ಸ್ಯಾಮ್ ಸಂಗ್ ಫೋನುಗಳ ಬಗೆಗಿನ ಸಾಮಾನ್ಯ ದೂರು ಏನೆಂದರೆ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಫೋನುಗಳಿಗಿಂತ ದರ ಜಾಸ್ತಿ ಎಂಬುದು. ಆದರೆ ಅಚ್ಚರಿ ಎಂಬಂತೆ ಈಗ ಬಂದಿರುವ ಈ ಫೋನಿನಲ್ಲಿ ಉತ್ತಮ ಸ್ಪೆಸಿಫಿಕೇಷನ್ ನೀಡಿ, ಸ್ಪರ್ಧಾತ್ಮಕ ಬೆಲೆಯನ್ನು ಸ್ಯಾಮ್ ಸಂಗ್ ನೀಡಿದೆ. ಈ ಫೋನೇ ಸ್ಯಾಮ್ ಸಂಗ್ ಗೆಲಾಕ್ಸಿ ಎಫ್ 23 5ಜಿ.
ಇದರಲ್ಲಿರುವ ಸ್ನಾಪ್ ಡ್ರಾಗನ್ 750ಜಿ ಪ್ರೊಸೆಸರ್, 5ಜಿ, 120 ಹರ್ಟ್ಜ್ ಗೊರಿಲ್ಲಾ ಗ್ಲಾಸ್ ಡಿಸ್‍ಪ್ಲೇ, 6ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ನೋಡಿ 22-23 ಸಾವಿರ ರೂ. ದರ ಇದಕ್ಕಿರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ ಇದರ ದರ 4ಜಿಬಿ ರ್ಯಾಮ್ 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 13,999 ರೂ. ಹಾಗೂ 6 ಜಿಬಿ ರ್ಯಾಮ್, 128 ಜಿಬಿ ಸಂಗ್ರಹ ಮಾದರಿಗೆ 14,999 ರೂ. ಇದೆ! ಈ ಫೋನು ಹೇಗಿದೆ? ಇಲ್ಲಿದೆ ವಿವರ:
ಪ್ರೊಸೆಸರ್: ಇದು ಗೆಲಾಕ್ಸಿ ಎಫ್ ಸರಣಿಯ ಫೋನ್ ಗಳಲ್ಲೇ ಸ್ನಾಪ್ ಡ್ರಾಗನ್ 750ಜಿ 5ಜಿ ಪ್ರೊಸೆಸರ್ ಹೊಂದಿರುವ ಮೊದಲ ಫೋನಾಗಿದೆ. ಮೊಬೈಲ್ ಫೋನ್‍ಗಳ ಬಗ್ಗೆ ತಿಳಿದಿರುವವರಿಗೆ ಗೊತ್ತಿರುತ್ತದೆ. 