Advertisement

ಸಂಸಾರ, ಸಿರಿ-ಸಂಪತ್ತು ಕ್ಷಣಿಕ

03:00 PM Dec 18, 2021 | Team Udayavani |

ಬೀದರ: ಸಂಸಾರ, ಸಿರಿ-ಸಂಪತ್ತುಗಳೆಲ್ಲವೂ ಕ್ಷಣಿಕ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

Advertisement

ಜಿಲ್ಲೆಯ ಧನ್ನೂರ (ಎಚ್‌) ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಜೀವನ ಗಾಳಿಯಲ್ಲಿ ಇಟ್ಟ ದೀಪದ ಹಾಗೆ. ದೀಪದೊಳಗೆ ಎಣ್ಣೆ, ಬತ್ತಿ ಇದೆ. ಆದರೆ, ಯಾವಾಗ ಆರುವುದೋ ಗೊತ್ತಿಲ್ಲ. ಸಿರಿತನವೂ ಸಂತೆಯ ಮಂದಿಯಂತೆ. ಸಂತೆಯಲ್ಲಿ ಬೆಳಿಗ್ಗೆ ಯಾರೂ ಇರುವುದಿಲ್ಲ. ಮಧ್ಯಾಹ್ನ ತುಂಬಿಕೊಂಡಿರುತ್ತದೆ. ಸಂಜೆ ಮತ್ತೆ ಖಾಲಿಯಾಗುತ್ತದೆ. ಹೀಗೆ ಯಾವುದೂ ಶಾಶ್ವತ ಅಲ್ಲ ಎಂದು ನುಡಿದರು.

ಸಂಸಾರ, ಸಿರಿ-ಸಂಪತ್ತಿನ ಸತ್ಯ ಅರಿಯಬೇಕು. ಅವುಗಳನ್ನು ನೆಚ್ಚಿಕೊಂಡು ಅಮೂಲ್ಯ ಜೀವನ ಹಾಳು ಮಾಡಿ ಕೊಳ್ಳಬಾರದು. ಇರುವುದಲ್ಲೇ ಸಂತೃಪ್ತಿ ಪಟ್ಟುಕೊಳ್ಳಬೇಕು. ದೇವರನ್ನು ಸ್ಮರಿಸಬೇಕು, ಸತ್ಕಾರ್ಯಗಳ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಪೋಲಿಯೋ ಹನಿಯಿಂದ ಹೇಗೆ ದೈಹಿಕ ಅಂಗವೈಕಲ್ಯ ಬರುವುದಿಲ್ಲವೋ, ಹಾಗೆಯೇ ಆಧ್ಯಾತ್ಮಿಕ ಹನಿಯಿಂದ ಮಾನಸಿಕ ಅಂಗವೈಕಲ್ಯ ಬರುವುದಿಲ್ಲ. ಸುಖ, ಶಾಂತಿ, ನೆಮ್ಮದಿಗಾಗಿ ಆಧ್ಯಾತ್ಮದ ಮೊರೆ ಹೋಗಬೇಕು ಎಂದು ತಿಳಿಸಿದರು.

ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, 12ನೇ ಶತಮಾನದ ಶರಣರ ಬಗ್ಗೆ ನಾವು ಕೇಳಿದ್ದೇವೆ. ಆದರೆ, ಸಿದ್ಧೇಶ್ವರ ಶ್ರೀ ನಮ್ಮ ಮಧ್ಯೆ ಇರುವ ಜೀವಂತ ಶರಣರಾಗಿದ್ದಾರೆ. ಅವರ ಸರಳ ಬದುಕು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

Advertisement

ಎಂಜಿನಿಯರ್‌ ಚನ್ನಬಸವಣ್ಣ ಬಳತೆ ಹಾಗೂ ನಿವೃತ್ತ ಶಿಕ್ಷಕ ಹಣಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಸಿದ್ಧೇಶ್ವರ ಶ್ರೀ ಗ್ರಾಮಕ್ಕೆ ಭೇಟಿ ಕೊಟ್ಟ ಸವಿ ನೆನಪಿಗಾಗಿ ಸಸಿಗಳನ್ನು ನೆಡಲಾಯಿತು.

ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ್‌, ಹಾಲು ಒಕ್ಕೂಟದ ನಿರ್ದೇಶಕ ಶ್ರೀಕಾಂತ ದಾನಿ, ಗ್ರಾಪಂ ಅಧ್ಯಕ್ಷ ಕಾಶಿನಾಥ ಖಂಡ್ರೆ, ಪಿಕೆಪಿಎಸ್‌ ಅಧ್ಯಕ್ಷ ಗುಂಡೇರಾವ್‌ ಪಾಟೀಲ, ಬಾಬುರಾವ್‌ ಪೊಲೀಸ್‌ ಪಾಟೀಲ, ಪರಮೇಶ್ವರ ಪಾಟೀಲ, ಡಾ| ಓಂಕಾರ ಸ್ವಾಮಿ, ಡಾ| ದೇವಕಿ ಅಶೋಕ ನಾಗೂರೆ, ಸಂಗಮೇಶ ಸಜ್ಜನಶೆಟ್ಟಿ, ನಾಗೇಶ ಅಮರಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next