Advertisement

ನೆರೆ ಸಂತ್ರಸ್ತರಿಗೆ ಹಸ್ತಾಂತರವಾಗದ ಮನೆ

03:10 PM May 20, 2019 | Team Udayavani |

ಅರಂತೋಡು: ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿಯ ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ವರ್ಷವೊಂದು ಕಳೆದರೂ ಪೂರ್ಣಗೊಂಡಿಲ್ಲ. ಕೆಲಸ ಆಮೆಗತಿಯಲ್ಲಿದ್ದು, ಈ ಮಳೆಗಾಲಕ್ಕೆ ಮುನ್ನ ಹಸ್ತಾಂತರವಾಗುವ ಭರವಸೆ ಇಲ್ಲ.

Advertisement

ಜೋಡು ಪಾಲ, 2ನೇ ಮೊಣ್ಣಂಗೇರಿ ಯಲ್ಲಿ ನೆರೆ, ಭೂಕುಸಿತ ದಿಂದ ಅನೇಕರು ಸಂತ್ರಸ್ತ ರಾಗಿದ್ದರು. ಇವರಲ್ಲಿ ಅರ್ಹ ರಿಗೆ ಮನೆ ಕಟ್ಟಿಕೊಡುವ ಭರವಸೆ ಯನ್ನು ಕೊಡಗು ಜಿಲ್ಲಾಡಳಿತ ನೀಡಿತ್ತು. ಇವುಗಳ ನಿರ್ಮಾಣ ಕೊಡಗಿನ ಆರು ಕಡೆ ನಡೆಯುತ್ತಿದೆ. ಸಂಪಾಜೆ ಮತ್ತು ಜೋಡುಪಾಲ, ಎರಡನೇ ಮೊಣ್ಣಂಗೇರಿಗಳಿಗೆ ಮದೆನಾಡು ಗ್ರಾಮದ ಗೋಳಿಕಟ್ಟೆ ಯಲ್ಲಿ 11 ಎಕ್ರೆ ಜಾಗದಲ್ಲಿ 80 ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ನಿಧಾನಗತಿ
ಗೋಳಿಕಟ್ಟೆಯಲ್ಲಿ ಮನೆಗಳ ಕಾಮಗಾರಿ ಅತ್ಯಂತ ನಿಧಾನಗತಿ ಯಲ್ಲಿದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗುತ್ತದಾದರೂ ಮೇ ಕೊನೆ ವೇಳೆಗೆ ಮನೆ ಪೂರ್ಣವಾಗದು ಎನ್ನುವ ಆತಂಕ ಸಂತ್ರಸ್ತರದು. ವಾರದ ಹಿಂದೆ ಜೋಡುಪಾಲ, ಮೊಣ್ಣಂಗೇರಿ ಪರಿಸರದಲ್ಲಿ ಒಂದು ಭಾರೀ ಮಳೆ ಸುರಿದು ಕಳೆದ ಆಗಸ್ಟ್‌ನ ಸಂಕಷ್ಟವನ್ನು ಸ್ಮರಣೆಗೆ ತಂದಿತ್ತು.

ಎಲ್ಲರಿಗೂ ಇಲ್ಲ
ಗೋಳಿಕಟ್ಟೆಯ 80 ಮನೆಗಳನ್ನು ಎರಡನೇ ಮೊಣ್ಣಂಗೇರಿ, ಜೋಡು ಪಾಲ, ಸಂಪಾಜೆ, ಕಾಟಿಗೇರಿ ಭಾಗದ ಸಂತ್ರಸ್ತರಿಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ಈ ಭಾಗ ದಲ್ಲಿ ಮನೆ ಕಳೆದುಕೊಂಡವರು ನೂರಕ್ಕೂ ಅಧಿಕ ಮಂದಿ ಇದ್ದು, ಪ್ರಥಮ ಪಟ್ಟಿಯಲ್ಲಿದ್ದವರಿಗೆ ಮನೆ ನೀಡಲಾಗುವುದು. ಉಳಿದವರಿಗೆ ತಿಂಗಳ ಮನೆ ಬಾಡಿಗೆ 10,000 ರೂ.ಗಳನ್ನು ಮುಂದುವರಿಸಲಾಗುತ್ತದೆ.

