Advertisement

ಸ್ಯಾಮ್‌ಸಂಗ್‌ ಕಂಪೆನಿಯ ಆವಿಷ್ಕಾರ: ಕಚೇರಿ ಉದ್ಯೋಗಿಗಳಿಗಾಗಿ ಹೊಸ ಮೌಸ್‌

11:47 PM Oct 18, 2022 | Team Udayavani |

ತಂತ್ರಜ್ಞಾನದ ಬಳಕೆಯಿಂದಾಗಿ ನಮ್ಮ ಜೀವನ ಹೆಚ್ಚು ಸರಳವಾಗುತ್ತಿದೆ. ಟೆಕ್‌ ಕಂಪೆನಿಗಳು ಗ್ರಾಹಕರ ಅನುಕೂಲಕ್ಕಾಗಿ ಹೊಸ ಹೊಸ ತಾಂತ್ರಿಕ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇರುತ್ತವೆ. ಇತ್ತೀಚೆಗೆ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದುದು ಸ್ಯಾಮ್‌ಸಂಗ್‌ ಕಂಪೆನಿಯ ನೂತನ ಆವಿಷ್ಕಾರವಾದ ವಿಭಿನ್ನ ಶೈಲಿ ಮತ್ತು ಮಾದರಿಯ ಮೌಸ್‌.

Advertisement

ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಪ್ರತಿಯೋರ್ವರೂ ಮೌಸ್‌ ಬಳಕೆ ಮಾಡುವುದು ಸರ್ವೇಸಾಮಾನ್ಯ. ಲ್ಯಾಪ್‌ಟಾಪ್‌ಗ್ಳನ್ನು ಮೌಸ್‌ರಹಿತವಾಗಿ ಅಂದರೆ ಕೀ ಪ್ಯಾಡ್‌ನ‌ ಮೂಲಕ ಬಳಸಬಹುದಾಗಿದೆಯಾದರೂ ಡೆಸ್ಕ್
ಟಾಪ್‌ ಕಂಪ್ಯೂಟರ್‌ಗಳಲ್ಲಿ ಮೌಸ್‌ ಬಳಕೆ ಸಾಮಾನ್ಯ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ಕೊರೊನಾನಂತರದ ದಿನಗಳಲ್ಲಿ ಉದ್ಯೋಗಿಗಳ ಮೇಲೆ ವಿಪರೀತ ಕೆಲಸದ ಹೊರೆ ಬೀಳುತ್ತಿದೆ. ಇದರಿಂದಾಗಿ ಉದ್ಯೋಗಿಗಳು ಮಾನಸಿಕವಾಗಿ ಒತ್ತಡಕ್ಕೊಳಗಾಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳು ಪ್ರತಿಷ್ಠಿತ ಕಂಪೆನಿಗಳ ಉದ್ಯೋಗವನ್ನು ತೊರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಹೊರತಂದಿರುವ ಈ ವಿಭಿನ್ನ ಮೌಸ್‌ ಉದ್ಯೋಗಿಗಳ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಬಲ್ಲುದು ಎಂದು ನಂಬಲಾಗಿದೆ.

ಸ್ವಯಂ ಪ್ರೇರಣೆ
ಇಂಥ ವಿಭಿನ್ನ ಮಾದರಿಯ ಮೌಸ್‌ ಅನ್ನು ತಯಾರಿಸಲು ಸ್ಯಾಮ್‌ಸಂಗ್‌ಗೆ ಪ್ರೇರಣೆ ಲಭಿಸಿದುದು ತನ್ನದೇ ಕಚೇರಿಯ ಉದ್ಯೋಗಿಗಳು. ಕಚೇರಿಯಲ್ಲಿನ ಹೆಚ್ಚಿನ ಉದ್ಯೋಗಿಗಳಿಗೆ ಸರಿಯಾದ ಸಮಯದಲ್ಲಿ ಮನೆಗೆ ವಾಪಸಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಹಜವಾಗಿಯೇ ಅವರಿಗೆ ಒತ್ತಡ ಜಾಸ್ತಿಯಾಗುತ್ತದೆ. ಆದ್ದರಿಂದ ಈ ವಿನೂತನ ಆವಿಷ್ಕಾರ ನಿಜವಾಗಿಯೂ ಉದ್ಯೋಗಿಗಳಿಗೆ ಅನುಕೂಲಕರವಾಗಿದೆ. ಇಂಥ ಅದ್ಭುತ ಆವಿಷ್ಕಾರಗಳು ಉದ್ಯೋಗಿಗಳ ಜೀವನವನ್ನು ಸುಲಭ ಮತ್ತು ಒತ್ತಡಮುಕ್ತ ಗೊಳಿಸುವುದರಲ್ಲಿ ಎರಡು ಮಾತಿಲ್ಲ ಎಂಬುದು ಸ್ಯಾಮ್‌ಸಂಗ್‌ನ ಪ್ರತಿಪಾದನೆ.

