Advertisement
ವಿನ್ಯಾಸ: Samsung Galaxy S23+ ಸರಳವಾದ ಸೊಗಸಾದ ವಿನ್ಯಾಸವನ್ನು ಹೊಂದಿದೆ. ಲೋಹದ ಚೌಕಟ್ಟು (ಫ್ರೇಂ) ಬಿಳಿಯ ಬಣ್ಣದ ಗಾಜಿನ ಹಿಂಬದಿ ಬ್ಯಾಕ್ ಪ್ಯಾನಲ್ ಇದೆ. ಮೆಟಲ್ ಫ್ರೇಂ ಮತ್ತು ಗಾಜಿನ ಹಿಂಬದಿ ಫೋನಿಗೆ ಐಷಾರಾಮಿ ಸ್ಪರ್ಶ ನೀಡಿದೆ. ಹಿಂಬದಿಯ ಎಡ ಮೂಲೆಯಲ್ಲಿ ಮೂರು ಕ್ಯಾಮರಾಗಳ ಲೆನ್ಸ್ ಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಪಕ್ಕದಲ್ಲಿ ಕ್ಯಾಮರಾ ಫ್ಲಾಶ್ ಇದೆ. ಫೋನಿನ ಫ್ರೇಂ ನ ಮೂಲೆಗಳು ಅರ್ಧ ವೃತ್ತಾಕಾರದಲ್ಲಿವೆ. ಫೋನಿನ ತಳಭಾಗದಲ್ಲಿ ಸಿಮ್ ಹಾಕುವ ಟ್ರೇ, ಟೈಪ್ ಸಿ ಪೋರ್ಟ್, ಸ್ಪೀಕರ್ ಗ್ರಿಲ್ ಇದೆ. ಬಲಭಾಗದಲ್ಲಿ ಶಬ್ದ ಹೆಚ್ಚಿಸುವ ಕಡಿಮೆ ಮಾಡುವ ಬಟನ್ ಮತ್ತು ಆನ್ ಆಫ್ ಮಾಡುವ ಬಟನ್ ಗಳಿವೆ. ಫೋನಿನ ಮೇಲ್ಭಾಗ ಹಾಗೂ ಎಡಭಾಗದಲ್ಲಿ ಯಾವುದೇ ಬಟನ್ ಅಥವಾ ಪೋರ್ಟ್ ಇಲ್ಲ. ಪ್ರೀಮಿಯಂ ಫೋನ್ ಗಳಲ್ಲಿ ಈಗ 3.5 ಎಂ.ಎಂ. ಆಡಿಯೋ ಪೋರ್ಟ್ ಇರುವುದಿಲ್ಲ. ಕಾರಣ ವೈರ್ ಲೆಸ್ ಇಯರ್ ಬಡ್ ಗಳು ಜನಪ್ರಿಯವಾಗಿರುವುದು. ಹಾಗೆಯೇ ಈ ಫೋನಿನಲ್ಲೂ ಆಡಿಯೋ ಜಾಕ್ ಗೆ ಬೇಕಾದ ರಂಧ್ರ ಇಲ್ಲ. ಲೋಹದ ಫ್ರೇಂ, ಬ್ಯಾಕ್ ಗ್ಲಾಸ್ ನಿಂದಾಗಿ ಫೋನಿನ ವಿನ್ಯಾಸ ಗಮನ ಸೆಳೆಯುತ್ತದೆ. ಬ್ಯಾಕ್ ಕವರ್ ಬಳಸದೇ ಹೋದರೂ ಫೋನು ಕೈಯಲ್ಲಿ ಜಾರುವುದಿಲ್ಲ.
Related Articles
Advertisement
ಕಾರ್ಯಾಚರಣೆ: ಇದರಲ್ಲಿ ಸದ್ಯದ ಆಂಡ್ರಾಯ್ಡ್ ಫೋನುಗಳ ಅತ್ಯಂತ ಪವರ್ ಫುಲ್ ಪ್ರೊಸೆಸರ್ ಸ್ನಾಪ್‌ಡ್ರಾಗನ್ 8 Gen 2 SoC ಅನ್ನು ಅಳವಡಿಸಲಾಗಿದೆ. ಹೀಗಾಗಿ ಮೊಬೈಲ್ ಫೋನಿನ ಕಾರ್ಯಾಚರಣೆ ಬಹಳ ನಯವಾಗಿದೆ. ಮಲ್ಟಿ-ಟಾಸ್ಕಿಂಗ್, ವೀಡಿಯೊ ಎಡಿಟಿಂಗ್, ಗೇಮಿಂಗ್ ಎಲ್ಲವನ್ನೂ ನಿರಾಯಾಸವಾಗಿ ನಿಭಾಯಿಸುತ್ತದೆ. ತಾಪ ನಿಯಂತ್ರಣದ ವಿಷಯದಲ್ಲಿ ಸುಧಾರಣೆಯಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಹೆವಿ ಅಪ್ಲಿಕೇಶನ್‌ಗಳು ಮತ್ತು ಗೇಮ್ ಗಳನ್ನು ಬಳಸಿದ ನಂತರವೂ ಮೊಬೈಲ್ ಫೋನ್ ಬಿಸಿಯಾಗುವುದಿಲ್ಲ.
