ಮುಂಬಯಿ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಿಬಿಐ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿದ್ದಾರೆ.
ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಸಿಲುಕಿಸದಿರಲು 25 ಕೋಟಿ ರೂಪಾಯಿ ಲಂಚಕ್ಕೆ ವಾಂಖೆಡೆ ಬೇಡಿಕೆ ಇಟ್ಟಿದ್ದಾರೆ ಎಂದು ಎಫ್ ಐಆರ್ ಆರೋಪಿಸಿದೆ. ವಾಂಖೆಡೆ ಅವರ ಮನವಿಯು ಸಿಬಿಐನ ಎಫ್‌ಐಆರ್‌ಗೆ ಸಂಬಂಧಿಸಿದ ಬಲವಂತದ ಕ್ರಮದಿಂದ ರಕ್ಷಣೆಯನ್ನು ಬಯಸುತ್ತದೆ.
ಅರ್ಜಿಯನ್ನು ಹೈಕೋರ್ಟ್‌ನ ರಜಾಕಾಲದ ಪೀಠದ ಮುಂದೆ ಸಲ್ಲಿಸಲಾಗಿದ್ದು, ನ್ಯಾಯಾಲಯವು ಶುಕ್ರವಾರದ ನಂತರ ಅರ್ಜಿಯ ವಿಚಾರಣೆಯನ್ನು ನಡೆಸಲಿದೆ. ಸಿಬಿಐ ಇತ್ತೀಚೆಗೆ ಇದೇ ಪ್ರಕರಣದಲ್ಲಿ ವಾಂಖೆಡೆ ಮತ್ತು ಇತರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
ಹಲವು ಬಾರಿ ವಿದೇಶ ಪ್ರವಾಸ
ಎನ್‌ಸಿಬಿ ಸಲ್ಲಿಸಿದ ವರದಿಯ ಪ್ರಕಾರ, ವಾಂಖೆಡೆ ಅವರು ಕುಟುಂಬದೊಂದಿಗೆ ಹಲವಾರು ವಿದೇಶಿ ಪ್ರವಾಸಗಳನ್ನು ಮಾಡಿದ್ದಾರೆ ಮತ್ತು ಮುಂಬೈ ನಲ್ಲಿ ಅಪಾರ ಆಸ್ತಿಯನ್ನು ಹೊಂದಿದ್ದಾರೆ. 2017 ರಿಂದ 2021 ರ ನಡುವೆ ವಾಂಖೆಡೆ ಅವರು ತಮ್ಮ ಕುಟುಂಬದೊಂದಿಗೆ ಆರು ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. ಯುಕೆ, ಐರ್ಲೆಂಡ್, ಪೋರ್ಚುಗಲ್, ದಕ್ಷಿಣ ಆಫ್ರಿಕಾ ಮತ್ತು ಮಾಲ್ಡೀವ್ಸ್‌ಗೆ ಕುಟುಂಬದೊಂದಿಗೆ ಭೇಟಿ ನೀಡಿ ಅಲ್ಲಿ ಅವರು 55 ದಿನಗಳ ಕಾಲ ತಂಗಿದ್ದರು ಎಂದು ಎಂದು ಎನ್‌ಸಿಬಿ ವರದಿ ಹೇಳುತ್ತದೆ.