ಭಾರತದಲ್ಲಿ ಆರಂಭಿಕ ವರ್ಗದ ಸ್ಮಾರ್ಟ್ ಫೋನ್ ಗಳಿಗೆ ತನ್ನದೇ ಆದ ಬೇಡಿಕೆಯಿದೆ. ಸುಮಾರು 10 ರಿಂದ 15 ಸಾವಿರದೊಳಗಿನ ಸ್ಮಾರ್ಟ್ ಫೋನ್ ಗಳ ಮಾರುಕಟ್ಟೆ ದೊಡ್ಡದಾಗಿದೆ.
ಈ ವಲಯದಲ್ಲಿ ಆಂತರಿಕ ಸಂಗ್ರಹ, ರ್ಯಾಮ್, ಕ್ಯಾಮರಾ, ಡಿಸ್ ಪ್ಲೆ ಎಲ್ಲವನ್ನೂ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಹೊಂದಿಸಿ ಫೋನ್ ತರುವುದು ಕಂಪೆನಿಗಳಿಗೂ ಸವಾಲಿನ ಕೆಲಸ. ಭಾರತದಲ್ಲಿ ರೆಡ್ ಮಿ, ರಿಯಲ್ ಮಿ ಬ್ರಾಂಡ್ ಗಳು ಈ ವರ್ಗದ ಫೋನ್ ಗಳಲ್ಲಿ ಪೈಪೋಟಿ ಸೃಷ್ಟಿಸಿವೆ.
ಈ ಬ್ರಾಂಡ್ ಗಳಿಗೆ ತಕ್ಕ ಪೈಪೋಟಿ ನೀಡಲು ಸ್ಯಾಮ್ ಸಂಗ್ ಸಹ ಈಗ ಸಾಲು ಸಾಲಾಗಿ ತನ್ನ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುತ್ತಲೇ ಇದೆ. ಇತ್ತೀಚಿಗೆ ಬಜೆಟ್ ಸೆಗ್ ಮೆಂಟ್ ನಲ್ಲಿ ಅದು ಹೊರತಂದಿರುವ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 14 5ಜಿ. ಇದರ ದರ 4 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 13,990 ರೂ. ಹಾಗೂ 6 ಜಿಬಿ+128 ಜಿಬಿ ಮಾದರಿಗೆ 14,990 ರೂ.
ವಿನ್ಯಾಸ: ಈ ಬಜೆಟ್ ನ ಫೋನ್ ಗಳಂತೆ ಎಂ. 14 ಕೂಡ ಪ್ಲಾಸ್ಟಿಕ್ ದೇಹವನ್ನು ಹೊಂದಿದೆ. ಹಿಂಬದಿಯ ಎಡಮೂಲೆಯಲ್ಲಿ ಎಸ್ 23 ಸರಣಿಯ ಫೋನ್ ನಂತೆಯೇ ಕಾಣುವ ಮೂರು ಕ್ಯಾಮರಾ ವಿನ್ಯಾಸ ಮಾಡಲಾಗಿದೆ. ಫೋನ್ ಕೈಯಲ್ಲಿ ಹಿಡಿದಾಗ ಜಾರುವುದಿಲ್ಲ. ಮುಂಬದಿಯಲ್ಲಿ ಸ್ಯಾಮ್ ಸಂಗ್ ನ ಟಿಪಿಕಲ್ ಬಜೆಟ್ ಫೋನ್ ಗಳಂತೆ ವಾಟರ್ ಡ್ರಾಪ್ ಡಿಸ್ ಪ್ಲೇ, ಇದೆ, ಪರದೆಯ ಬೆಜೆಲ್ ಗಳು (ಕಪ್ಪು ಅಂಚುಗಳು) ಕೊಂಚ ಅಗಲವಾಗಿವೆ. 206 ಗ್ರಾಂ ತೂಕ ಹೊಂದಿದೆ.
ಮೈಕ್ರೊ SD ಕಾರ್ಡ್ ಸ್ಲಾಟ್ ಮತ್ತು 3.5mm ಹೆಡ್‌ಫೋನ್ ಜಾಕ್ ಸೇರಿದಂತೆ ಬಜೆಟ್ ಫೋನ್ ಗಳಲ್ಲಿ ಬಯಸುವ ಸವಲತ್ತುಗಳಿವೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ.