Galaxy S23+ ಸ್ಯಾಮ್‌ಸಂಗ್‌ನ ಕಸ್ಟಮ್ One UI 5.1 ಸ್ಕಿನ್ ಹೊಂದಿದೆ. ಇದು Android 13 ಕಾರ್ಯಾಚರಣೆ ಹೊಂದಿದೆ. ಕಂಪನಿಯು ನಾಲ್ಕು ವರ್ಷಗಳ ಪ್ರಮುಖ ಆಂಡ್ರಾಯ್ಡ್ ಓಎಸ್ ಅಪ್‌ಡೇಟ್ ಗಳು ಮತ್ತು ಐದು ವರ್ಷಗಳ ಸೆಕ್ಯುರಿಟಿ ಪ್ಯಾಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.
ಇನ್ನು ಸ್ಯಾಮ್ ಸಂಗ್ ಒನ್ ಯೂಸರ್ ಇಂಟರ್ ಫೇಸ್ , ಫ್ಯಾನ್ ಗಳಿಗೆ ಚಿರಪರಿಚಿತ. ಹಿಂದಿನ ಫೋನ್ ಗಳಂತೆಯೇ ಅದು ಮುಂದುವರೆದಿದೆ. ಇತ್ತೀಚಿನ ಬಹುತೇಕ ಆಂಡ್ರಾಯ್ಡ್ ಫೋನ್ ಗಳಲ್ಲಿ ಕರೆ ಮಾಡುವವರು ಕಾಲ್ ರೆಕಾರ್ಡ್ ಮಾಡಿಕೊಂಡರೆ, ಈ ಕರೆ ರೆಕಾರ್ಡ್ ಆಗುತ್ತಿದೆ ಎಂಬ ಸಂದೇಶ ಎರಡೂ ಬದಿಯ ಕಾಲರ್ ಗಳಿಗೆ ಕೇಳಿಬರುತ್ತದೆ. ಆದರೆ ಈ ಫೋನಿನಲ್ಲಿ ಆ ರೀತಿಯ ಸಂದೇಶ ಬರುವುದಿಲ್ಲ. ಸ್ಯಾಮ್ ಸಂಗ್ ಆಂಡ್ರಾಯ್ಡ್ ಓಎಸ್ ಜೊತೆ ತನ್ನ ಒನ್ ಯೂ ಐ ಸೇರಿಸಿರುವುದರಿಂದ ರೆಕಾರ್ಡ್ ಸಂದೇಶ ಇದರಲ್ಲಿ ಬರುವುದಿಲ್ಲ ಎನಿಸುತ್ತದೆ.
ಕ್ಯಾಮೆರಾ:Samsung Galaxy S23+ ಉತ್ತಮ ಛಾಯಾಗ್ರಹಣ ಅನುಭವವನ್ನು ನೀಡುತ್ತದೆ. ಇದು ಹಿಂಬದಿಯಲ್ಲಿ 50 +12+ 10 ಮೆಗಾಪಿಕ್ಸಲ್ ಮೂರು ಲೆನ್ಸಿನ ಕ್ಯಾಮರಾ ಹೊಂದಿದೆ. ಸೆಲ್ಫೀ ಗೆ 12 ಮೆ.ಪಿ.ಕ್ಯಾಮರಾ ಇದೆ. ಫೋಟೋಗಳು ಬಹಳ ಸ್ಪಷ್ಟವಾಗಿ, ಡೀಟೇಲ್ ಆಗಿ ಮೂಡಿಬರುತ್ತವೆ. ನೈಟ್ ಮೋಡ್ನಲ್ಲಿ ಕಡಿಮೆ ಬೆಳಕು ಇದ್ದರೂ ಸಹ, ಸ್ಪಷ್ಟ ಚಿತ್ರವನ್ನು ನೀಡುತ್ತದೆ. ಸೆಲ್ಫೀ ಸಹ ಉತ್ತಮವಾಗಿ ಮೂಡಿಬರುತ್ತದೆ. ಈ ಫೋನ್ ಕೈಯಲ್ಲಿದ್ದರೆ, ಸಾಮಾನ್ಯ ಕ್ಯಾಮರಾವೊಂದು ಜೊತೆಯಲ್ಲಿದ್ದಂತೆ. ಬ್ಯಾಟರಿ: ಇದು 4700 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಬ್ಯಾಟರಿ ಒಂದು ದಿನದ ಬಾಳಿಕೆ ಬರುತ್ತದೆ. ಸಾಮಾನ್ಯವಾಗಿ ಪ್ರೀಮಿಯಂ ಫೋನ್ ಗಳಲ್ಲಿ ಒಂದು ದಿನಕ್ಕೆ ಎರಡು ಮೂರು ಬಾರಿ ಚಾರ್ಜ್ ಮಾಡಬೇಕಾಗುತ್ತದೆ. ಆದರೆ ಈ ಫೋನಿನಲ್ಲಿ ಬೆಳಿಗ್ಗೆ ಶೇ. 