ಮೊಬೈಲ್ ಫೋನ್ ವಿಷಯದಲ್ಲಿ ಎಷ್ಟೇ ಹೊಸ ಬ್ರಾಂಡ್ ಗಳು ಬಂದರೂ ಭಾರತದ ಗ್ರಾಹಕರು ಸ್ಯಾಮ್‍ಸಂಗ್ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ. ಬೇರೆ ಬ್ರಾಂಡ್ ಗಳತ್ತ ಕಣ್ಣೆತ್ತಿಯೂ ನೋಡದ, ಸಾಂಪ್ರದಾಯಿಕ ಸ್ಯಾಮ್ ಸಂಗ್ ಅಭಿಮಾನಿಗಳು ಬಹಳಷ್ಟಿದ್ದಾರೆ. ಇನ್ನು ಗ್ರಾಮೀಣ, ಅರೆ ಪಟ್ಟಣದಂಥ ಪ್ರದೇಶಗಳ ಜನರಿಗೆ ಸ್ಯಾಮ್‍ಸಂಗ್ ಬಿಟ್ಟು ಬೇರೆ ಬ್ರಾಂಡ್ ಪರಿಚಯಿಸುವುದು ಅಷ್ಟು ಸುಲಭದ ವಿಷಯವಲ್ಲ. ನನಗೆ ಸ್ಯಾಮ್‍ಸಂಗ್ ಮೊಬೈಲೇ ಬೇಕು ಎಂದು ಹೇಳುತ್ತಾರೆ.
ಇಂತಿಪ್ಪ ಸ್ಯಾಮ್‍ಸಂಗ್ ಆರಂಭಿಕ ಮಧ್ಯಮ ದರ್ಜೆಯಲ್ಲಿ ಎಂ ಹಾಗೂ ಎಫ್ ಸರಣಿಯ, ಮೇಲ್ಮಧ್ಯಮ ದರ್ಜೆಯಲ್ಲಿ ಎ ಸರಣಿಯ ಫೋನ್ ಗಳನ್ನು ಹೊರತರುತ್ತದೆ. ಪ್ರತಿ ವರ್ಷಕ್ಕೊಮ್ಮೆ ಅಗ್ರ ಶ್ರೇಣಿಯಲ್ಲಿ ಗೆಲಾಕ್ಸಿ ಎಸ್ ಸರಣಿಯ ಮೊಬೈಲ್ ಫೋನ್ ಗಳನ್ನು ಹೊರತರುತ್ತದೆ. ಈ ಬಾರಿಯ ಅಗ್ರಶ್ರೇಣಿಯ ಸರಣಿ ಗೆಲಾಕ್ಸಿ ಎಸ್ 22. ಎಸ್ 22 ಪ್ಲಸ್ ಹಾಗೂ ಎಸ್ 22 ಅಲ್ಟ್ರಾ.
ಈ ಸರಣಿಯ ಆರಂಭಿಕ ದರ್ಜೆಯದಾದ ಗೆಲಾಕ್ಸಿಎಸ್ 22 ಮೊಬೈಲ್ ಫೋನ್ ಪ್ರಾಯೋಗಿಕ ಬಳಕೆಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ವಿಶೇಷತೆಗಳೇನು ಎಂಬುದರ ವಿಶ್ಲೇಷಣೆ ಇಲ್ಲಿದೆ:
ವಿನ್ಯಾಸ: ಆ್ಯಪಲ್ ಮತ್ತು ಸ್ಯಾಮ್‍ಸಂಗ್ ಎಸ್ ಸರಣಿ ಫೋನ್ ಗಳನ್ನು ಹೆಚ್ಚು ಬಳಸಿರದವರಿಗೆ ಎಸ್ 22 ಮೊಬೈಲ್ ಫೋನ್ ನೋಡಿದಾಗ ಏನಿದು? ಇಷ್ಟು ಚಿಕ್ಕದಾಗಿದೆ ಅನಿಸುತ್ತದೆ! ಈಗ ಬರುವ ಬಹುತೇಕ ಆಂಡ್ರಾಯ್ಡ್ ಫೋನ್ ಗಳು ಸಾಮಾನ್ಯವಾಗಿ 6.7 ಇಂಚಿನ ಪರದೆ ಹೊಂದಿರುತ್ತವೆ. ಈ ಫೋನು 6.1 ಇಂಚಿನ ಪರದೆ ಹೊಂದಿದೆ. ಇದರ ಉದ್ದ 146 ಮಿ.