Advertisement

ಈ ವರ್ಷವೂ ಅದೇ ರಾಗ! ಭತ್ತ ಮಾರಿದ ಮೇಲೆ ಸರಕಾರಿ ಖರೀದಿ ಕೇಂದ್ರ ಸ್ಥಾಪನೆ

12:32 AM Oct 11, 2022 | Team Udayavani |

ಕುಂದಾಪುರ: ಕರಾವಳಿ ಭಾಗದ ರೈತರಿಗೆ ಸರಕಾರದ ಬೆಂಬಲ ಬೆಲೆ ಊಟಕ್ಕಿಲ್ಲದ ಉಪ್ಪಿನಕಾಯಿ ಯಾಗಿದೆ. ಕರಾವಳಿಯ ಸಂಸದರೇ ಕೇಂದ್ರ ಕೃಷಿ ಸಚಿವರಾ ಗಿದ್ದರೂ ಭತ್ತದ ಕಟಾವು ಮುಗಿದ ಮೇಲೆ ಖರೀದಿ ಕೇಂದ್ರ ಆರಂಭಿ ಸುವ ಪರಿಪಾಠ ಈ ಬಾರಿಯೂ ಬದಲಾಗುವ ಲಕ್ಷಣ ಗೋಚರಿಸುತ್ತಿಲ್ಲ.

Advertisement

ಪ್ರತೀ ಬಾರಿ ಈ ಸಮಸ್ಯೆ ಇದ್ದದ್ದೇ.ಹಲವು ಬಾರಿ ಮುಂಚಿತವಾಗಿ ಖರೀದಿ ಕೇಂದ್ರ ತೆರೆಯುವಂತೆ ಜನಪ್ರತಿನಿಧಿ ಗಳನ್ನು ಒತ್ತಾಯಿಸಿದರೂ ಅಷ್ಟು ಪ್ರಯೋಜನವಾಗಿಲ್ಲ.ಹಾಗಾಗಿ ಇತ್ತೀಚಿನ 5 ವರ್ಷಗಳಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಡಿ ಒಂದೇ ಒಂದು ಕೆಜಿ ಭತ್ತವನ್ನೂ ರೈತರು ಮಾರಿಲ್ಲ. ಕೇಂದ್ರ ಸರಕಾರವು ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರಗಳ ಮೂಲಕ ಖರೀದಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸುತ್ತದೆ. ಈ ವರ್ಷ ಈ ಆದೇಶ ಇನ್ನೂ ಬಿಡುಗಡೆಯಾಗಬೇಕಿದೆ.

5 ವರ್ಷಗಳಲ್ಲಿ ಖರೀದಿಯೇ ಆಗಿಲ್ಲ
ದ.ಕ. ಜಿಲ್ಲೆಯ ಮಂಗಳೂರು, ಮೂಡುಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ ಹಾಗೂ ಕಾರ್ಕಳದಲ್ಲಿ ಪ್ರತೀ ವರ್ಷ ಬೆಂಬಲ ಬೆಲೆಯಡಿ ಭತ್ತದ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಆದರೆ ದ.ಕ.ದಲ್ಲಿ 2015ರಿಂದ ಈವರೆಗೆ ಎಲ್ಲಿಯೂ ಒಂದು ಕೆಜಿ ಭತ್ತ ಸಹ ಖರೀದಿಯಾಗಿಲ್ಲ. ಉಡುಪಿಯಲ್ಲಿ 2015-16ರಲ್ಲಿ 6 ರೈತರಿಂದ 168 ಕ್ವಿಂಟಾಲ್‌, 20161-17ರಲ್ಲಿ 29 ರೈತರಿಂದ 68 ಕ್ವಿಂಟಾಲ್‌ ಖರೀದಿಸಲಾಗಿತ್ತು. 2017ರಿಂದ ಈವರೆಗೆ ಒಂದು ಕೆಜಿ ಭತ್ತವೂ ಖರೀದಿ ಕೇಂದ್ರಕ್ಕೆ ಬಂದಿಲ್ಲ.

