Advertisement

ರಾಮಸಮುದ್ರ ಕೆರೆ ಮಲಿನ ತಡೆಗೆ ಬೇಕು ಕಣ್ಗಾವಲು!

11:36 PM Mar 08, 2021 | Team Udayavani |

ಕಾರ್ಕಳ: ನಗರದ ಜನತೆಗೆ ಇಲ್ಲಿನ ಕೆರೆಯ ನೀರು ಜೀವ ಜಲ. ಇಡೀ ನಗರಕ್ಕೆ ವರದಾನವಾಗಿರುವ ರಾಮಸಮುದ್ರ ಕೆರೆಯ ಒಡಲಿಗೆ ಕಸದ ವಿಷವಸ್ತುಗಳನ್ನುಎಳೆದು ಮಲಿನಗೊಳಿಸುವ ಕೃತ್ಯ ಹೆಚ್ಚುತ್ತಿದ್ದು. ಇದಕ್ಕೆ ತಡೆ ಹಾಕುವ ಅಗತ್ಯವಿದೆ.

Advertisement

ಸಮೃದ್ಧ ನೀರು
ನಗರ ಪ್ರದೇಶದ ಬಹು ಬೇಡಿಕೆಯ ನೀರಿನ ಬೇಡಿಕೆಯನ್ನು ಪುರಸಭೆ ಆಡಳಿತದ ಮೂಲಕ ಈಡೇರಿಸುತ್ತಿರುವುದೆ ಇದೆ ಐತಿಹಾಸಿಕ ಕೆರೆ. ಇನ್ನೊಂದು ಮೂಲ ಮುಂಡ್ಲಿ ಜಲಾಶಯ. ಬೇಸಗೆಯಲ್ಲಿ ನಗರಕ್ಕೆ ಈ ಕೆರೆಯ ನೀರೇ ಮೂಲವಾಗಿದ್ದು, ಈ ಬಾರಿ ಕೆರೆಯಲ್ಲಿ ನೀರು ಕೂಡ ಸಮೃದ್ಧವಾಗಿದೆ. ಕೆರೆಗೆ ತ್ಯಾಜ್ಯ ಎಸೆಯುವ ಕೃತ್ಯ ಹೆಚ್ಚುತ್ತಿರುವುದರಿಂದ ನೀರು ಮಲಿನವಾಗುತ್ತಿದೆ. ಕೆರೆಯ ಸುತ್ತ ತಡೆಬೇಲಿ, ಸಿಸಿ ಕೆಮರ ಅಳವಡಿಕೆ ಅಗತ್ಯವಿದೆ.

ಕಾನೂನು ಬಾಹಿರ ಚಟುವಟಿಕೆಗಳು
ಕೆರೆಯ ಸುತ್ತಮುತ್ತ ಪಾದೆಕಲ್ಲು ಸಹಿತ ಜನ ಸಂಚಾರವಿಲ್ಲದ ಸ್ಥಳಗಳಿದ್ದು, ರಾತ್ರಿ ಹೊತ್ತು ಹಲವು ಕಾನೂನು ಬಾಹಿರ ಚಟುವಟಿಕೆಗಳು ಇಲ್ಲಿ ನಡೆಯುತ್ತಿದೆ. ಪಾದೆಕಲ್ಲು ಮೇಲೆ ಕುಳಿತು ಸಿಗರೇಟು, ಮದ್ಯ ಸೇವನೆ, ಪಾರ್ಟಿ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿವೆ. ಮದ್ಯದ ಬಾಟಲಿಗಳನ್ನು, ಪ್ಲಾಸ್ಟಿಕ್‌ ಬಾಟಲಿ ಇನ್ನಿತರ ಅನುಪಯುಕ್ತ ತ್ಯಾಜ್ಯಗಳನ್ನು ಕೆರೆಗೆ ಎಸೆಯುವುದು ನಡೆಸುತ್ತಿರುತ್ತಾರೆ. ನಿತ್ಯ ನಡೆಯುವುದರ ಜತೆಗೆ ವೀಕೆಂಡ್‌ ದಿನಗಳಲ್ಲಿ ಹೆಚ್ಚಿರುತ್ತವೆ.