ಮಿ. ಅಗಲ, 7.6 ಮಿ.ಮೀ. ದಪ್ಪ ಹೊಂದಿದೆ. ಕೇವಲ 167 ಗ್ರಾಂ ತೂಕವಿದೆ. ದೊಡ್ಡ ಫೋನ್‍ಗಳನ್ನು ಕೈಯಲ್ಲಿ ಹಿಡಿಯುವುದು ಕಷ್ಟ. ಭಾರಿ ಗಾತ್ರ, ತೂಕ ಇದೆ ಎಂದು ಹೇಳುವವರಿಗೆ ಈ ಫೋನು ಸರಿಯಾಗಿ ಹೊಂದುತ್ತದೆ. ಆ್ಯಪಲ್ ಐಫೋನ್ 13 ಕೂಡ ಇಷ್ಟೇ ಅಳತೆಯ ಪರದೆ ಹೊಂದಿದೆ.ಈ ಎಸ್ 22 ಫೋನಿನ ವಿನ್ಯಾಸವನ್ನು ಐಫೋನ್ ಬಳಸುವ ಅಭಿರುಚಿಯ ಗ್ರಾಹಕರನ್ನುದ್ದೇಶಿಸಿಯೇ ಮಾಡಲಾಗಿದೆ. ಹೊರ ವಿನ್ಯಾಸ ಹೆಚ್ಚು ಕಡಿಮೆ ಐಫೋನ್ 13 ಅನ್ನು ಹೋಲುತ್ತದೆ.
ಫೋನನ್ನು ನೋಡುತ್ತಿದ್ದಂತೆ ಮುದ್ದು ಬರುವಂತೆ ಅದರ ವಿನ್ಯಾಸವಿದೆ! ಪರದೆ ಕರ್ವ್ ಅಲ್ಲ, ಫ್ಲಾಟ್ ಆಗಿದೆ. ಆರ್ಮರ್ ಅಲ್ಯುಮಿನಿಯಂ ಫ್ರೇಂ ಹೊಂದಿದೆ. ಪರದೆ ಹಾಗೂ ಹಿಂಬದಿ ಪ್ಯಾನೆಲ್ ಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ಲಸ್ ರಕ್ಷಣೆ ಇದೆ. ಹಿಂಬದಿ ತುಂಬಾ ನಯವಾಗಿದ್ದು, ಬ್ಯಾಕ್ ಕೇಸ್ ಬಳಸದಿದ್ದರೆ ಜಾರುತ್ತದೆ. ಪರದೆಯ ಮಧ್ಯದಲ್ಲಿ ಮುಂಬದಿ ಕ್ಯಾಮರಾ ಲೆನ್ಸ್ ನೀಡಲಾಗಿದೆ. ಅದನ್ನು ಹೊರತುಪಡಿಸಿದರೆ ಹೆಚ್ಚು ಕಡಿಮೆ ಫೂರ್ತಿ ಪರದೆಯೇ ಆವರಿಸಿದೆ. ಪರದೆಯ ಅಂಚು ಬಹಳ ತೆಳುವಾಗಿದೆ. ಪರದೆಯ ಮೇಲೆಯೇ ಫಿಂಗರ್ ಪ್ರಿಂಟ್ ಸೆನ್ಸರ್ ಇದೆ. ಹಿಂಬದಿ ಎಡಭಾಗದಲ್ಲಿ ಮೂರು ಲೆನ್ಸಿನ ಕ್ಯಾಮರಾವನ್ನು ಒಂದೇ ಸಾಲಿನಲ್ಲಿ ಲಂಬವಾಗಿ ಅಳವಡಿಸಲಾಗಿದೆ. ಒಟ್ಟಾರೆಯಾಗಿ ಫೋನಿನ ವಿನ್ಯಾಸ ಯಾವುದೇ ಗಜಿಬಿಜಿಯಾಗದಂತೆ ನೀಟಾಗಿದೆ.