ಪರದೆ: ಈ ಫೋನು 6.6 ಇಂಚಿನ ಫುಲ್ ಎಚ್ ಡಿ ಪ್ಲಸ್ ಎಲ್ ಸಿಡಿ ಪರದೆ ಹೊಂದಿದೆ. ಸಾಮಾನ್ಯವಾಗಿ ಸ್ಯಾಮ್ ಸಂಗ್ ಫೋನ್ ಗಳಲ್ಲಿರುವ ಅಮೋಲೆಡ್ ಪರದೆ ಹೊಂದಿಲ್ಲ.
ಪರದೆ 90Hz ರಿಫ್ರೆಶ್ ದರದೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿದೆ. ಈ ಬಜೆಟ್ ನಲ್ಲಿ ಗೊರಿಲ್ಲಾ ಗ್ಲಾಸ್ ರಕ್ಷಣೆ ಇರುವುದು ಒಂದು ಪ್ಲಸ್ ಪಾಯಿಂಟ್. ಒಳಾಂಗಣದಲ್ಲಿ ಪರದೆಯ ಬ್ರೈಟ್ ನೆಸ್ ಸಾಕಾಗುತ್ತದೆ. ಚಿತ್ರಗಳು, ವಿಡಿಯೋಗಳು ಚೆನ್ನಾಗಿ ಕಾಣುತ್ತವೆ. ಬಿಸಿಲಿಗೆ ಹೋದಾಗ ಸ್ವಲ್ಪ ಮಂಕು ಎನಿಸುತ್ತದೆ. ಆದರೂ ಬಜೆಟ್ ಫೋನ್ ಗಳಲ್ಲಿ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಕಾರ್ಯಾಚರಣೆ: ಇದು ಸ್ಯಾಮ್ಸಂಗ್ ನ ತಯಾರಿಕೆಯಾದ ಎಕ್ಸಿನಾಸ್ 1330 ಪ್ರೊಸೆಸರ್ ಹೊಂದಿದೆ. Android 13- ಆಧಾರಿತ OneUI 5.1 ಕಾರ್ಯಾಚರಣೆ ವ್ಯವಸ್ಥೆ ಹೊಂದಿದೆ. ಈ ಫೋನ್ ಎರಡು ಪ್ರಮುಖ Android OS ಅಪ್ ಡೇಟ್ ಮತ್ತು ನಾಲ್ಕು ವರ್ಷಗಳ ಸೆಕ್ಯುರಿಟಿ ಅಪ್ ಡೇಟ್ ದೊರಕುತ್ತದೆ ಎಂದು ಕಂಪೆನಿ ತಿಳಿಸಿದೆ. ಬಜೆಟ್ ಫೋನ್ ಗಳಲ್ಲಿ ಹೆಚ್ಚಿನ ವೇಗದ ಕಾರ್ಯಾಚರಣೆ ಬಯಸುವಂತಿಲ್ಲ. ಆದರೆ ಒಬ್ಬ ಸಾಮಾನ್ಯ ಬಳಕೆದಾರನಿಗೆ ಇದರ ವೇಗ ಸಾಕು. ಸೋಶಿಯಲ್ ಮೀಡಿಯಾ ಬಳಕೆ, ಯೂಟ್ಯೂಬ್ ವೀಕ್ಷಣೆ, ಕರೆ ಮಾಡಲು, ವೀಡಿಯೊ ಸ್ಟ್ರೀಮಿಂಗ್, ಸಂಗೀತ ಕೇಳಲು ಇಂಥ ದೈನಂದಿನ ಬಳಕೆಗೆ ಆರಾಮದಾಯಕವಾಗಿದೆ.
ಇದು 5G ಫೋನ್ ಆಗಿದ್ದು, NSA ಮತ್ತು SA 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ. ಸರಳವಾಗಿ ಹೇಳುವುದಾದರೆ, Jio ಮತ್ತು Airtel 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುತ್ತದೆ. ಈಗ ಭಾರತದಲ್ಲಿ 5ಜಿ ನೆಟ್ ವರ್ಕ್ ಎಲ್ಲ ಪಟ್ಟಣ, ಗ್ರಾಮೀಣ ಪ್ರದೇಶಗಳನ್ನೂ ತಲುಪುತ್ತಿರುವುದರಿಂದ 5ಜಿ ಸವಲತ್ತಿರುವ ಫೋನ್ ಕೊಳ್ಳುವುದು ಜಾಣತನ. 14 ಸಾವಿರ ರೂ. ಬಜೆಟ್ ಫೋನ್ ನಲ್ಲಿ 5ಜಿ ಇರುವುದು ಗ್ರಾಹಕನಿಗೂ ಅನುಕೂಲಕರ.
