Advertisement

ಸಂಪಾಜೆ-ಮಾಣಿ: ಒಂದೇ ವರ್ಷ 29 ಸಾವು

10:30 PM Oct 21, 2019 | mahesh |

ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ-ಸಂಪಾಜೆ ನಡುವೆ ಕಳೆದ ಒಂದು ವರ್ಷದ ಅವಧಿಯಲ್ಲಿ ರಸ್ತೆ ಅಪಘಾತದಲ್ಲಿ ಜೀವ ತೆತ್ತವರು 29ಕ್ಕೂ ಅಧಿಕ ಮಂದಿ.  ಸಂಪಾಜೆ -ಸುಳ್ಯ -ಜಾಲಸೂರು-ಕುಂಬ್ರ -ಪುತ್ತೂರು -ಕಬಕ -ಮಾಣಿ ನಡುವಿನ ಅಲ್ಲಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿದೆ. ಇದರಿಂದ ರಸ್ತೆಯಲ್ಲಿನ ಸಂಚಾರ ಸುರಕ್ಷತೆ ಬಗ್ಗೆ ಪ್ರಯಾಣಿಕರಿಗೆ ಭೀತಿ ಆವರಿಸಿದೆ.

Advertisement

1 ವರ್ಷ; 29 ಸಾವು
ಅಂಕಿ-ಅಂಶದ ಪ್ರಕಾರ ಕಳೆದ ಒಂದು ವರ್ಷದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಕನಿಷ್ಠ 29 ಮಂದಿ ಜೀವ ಕಳೆದುಕೊಂಡಿದ್ದಾರೆ. 44ಕ್ಕೂ ಅಧಿಕ ಅಪಘಾತ ಪ್ರಕರಣದಲ್ಲಿ 38ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇತ್ತೀಚಿನ ಮೂರೇ ತಿಂಗಳಲ್ಲಿ ನಾಲ್ಕು ಅಪಘಾತಗಳು ಸಂಭವಿಸಿ, 14 ಮಂದಿ ಸಾವಿಗೀಡಾಗಿದ್ದಾರೆ.

ಈ ಅಪಘಾತ ಪ್ರಮಾಣ ಸುಳ್ಯ- ಪುತ್ತೂರು ವ್ಯಾಪ್ತಿಯಲ್ಲೇ ಗರಿಷ್ಠ, ಜು. 14ರಂದು ಅರಂಬೂರು ಬಳಿ ಕಾರು-ಬಸ್‌ ನಡುವೆ ಢಿಕ್ಕಿ ಸಂಭವಿಸಿ ರಾಮ ನಗರ ಜಿಲ್ಲೆಯ ಚೆನ್ನ ಪಟ್ಟಣ ತಾಲೂಕಿನ ಕೂಲೂರಿನ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರು.

ಸೆ. 2ರಂದು ಕಾವು ಸಮೀಪದ ಮಡ್ಯಂಗಳ ಬಳಿ ಕಾರು ಕೆರೆಗೆ ಉರುಳಿ ಮಡಿಕೇರಿ ಸನಿಹದ ಶುಂಠಿಕೊಪ್ಪದ ತಂದೆ, ತಾಯಿ, ಇಬ್ಬರು ಮಕ್ಕಳು ಬಲಿಯಾಗಿದ್ದರು. ಅ. 1ರಂದು ಅಡಾರು ಸಮೀಪದ ಮಾವಿನಕಟ್ಟೆ ಬಳಿ ಲಾರಿ ಮತ್ತು ಕಾರು ಅಪಘಾತ ಸಂಭವಿಸಿ ಒಂದೇ ಮನೆಯ ನಾಲ್ವರು ಅಸುನೀಗಿದ್ದಾರೆ. ಅ. 11ರಂದು ಕೇರಳ ಬಸ್‌ ಮತ್ತು ಕಾರು ನಡುವೆ ಢಿಕ್ಕಿ ಸಂಭವಿಸಿ ಪುತ್ತೂರು ತಾಲೂಕಿನ ಕಬಕ ಪರಿಸರದ ಸಂಬಂಧಿಕರಾದ 3 ಮಂದಿ, ಅ. 19ರಂದು ನಗರದ ಹಳೆಗೇಟಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು.

