Advertisement

ರುಚಿಗೆ ಸಾಮ್ರಾಟ : ಅಣ್ಣಾವ್ರ ಅಚ್ಚುಮೆಚ್ಚಿನ ಹೋಟೆಲ್‌

03:11 PM Dec 01, 2018 | |

ಕೆಲವು ಹೋಟೆಲ್‌ಗ‌ಳ ವೈಶಿಷ್ಟ್ಯವೇ ಬೇರೆ. ಅವು ವೆರೈಟಿ ಖಾದ್ಯಗಳಿಂದ, ಹಸಿವನ್ನಷ್ಟೇ ನೀಗಿಸುವ ತಾಣ ಆಗಿರುವುದಿಲ್ಲ; ಆ ಪ್ರದೇಶದ ಲ್ಯಾಂಡ್‌ ಮಾರ್ಕೇ ಆಗಿಹೋಗಿರುತ್ತವೆ. ಆಪ್ತರ ಸಂತೋಷ ಕೂಟಕ್ಕೆ, ಬ್ಯುಸಿನೆಸ್‌ ವಿಚಾರದ ಮಾತುಕತೆಗೆ, ಅಪರೂಪದ ಭೇಟಿಗೆ, ಬರ್ತ್‌ಡೇ ಪಾರ್ಟಿಗಳಿಗೆ “ಇಲ್ಲಿಗೆ’ ಬಂದರೇನೇ ಸಮಾಧಾನ ಎನ್ನುವಷ್ಟರ ಮಟ್ಟಿಗೆ ಮನೆ ಅಡುಗೆಯನ್ನು ಮನದಾಳದಲ್ಲಿ ಅಚ್ಚೊತ್ತುತ್ತವೆ. ಇಂಥ ಹೋಟೆಲ್‌ಗ‌ಳ ಭೇಟಿಗೆ ಒಂದು ಮಹತ್ವ ಇರುತ್ತೆ. ಇಲ್ಲಿನ ಬೈಟುಕಾಫಿ, ಭೋಜನವೂ ಒಂದು ಸಿಹಿ ನೆನಪು.

Advertisement

ಇಷ್ಟೆಲ್ಲ ಹೇಳಿದ ಮೇಲೆ, “ನಂಗೆ ಸಾಮ್ರಾಟ್‌ ರೆಸ್ಟೋರೆಂಟ್‌ ಗೊತ್ತಿಲ್ಲ’ ಎನ್ನುವವರು ಯಾರು ಸಿಗುತ್ತಾರೆ, ಹೇಳಿ? ರೇಸ್‌ಕೋರ್ಸ್‌ ರಸ್ತೆಯಲ್ಲಿ ಓಡಾಡುವಾಗ, ಬಸವೇಶ್ವರ ವೃತ್ತದ ಸಮೀಪ ಸುಳಿದಾಗಲೆಲ್ಲ, ಈ ಹೋಟೆಲ್‌ ಆಕರ್ಷಣೆಯಾಗಿ ತೋರುವುದು, ಇದರ ಹಳೇ ಗತ್ತಿನ ಕಾರಣಕ್ಕೆ; ಎಂದಿಗೂ ಮಾಸದ ರುಚಿಯ ಸೆಳೆತಕ್ಕಾಗಿ. ಮಿಸ್ಟರ್‌ ಕ್ಲೀನ್‌ನಂತೆ ಸ್ವಾಗತಿಸಿ, ಇಲ್ಲಿ ಖಾದ್ಯ ಸವಿದು ಎಷ್ಟೋ ಹೊತ್ತಾದ ಮೇಲೂ ಅದರ ಫ್ಲೇವರ್‌ ನಾಲಗೆ ಮೇಲೆ ನಿಂತಿರುತ್ತೆ. ಅದೇ ಸಾಮ್ರಾಟ್‌ನ ಸ್ವಾದದ ಸ್ಪೆಷಾಲಿಟಿ.