ಪರದೆ: ಮೊದಲೇ ತಿಳಿಸಿದಂತೆ 6.1 ಇಂಚಿನ ಅಮೋಲೆಡ್ ಪರದೆ ಹೊಂದಿದೆ. ಸ್ಯಾಮ್ ಸಂಗ್ ಅಮೋಲೆಡ್ ಪರದೆಗಳು ಸಾಮಾನ್ಯ ಹೆಚ್ಚು ರಿಚ್ ಆಗಿ ಕಾಣುತ್ತವೆ. ಬೇರೆ ಬ್ರಾಂಡಿನ ಫೋನ್ ಗಳಿಗೆ ಹೋಲಿಸಿದಾಗ ಎಸ್ 22 ಅಮೋಲೆಡ್ ಪರದೆಯ ಬ್ರೈಟ್‍ನೆಸ್ ಹಾಲಿನ ಕೆನೆಯಂತೆ ತೋರುತ್ತದೆ. ಕಣ್ಣಿಗೆ ಹಿತವಾಗಿದೆ. ಪರದೆಯ ಗುಣಮಟ್ಟ ಬಹಳ ಚೆನ್ನಾಗಿದೆ. ಫೋನಿನ ಫ್ರೇಮಿನ ಮೇಲೆ ತುಸು ಕೊಂಚ ಮೇಲೆ ಪರದೆ ಅಳವಡಿಸಲಾಗಿದ್ದು, ಆಪ್‍ಗಳು, ಫೋಟೋಗಳು ಎದ್ದು ಕಾಣುತ್ತವೆ. ಪರದೆಯ ಬ್ರೈಟ್‍ನೆಸ್ ಹೆಚ್ಚಿದ್ದು, (1300 ನಿಟ್ಸ್) ಹೊರಾಂಗಣದಲ್ಲಿ ಪರದೆ ತೆರೆದಾಗಲೂ ಸ್ಪಷ್ಟವಾಗಿ ಕಾಣುತ್ತದೆ. 1080*2340 ರೆಸ್ಯೂಲೇಷನ್ ಇದ್ದು, 425 ಪಿಪಿಐ ಹೊಂದಿದೆ. ಪರದೆಯ ರಿಫ್ರೆಶ್‍ರೇಟ್ 120 ಹರ್ಟ್ಜ್ ಇದ್ದು, ಸ್ಕ್ರಾಲಿಂಗ್ ಮಾಡಿದಾಗ ಬಹಳ ಸರಾಗವಾಗಿ ಚಲಿಸುತ್ತದೆ. ಯಾವುದೇ ತಡೆ ತೋರಿ ಬರುವುದಿಲ್ಲ.
ಪ್ರೊಸೆಸರ್, ಕಾರ್ಯಾಚರಣೆ: ಈ ಫೋನಿನಲ್ಲಿರುವುದು ಸದ್ಯದ ಅಗ್ರಶ್ರೇಣಿಯ ಪ್ರೊಸೆಸರ್, ಕ್ವಾಲ್ ಕಾಂ ಸ್ನಾಪ್‍ಡ್ರಾಗನ್ 8 ಜನರೇಷನ್ 1 ಪ್ರೊಸೆಸರ್. (ಒನ್‍ಪ್ಲಸ್ 10 ಪ್ರೊದಲ್ಲೂ ಇದೇ ಪ್ರೊಸೆಸರ್) ಅಂಡ್ರಾಯ್ಡ್ 12 ಆವೃತ್ತಿಗೆ, ಸ್ಯಾಮ್‍ಸಂಗ್‍ನ ಒನ್ ಯೂಐ 4.1 ಅನ್ನು ಮಿಳಿತ ಮಾಡಲಾಗಿದೆ. ಸ್ಯಾಮ್ ಸಂಗ್‍ನ ಟಿಪಿಕಲ್ ಶೈಲಿಯ ಆಪ್‍ಗಳು, ಸೆಟಿಂಗ್‍ಗಳಿವೆ. ಫೋನಿನ ಯೂಐ ಮತ್ತು ಅಮೋಲೆಡ್ ಪರದೆಯ ಉತ್ತಮ ಗುಣಮಟ್ಟದಿಂದಾಗಿ ಫೋನನ್ನು ತೆರೆದಾಗ ಆಕರ್ಷಕವಾಗಿ ಕಾಣುತ್ತದೆ. ಅತ್ಯುನ್ನತ ಪ್ರೊಸೆಸರ್ ಆದ್ದರಿಂದ ಫೋನಿನ ಕಾರ್ಯಾಚರಣೆ ಬಗ್ಗೆ ಮಾತನಾಡುವಂತೆಯೇ ಇಲ್ಲ. ಫೋನ್ ಫಟಾಫಟ್ ಕೆಲಸ ನಿರ್ವಹಿಸುತ್ತದೆ. ಆಪ್‍ಗಳು ವೇಗವಾಗಿ ತೆರೆದುಕೊಳ್ಳುತ್ತವೆ. ಮೇಲ್ ವೇಗವಾಗಿ ಓಪನ್ ಆಗುತ್ತದೆ. ಫೇಸ್ ಬುಕ್, ವಾಟ್ಸಪ್ ಗೆ ಹೋದರೆ ತೀವ್ರ ವೇಗದಲ್ಲಿ ತೆರೆದುಕೊಳ್ಳುತ್ತವೆ. ಗೇಮ್ ಪ್ರಿಯರಿಗಂತೂ ಫೋನಿನ ವೇಗ ಹಬ್ಬ!
