ಮಹಿಳೆಯರನ್ನು ಕಾಡುವ ಪ್ರಶ್ನೆ ತಿಂಡಿ ಏನು ಮಾಡಲಿ, ಅಡುಗೆ ಏನು ಮಾಡಲಿ, ಇವತ್ತಿನದಾಯ್ತು ನಾಳೆ ಏನು ಮಾಡಲಿ ಅಂತ. ಯೋಚಿಸಿ ಯೋಚಿಸಿ ಸಾಕಾಗಿ ಮನೆಮಂದಿಯನ್ನು ಕೇಳಿದರೆ, ಅವರದ್ದು ಪ್ರತಿದಿನ ಒಂದೇ ಉತ್ತರ- ಏನಾದರೂ ಮಾಡು! ಹೋಗಲಿ, ಕೇಳುವ ಉಸಾಬರಿಯೇ ಬೇಡ ಎಂದು ನಮಗೆ ತೋಚಿದ ತಿಂಡಿ, ಅಡುಗೆ ಮಾಡಿದರೆ, ತಟ್ಟೆಯ ಮುಂದೆ ಕೂತ ತಕ್ಷಣ ಬರುವ ಉದ್ಗಾರ- “ಅಯ್ಯೋ, ಇವತ್ತೂ ಚಿತ್ರಾನ್ನವಾ?’ ಉಪ್ಪಿಟ್ಟು ಬೇಡ ಅಂದಿದ್ನಲ್ಲ? ಪಲ್ಯ ಇಲ್ಲದಿದ್ರೆ ಚಪಾತಿ ತಿನ್ನಲು ಆಗಲ್ಲ…’ ಹೀಗಾಗಿ, ಮನೆ ಮಂದಿಗೆಲ್ಲಾ ಇಷ್ಟವಾಗುವ ತಿಂಡಿ ಮಾಡುವುದು ಎಂದರೆ ಅದು ದೊಡ್ಡ ಸಾಹಸವೇ ಸರಿ. ಇದು ಮನೆ ಮನೆಯ ಕತೆ.
ಈಗ ನಮ್ಮ ಮನೆಯ ವಿಶೇಷ ಕತೆ ಕೇಳಿ. ತಿಂಡಿ ಏನು ಮಾಡಲಿ ಎಂದು ಕೇಳಿದರೆ ಮಾವ ಮತ್ತು ಅಳಿಯ ಮೊಬೈಲ್‌ನಿಂದ ತಲೆ ಎತ್ತಿದರೆ ಅದೇ ಹೆಚ್ಚು. ಅಪರೂಪಕ್ಕೆ ಮಕ್ಕಳಿಂದ ಉತ್ತರ ಬಂದರೂ, ಅದು ಮಾಡಲು ಸಾಧ್ಯವಿರದಂಥ ತಿಂಡಿಯೇ ಆಗಿರುತ್ತದೆ. ‘ಅದು ನಾಳೆಗೆ ಆಗುವುದಿಲ್ಲ. ನಾಡಿದ್ದು ಬೇಕಾದರೆ ಮಾಡ್ತೀನಿ. ಈಗ ನಾಳೆಗೇನು ಮಾಡ್ಲಿ?’ ಅಂದರೆ. ಮತ್ತದೇ ಉತ್ತರ-ಏನಾದರೂ ಮಾಡು!