ಅಣ್ಣಾವ್ರಿಗೆ ಅಚ್ಚುಮೆಚ್ಚು
“ಸಾಮ್ರಾಟ್‌’ನ ಬಾಣಸಿಗರು ಹೊಯ್ದು ಕೊಡುವ ಮಸಾಲೆ ದೋಸೆಯ ಗತ್ತು- ಗೈರತ್ತೇ ಬೇರೆ. ಡಾ. ರಾಜ್‌ ಕುಮಾರ್‌ ಅವರಿಗೆ ಇಲ್ಲಿನ ಮಸಾಲೆ ದೋಸೆ ಮೇಲೆ ಹೆಚ್ಚು ಪ್ರೀತಿ. ವಾರಕ್ಕೊಮ್ಮೆ ಇಲ್ಲಿಗೆ ಬಂದು ಮಸಾಲೆ ದೋಸೆ ಚಪ್ಪರಿಸುತ್ತಿದ್ದರು. ಶಿವರಾಜ್‌ ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌ ಕೂಡ ಇಲ್ಲಿನ ದೋಸೆಯ ಅಭಿಮಾನಿಗಳೇ. ಸಾಹಿತಿಗಳು, ರಾಜಕಾರಣಿ ಗಳಿಗೂ ಇದು ಅಚ್ಚುಮೆಚ್ಚಿನ ಹೋಟೆಲ್‌. ಮಲ್ಲಿಗೆ ಯಂಥ ಇಡ್ಲಿಯನ್ನು ಇಲ್ಲಿ ಮೆಲ್ಲುವ ಸುಖವಿದೆ ಯಲ್ಲ, ಆ ಗಮ್ಮತ್ತಿಗೆ ಬೇರೆ ಹೋಲಿಕೆ ಇಲ್ಲ. ವಡೆಯೂ ಅಷ್ಟೇ… ಬಾಯಲ್ಲಿಟ್ಟರೆ ಕರಗುವಷ್ಟು ತಾಜಾ ಗರಿಗರಿ. ಕೇಸರಿಬಾತ್‌ನ ಘಮವೂ, ಖಾರಾಬಾತ್‌ನ ಸ್ವಾದವೂ ಭಿನ್ನವೇ.

ಶುರುವಾಗಿದ್ದು ಯಾವಾಗ?
1977ರಲ್ಲಿ ಈ ಹೋಟೆಲ್‌ ತಲೆಯೆತ್ತಿತು. ಸ್ಥಾಪಕರು, ಮಾರುತಿ ಲಕ್ಷ್ಮಣ ಶಾನ್‌ಭಾಗ್‌. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕೀಪುರದ ಇವರು, ಈಗ ಇಲ್ಲ. ಆದರೆ, ಇವರು ಕಟ್ಟಿದ ರುಚಿಯ ಗುಡಿಯಲ್ಲಿ ಖಾದ್ಯದ ಪರಿಮಳ ನಿಂತೇ ಇಲ್ಲ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಲಘು ಭೋಜನವನ್ನು ಚಾಲ್ತಿಗೆ ತಂದ ಕೀರ್ತಿ ಇವರದು. ಅನ್ನ, ರಸಂ, ಸಾಂಬಾರ್‌, ಪಲ್ಯ, ಪುಳಿಯೊಗರೆ, ಮೊಸರು, ಹಪ್ಪಳವನ್ನು ಒಂದೇ ತಟ್ಟೆಯಲ್ಲಿ ಕೊಟ್ಟಾಗ, ಇತರೆ ಹೋಟೆಲ್‌ನ ಮಾಲೀಕರೂ, ಸಾಮ್ರಾಟ್‌ನ ಮಾದರಿ ಅನುಕರಿಸಿದರು. ಈಗ ಹೋಟೆಲ್‌ನ ಉಸ್ತುವಾರಿ ಸಂತೋಷ್‌ ಮಾರುತಿ ಶಾನುಭಾಗ್‌ ಅವರದು.

