ಸ್ಯಾಮ್‌ಸಂಗ್ ಗೆಲಾಕ್ಸಿಯ ಎಂ ಸರಣಿಯಲ್ಲಿ, ಈ ಹೆಸರುಗಳು ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತವೆ. ಎಂ.21, ಎಂ.30, ಎಂ31 ಈಗ ಎಂ31ಎಸ್! ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆ ಮಾಡಿದ್ದ ಎಂ 31ನ ಸುಧಾರಿತ ರೂಪವೇ ಎಂ.31ಎಸ್. ಎಂ 31ಎಸ್‌ನ ಆಕಾರ ವಿನ್ಯಾಸ ನೋಡಿದಾಗ ಅರ್ಥವಾಗುತ್ತದೆ, ಅವರು ಯಾಕೆ ಈ ಮಾಡೆಲ್ ಬಿಡುಗಡೆ ಮಾಡಿದ್ದರೆಂದು. ಎಂ21, ಎಂ30, 31ಗಳ ವಿನ್ಯಾಸ ಸಾಧಾರಣ ಫೋನ್‌ನಂತಿತ್ತು. ಅವುಗಳ ದರ 15 ಸಾವಿರದಿಂದ 19 ಸಾವಿರದವರೆಗೂ ಇತ್ತು. ಈ ದರದಲ್ಲಿ ರೆಡ್ ಮಿ ನೋಟ್ 9 ಪ್ರೊ ಮತ್ತು ಪ್ರೊ ಮ್ಯಾಕ್ಸ್ ವಿನ್ಯಾಸ ಆಕಾರದಲ್ಲಿ ದೊಡ್ಡದಿತ್ತು. ಅದರ ಮುಂದೆ ಎಂ31 ಚಿಕ್ಕದಾಗಿ ಕಾಣುತ್ತಿತ್ತು. ಹಾಗಾಗಿ, ಅದನ್ನು ಪರಿಹರಿಸಿ ಹೊಚ್ಚ ಹೊಸದಾದ ಆಕಾರ- ವಿನ್ಯಾಸದ ಎಂ31ಎಸ್ ಅನ್ನು ಸ್ಯಾಮ್‌ಸಂಗ್ ಬಿಡುಗಡೆ ಮಾಡಿದೆ.
ವಿನ್ಯಾಸ : ಇದರ ದೇಹ ಸಂಪೂರ್ಣ ಗಾಜಿನದ್ದಲ್ಲ. ಪ್ಲಾಸ್ಟಿಕ್ ಅನ್ನೇ ಗಾಜಿನಂತೆ ವಿನ್ಯಾಸ ಮಾಡಲಾಗಿದೆ. ಆದರೂ ನೋಡಲು ಸ್ಯಾಮ್‌ಸಂಗ್‌ನ ಎ ಸರಣಿಯ ಫೋನ್‌ಗಳ ಅನುಭವ ನೀಡುತ್ತದೆ.
ಪರದೆ : ಇದು 6.5 ಇಂಚಿನ ಫುಲ್‌ಎಚ್‌ಡಿ ಪ್ಲಸ್ ಸೂಪರ್ ಅಮೋ ಲೆಡ್ ಡಿಸ್‌ಪ್ಲೇ ಹೊಂದಿದೆ. ಬೇರೆ ಅಂಶ ಕಡಿಮೆಯಾದರೂ ಸೈ, ಸ್ಯಾಮ್‌ಸಂಗ್ ನವರು ಡಿಸ್‌ಪ್ಲೇಗೆ ಅಮೋ ಲೆಡ್ ಪರದೆ ಹಾಕಿ ಗ್ರಾಹಕರನ್ನು ಸೆಳೆಯುತ್ತಾರೆ. ಅಂಗಡಿಯಾತನೂ ಇದನ್ನೇ ಹೈಲೈಟ್ ಮಾಡುತ್ತಾನೆ. ಇದರಲ್ಲಿ ಸೂಪರ್ ಅಮೋ ಲೆಡ್ ಡಿಸ್‌ಪ್ಲೇ ಇದೆ ಸಾರ್. ಬೇರೆ ಫೋನ್‌ಗಳಲ್ಲಿ ಐಪಿಎಸ್ ಡಿಸ್‌ಪ್ಲೇ ಇರುತ್ತದೆ ಅಂತ! ಡಿಸ್‌ಪ್ಲೇ ಮೇಲೆ ಮಧ್ಯದಲ್ಲಿ ಒಂದು ಚುಕ್ಕಿ ಇರುವುದನ್ನು ಸ್ಯಾಮ್ ಸಂಗ್ ಇನ್ ಫಿನಿಟಿ ಓ ಡಿಸ್‌ಪ್ಲೇ ಎಂದು ಕರೆಯುತ್ತದೆ. ಇದು ಅದರ ಎಂ ಸರಣಿಯ ಮುಂಚಿನ ಫೋನ್‌ಗಳಲ್ಲಿ ಇರಲಿಲ್ಲ. ಇದರಿಂದಾಗಿ ಡಿಸ್‌ಪ್ಲೇ ನೋಡಲು ಸುಂದರವಾಗಿ ಕಾಣುತ್ತದೆ.