ವಿಳಂಬವೇ ಕಾರಣ
ಖರೀದಿ ಕೇಂದ್ರಕ್ಕೆ ರೈತರು ಭತ್ತವನ್ನು ತರದಿರಲು ಬಹುತೇಕ ಕಟಾವು ಮುಗಿದ ಬಳಿಕ ಖರೀದಿ ಕೇಂದ್ರ ಆರಂಭಿಸುವುದೇ ಪ್ರಮುಖ ಕಾರಣ. ಅದರಲ್ಲೂ ಕುಂದಾಪುರ, ಬೈಂದೂರು ಭಾಗದಲ್ಲಿ ಹಿಂಗಾರಿನಲ್ಲಿ ಸೇವಂತಿಗೆ, ಕಲ್ಲಂಗಡಿ ಬೆಳೆಯುವವರು ಬೇಗ ಭತ್ತ ಕಟಾವು ಮಾಡುತ್ತಾರೆ. ಕಳೆದ ಬಾರಿ ಡಿಸೆಂಬರ್‌ನಲ್ಲಿ ಬೆಂಬಲ ಬೆಲೆ ಘೋಷಿಸಿತ್ತು. ಕಟಾವು ಮುಗಿದ ಬಳಿಕ ಭತ್ತವನ್ನು ದಾಸ್ತಾನಿಟ್ಟರೆ ತೂಕ ಕಳೆದುಕೊಂಡೀತೆಂದು ಹೆಚ್ಚಿನವರು ಕಡಿಮೆ ದರಕ್ಕೆ ಅಕ್ಕಿ ಗಿರಣಿ, ಅಂಗಡಿಗಳಿಗೆ ಮಾರುತ್ತಾರೆ. ಜತೆಗೆ ಖರೀದಿ ಕೇಂದ್ರ ತಾಲೂಕು ಮಟ್ಟದಲ್ಲಿ ಮಾತ್ರ ತೆರೆಯಲಾಗುತ್ತದೆ. ಕನಿಷ್ಠ ಹೋಬಳಿ ಮಟ್ಟದಲ್ಲಿಯೂ ಖರೀದಿಸದಿರುವುದು ಮತ್ತೂಂದು ಸಮಸ್ಯೆ. ಯಾಕೆಂದರೆ ತಾಲೂಕು ಕೇಂದ್ರಕ್ಕೆ ಸಾಗಾಟ ವೆಚ್ಚವೇ ದುಬಾರಿ.

ಶೀಘ್ರ ಆರಂಭಿಸಿ
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಸೆಪ್ಟಂಬರ್‌ ಕೊನೆಯ ವಾರದಿಂದ ಭತ್ತದ ಕಟಾವು ಆರಂಭವಾಗುತ್ತದೆ. ಆದರೆ ಈ ಬಾರಿ ವಾತಾವರಣದ ಏರುಪೇರಿನಿಂದಾಗಿ ಬೆಳೆ ವಿಳಂಬವಾಗಿದ್ದು, ಆದರೂ ಕೆಲವೆಡೆ ಕಟಾವು ಆರಂಭವಾಗಿದೆ. ಅಕ್ಟೋಬರ್‌ ಕೊನೆಯ ವಾರ ಹಾಗೂ ನವೆಂಬರ್‌ ಆರಂಭದ ವೇಳೆಗೆ ಮುಂಗಾರು ಹಂಗಾಮಿನ ಬಹುತೇಕ ಕಟಾವು ಮುಗಿಯಲಿದೆ. ಆದರೆ ಸರಕಾರ ಇನ್ನೂ ಭತ್ತದ ಖರೀದಿ ಕೇಂದ್ರ ಆರಂಭಿಸಿಲ್ಲ. ಆದ್ದರಿಂದ ಆದಷ್ಟು ಶೀಘ್ರವೇ ಭತ್ತದ ಖರೀದಿ ಕೇಂದ್ರವನ್ನು ಆರಂಭಿಸಬೇಕೆಂಬುದು ರೈತರ ಆಗ್ರಹ.

Advertisement

ರಾಜ್ಯ ಸರಕಾರಕ್ಕೆ ಸೂಚನೆ
ಭತ್ತ ಖರೀದಿ ಹೊಣೆ ರಾಜ್ಯ ಸರಕಾರದ್ದಾಗಿದ್ದು, ಕರಾವಳಿ ಭಾಗದ ರೈತರಿಗೆ ಆದಷ್ಟು ಬೇಗ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗುವುದು.
– ಶೋಭಾ ಕರಂದ್ಲಾಜೆ,
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ

ಕೇರಳ ಮಾದರಿ ಅನುಸರಿಸಲಿ
ಕರಾವಳಿ ಭಾಗದಲ್ಲಿ ಕಟಾವು ಮುಗಿದು ಭತ್ತ ಮಾರಿದ ಬಳಿಕ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ. ಬದಲಾಗಿ ಕೇರಳದಲ್ಲಿ ಕೇಂದ್ರದೊಂದಿಗೆ ರಾಜ್ಯ ಸರಕಾರವು ಹೆಚ್ಚುವರಿ ಬೆಂಬಲ ಬೆಲೆ ನೀಡಿ ರೈತರ ಭತ್ತ ವನ್ನು ಖರೀದಿಸುತ್ತದೆ. ಈ ಮಾದರಿ ನಮ್ಮಲ್ಲೂ ಬರಲಿ.
– ಶರತ್‌ ಕುಮಾರ್‌ ಶೆಟ್ಟಿ ,
ಅಧ್ಯಕ್ಷರು, ರೈತ ಸಂಘ ತ್ರಾಸಿ ವಲಯ


- ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next