Advertisement

ನಾರ್ತ್‌ ಫ‌ುಡ್ಡೂ  ಸೂಪರ್‌
ದಕ್ಷಿಣ ಭಾರತೀಯ ಖಾದ್ಯ ಎಷ್ಟು ರುಚಿಕಟ್ಟೋ, ಉತ್ತರ ಭಾರತೀಯ ಖಾದ್ಯಕ್ಕೂ “ಸಾಮ್ರಾಟ್‌’ ಅಷ್ಟೇ ಹೆಸರುವಾಸಿ. ನಾನ್‌,ಕುಲ್ಚಾ, ಪನ್ನೀರ್‌ಶಾಹಿ ಕುರ್ಮಾ, ಮಶ್ರೂಮ್‌ ಮಸಾಲ, ಮಶ್ರೂಮ್‌ ಸೂಪ್‌ನ ಸ್ವಾದಕ್ಕೆ ಫಿದಾ ಆಗದವರಿಲ್ಲ. ಇದೇ ಹೋಟೆಲ್‌ನ ಇನ್ನೊಂದು ಭಾಗದಲ್ಲಿ ಪಂಜಾಬಿ ಊಟವೂ ಸೆಳೆಯುತ್ತದೆ. ನಾನಾ ಸಬ್ಜಿ, ಬಾದಾಮ್‌ ಹಲ್ವಾ, ಸೂಪ್‌, ಐಸ್‌ಕ್ರೀಮ್‌  ನಾಲಗೆಗೆ ಸ್ವಾದದ ಹುಚ್ಚು ಹಿಡಿಸುತ್ತವೆ. ಬಾಸುಂದಿ, ರಸಮಲೈ, ಬೆಂಗಾಲಿ ಸಿಹಿಯೂ ಅಷ್ಟೇ ಮೋಹಕ.

ದಿನಕ್ಕೊಂದು ತಿಂಡಿ…
ಸೋಮವಾರ : ಉಪಾ¾ (ಉಪ್ಪಿಟ್ಟು), ಕೇಸರಿ ಬಾತ್‌
ಮಂಗಳವಾರ: ಬೋಂಡ ಸೂಪ್‌
ಬುಧವಾರ: ಅವಲಕ್ಕಿ ಬಾತ್‌, ರವಾ ಪೊಂಗಲ್‌
ಗುರುವಾರ: ಶ್ಯಾವಿಗೆ ಬಾತ್‌, ಟೊಮೇಟೊ ಖಾರಾ ಬಾತ್‌ ಶುಕ್ರವಾರ: ವೆಜಿಟೇಬಲ್‌ ಖಾರಾ ಬಾತ್‌, ಬಿಸಿಬೇಳೆ ಬಾತ್‌
ಶನಿವಾರ: ಅವಲಕ್ಕಿ ಬಾತ್‌, ಡ್ರೆç ಪೊಂಗಲ್‌

ವಿಳಾಸ: “ಸಾಮ್ರಾಟ್‌’ ರೆಸ್ಟೋರೆಂಟ್‌,
ಬಸವೇಶ್ವರ ವೃತ್ತದ ಸಮೀಪ, ರೇಸ್‌ಕೋರ್ಸ್‌ ರಸ್ತೆ ಸಂಪರ್ಕ: 080-2226144+6/97315322220/ 9483503503

ನಾವು ಗ್ರಾಹಕರಿಗೆ ಕೊಡುವುದು ಕ್ಲಾಸಿಕ್‌ ರುಚಿಯನ್ನು. ಗ್ರಾಹಕರ ಅಭಿರುಚಿ ಏನು ಎಂಬುದನ್ನು ನಮ್ಮ ನುರಿತ ಬಾಣಸಿಗರು ಚೆನ್ನಾಗಿ ಬಲ್ಲರು.
 ●ಸಂತೋಷ್‌ ಮಾರುತಿ ಶಾನುಭಾಗ್‌,
“ಸಾಮ್ರಾಟ್‌’ ಮಾಲೀಕರು

ಬಳಕೂರು ವಿ.ಎಸ್‌. ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next