ಮುಂಬೈ: ಮಾಜಿ ಎನ್ ಸಿಬಿ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್ ಸಂಬಂಧ ಸಿಬಿಐ ವಿಚಾರಣೆ ಎದುರಿಸುತ್ತಿರುವ ಸಮೀರ್ ಅವರಿಗೆ ಮತ್ತು ಅವರ ಕುಟುಂಬಕ್ಕೆ ದಾವೂದ್ ಕಡೆಯಿಂದ ಬೆದರಿಕೆ ಬಂದಿದೆ ಎಂದು ಹೇಳಿದ್ದಾರೆ.
ನಕಲಿ ಟ್ವಿಟ್ಟರ್ ಖಾತೆಗಳಿಂದ ತನಗೆ ಬೆದರಿಕೆ ಬರುತ್ತಿದೆ ಎಂದು ಸಮೀರ್ ಪೊಲೀಸರಿಗೆ ತಿಳಿಸಿದ್ದಾರೆ. ತನ್ನ ಅಥವಾ ತನ್ನ ಕುಟುಂಬದ ಮೇಲೆ ದಾಳಿಯಾದರೆ ಯಾರು ಹೊಣೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.
ಕ್ರೂಸ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸದಿರಲು 25 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಸಮೀರ್ ವಾಂಖೆಡೆ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ.
ಈ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನದ ಕುರಿತು ನಟ ಶಾರುಖ್ ಖಾನ್ ಅವರೊಂದಿಗೆ ಮಾತುಕತೆ ನಡೆಸಿ ಸಮೀರ್ ವಾಂಖೆಡೆ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ಸಿಬಿಐ ಕ್ರಮದ ವಿರುದ್ಧ ಸಮೀರ್ ವಾಂಖೆಡೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ಮೇ 22ರವರೆಗೆ ಅವರಿಗೆ ಬಂಧನದಿಂದ ರಕ್ಷಣೆ ನೀಡಲಾಗಿದೆ.