ಕ್ಯಾಮರಾ: ಈ ಫೋನು ಹಿಂಬದಿ 50 ಮೆ.ಪಿ. ಮುಖ್ಯ ಲೆನ್ಸ್, 10 ಮೆ.ಪಿ. ಟೆಲೆಫೋಟೋ ಲೆನ್ಸ್ ಹಾಗೂ 12 ಮೆ.ಪಿ. ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಕ್ಯಾಮರಾಕ್ಕೆ 108 ಮೆಗಾ ಪಿಕ್ಸಲ್ ನಂತಹ ಅಂಕಿ ಸಂಖ್ಯೆ ಮುಖ್ಯವಲ್ಲ ಎಂಬುದನ್ನು ಇದರ ಫೋಟೋ ಗುಣಮಟ್ಟ ಹೇಳುತ್ತದೆ. ಹಗಲು ಹೊತ್ತಿರಲಿ, ರಾತ್ರಿ ಮಂದ ಬೆಳಕಿನಲ್ಲಿ ತೆಗೆದ ಫೋಟೋಗಳು ಕೂಡ ಸ್ಪಷ್ಟವಾಗಿ, ವಿವರವಾಗಿ ಮೂಡಿ ಬರುತ್ತದೆ. ತೆಗೆದ ಫೋಟೋವನ್ನು ಗ್ಯಾಲರಿಯಲ್ಲಿ ಜೂಮ್ ಮಾಡಿ ನೋಡಿದಾಗ ಕ್ಯಾಮರಾ ಗುಣಮಟ್ಟ ಅರ್ಥವಾಗುತ್ತದೆ. ಇನ್ನು ಹಗಲು ಹೊತ್ತಿನಲ್ಲಿ ತೆಗೆದ ಫೋಟೋಗಳು ಇನ್ನಷ್ಟು ಡೆಪ್ತ್ ಮತ್ತು ಸವಿವರವಾಗಿ ಮೂಡಿ ಬಂದಾವು. ಒಟ್ಟಾರೆ ಒಂದು ಪ್ರತ್ಯೇಕ ಕ್ಯಾಮರಾದಲ್ಲಿ ತೆಗೆದಷ್ಟೇ ಉತ್ತಮ ಗುಣಮಟ್ಟದ ಚಿತ್ರಗಳು, ವಿಡಿಯೋಗಳು ಇದರ ಕ್ಯಾಮರಾದಲ್ಲಿ ಮೂಡಿಬರುತ್ತವೆ. ಮುಂಬದಿ 10 ಮೆಗಾಪಿಕ್ಸಲ್ ಕ್ಯಾಮರಾ ಇದ್ದು, ಅದರ ಗುಣಮಟ್ಟ ಸಹ ಅತ್ಯುತ್ತಮವಾಗಿದೆ. ರಾತ್ರಿ ಕಡಿಮೆ ಬೆಳಕಿನಲ್ಲಿ ತೆಗೆದ ಸೆಲ್ಫೀ ಗಳು ಅಚ್ಚರಿ ಎನ್ನುವಷ್ಟು ಸ್ಪಷ್ಟವಾಗಿ ಮೂಡಿಬರುತ್ತದೆ.