ವಿದ್ಯಾರ್ಥಿಗಳ ಗುಂಪು ಇಲ್ಲಿ ಹೆಚ್ಚು ಕಂಡು ಬರುತ್ತಿರುತ್ತದೆ. ಜತೆಗೆ ಕೆಲವು ಯುವಕರು ಮೋಜು ಮಸ್ತಿಗಾಗಿ ಕೆರೆಯತ್ತ ಬರುತ್ತಿದ್ದು, ಒಂದಷ್ಟು ಹೊತ್ತು ಇಲ್ಲಿ ವಿವಿಧ ಚಟುವಟಿಕೆಗಳಲ್ಲಿ ಕಾಲ ಕಳೆದು ಕೊನೆಯಲ್ಲಿ ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ. ಅಶುಚಿತ್ವದ ವಾತಾವರಣ ನಿರ್ಮಾಣವಾಗುವುದರ ಜತೆಗೆ ತ್ಯಾಜ್ಯಗಳು ನೇರ ನದಿಯನ್ನು ಸೇರುತ್ತಿದೆ.

ಮಾಲಿನ್ಯಯುಕ್ತ ನೀರು ಕುಡಿಯಬೇಕಾದೀತು
ರಾಮ ಸಮುದ್ರ ಕೆರೆ ಹಿಂದಿನ ಕೆಲವು ವರ್ಷಗಳಲ್ಲಿ ಸಮರ್ಪಕವಾಗಿ ಮಳೆ ಸುರಿಯದ ಕಾರಣ ಬತ್ತಿ ಹೋದ ಘಟನೆಗಳು ನಡೆದಿತ್ತು. ಆದರೆ ಈ ಬಾರಿ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣಿಸುತ್ತಿದೆಯಾದರೂ ಕೆರೆಯನ್ನು ಮಲಿನಗೊಳಿಸುತ್ತಿರುವುದು ಆತಂಕವನ್ನುಂಟು ಮಾಡಿದೆ. ಬೇಸಗೆಯ ಈ ದಿನಗಳಲ್ಲಿ ಇದೇ ಮಾಲಿನ್ಯಯುಕ್ತ ನೀರನ್ನು ಬಳಸುವ ಅನಿವಾರ್ಯದಲ್ಲಿ ನಗರದ ಜನತೆ ಸಿಲುಕಿದೆ.

Advertisement

ಕಿಡಿಗೇಡಿಗಳು ಪ್ಲಾಸ್ಟಿಕ್‌ ವಸ್ತುಗಳು, ನೀರಿನ ಬಾಟಲಿಗಳನ್ನು ನದಿಗೆ ಎಸೆದು ಹೋಗುವುದಷ್ಟೆ ಅಲ್ಲ. ಪರಿಸರದಲ್ಲೂ ಸ್ವತ್ಛತೆಗೆ ಧಕ್ಕೆ ತರುತ್ತಿದ್ದಾರೆ. ವಿವಿಧ ಸಂಘಟನೆಗಳು, ನಾಗರಿಕರು ಹತ್ತಾರು ಬಾರಿ ಕೆರೆಯ ಸುತ್ತಮುತ್ತ ಸ್ವತ್ಛಗೊಳಿಸುವ ಕೆಲಸ ಮಾಡುತ್ತಲೇ ಇರುತ್ತಾರಾದರೂ ಅದಕ್ಕೆ ಅಂತ್ಯ ಎನ್ನುವುದೆ ಇಲ್ಲ ಎನ್ನುವಂತಾಗಿದೆ.