ವಿಶೇಷ ಏನು?
ಈಗಿನ ಅತೀವೇಗದ ಯಾಂತ್ರಿಕ ಜೀವನದಲ್ಲಿ ಇಂಥ ಒಂದು ಮೌಸ್‌ನ ಆವಶ್ಯಕತೆ ತುಂಬಾ ಇದೆ ಎಂದು ನಮಗೂ ಅನಿಸುವುದರಲ್ಲಿ ಸಂದೇಹವಿಲ್ಲ. ನಾವು ಎಷ್ಟು ಕೆಲಸ ಮಾಡುತ್ತಿದ್ದೇವೆ ಎಂಬ ಕಲ್ಪನೆಯೂ ನಮಗೆ ಇರುವುದಿಲ್ಲ. ಅತಿಯಾದ ಕೆಲಸ ಮಾಡುವುದನ್ನು ತಡೆಯಲು ವಿನ್ಯಾಸಗೊಳಿಸಿದ ವಿಶಿಷ್ಟ ಸಾಧನ ಇದಾಗಿದೆ.

ಈ ಹೊಸ ಮೌಸ್‌ ನಿಮಗೆ ಕೆಲವು ಮಿತಿಗಳಲ್ಲಿ ಕಚೇರಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಸಮಯ ಮೀರಿ ಕೆಲಸ ಮಾಡಲು ಬಿಡುವುದಿಲ್ಲ. ವರದಿಯ ಪ್ರಕಾರ, ನೀವು ಕಚೇರಿಯಲ್ಲಿ ಅಥವಾ ನೀವು ಅದನ್ನು ಬಳಸಲು ಬಯಸುವ ಸ್ಥಳದಲ್ಲಿ ಆಯ್ದ ಗಂಟೆಗಳನ್ನು ಮೀರಿ ಕೆಲಸ ಮಾಡಲು ಪ್ರಾರಂಭಿಸಿದ ಅನಂತರ ಈ ಮೌಸ್‌ ನಿಮ್ಮ ಮೇಜಿನಿಂದ ಇಲಿಯಂತೆ ಓಡಿಹೋಗಲು ಪ್ರಾರಂಭಿಸುತ್ತದೆ. ಹಾಗಾಗಿ ನೀವು ದಿನದ ಮಟ್ಟಿಗೆ ನಿಮ್ಮ ಕೆಲಸವನ್ನು ನಿಲ್ಲಿಸಲೇಬೇಕಾಗುತ್ತದೆ.

Advertisement

ಶೀಘ್ರ ಮಾರುಕಟ್ಟೆಗೆ
ಸ್ಯಾಮ್‌ಸಂಗ್‌ ಕಂಪೆನಿ ಹೊಸ ಮೌಸ್‌ನ ಬಗ್ಗೆ ಕೊರಿಯನ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಿದೆ. ಕೆಲಸದ ನಿಗದಿತ ಅವಧಿ ಮುಗಿದ ಮೇಲೂ ನೀವು ಕೆಲಸ ಮುಂದುವರಿಸಿದಾಗ ಮೌಸ್‌ ಓಡಲಾರಂಭಿಸುತ್ತದೆ. ಹಾಗೆಂದು ನಿಮ್ಮ ನಿಗದಿತ ಕೆಲಸದ ಅವಧಿಯಲ್ಲಿ ಮುಟ್ಟಿದರೆ ಇದು ಓಡುವುದಿಲ್ಲ. ಅದು ಬೇರೆ ಮೌಸ್‌ಗಳಂತೆಯೇ ಕಾರ್ಯ ನಿರ್ವಹಿಸುತ್ತದೆ. ನಿರ್ದಿಷ್ಟ ಅವಧಿ ಪೂರ್ಣಗೊಂಡ ಬಳಿಕ ಇದು ಇಲಿಯಂತೆ ವರ್ತಿಸಲು ಪ್ರಾರಂಭಿಸುತ್ತದೆ. ಈ ಮೌಸ್‌ ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಶೀಘ್ರದಲ್ಲಿಯೇ ಈ ಮೌಸ್‌ ಅನ್ನು ಪರಿಚಯಿಸಲಾಗುವುದು ಎಂದು ಸ್ಯಾಮ್‌ಸಂಗ್‌ ಕಂಪೆನಿ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next