750ಜಿ ಪ್ರೊಸೆಸರ್ ಒಂದು ಮೇಲ್ಮಧ್ಯಮ ದರ್ಜೆಯ ಫೋನ್‍ಗಳಿಗೆ ಹಾಕಲಾಗುವ ಶಕ್ತಿಶಾಲಿ ಪ್ರೊಸೆಸರ್. ಸಾಮಾನ್ಯವಾಗಿ ಇದನ್ನು 25 ಸಾವಿರದಿಂದ ಮೇಲ್ಪಟ್ಟು35 ಸಾವಿರ ರೂ. ಬೆಲೆಯ ಫೋನ್‍ಗಳವರೆಗೂ ಬಳಸಲಾಗುತ್ತದೆ. ಈ ಪ್ರೊಸೆಸರನ್ನು 14 ಸಾವಿರ ರೂ. ಫೋನ್‍ಗೇ ಸ್ಯಾಮ್ ಸಂಗ್ ನೀಡಿರುವುದು ಗ್ರಾಹಕರಿಗೆ ಒಂದು ಬೋನಸ್ ಎಂದೇ ಹೇಳಬೇಕು. ಇದೊಂದು ಸಶಕ್ತ ಪ್ರೊಸೆಸರ್ ಆಗಿರುವುದರಿಂದ ಫೋನ್ ಬಳಕೆಯಲ್ಲಿ ಎಲ್ಲೂ ಲ್ಯಾಗ್ ಆಗುವುದಿಲ್ಲ. ಆಪ್‍ಗಳು, ವೆಬ್‍ಪುಟಗಳು ವೇಗವಾಗಿ ತೆರೆದುಕೊಳ್ಳುತ್ತವೆ. ಈ ಪ್ರೊಸೆಸರ್ 5ಜಿ ನೆಟ್‍ವರ್ಕ್ ಅನ್ನೂ ಬೆಂಬಲಿಸುವುದರಿಂದ 14-15 ಸಾವಿರಕ್ಕೇ 5ಜಿ ಫೋನ್ ಕೂಡ ದೊರಕಿದಂತಾಗುತ್ತದೆ. 5ಜಿಯಲ್ಲಿ 12 ಬ್ಯಾಂಡ್‍ಗಳನ್ನು ಈ ಪ್ರೊಸೆಸರ್ ಬೆಂಬಲಿಸುತ್ತದೆ. ಇದರಿಂದಾಗಿ ಬೇರೆ ಬೇರೆ ನೆಟ್‍ವರ್ಕ್ ಗಳು, ವಿಭಿನ್ನ ಬ್ಯಾಂಡ್‍ಗಳನ್ನು ಬೆಂಬಲಿಸಿದಾಗ್ಯೂ, ಆ ನೆಟ್‍ವರ್ಕ್ ಬಳಕೆಗೆ ಅನುಕೂಲವಾಗುತ್ತದೆ. (5ಜಿ ಸೇವೆ ಭಾರತದಲ್ಲಿ ಇನ್ನೂ ಆರಂಭವಾಗಿಲ್ಲ) ಈ ಫೋನಿನಲ್ಲಿ ಅಂಡ್ರಾಯ್ಡ್ 12 ಆವೃತ್ತಿ ಇದೆ. ಇದಕ್ಕೆ ಒನ್ ಯುಐ ಇಂಟರ್ ಫೇಸ್ ನೀಡಲಾಗಿದೆ. ಸ್ಯಾಮ್ ಸಂಗ್‍ನ ಟಿಪಿಕಲ್ ಇಂಟರ್ ಫೇಸ್ ಮುಂದುವರೆದಿದೆ. ಎರಡು ವರ್ಷಗಳ ಅಂಡ್ರಾಯ್ಡ್ ಅಪ್‍ಡೇಟ್ ಹಾಗೂ ನಾಲ್ಕು ವರ್ಷಗಳ ಕಾಲ ಸೆಕ್ಯುರಿಟಿ ಅಪ್‍ಡೇಟ್ ನೀಡುವುದಾಗಿ ಸ್ಯಾಮ್ ಸಂಗ್ ತಿಳಿಸಿದೆ.