100 ಚಾರ್ಜ್ ಮಾಡಿದರೆ, ಸಾಮಾನ್ಯ ಬಳಕೆ, (ವಾಟ್ಸಪ್, ಫೇಸ್ ಬುಕ್, ಕರೆಗಳು, ಕ್ಯಾಮರಾ ಬಳಕೆ ಇಂತಹ ಮಧ್ಯಮ ಬಳಕೆಗೆ) ಸಂಜೆ 7 ಗಂಟೆಯವರೆಗೂ ಬ್ಯಾಟರಿ ಉಳಿಯುತ್ತದೆ. ಆದರೆ ಇದಕ್ಕೆ ಅತ್ಯಂತ ವೇಗದ ಚಾರ್ಜಿಂಗ್ ಸೌಲಭ್ಯ ನೀಡಿಲ್ಲ. 45 ವ್ಯಾಟ್ಸ್ ಚಾರ್ಜಿಂಗ್ ನೀಡಿದೆ. ಶೇ. 1 ರಿಂದ 100 ರವೆರಗೆ ಚಾರ್ಜ್ ಆಗಲು ಇದು ಸುಮಾರು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಪ್ರತಿಸ್ಪರ್ಧಿ ಕಂಪೆನಿಗಳು ಈಗ 80 ವ್ಯಾಟ್ಸ್, 100 ವ್ಯಾಟ್ಸ್ ತ್ವರಿತ ವೇಗದ ಚಾರ್ಜರ್ ನೀಡುತ್ತಿವೆ. ಸ್ಯಾಮ್ ಸಂಗ್ ನಿಂದಲೂ ಇಷ್ಟು ವೇಗದ ಚಾರ್ಜಿಂಗ್ ಸೌಲಭ್ಯವನ್ನು ಗ್ರಾಹಕರು ಬಯಸುತ್ತಾರೆ. ಜೊತೆಗೆ ಇದರ ಬಾಕ್ಸ್ ಜತೆ ಚಾರ್ಜರ್ ಬರುವುದಿಲ್ಲ. ಗ್ರಾಹಕ ಪ್ರತ್ಯೇಕವಾಗಿ ಚಾರ್ಜರ್ ಕೊಳ್ಳಬೇಕು. ಇದು ಸಹ ಒಂದು ಕೊರತೆಯಾಗಿದೆ. ಇಷ್ಟು ದುಬಾರಿ ಹಣ ನೀಡಿಯೂ ಗ್ರಾಹಕನಿಗೆ ಮೊಬೈಲ್ ಜೊತೆ ಚಾರ್ಜರ್ ನೀಡುವುದಿಲ್ಲ ಎಂಬ ಅಸಮಾಧಾನ ಬರುತ್ತದೆ. ಹಾಗಾಗಿ ಮುಂದಿನ ಬಿಡುಗಡೆಗಳಲ್ಲಿ ಸ್ಯಾಮ್ ಸಂಗ್ ಕಂಪೆನಿ ಅತ್ಯಂತ ವೇಗದ ಸೂಪರ್ ಚಾರ್ಜಿಂಗ್ ಸೌಲಭ್ಯ ಮತ್ತು ಚಾರ್ಜರ್ ಅನ್ನು ಮೊಬೈಲ್ ಜೊತೆ ನೀಡಬೇಕಾಗಿದೆ. Samsung Galaxy S23+ ಬೆಲೆ 94,999 ರೂ. ಆಗಿದೆ. (8 GB RAM ಮತ್ತು 256 ಜಿಬಿ ಸ್ಟೋರೇಜ್) ಸಾರಾಂಶ: ಶ್ರೀಮಂತಿಕೆಯ ವಿನ್ಯಾಸ, ಮೃದುವಾದ ಕಾರ್ಯಾಚರಣೆ ಮತ್ತು ಗಮನ ಸೆಳೆಯುವ ಡಿಸ್ ಪ್ಲೇ, ಉತ್ತಮ ಬ್ಯಾಟರಿ ಬಾಳಿಕೆ, ಉತ್ತಮ ಕ್ಯಾಮೆರಾ ನಾಲ್ಕು ವರ್ಷಗಳ ಆಂಡ್ರಾಯ್ಡ್ ಅಪ್ ಡೇಟ್ ಹೊಂದಿದೆ. ಐಫೋನ್ ಗೆ ಸರಿಸಾಟಿಯಾಗಬಲ್ಲ ಆಂಡ್ರಾಯ್ಡ್ ಫೋನ್ ಬೇಕು ಅನ್ನುವ ಗ್ರಾಹಕರಿಗೆ ಇದು ಉತ್ತಮ ಪರ್ಯಾಯ ಎಂದು ಹೇಳಬಹುದು. -ಕೆ.ಎಸ್. ಬನಶಂಕರ ಆರಾಧ್ಯ