ಬಾಡಿಗೆ ಮನೆ ವಾಸ ಕಡಿಮೆ
ಸರಕಾರ ಬಾಡಿಗೆ ನೀಡುತ್ತಿದ್ದರೂ ಕೆಲವರು ತಮ್ಮ ಹರುಕಲು ಮನೆ ಯಲ್ಲೇ ವಾಸ್ತವ್ಯ ಇದ್ದು, ಬಾಡಿಗೆ ಹಣವನ್ನು ಇತರ ಖರ್ಚುವೆಚ್ಚಕ್ಕೆ ಬಳಸು ತ್ತಿದ್ದಾರೆ. ಕೆಲವರು ಮಾತ್ರ ಬಾಡಿಗೆ ಮನೆಯಲ್ಲಿದ್ದಾರೆ. ಇನ್ನು ಕೆಲವರು ಭೂಕುಸಿತವಾದ ಪ್ರದೇಶದಲ್ಲೇ ಇದ್ದಾರೆ. ಬಾಡಿಗೆ ಹಣ ಪಡೆದು ಅಪಾಯಕಾರಿ ಸ್ಥಳದಲ್ಲೇ ವಾಸ್ತವ್ಯ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಥವರಿಗೆ ಸೂಚನೆ ಕೊಟ್ಟಿದೆ.

Advertisement

ಬಾಡಿಗೆ ಮನೆ ಇಲ್ಲ
ಬಾಡಿಗೆ ಮನೆ ದೊರೆಯುತ್ತಿಲ್ಲ. ದೊರೆತರೂ ಜಮೀನು, ಕೆಲಸದ ಸ್ಥಳಕ್ಕೆ ದೂರ. ಗೋಳಿಕಟ್ಟೆ ತುಂಬಾ ಒಳಭಾಗವಾಗಿದ್ದು, ಅಲ್ಲಿ ಸರಕಾರಿ ಬಸ್ಸು ಮತ್ತು ಇತರ ಖಾಸಗಿ ವಾಹನ ಸಂಚಾರ ಇಲ್ಲ ಎಂಬ ಅಸಮಾಧಾನ ಸಂತ್ರಸ್ತರದು.

ಶಾಲೆಯಲ್ಲಿ ವಾಸ
ನೆರೆ ಸಂತ್ರಸ್ತ 5 ಕುಟುಂಬಗಳ 20 ಮಂದಿ ಸದಸ್ಯರು ಈಗಲೂ ಕಲ್ಲುಗುಂಡಿ ಪ್ರಾ. ಶಾಲೆಯಲ್ಲಿ ವಾಸವಿದ್ದಾರೆ. ಈ ಪೈಕಿ ಅರ್ಹ ಕುಟುಂಬಕ್ಕೆ ಮಾತ್ರ ಮನೆ ಬಾಡಿಗೆ ನೀಡಲಾಗುತ್ತಿದೆ. ಮಳೆಗಾಲದ ಮೊದಲು ಮನೆ ನಿರ್ಮಾಣ ವಾಗದಿದ್ದರೆ ಮತ್ತು ಎಲ್ಲರಿಗೂ ಮನೆ ದೊರೆಯಲು ಅವಕಾಶ ಇಲ್ಲದಿರುವುದರಿಂದ ಈ ಮಳೆಗಾಲವೂ ಪುನರ್ವಸತಿ ಕೇಂದ್ರ ತೆರೆಯುವ ಸಾಧ್ಯತೆ ಇದೆ.

ಶೀಘ್ರ ಹಸ್ತಾಂತರ
ಕೊಡಗಿನ ಕೆಲವು ಭಾಗಗಳಲ್ಲಿ ಈಗಾಗಲೇ ನಿರಾಶ್ರಿತರಿಗೆ ಪುನರ್ವಸತಿ ಕಾಮಗಾರಿ ನಡೆಯುತ್ತಿದೆ. ಒಂದು ಕಡೆ ಪೂರ್ಣಗೊಂಡಿದೆ. ಮದೆನಾಡು ಪ್ರದೇಶದ ಗೋಳಿಕಟ್ಟೆಯಲ್ಲಿ 80 ಮನೆಗಳ ನಿರ್ಮಾಣ ಕಾರ್ಯ ಕೊನೆಯ ಹಂತ ತಲುಪಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಜಿಲ್ಲಾಡಳಿತ ಅದನ್ನು ಫ‌ಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯವನ್ನು ಜರೂರಾಗಿ ಮಾಡಲಾಗುವುದು.
ಜವರೇಗೌಡ, ಉಪವಿಭಾಗಾಧಿಕಾರಿ, ಕೊಡಗು

ಮನೆ ನಿರ್ಮಾಣ ಕೆಲಸ ಬಹಳ ನಿಧಾನಗತಿಯಲ್ಲಿ ನಡೆಯುತ್ತಿದೆ. ನನ್ನ ಹೆಸರು ಎರಡನೇ ಲಿಸ್ಟ್‌ನಲ್ಲಿದೆ. ನಮಗೂ ಬೇಗನೆ ಮನೆ ದೊರೆಯಬೇಕು.
ರಾಮಕೃಷ್ಣ, ಜೋಡುಪಾಲ ಸಂತ್ರಸ್ತ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next