ಅತಿವೇಗ ಕಾರಣ
ಅಪಘಾತ ಪ್ರಕರಣಕ್ಕೆ ಮುಖ್ಯವಾಗಿ ಅತಿ ವೇಗ ಹಾಗೂ ಅಜಾಗರೂಕತೆ ಚಾಲನೆ ಕಾರಣ. ಉಳಿದ ರಾಷ್ಟ್ರೀಯ ಹೆದ್ದಾರಿಗಳನ್ನು ಹೋಲಿಸಿದರೆ ಮಾಣಿ-ಮೈಸೂರು ರಸ್ತೆ ಸಂಚಾರಕ್ಕೆ ಉತ್ತಮ ಸ್ಥಿತಿಯಲ್ಲಿದೆ. ಇಲ್ಲಿನ ಅಪಘಾತಕ್ಕೆ ಅತಿವೇಗದ ವಾಹನ ಚಾಲನೆ, ತಿರುವ ರಸ್ತೆಯಲ್ಲಿ ಓವರ್‌ಟೇಕ್‌, ರಸ್ತೆ ನಡು ಭಾಗದಲ್ಲಿ ಸಂಚಾರ, ಹೆಲ್ಮೆಟ್‌-ಸೀಟ್‌ ಬೆಲ್ಟ್ ರಹಿತ ಸಂಚಾರ, ಮೊಬೈಲ್‌ ಬಳಕೆ ಮಾಡುತ್ತಲೇ ಚಾಲನೆ, ಓವರ್‌ ಲೋಡ್‌ ಹೀಗೆ ಹಲವು ಕಾರಣಗಳು ಎನ್ನುತ್ತದೆ ವರದಿ. ಸವಾರರು ಸ್ವಯಂ ಎಚ್ಚರ ವಹಿಸುವ ಜತೆಗೆ ವಾಹನ ಚಾಲನೆ ವೇಳೆ ನಿಯಮ ಉಲ್ಲಂ ಸುತ್ತಿರುವ ಬಗ್ಗೆ ಅಲ್ಲಲ್ಲಿ ನಿರಂತರ ತಪಾಸಣೆ ನಡೆಸಿ ದಂಢ ವಿಧಿಸಿ ಎಚ್ಚರಿಕೆ ನೀಡುವ ಅಗತ್ಯ ಇದೆ.

Advertisement

ಬ್ಯಾರಿಕೇಡ್‌ ಹೊಸ ಸವಾಲು
ಅಪಘಾತ ಸಂಭವಿಸಿದ ಸ್ಥಳದಲ್ಲಿ ಬ್ಯಾರಿಕೇಡ್‌ ಅಳವಡಿಸಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಂಡರೂ ಮತ್ತದೇ ಸ್ಥಳದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಅಲ್ಲಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ಗಳೂ ಅಪಘಾತಕ್ಕೆ ಕಾರಣವಾಗುವ ಲಕ್ಷಣ ಕಂಡು ಬಂದಿದೆ. ಅರಂಬೂರಿನಿಂದ ಪುತ್ತೂರು ತನಕ 10ಕ್ಕೂ ಅಧಿಕ ಕಡೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಇವುಗಳ ಅರಿವಿಲ್ಲದೆ ಸಂಚಾರದ ಸಂದರ್ಭ ಇದನ್ನು ತಪ್ಪಿಸಲು ಯತ್ನಿಸುವ ವಾಹನ ಅಪಘಾತಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ರಾತ್ರಿ ವೇಳೆ ಬ್ಯಾರಿಕೇಡ್‌ ತೆರವು ಮಾಡುತ್ತಿದೆ.

ದುರಸ್ತಿಗೆ 26 ಕೋ.ರೂ. ಅನುದಾನ
ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ – ಜಾಲಸೂರು ಹಾಗೂ ಜಾಲಸೂರು – ಸಂಪಾಜೆ ತನಕ ಕ್ರಮವಾಗಿ 14 ಕೋಟಿ ರೂ. ಮತ್ತು 12 ಕೋಟಿ ರೂ. ಅನುದಾನದಲ್ಲಿ ನಿಯತಕಾಲಿಕ ನಿರ್ವಹಣ ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಮರು ಡಾಮರು, ಹೆದ್ದಾರಿ ಪಕ್ಕದ ಅಪಾಯಕಾರಿ ಹೊಂಡ, ಬಾವಿ, ಕೆರೆ ಮುಚ್ಚುವುದು, ತಡೆಗೋಡೆ ನಿರ್ಮಾಣ, ಸೂಚನ ಫಲಕ ಅಳವಡಿಕೆ, ಸೆಂಟರ್‌ ಮಾರ್ಕಿಂಗ್‌, ರಸ್ತೆ ಭುಜ ತೆರವು, ಅಪಾಯಕಾರಿ ತಿರುವು ನೇರಗೊಳಿಸುವ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. ಹೆದ್ದಾರಿ ಇಲಾಖೆ ಸಂಪ್ಯ, ಸಂಟ್ಯಾರು, ಕುಂಬ್ರ ಸಮೀಪದ ಪರ್ಪುಂಜ, ಶೇಖಮಲೆ ಮತ್ತು ಅಮಿನಡ್ಕ ಸೇತುವೆಗಳನ್ನು ಅಪಘಾತ ವಲಯ ಎಂದು ಪರಿಗಣಿಸಿದ್ದು, 5 ಸೇತುವೆಗಳ ಅಭಿವೃದ್ಧಿಗೆ ಒಟ್ಟು 11.50 ಕೋಟಿ ರೂ. ಅನುದಾನದ ಪ್ರಸ್ತಾವನೆ ಸಲ್ಲಿಸಿದೆ.