ಪಲಾವ್, ಫ್ರೈಡ್‌ರೈಸ್‌ನಂಥ ಅನ್ನದ ತಿಂಡಿಗಳು ಮಕ್ಕಳಿಗೆ ಇಷ್ಟ . ಆದರೆ, ತಂದೆ ಮತ್ತು ಯಜಮಾನರ ಗಂಟಲಲ್ಲಿ ಬೆಳಗ್ಗೆ ಅನ್ನದ ತಿಂಡಿ ಇಳಿಯುವುದೇ ಇಲ್ಲ. ತಂದೆಯವರು ಕಷ್ಟಪಟ್ಟು ತಟ್ಟೆ ಖಾಲಿ ಮಾಡಿದರೆ, ಇವರು ಅರ್ಧ ತಿಂಡಿಯೊಡನೆ ತಟ್ಟೆ ಮುಂದೆ ಸರಿಸಿ ಎದ್ದು ಹೋಗ್ತಾರೆ. ಸರಿ, ಇವರಿಗೆ ಸೇರದ ತಿಂಡಿ ಮಾಡುವುದೇ ಬೇಡ ಎಂದು ವಿವಿಧ ದೋಸೆಗಳನ್ನು ಮಾಡಿದರೆ ಮಕ್ಕಳ ಉದ್ಗಾರ- “ಇವತ್ತೂ ದೋಸೆಯಾ?’ ಎಂದು. ‘ನಿನ್ನೆಯದ್ದು ಬೇರೆ ದೋಸೆ ಅಲ್ವಾ?’ ಎಂದರೆ ‘ದೋಸೆ ದೋಸೆನೇ ಅಲ್ವಾ ?’ ಎಂಬ ಚಿರಿಪಿರಿ.
ಬಾಲ್ಯದ ಒಂದು ಘಟನೆ ನೆನಪಿಗೆ ಬಂತು, ಅಮ್ಮ ಪ್ರತಿ ಭಾನುವಾರ ಇಡ್ಲಿ, ಚಟ್ನಿ ಮತ್ತು ಸಾಂಬಾರ್ ಮಾಡುತ್ತಿದ್ದರು. ಅದು ಅವರ ಇಷ್ಟದ ತಿಂಡಿ ಎಂಬುದು ಒಂದು ಕಾರಣವಾದರೆ, ಅದು ಮಾಡಲು ಸುಲಭವಾದ್ದರಿಂದ ಭಾನುವಾರ ಮನೆಗೆ ಬರುವ ಅತಿಥಿಗಳನ್ನು ಸುಧಾರಿಸಲು ಅವರಿಗೆ ಸುಲಭವಾಗುತ್ತಿತ್ತು. ಮದುವೆ, ಉಪನಯನಗಳು ಜಾಸ್ತಿಯಾಗಿ ಭಾನುವಾರ ಇರುತ್ತಿದ್ದುದರಿಂದ, ಬೆಳಗ್ಗೆ ಇಡ್ಲಿ ಮಾಡಿಟ್ಟು ಹೋದರೆ ಸಾಯಂಕಾಲ ತನಕ ಅಮ್ಮನಿಗೆ ಮನೆಯ ಚಿಂತೆ ಇರುತ್ತಿರಲಿಲ್ಲ. ಹೀಗೆ ಪ್ರತಿ ಭಾನುವಾರ ಇಡ್ಲಿ ತಿಂದು ತಿಂದು ಬೇಸತ್ತಿದ್ದ ತಮ್ಮ ಆಗ ಹೇಳುತ್ತಿದ್ದ- ಇಡ್ಲಿಯನ್ನು ಮಾಡೋಕೆ ಕಂಡು ಹಿಡಿದವರ್ಯಾರು?
ಮಗಳಿಗೆ ಒತ್ತು ಶ್ಯಾವಿಗೆ ಅಂದರೆ ತುಂಬಾ ಇಷ್ಟ. ನಾವು ಶ್ಯಾವಿಗೆ ಉಳಿದರೆ ಅದನ್ನು ಮರುದಿನ ಒಗ್ಗರಣೆ ಹಾಕಿ, ಕಾಯಿತುರಿ ಹಾಕಿ ಉಸ್ಲಿ ಮಾಡುತ್ತೇವೆ. ಅದು ಅವಳಿಗೆ ಬಿಲ್ಕುಲ್ ಸೇರುವುದಿಲ್ಲ. ಅದಕ್ಕೆ ಅವಳು ಹೇಳುವುದು- ಸುಮ್ಮನೆ ಉಸ್ಲಿ ಮಾಡಿ ಶ್ಯಾವಿಗೆ ಯಾಕೆ ವೇಸ್ಟ್ ಮಾಡುತ್ತೀರಿ, ಇದನ್ನು ನಿಮಗೆ ಹೇಳಿಕೊಟ್ಟವರು ಯಾರು? ಎಂದು.
ಇದು ನಮ್ಮ ಮನೆ ತಿಂಡಿ ರಾಮಾಯಣ.
-ಅನಿತಾ ಪೈ