Advertisement

ನಿರಾಶ್ರಿತರಲ್ಲಿ ಭರವಸೆ ತುಂಬಿದ ದೀಪಾವಳಿ

09:52 AM Nov 10, 2018 | Team Udayavani |

ಅರಂತೋಡು: ಕೊಡಗು ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕರು ನಿರಾಶ್ರಿತರಾದ ಹಲವರು ದ.ಕ. ಸಂಪಾಜೆ ಪರಿಹಾರ ಕೇಂದ್ರದಲ್ಲಿ ಇನ್ನೂ ಆಶ್ರಯ ಪಡೆದಿದ್ದು, ತಮ್ಮ ನೋವನ್ನು ನುಂಗಿ, ದೀಪಾವಳಿಯನ್ನು ಆಚರಿಸಿ ಸಂಭ್ರಮಿಸಿದರು.

Advertisement

ನೆರೆಯಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡು ಸಂಕಷ್ಟಗಳಲ್ಲಿ ಜೀವನ ಕಳೆಯುವಂತಾಗಿದೆ. ನಿರಾಶ್ರಿತರ ಪುನರ್ವಸತಿ ಕುರಿತು ಸರಕಾರ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ, ನಿರೀಕ್ಷೆಯಲ್ಲೇ ಕಾಲ ನೂಕುತ್ತಿದ್ದಾರೆ. ಕಳೆದ ವರ್ಷದ ವರೆಗೂ ಮನೆಗಳಿಗೆ ಬಂಧು-ಮಿತ್ರರನ್ನು ಆಹ್ವಾನಿಸಿ ಇವರೆಲ್ಲ ದೀಪಾವಳಿ ಆಚರಿಸುತ್ತಿದ್ದರು. ಈ ದೀಪಾವಳಿಯಲ್ಲಿ ತಮಗೆ ಬೆಳಕಿಲ್ಲ, ಬರೀ ಕತ್ತಲು ಎಂದು ಕೊರಗುತ್ತಿದ್ದರು.

ಮರಳಿತು ಸಂಭ್ರಮ
ಜೀವನೋಪಾಯಕ್ಕಾಗಿ ಬೇರೆ ಊರುಗಳಿಗೆ ಕೆಲಸ ಅರಸಿ ತೆರಳಿದ್ದ ಹಲವು ನಿರಾಶ್ರಿತರು ಪರಿಹಾರ ಕೇಂದ್ರಕ್ಕೆ ಮರಳಿದರು. ಶಾಲೆ – ಕಾಲೇಜಿಗೆ ರಜೆಯಿದ್ದ ಕಾರಣ ವಿದ್ಯಾರ್ಥಿಗಳೂ ಹೆತ್ತವರನ್ನು ಸೇರಿಕೊಂಡರು. ನಿರಾಶ್ರಿತರ ಕೇಂದ್ರದ ಉಸ್ತುವಾರಿ ವಹಿಸಿರುವ ಅವಿನಾಶ್‌ ಕಡೆಪಾಲ ದೀಪಾವಳಿಯನ್ನು ಆಚರಿಸುವ ಸುದ್ದಿಯನ್ನು ನೀಡಿದರು. ನಿರಾಶ್ರಿತರ ಮುಖದಲ್ಲಿ ಮಂದಹಾಸ ಚಿಮ್ಮಿತು. ಮಕ್ಕಳು ಕೇಕೆ ಹಾಕಿ ಕುಣಿದರು. ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ತೊಟ್ಟು ಸಂಭ್ರಮಮಿಸಿದರು. ಪಟಾಕಿ ಸಿಡಿಸಿ, ನಕ್ಷತ್ರ ಕಡ್ಡಿಗಳನ್ನು ಉರಿಸಿದರು. ಸಿಹಿ ತಿಂಡಿ – ತಿನಿಸು ತಿಂದರು.

ಕುಟುಂಬದಂತೆ ಆಚರಣೆ
ಸಂಘ – ಸಂಸ್ಥೆಗಳು, ಜನಪ್ರತಿನಿಧಿಗಳು ಭಾಗಿಯಾಗಿ, ನಿರಾಶ್ರಿತರಿಗೆ ಸಹಕಾರ ನೀಡಿದರು. ಜೋಡುಪಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಮೀನು, ಮನೆಗಳನ್ನು ಕಳೆದುಕೊಂಡು ಸಂತ್ರಸ್ತ ರಾದವರು ನಾವು. ಮನಸ್ಸಿನಲ್ಲಿ ತುಂಬ ನೋವಿದೆ. ಸರಕಾರ ಈ ತನಕ ನಮ್ಮ ಭವಿಷ್ಯದ ದೃಷ್ಟಿಯಿಂದ ಯಾವುದೇ ಶಾಶ್ವತ ಯೋಜನೆಯ ಕುರಿತು ಅಧಿಕೃತ ಘೋಷಣೆ ಮಾಡಿಲ್ಲ. ಆದರೂ ಪರಿಹಾಕ ಕೇಂದ್ರದಲ್ಲಿ ಇರುವ ಎಲ್ಲರೂ ಸೇರಿಕೊಂಡು ಒಂದು ಕುಟುಂಬದಂತೆ ದೀಪಾವಳಿ ಆಚರಿಸಿ, ಸಂತೋಷ ಪಟ್ಟಿದ್ದೇವೆ ಎಂದು ನಿರಾಶ್ರಿತೆ ಸುಜಾತಾ ಎ.ಬಿ. ಪ್ರತಿಕ್ರಿಯಿಸಿದ್ದಾರೆ.

ಹೊಸ ಅನುಭವ
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅನೇಕ ಜಾತಿಯ ಜನರಿದ್ದಾರೆ. ನಾವೆಲ್ಲ ಒಟ್ಟಾಗಿ ಒಂದು ಕುಟುಂಬದಂತೆ ದೀಪಾವಳಿ ಆಚರಣೆ ಮಾಡಿದ್ದೇವೆ. ಇದು ನನ್ನ ಜೀವನದ ಹೊಸ ಅನುಭವ. ತುಂಬಾ ಸಂತೋಷ ಪಟ್ಟೆ.
– ಶೇಷಪ್ಪ
ಎರಡನೇ ಮೊಣ್ಣಂಗೇರಿ ನಿರಾಶ್ರಿತ 

Advertisement

ನೋವು ಮರೆಸಿದ ಹಬ್ಬ
ದ.ಕ ಸಂಪಾಜೆ ಪರಿಹಾರ ಕೇಂದ್ರದಲ್ಲಿ ವಿಶೇಷ ರೀತಿಯಲ್ಲಿ ಸುಡುಮದ್ದು, ಪಟಾಕಿ ಸಿಡಿಸಿ, ಕೇಂದ್ರದ ಆವರಣದಲ್ಲಿ ದೀಪ ಹಚ್ಚಿ ದೀಪಾವಳಿಯನ್ನು ಆಚರಿಸಿದ್ದೇವೆ. ಸಂಘ – ಸಂಸ್ಥೆಗಳು ನಿರಾಶ್ರಿತರಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಿವೆ. ನೋವನ್ನು ಮರೆತು ಸಂತೋಷಪಟ್ಟಿದ್ದಾರೆ.
– ಅವಿನಾಶ್‌ ಕಡೆಪಾಲ
ದ.ಕ. ಸಂಪಾಜೆ ನಿರಾಶ್ರಿತರ
ಪರಿಹಾರ ಕೇಂದ್ರದ ಉಸ್ತುವಾರಿ

 ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next