Advertisement

ಮುಂದಿನ ದಸರೆಗೆ ಅರಮನೆಯಲ್ಲಿ ಯಕ್ಷಗಾನ; ಸಂಪಾಜೆ ಯಕ್ಷೋತ್ಸವದಲ್ಲಿ ಯದುವೀರ ಒಡೆಯರ್‌

02:22 AM Mar 15, 2022 | Team Udayavani |

ಮಡಿಕೇರಿ/ಅರಂತೋಡು: ಮೈಸೂರಿನ ಅರಮನೆಗೂ ದಕ್ಷಿಣ ಕನ್ನಡದ ಯಕ್ಷಗಾನ ಕಲೆಗೂ ಅವಿನಾಭಾವ ಸಂಬಂಧ. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ಅರಮನೆಗೆ ಯಕ್ಷಗಾನ ಕಲಾವಿದರನ್ನು ಕರೆಯಿಸಿದ್ದರು. ಮುಂದಿನ ದಸರಾ ಸಂದರ್ಭ ಸರಕಾರದ ಜತೆಗೆ ಮಾತುಕತೆ ನಡೆಸಿ ಅರಮನೆ ಅವರಣದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಮೈಸೂರು ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

Advertisement

ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ವತಿಯಿಂದ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಶನಿವಾರ ನಡೆದ ಸಂಪಾಜೆ ಯಕ್ಷೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ತಮ ಭವಿಷ್ಯಕ್ಕಾಗಿ ಪಶ್ಚಿಮ ಘಟ್ಟಗಳ ವೈವಿಧ್ಯವನ್ನು ಉಳಿಸುವ ಕೆಲಸವಾಗಬೇಕು. ಹೆದ್ದಾರಿ ಬದಿಯಲ್ಲಿ ಉದ್ದಕ್ಕೂ ಬಳಸಿ ಎಸೆದ ಪ್ಲಾಸ್ಟಿಕ್‌ ಇತ್ಯಾದಿ ತ್ಯಾಜ್ಯ ಕಾಣಿಸುತ್ತಿದ್ದು ಇದರ ನಿಯಂತ್ರಣ ಅಗತ್ಯ ಎಂದರು.

ಯಕ್ಷಾನದ ಮೇರು ಜಾತ್ರೆ
ಎಡನೀರು ಮಠದ ಶ್ರೀ ಸಚ್ಚಿದಾ ನಂದ ಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿ, ಸಂಪಾಜೆ ಯಕ್ಷೋತ್ಸವ ಮೂರು ದಶಕ ದಾಟಿದೆ ಎಂದರೆ ಅದು ಯಕ್ಷ ಪ್ರಪಂಚವಲ್ಲ, ಕಲಾ ಪ್ರಚಂಚಕ್ಕೇ ಸೋಜಿಗದ ಸಂಗತಿ. ಯಕ್ಷಗಾನದ ಮೇರು ಜಾತ್ರೆ ನಿರಂತರ ನಡೆಯು ತ್ತಿರಲಿ. ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಲಿ ಎಂದು ಹಾರೈಸಿದರು.

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಅವರು ಡಾ| ಕೀಲಾರು ಗೋಪಾಲಕೃಷ್ಣಯ್ಯರನ್ನು ಸ್ಮರಿಸಿದರು.

Advertisement

ಯಕ್ಷೋತ್ಸವ ಪ್ರಶಸ್ತಿ
ಯಕ್ಷಗಾನ ಮೇಳಗಳ ಅನುಭವಿ ವ್ಯವಸ್ಥಾಪಕ ದಿವಾಕರ ಕಾರಂತ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟಿ ಅವರಿಗೆ ಯಕ್ಷೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾವಿದ ವಾಸುದೇವ ರಂಗಾಭಟ್‌ ಅಭಿನಂದನ ಭಾಷಣ ಮಾಡಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು ಮುಖ್ಯ ಅತಿಥಿಯಾಗಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಕೆ.ಎನ್‌. ಭಟ್‌ ಅವರಿಗೆ ಶ್ರೀ ಕೇಶವಾನಂದ ಭಾರತೀ ರಾಷ್ಟ್ರೀಯ ನ್ಯಾಯ ಪ್ರಶಸ್ತಿ, ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್‌ ಅವರಿಗೆ ಶ್ರೀ ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿ, ಮಂಗಳೂರು ಶರವು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಅವರಿಗೆ ಯಕ್ಷೋತ್ಸವ ವೈದಿಕ ಪ್ರಶಸ್ತಿ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಚೆನ್ನೈ ತ್ರಿಶೂರ್‌ಬ್ರದರ್ಸ್‌ ಅವರಿಗೆ ಶ್ರೀ ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿ, ಪಂಚ ಮೇಳಗಳ ಸಂಚಾಲಕ ಪಿ. ಕಿಶನ್‌ ಹೆಗ್ಡೆ ಪಳ್ಳಿ ಅವರಿಗೆ ಶ್ರೀ ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ| ಕೀಲಾರು ಪ್ರತಿಷ್ಠಾನದ ಉಪಾಧ್ಯಕ್ಷ ಕೀಲಾರು ರಾಜಾರಾಮ ಭಟ್‌, ಕಾರ್ಯದರ್ಶಿ ಸುಮನಾ ಎಸ್‌. ಭಟ್‌, ಕಲಾಪೋಷಕ ಡಾ| ಟಿ. ಶ್ಯಾಮ ಭಟ್‌, ಮುರಳೀಧರ ಕೆ.ಜಿ. ವೇದಿಕೆಯಲ್ಲಿದ್ದರು. ನ್ಯಾಯವಾದಿ ಕೆ.ಪಿ. ಬಾಲಸುಬ್ರಹ್ಮಣ್ಯ ಮತ್ತು ವೈದಿಕ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್‌ ಅಭಿನಂದನ ಭಾಷಣ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next