Advertisement

ಸಾಹಿತ್ಯ, ಕಲೆಗಳ ಆಸಕ್ತಿಯಿಂದ ಸಂಸ್ಕಾರ: ನಾರಾಯಣ ಮಣಿಯಾಣಿ

10:01 PM Aug 01, 2019 | Sriram |

ಬದಿಯಡ್ಕ: ಬದುಕು, ಸಮಾಜಕ್ಕೆ ಹಿತ ನೀಡುವ ಶಕ್ತಿ ಸಾಹಿತ್ಯಕ್ಕಿದೆ. ಕಲೆ, ಸಾಹಿತ್ಯಗಳು ಸತøಜೆಗಳ ನಿರ್ಮಾಣ ಮಾಡುವ ಮೂಲಕ ಸಂತೃಪ್ತತೆ ಉಂಟುಮಾಡುತ್ತವೆ ಎಂದು ಹಿರಿಯ ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ಹೇಳಿದರು.

Advertisement

ಕನ್ನಡ ಸಾಹಿತ್ಯ ಸಿರಿ ಬಳಗ ಬದಿಯಡ್ಕ ನೇತೃತ್ವದಲ್ಲಿ ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಿರಿ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತಿ, ಸಾಹಿತ್ಯ ಪ್ರೇಮಿಗಳಿಗೆ ಎಂದಿಗೂ ದುಃಖ ಉಂಟಾಗದು. ಜೀವನ ಮತ್ತು ಸಮಾಜ ಚಿಂತಕರಾದ ಸಾಹಿತಿಗಳು- ಕಲಾವಿದರು ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುತ್ತಾರೆ. ಸಾಹಿತ್ಯ ಬರಹಗಳು ಬದುಕು, ಸಮಾಜವನ್ನು ತಿದ್ದಿ ತೀಡಿ ನೇರ್ಪುಗೊಳಿಸುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಹೊಸ ತಲೆಮಾರಲ್ಲಿ ಸಾಹಿತ್ಯ-ಕಲೆಗಳ ಆಸಕ್ತಿ ಕುಂಠಿತಗೊಳ್ಳುತ್ತಿರುವುದು ಖೇದಕರವಾಗಿದೆ ಎಂದ ಅವರು ವ್ಯಾವಹಾರಿಕ ಜಗತ್ತು ಹೆಚ್ಚು ಅಪಾಯ ಮತ್ತು ಅಸುರಕ್ಷಿತತೆಯನ್ನು ತಂದೊಡ್ಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಅಳಿದ ಮೇಲೂ ಉಳಿಯುವ ಬದುಕನ್ನು ರೂಪಿಸುವಲ್ಲಿ ಹೊಸ ತಲೆಮಾರಿಗೆ ಮನವರಿಕೆ ಮಾಡಿಸಬೇಕು ಎಂದ ಅವರು ಇಂತಹ ಕಾರ್ಯಚಟುವಟಿಕೆಗಳು ಭಾಷೆ, ಸಾಹಿತ್ಯಾಭಿಮಾನವನ್ನು ಮೂಡಿಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್‌ ಅವರು ಮಾತನಾಡಿ, ಸಾಹಿತ್ಯ, ಕಲಾಸಕ್ತರಲ್ಲದವರ ಬದುಕು ಸುಖಮಯವಾಗಿರಲಾರದು. ಬದು ಕನ್ನು ಸುಖಕರಗೊಳಿಸುವ ಪರಿಸರ ನಿರ್ಮಾಣದಲ್ಲಿ ಸಾಹಿತ್ಯ, ಸಂಗೀತ ಕಲೆಗಳೇ ಮೊದಲಾದವುಗಳು ಪ್ರೇರಣದಾಯಿಯಾಗಿರುತ್ತವೆ ಎಂದು ತಿಳಿಸಿದರು. ದಿ| ಕೇಳು ಮಾಸ್ತರ್‌ ಅವರ ವ್ಯಾಪಕ ಸಾಹಿತ್ಯ ಕೃಷಿ, ಹಿರಿಯ ತಲೆಮಾರನ್ನು ಗುರುತಿಸಿ ಗೌರವಿಸುವ ಸನ್ಮನಸ್ಸು ವ್ಯಕ್ತಿಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಅವರ ಕನಸಿನ ಕೂಸಾಗಿ ಬೆಳೆದು ನಿಂತಿರುವ ಕನ್ನಡ ಸಾಹಿತ್ಯ ಸಿರಿ ಗಡಿನಾಡಿನಲ್ಲಿ ಹೊಸ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ನಿವೃತ್ತ ಕನ್ನಡ ಶಿಕ್ಷಕ, ಸಾಹಿತ್ಯ ಪ್ರೇಮಿ ದಿ| ಇಬ್ರಾಹಿಂ ಮಾಸ್ತರ್‌ ಅವರ ಸಂಸ್ಮರಣೆ ಮಾಡಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಪುರುಷ ಅವರು ತಮ್ಮ ಒಡನಾಡಿಯಾಗಿದ್ದ ದಿ| ಇಬ್ರಾಹಿಂ ಮಾಸ್ತರ್‌ ಅವರ ಬಗ್ಗೆ ಮಾತನಾಡಿ ಸ್ಮರಿಸಿದರು.

Advertisement

ಹಿರಿಯ ಯಕ್ಷಗಾನ ಸ್ತ್ರೀ ವೇಷ‌ಧಾರಿ ಮಾಲಿಂಗ ಚೆಟ್ಟಿಯಾರ್‌ ಬದಿಯಡ್ಕ ಅವರನ್ನು ಸಮಾರಂಭದಲ್ಲಿ ಅಮೂಲ್ಯ ಕಲಾಸೇವೆಗಾಗಿ ಅಭಿನಂದಿಸಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ಮೂಲಡ್ಕ ನಾರಾಯಣ ಅವರು ಅಭಿನಂದನ ಭಾಷಣಗೈದರು. ಕನ್ನಡ ಸಾಹಿತ್ಯ ಸಿರಿಯ ಅಧ್ಯಕ್ಷ ಮೊಹಮ್ಮದಾಲಿ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಸಿರಿಯ ಕಾರ್ಯದರ್ಶಿ ಡಾ| ಬೇ.ಸಿ. ಗೋಪಾಲಕೃಷ್ಣ ಭಟ್‌ ಸ್ವಾಗತಿಸಿ, ಲಕ್ಷ್ಮಣ ಪ್ರಭು ಕರಿಂಬಿಲ ವಂದಿಸಿದರು. ಪ್ರೊ| ಎ. ಶ್ರೀನಾಥ್‌ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ರವಿಕಾಂತ ಕೇಸರಿ ಕಡಾರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next