ಸಂಚಾರ ಠಾಣೆ ಕೊರತೆ
ಸಂಪಾಜೆ – ಮಾಣಿ ತನಕ ರಸ್ತೆಯಲ್ಲಿ ಪುತ್ತೂರು ನಗರದಲ್ಲಿ ಮಾತ್ರ ಸಂಚಾರ ಠಾಣೆ ಇದೆ. ಸುಳ್ಯ ತಾಲೂಕಿನಲ್ಲಿ ಸಂಚಾರ ಠಾಣೆ ಇಲ್ಲ. ಹೀಗಾಗಿ ಅಪಘಾತ ಸಂದರ್ಭ ತತ್‌ಕ್ಷಣ ಕಾರ್ಯನಿರ್ವಹಣೆಗೆ ತೊಂದರೆ ಉಂಟಾಗುತ್ತದೆ. ಹಲವು ವರ್ಷಗಳ ಹಿಂದೆ ಸುಳ್ಯಕ್ಕೆ ಸಂಚಾರ ಠಾಣೆಗೆ ಬೇಡಿಕೆ ಸಲ್ಲಿಸಿದ್ದರೂ ಅದು ಈ ತನಕ ಈಡೇರಿಲ್ಲ. ಮೂರು ತಿಂಗಳಲ್ಲಿ ಸುಳ್ಯ ವ್ಯಾಪ್ತಿಯಲ್ಲಿ 12ಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಜೀವ ತೆತ್ತಿದ್ದಾರೆ.

ಒಂದು ತಿಂಗಳು, ಒಂದೇ ಸ್ಥಳ: 7 ಸಾವು
ಜಾಲಸೂರು ಗ್ರಾಮದ ಅಡಾRರು ಮಾವಿನಕಟ್ಟೆ ಬಳಿ ಒಂದು ತಿಂಗಳಲ್ಲಿ ನಾಲ್ಕು ಅಪಘಾತ ಸಂಭವಿಸಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಪ್ರತ್ಯೇಕ ಅವಘಡದಲ್ಲಿ ಕೊಡಗಿನ ನಾಲ್ವರು, ಕಬಕದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅ. 17, 18ರಂದು ಕೆಲವು ಗಂಟೆಗಳ ಅಂತರದಲ್ಲಿ ಪ್ರತ್ಯೇಕ ಅಪಘಾತಗಳು ಸಂಭವಿಸಿ ಪ್ರಯಾಣಿಕರು ಅದೃಷ್ಟವಶಾತ್‌ ಪಾರಾಗಿದ್ದರು.

ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ
ಕರಪತ್ರ ಹಂಚಿ ಜಾಗೃತಿ, ಅಪಘಾತ ವಲಯ ಗುರುತಿಸಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ರಸ್ತೆ ಸರ್ವೆ ನಡೆಸಿ ಸುಧಾರಣೆಗೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಧರ್ಮಗುರುಗಳ ಮೂಲಕ ಸಂಚಾರ ಸುರಕ್ಷತೆ ಬಗ್ಗೆ ಜನರಿಗೆ ಮಾಹಿತಿ ನೀಡಲು ತಿಳಿಸಿದ್ದೇವೆ.
– ಹರೀಶ್‌ ಎಂ.ಆರ್‌. ಉಪನಿರೀಕ್ಷಕ, ಸುಳ್ಯ ಠಾಣೆ

ಅನುದಾನ ಮಂಜೂರು; ಶೀಘ್ರ ಕಾಮಗಾರಿ
ರಸ್ತೆ ಉದ್ದಕ್ಕೂ ಸಂಚಾರ ಸುರಕ್ಷತೆ ಬಗ್ಗೆ ಫಲಕ ಅಳವಡಿಸಲಾಗಿದೆ. ಜತೆಗೆ ಮಾಣಿ-ಕುಶಾಲನಗರ ತನಕದ ವ್ಯಾಪ್ತಿಯಲ್ಲಿ ರಸ್ತೆ ಯೋಗ್ಯ ಸ್ಥಿತಿಯಲ್ಲಿದೆ. ಅತಿ ವೇಗ, ನಿಯಮ ಮೀರಿದ ಚಾಲನೆ ಅಪಘಾತಕ್ಕೆ ಕಾರಣವಾಗುತ್ತಿದೆ. ಮಾಣಿ-ಸಂಪಾಜೆ ತನಕ ನಿಯತಕಾಲಿಕ ನಿರ್ವಹಣೆ ಅಡಿ ರಸ್ತೆ ದುರಸ್ತಿ ಅನುದಾನಕ್ಕೆ ಮಂಜೂರಾತಿ ಸಿಕ್ಕಿದ್ದು, ಮಳೆ ನಿಂತ ತತ್‌ಕ್ಷಣ ಕಾಮಗಾರಿ ಆರಂಭಿಸಲಾಗುವುದು.
-ಸುಬ್ಬರಾಮ ಹೊಳ್ಳ , ಇಇ, ರಾಷ್ಟ್ರೀಯ ಹೆದ್ದಾರಿ ವಿಭಾಗ

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next