ಕ್ಯಾಮರಾ: ಇದು ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ, f/1.8 ಅಪರ್ಚರ್ ಹೊಂದಿದೆ. ಡೆಪ್ತ್ ಸೆನ್ಸರ್ ಹಾಗೂ ಮ್ಯಾಕ್ರೋ ಸೆನ್ಸರ್ ಗಳುಳ್ಳ ಎರಡು 2MP ಕ್ಯಾಮೆರಾಗಳನ್ನು ಹೊಂದಿದೆ. ಮುಂಭಾಗದಲ್ಲಿ 13 MP ಸೆಲ್ಫಿ ಕ್ಯಾಮೆರಾ ಇದೆ. ಸಾಮಾನ್ಯವಾಗಿ ಸ್ಯಾಮ್ ಸಂಗ್ ಫೋನ್ ಗಳು ಕ್ಯಾಮರಾ ವಿಷಯದಲ್ಲಿ ಕಳಪೆ ಎನ್ನುವಂತಿಲ್ಲ. ಬಜೆಟ್ ಫೋನ್ ಗಳಲ್ಲೂ ತಕ್ಕಮಟ್ಟಿಗೆ ಉತ್ತಮ ಲೆನ್ಸ್ ಹೊಂದಿರುತ್ತವೆ. ಈ ಫೋನ್ ಸಹ ಕ್ಯಾಮರಾ ವಿಷಯದಲ್ಲಿ ಅದರ ಬಜೆಟ್ ಗೆ ಹೋಲಿಸಿದಾಗ ಉತ್ತಮ ಸಾಮರ್ಥ್ಯ ತೋರುತ್ತದೆ. ಹೊರಾಂಗಣ ಫೋಟೋಗಳು ಚೆನ್ನಾಗಿ ಮೂಡಿಬರುತ್ತವೆ. ಒಳಾಂಗಣದಲ್ಲಿ ಬೆಳಕು ಚೆನ್ನಾಗಿದ್ದಾಗ ಫೋಟೋವೂ ಚೆನ್ನಾಗಿ ಬರುತ್ತದೆ. ಕ್ಯಾಮರಾ ಮಿತಿಯನ್ನು ಅರಿತು ಬೆಳಕಿನ ಅಂಶಗಳನ್ನು ಗಮನಿಸಿ ಫೋಟೋ ತೆಗೆಯಬೇಕಷ್ಟೆ.
ಬ್ಯಾಟರಿ: ಇದನ್ನು ಬ್ಯಾಟರಿ ಪ್ರಿಯರ ಫೋನ್ ಎನ್ನಬಹುದು! 6000 ಎಂಎಎಚ್ ನ ಭರ್ಜರಿ ಬ್ಯಾಟರಿಯನ್ನು ಇದು ಹೊಂದಿದೆ. ಜೊತೆಗೆ ಆರಂಭಿಕ ವಲಯದ ಫೋನ್ ಆಗಿರುವುದರಿಂದ ಬ್ಯಾಟರಿ ಬಾಳಿಕೆ ಕೂಡ ಹೆಚ್ಚು ಬರುತ್ತದೆ. ಫೋನ್ ಜೊತೆಗೆ ಚಾರ್ಜರ್ ಕೊಡುವುದಿಲ್ಲ. 25 ವ್ಯಾಟ್ಸ್ ನ ಚಾರ್ಜರ್ ನಿಮ್ಮ ಬಳಿ ಇದ್ದರೆ, ಅದನ್ನೇ ಬಳಸಬಹುದು. ಇದು ಸಂಪೂರ್ಣ ಚಾರ್ಜ್ ಆಗಲು ಒಂದೂ ಮುಕ್ಕಾಲು ಗಂಟೆ ಬೇಕಾಗುತ್ತದೆ.
ಈ ದರಕ್ಕೆ ಪ್ರತಿಸ್ಪರ್ಧಿಗಳು 33 ವ್ಯಾಟ್ಸ್ ಚಾರ್ಜರ್ ಅನ್ನು ಮೊಬೈಲ್ ಜೊತೆಗೇ ನೀಡುತ್ತಿದ್ದಾರೆ. ಸ್ಯಾಮ್ಸಂಗ್ ಈ ವಿಷಯವನ್ನು ಗಮನಿಸಬೇಕಿದೆ. ಕೇವಲ 25 ವ್ಯಾಟ್ಸ್ ಚಾರ್ಜಿಂಗ್ ಸೌಲಭ್ಯದಿಂದ ಕನಿಷ್ಟ 33 ವ್ಯಾಟ್ಸ್ ಗೆ ಬಡ್ತಿ ಹೊಂದಬೇಕಿದೆ!
-ಕೆ.ಎಸ್. ಬನಶಂಕರ ಆರಾಧ್ಯ