್ಶಿ ವಿಶುಕುಮಾರ್‌, ಕೋಶಾಧಿಕಾರಿ ರಂಜನ್‌ ಕಾಂಚನ್‌, ವ್ಯಾಪ್ತಿಯ ಗ್ರಾಮದ ಗುರಿಕಾರರು ಮೊದಲಾದವರು ಉಪಸ್ಥಿತರಿದ್ದರು.

Advertisement

ಮಲ್ಪೆಯಲ್ಲಿ
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಬಾಲಕೃಷ್ಣ ತಂತ್ರಿ ಹಾಗೂ ಶ್ರೀನಿವಾಸ್‌ ಭಟ್‌ ಪೌರೋಹಿತ್ಯದಲ್ಲಿ ಬೆಳಗ್ಗೆ ವಡಭಾಂಡ ಬಲರಾಮ, ಹಾಗೂ ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೀನುಗಾರರೆಲ್ಲರು ಶೋಭಾಯಾತ್ರೆಯಲ್ಲಿ ತೆರಳಿ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಪೂಜೆ ನೆರವೇರಿಸಿ ಹಾಲು, ಫಲಪುಷ್ಪ, ಸೀಯಾಳವನ್ನು ಸಮುದ್ರ ರಾಜನಿಗೆ ಸಮರ್ಪಿಸಿದರು.

ಶಾಸಕ ಯಶ್‌ಪಾಲ್‌ ಸುವರ್ಣ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಕಾಂಚನ ಹ್ಯುಂಡೈ ಆಡಳಿತ ನಿರ್ದೇಶಕ ಪ್ರಸಾದ್‌ರಾಜ್‌ ಕಾಂಚನ್‌, ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಕೋಶಾಧಿಕಾರಿ ಪ್ರಕಾಶ್‌ ಬಂಗೇರ ಸೇರಿದಂತೆ ಹಲವು ಮಂದಿ ಗಣ್ಯರು, ಮೀನುಗಾರಿಕೆ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: Srinivas University ಯಲ್ಲಿ ಹೊಸ ಕೋರ್ಸ್‌: ನವೀಕೃತ ಶಿಕ್ಷಣದೊಂದಿಗೆ ಕೌಶಲ ಅಭಿವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next