ಪರದೆ: ಇದು 6.6 ಇಂಚಿನ ಫುಲ್ ಎಚ್ ಡಿ ಪ್ಲಸ್ ಡಿಸ್‍ಪ್ಲೇ ಹೊಂದಿದೆ. ಪ್ರೊಸೆಸರ್ ರೀತಿಯೇ ಎಫ್ ಸರಣಿಯ ಫೋನ್‍ಗಳಲ್ಲಿ 120 ಹರ್ಟ್ಜ್ ರಿಫ್ರೆಶ್‍ರೇಟ್ ಹೊಂದಿರುವ ಮೊದಲ ಫೋನ್ ಕೂಡ ಇದಾಗಿದೆ. ಹಾಗಾಗಿ ತುಂಬಾ ಸರಾಗವಾಗಿ ಸ್ಕ್ರೋಲ್ ಆಗುತ್ತದೆ. ಪರದೆಗೆ ಕಾರ್ನಿಂಗ್ ಗೊರಿಲ್ಲಾ ಗಾಜಿನ ರಕ್ಷಣೆಯಿದೆ. ಆದರೆ ಇದರಲ್ಲಿ ಸ್ಯಾಮ್ ಸಂಗ್ ಟ್ರೇಡ್‍ಮಾರ್ಕ್ ಆದ ಅಮೋಲೆಡ್ ಪರದೆ ಇಲ್ಲ. ಬದಲಾಗಿ ಎಲ್‍ಸಿಡಿ ಪ್ಯಾನೆಲ್ ಆಗಿದೆ. ಆದರೂ ಮೊಬೈಲ್ ಪರದೆಯ ಕಾರ್ಯಕ್ಷಮತೆಗೇನೂ ತೊಂದರೆಯಿಲ್ಲ. 6.6 ಇಂಚಿನ ಪರದೆ ವೈಶಾಲ್ಯತೆಯ ಅನುಭವ ನೀಡುತ್ತದೆ. ಪರದೆಯ ಮೇಲ್ಭಾಗ ಹನಿ ಬೀಳುವಂತೆ ವಿನ್ಯಾಸ ಮಾಡಲಾಗಿದೆ. ಕೆಳಭಾಗದಲ್ಲಿ ಬೆಜೆಲ್ ಸ್ವಲ್ಪ ಹೆಚ್ಚಿದೆ.
ವಿನ್ಯಾಸ: ಈ ಮೊಬೈಲ್ ನ ವಿನ್ಯಾಸ ಬಹಳ ಸಿಂಪಲ್ ಆಗಿದೆ. ಉತ್ತಮ ಪ್ರೊಸೆಸರ್ ಹಾಗೂ ಮೆಮೊರಿ ಹೆಚ್ಚು ಮಾಡಿರುವುದರಿಂದ ಮೊಬೈಲ್‍ನ ವಿನ್ಯಾಸದ ಬಗ್ಗೆ ಕಂಪೆನಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಮೊಬೈಲ್ ಪೂರ್ಣ ಪ್ಲಾಸ್ಟಿಕ್ ಬಾಡಿ ಹೊಂದಿದೆ. ಮೊಬೈಲ್ ಗಾತ್ರ ಹೆಚ್ಚು ದಪ್ಪವೂ ಅಲ್ಲದೇ ತೀರಾ ತೆಳುವೂ ಅಲ್ಲದಂತಿದೆ. ಹಿಂಬದಿ ಪ್ಯಾನೆಲ್‍ನ ಎಡಮೂಲೆಯಲ್ಲಿ ಮೂರು ಲೆನ್ಸಿನ ಕ್ಯಾಮರಾ ಬಂಪ್ ನೀಡಲಾಗಿದೆ.
ಕ್ಯಾಮರಾ: ಇದರಲ್ಲಿ 50 ಮೆಪಿ ಪ್ರಾಥಮಿಕ ಕ್ಯಾಮರಾ, 8 ಮೆಪಿ ವೈಡ್ ಆಂಗಲ್ ಹಾಗೂ 2 ಮೆ.ಪಿ. ಮ್ಯಾಕ್ರೋ ಕೆಮರಾ ನೀಡಲಾಗಿದೆ. ಸೆಲ್ಫೀಗೆ 8 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಕ್ಯಾಮರಾ ಆಪ್‍ನಲ್ಲಿ ಹೆಚ್ಚಿನ ಫೀಚರ್ ಗಳಿವೆ. ಮುಖ್ಯ ಕ್ಯಾಮರಾ ಚೆನ್ನಾಗಿದೆ. ಹೊರಾಂಗಣದಲ್ಲಿ ಲ್ಯಾಂಡ್‍ಸ್ಕೇಪ್ ಇರಲಿ, ಕ್ಲೋಸ್‍ಅಪ್ ಇರಲಿ ಚೆನ್ನಾಗಿ ಫೋಟೋಗಳು ಮೂಡಿಬರುತ್ತವೆ. ಒಳಾಂಗದ ಫೋಟೋಗಳು ಕೂಡ ಪರವಾಗಿಲ್ಲ. ಸೆಲ್ಫೀ ಗೆ ಕೇವಲ 8 ಮೆ.ಪಿ. ಲೆನ್ಸ್ ಇದ್ದರೂ ಅಚ್ಚರಿಯೆಂಬಂತೆ ಉತ್ತಮ ಫಲಿತಾಂಶ ನೀಡುತ್ತದೆ. ಒಟ್ಟಾರೆ ಈ ದರಪಟ್ಟಿಗೆ ಹೋಲಿಸಿದಾಗ ಕ್ಯಾಮರಾ ಚೆನ್ನಾಗೇ ಇದೆ.