ಬ್ಯಾಟರಿ: 3700 ಎಂಎಎಚ್ ಬ್ಯಾಟರಿಯನ್ನು ಇದು ಹೊಂದಿದೆ. ಇದಕ್ಕೆ 25 ವ್ಯಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಚಾರ್ಜ್ ಮಾಡಿದ ಬಳಿಕ 3700 ಎಂಎಎಚ್ ಬ್ಯಾಟರಿಯಾದರೂ ಒಂದು ದಿನ ಬಾಳಿಕೆ ಬರುವಂತೆ ಆಪ್ಟಿಮೈಸ್ ಮಾಡಲಾಗಿದೆ ಎನಿಸಿತು. ಬ್ಯಾಟರಿ ವಿಭಾಗದಲ್ಲಿ ಇನ್ನೂ ಹೆಚ್ಚಿನದನ್ನು ಈ ಫೋನು ಬೇಡುತ್ತದೆ. 3700 ಎಂಎಎಚ್ ಬ್ಯಾಟರಿಗೆ 25 ವ್ಯಾಟ್ಸ್ ಅಷ್ಟೇ ವೇಗದ ಚಾರ್ಚಿಂಗ್ ಸವಲತ್ತು ನೀಡಿರುವುದು ಬಹಳ ಕಡಿಮೆ. ಅಲ್ಲದೇ ಬಾಕ್ಸ್ ನಲ್ಲಿ ಚಾರ್ಜರ್ ಸಹ ನೀಡಿಲ್ಲ. ಈಗಿನ ಫ್ಲಾಗ್ ಶಿಪ್ ಫೋನ್ ಗಳಲ್ಲಿ 65 ವ್ಯಾಟ್ಸ್ ಮತ್ತು 80 ವಾಟ್ಸ್ಯ್ ವೇಗದ ಚಾರ್ಜಿಂಗ್ ಸೌಲಭ್ಯ ನೀಡಿ, ಆ ಚಾರ್ಜರ್ ಗಳನ್ನೂ ಜೊತೆಗೆ ನೀಡಲಾಗುತ್ತದೆ. ಕೇವಲ 35-40 ನಿಮಿಷಗಳಲ್ಲಿ ಶೇ. 100ರಷ್ಟು ಚಾರ್ಜ್ ಆಗುತ್ತವೆ. ಆದರೆ ಎಸ್ 22 ಫೋನಿನಲ್ಲಿ 25 ವ್ಯಾಟ್ಸ್ ಚಾರ್ಜರ್ ಶೇ. 100ರಷ್ಟು ಚಾರ್ಜ್ ಆಗಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈಗಿನ ಫ್ಲಾಗ್ ಶಿಪ್ ಫೋನುಗಳು ಎಲ್ಲಿಗೋ ಹೊರಟಾಗ ಚಾರ್ಜ್ ಗೆ ಇಟ್ಟರೆ 10-15 ನಿಮಿಷಗಳಲ್ಲಿ ಶೇ. 50ರಷ್ಟು ಚಾರ್ಜ್ ಆಗುತ್ತವೆ. ಹೀಗಿರುವಾಗ ಬ್ಯಾಟರಿ ವಿಭಾಗದಲ್ಲಿ ಸ್ಯಾಮ್‍ಸಂಗ್ ಉದಾರತೆ ತೋರಬೇಕು.
ಬೆಲೆ: ಇದರ ದರ 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಸಂಗ್ರಹ ಆವೃತ್ತಿಗೆ 72,999 ರೂ. ಇದೆ. 8 ಜಿಬಿ ರ್ಯಾಮ್ ಮತ್ತು 256 ಜಿಬಿ ಸಂಗ್ರಹ ಆವೃತ್ತಿಗೆ 76,999 ರೂ. ಇದೆ.
ಇತರೆ: ಈ ಫೋನು ಐಪಿ68 ರೇಟಿಂಗ್ ಹೊಂದಿದ್ದು, ಧೂಳು ಹಾಗೂ ನೀರು ನಿರೋಧಕವಾಗಿದೆ. ಸಣ್ಣದೂ ಅಲ್ಲದೇ ದಪ್ಪವೂ ಅಲ್ಲದೇ ಕೈಯಲ್ಲಿ ಹಿಡಿಯಲು ಅಳತೆಯಾಗಿದೆ. ಡಿಸ್ ಪ್ಲೇ ಆಕರ್ಷಕವಾಗಿದೆ. ಕ್ಯಾಮರಾ ಅತ್ಯುತ್ತಮವಾಗಿದೆ. ಐಫೋನ್ 13ಕ್ಕೆ ಉತ್ತಮ ಪೈಪೋಟಿ ನೀಡುವ ಫ್ಲಾಗ್ ಶಿಪ್ ಫೋನಾಗಿದೆ.
ಆದರೆ ಕಡಿಮೆ ಬ್ಯಾಟರಿ ಸಾಮರ್ಥ್ಯ, ಕೇವಲ 25 ವ್ಯಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ, ಚಾರ್ಜರ್ ನೀಡದೇ ಇರುವುದು ಕೊರತೆ ಎನಿಸುತ್ತದೆ. 6.7 ಇಂಚಿನ ಪರದೆಗಳ ಫೋನನ್ನು ಬಳಸಿದವರಿಗೆ ಈ ಫೋನಿನ ಪರದೆ ಚಿಕ್ಕದು ಎನಿಸಬಹುದು.
-ಕೆ.ಎಸ್. ಬನಶಂಕರ ಆರಾಧ್ಯ