64 ಮೆಗಾ ಪಿಕ್ಸಲ್ ಕ್ಯಾಮೆರಾ : ಇದರಲ್ಲಿ ಮುಖ್ಯ ಕ್ಯಾಮೆರಾ ನಾಲ್ಕು ಲೆನ್ಸ್‌ಗಳನ್ನು ಹೊಂದಿದೆ. ಮುಖ್ಯ ಲೆನ್ಸ್ ಮೆ.ಪಿ. ಹೊಂದಿದೆ. 12 ಮೆ.ಪಿ. ಅಲ್ಟ್ರಾ ವೈಡ್ ಲೆನ್ಸ್, 5 ಮೆ.ಪಿ. ಡೆಪ್ತ್ ಲೆನ್ಸ್ ಮತ್ತು 5 ಮೆ.ಪಿ. ಮ್ಯಾಕ್ರೋ ಲೆನ್ಸ್ ಹೊಂದಿದೆ. ಮುಂಬದಿ ಕ್ಯಾಮೆರಾ 32 ಮೆಗಾಪಿಕ್ಸಲ್ ಇದೆ. ಒಂದೇ ಟೇಕ್‌ನಲ್ಲಿ 7 ವಿವಿಧ ರೀತಿಯ ಫೋಟೊ ಮತ್ತು ಮೂರು ಚುಟುಕು ವಿಡಿಯೋ ತೆಗೆಯುವ ಒಂದು ಆಯ್ಕೆಯನ್ನೂ ನೀಡಲಾಗಿದೆ. ಒಟ್ಟಾರೆ ಕ್ಯಾಮೆರಾದ ಸಂಯೋಜನೆ ಈ ದರ ಪಟ್ಟಿಯಲ್ಲಿ ಚೆನ್ನಾಗೇ ಇದೆ
6000 ಎಂಎಎಚ್ ಬ್ಯಾಟರಿ : ಭರ್ಜರಿ ಬ್ಯಾಟರಿ ಇದರವಿಶೇಷ. 6000 ಎಂಎಎಚ್ ಬ್ಯಾಟರಿ ನೀಡಿರುವುದು ಮಾತ್ರವಲ್ಲ. ಅದಕ್ಕೆ 25 ವ್ಯಾಟ್ ವೇಗದ ಚಾರ್ಜರ್ ಇರುವುದು ಪ್ಲಸ್ ಪಾಯಿಂಟ್. ಈ ಹಿಂದಿನ ಎಂ ಸರಣಿಯ ಫೋನ್‌ಗಳಲ್ಲಿ 15 ವ್ಯಾಟ್ ಚಾರ್ಜರ್ ಇರುತ್ತಿತ್ತು.
ಸೈಡ್ ಫಿಂಗರ್ ಪ್ರಿಂಟ್ : ಎಂ ಸರಣಿಯಲ್ಲಿ ಮೊದಲ ಬಾರಿಗೆ ಬೆರಳಚ್ಚು ಸ್ಕ್ಯಾನರ್ ಅನ್ನು ಫೋನಿನ ಸೈಡಿನಲ್ಲಿ, ಅಂದರೆ ಆನ್ ಅಂಡ್ ಆಫ್ ಸ್ವಿಚ್‌ನಲ್ಲಿ ನೀಡಲಾಗಿದೆ. ಇದು ಬಳಕೆದಾರ ಸ್ನೇಹಿ ಆಗಿದೆ.
ದರ: ಇದು 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಮತ್ತು 8 ಜಿಬಿ ರ್ಯಾಮ್ 128 ಜಿಬಿ ಆಂತರಿಕ ಸಂಗ್ರಹದ ಎರಡು ಆವೃತ್ತಿಗಳಲ್ಲಿ ಲಭ್ಯ. 6 ಜಿಬಿ ರ್ಯಾಮ್‌ನದಕ್ಕೆ 19500 ರೂ. 8 ಜಿಬಿ ರ್ಯಾಮ್‌ನದಕ್ಕೆ 21500 ರೂ. ಅಮೆಜಾನ್ ನಲ್ಲಿ ಈ ಫೋನ್‌ಗಳು ಲಭ್ಯ.
ಎಕ್ಸಿನಾಸ್ 9611 ಪ್ರೊಸೆಸರ್!: ಈ ಮೊಬೈಲ್‌ನಲ್ಲೂ ಅದೇ ಹಳೆಯ ಎಕ್ಸಿನಾಸ್ 9611 ಪ್ರೊಸೆಸರ್ ನೀಡಲಾಗಿದೆ! ಸ್ಯಾಮ್ ಸಂಗ್ ತನ್ನ 14 ಸಾವಿರ ರೂ.ನಿಂದ 30 ಸಾವಿರ ರೂ. ಫೋನ್‌ಗಳಿಗೂ ಇದೇ ಪ್ರೊಸೆಸರ್ ಹಾಕುತ್ತಿದೆ. ಈ ದರಕ್ಕೆ ಅನ್ಯ ಕಂಪನಿಗಳು ಸ್ನ್ಯಾಪ್‌ಡ್ರಾಗನ್ 720 ಅಥವಾ 730 ಪ್ರೊಸೆಸರ್ ಬಳಸುತ್ತಿವೆ. ಪ್ರೊಸೆಸರ್ ವಿಷಯದಲ್ಲಿ ಸ್ಯಾಮ್‌ಸಂಗ್ ರಾಜಿ ಮಾಡಿಕೊಳ್ಳುತ್ತಿದೆ. ಸ್ಯಾಪ್‌ಡ್ರಾಗನ್ 720 ಪ್ರೊಸೆಸರ್ ಇದ್ದರೆ, ಇದು 20 ಸಾವಿರದೊಳಗೆ ಅತ್ಯುತ್ತಮ ಫೋನ್ ಎನಿಸಿಕೊಳ್ಳುತ್ತಿತ್ತು. ನೀವು ಗೇಮ್ ಆಡುವವರಲ್ಲವಾದರೆ ಈ ಪ್ರೊಸೆಸರ್ ಕೂಡ ಸಾಕು.
– ಕೆ.ಎಸ್. ಬನಶಂಕರ ಆರಾಧ್ಯ