ಬ್ಯಾಟರಿ: ಇದರಲ್ಲಿ 5000 ಎಂಎಎಚ್ ಬ್ಯಾಟರಿ ಇದೆ. ಇದು ಒಂದರಿಂದ ಒಂದೂವರೆ ದಿನದ ಬಳಕೆಗೆ ಸಾಕಾಗುತ್ತದೆ. ಆದರೆ ಈಗ ಸ್ಯಾಮ್ ಸಂಗ್ ಮೊಬೈಲ್ ಜೊತೆ ಚಾರ್ಜರ್ ನೀಡುತ್ತಿಲ್ಲ. ಈ ಫೋನು 25 ವ್ಯಾಟ್ಸ್ ವೇಗದ ಚಾರ್ಜರನ್ನು ಬೆಂಬಲಿಸುತ್ತದೆ. ಪ್ರತ್ಯೇಕ ಚಾರ್ಜರ್ ಕೊಳ್ಳಬೇಕು. ಆದರೆ ಈಗ ಸ್ಯಾಮ್ ಸಂಗ್ ಆನ್‍ಲೈನ್ ಸ್ಟೋರ್ ಹಾಗೂ ಫ್ಲಿಪ್‍ಕಾರ್ಟ್ ನಲ್ಲಿ ಈ ಮೊಬೈಲ್ ಕೊಳ್ಳುವಾಗ 300 ರೂ.ಗೆ ಸ್ಯಾಮ್ ಸಂಗ್ ಚಾರ್ಜರ್ ಕೊಳ್ಳುವ ಆಫರ್ ಅನ್ನು ಸದ್ಯ ನೀಡಲಾಗಿದೆ.
ಸ್ಯಾಮ್ ಸಂಗ್ ಬ್ರಾಂಡ್, ಉತ್ತಮ ಪ್ರೊಸೆಸರ್, ಎರಡು ಆಂಡ್ರಾಯ್ಡ್ ಅಪ್‍ಡೇಟ್, ನಾಲ್ಕು ವರ್ಷಗಳ ಸೆಕ್ಯುರಿಟಿ ಪ್ಯಾಚ್ ಅಪ್‍ಡೇಟ್, ದೀರ್ಘ ಬ್ಯಾಟರಿ ಇದೆಲ್ಲವನ್ನೂ ನೋಡಿದಾಗ 15000 ರೂ.ಗಳ ದರಪಟ್ಟಿಯಲ್ಲಿ ಇದೊಂದು ಉತ್ತಮ ಫೋನ್ ಎಂದು ಹೇಳಬಹುದು. ಫೋನಿನ ಮೂಲಕ ಸ್ಯಾಮ್ ಸಂಗ್ ಗ್ರಾಹಕರಿಗೆ ಹಾಗೂ ಪ್ರತಿಸ್ಪರ್ಧಿಗಳಿಗೆ ಸರ್ ಪ್ರೈಸ್ ನೀಡಿದೆ.
-ಕೆ.ಎಸ್. ಬನಶಂಕರ ಆರಾಧ್ಯ