ತ್ಯಾಜ್ಯವನ್ನು ಕೆರೆಗೆ ಎಸೆಯುವುದನ್ನು ಪತ್ತೆ ಹಚ್ಚಲು ಸಿಸಿ ಕೆಮರಗಳೂ ಇಲ್ಲಿಲ್ಲ. ಹೀಗಾಗಿ ಇಂತಹ ಕೃತ್ಯಗಳನ್ನು ತಡೆಗಟ್ಟಲು ಯಾರಿಗೂ ಸಾಧ್ಯವಾಗುತಿಲ್ಲ. ಪ್ರಜ್ಞಾವಂತ ಯುವ ಸಮೂಹವೇ ಈ ರೀತಿ ಕೆರೆಯನ್ನು ಅಶುದ್ಧಗೊಳಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಮಲೀನಗೊಳಿಸದಂತೆ ಮನವಿ
ರಾಮಸಮುದ್ರಕ್ಕೆ ಬೇರೆ ಬೇರೆ ಕಡೆಯಿಂದ ಹೋಗಲು ದಾರಿ ಇದೆ. ಪುರಸಭೆ ಪಂಪ್‌ಹೌಸ್‌ ಇರುವ ಆಸುಪಾಸಿನಲ್ಲಿ ಎಲ್ಲಾದರೂ ಈ ರೀತಿ ಆಗದಂತೆ ಕ್ರಮ ವಹಿಸಬಹುದು. ಒಂದು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇವೆ.
ಏನು ಕ್ರಮ ತೆಗೆದುಕೊಳ್ಳಲು ಸಾಧ್ಯವೋ ಅದನ್ನು ಮಾಡುತ್ತೇವೆ. ಯಾರೂ ಕೂಡ ನದಿಯನ್ನು ಮಲೀನಗೊಳಿಸಬಾರದು ಎಂದು ಮನವಿ ಮಾಡುತ್ತೇನೆ.
-ಸುಮಾಕೇಶವ್‌, ಅಧ್ಯಕ್ಷೆ ಪುರಸಭೆ ಕಾರ್ಕಳ

ಹೂಳೆತ್ತಿದರೆ ವರ್ಷ ಪೂರ್ತಿ ನೀರು
ಅತೀ ವಿಸ್ತಾರವಾಗಿರುವ ಕೆರೆಯಲ್ಲಿ ಹೂಳು ತುಂಬಿದ್ದರೂ ಸದ್ಯದ ಮಟ್ಟಿಗೆ ನೀರಿಗೆ ಕೊರತೆಯಿಲ್ಲ. ಒಂದೊಮ್ಮೆ ಈ ಕೆರೆಯ ಹೂಳೆತ್ತಿದಲ್ಲಿ ಎಂದಿಗೂ ನೀರಿನ ಕೊರತೆ ಆಗದು. ಈ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ನಗರಕ್ಕೆ ಶಾಶ್ವತವಾಗಿ ನೀರಿನ ಸಮಸ್ಯೆ ನಿವಾರಣೆಯಾಗುವುದು. ಪರ್ಯಾಯ ವ್ಯವಸ್ಥೆಗಳಾಗುತ್ತಿದ್ದರೂ ಈ ನದಿ ಮೂಲವನ್ನು ಬಳಸುವುದು ಅಗತ್ಯವಾಗಿದೆ. ಬಾವಿ, ಬೋರ್‌ವೆಲ್‌ ಕೊರೆಯುವ ಆವಶ್ಯಕತೆಯೂ ಜಿಲ್ಲಾಡಳಿತಕ್ಕೆ, ಸ್ಥಳಿಯಾಡಳಿತಕ್ಕೆ ಬರುವುದಿಲ್ಲ.

ಅಪವಿತ್ರ; ಭಕ್ತರಲ್ಲಿ ಆತಂಕ
ಪ್ರತಿ ವರ್ಷ ವಾರ್ಷಿಕ ಧಾರ್ಮಿಕ ವಿಧಿವಿಧಾನಗಳು ಇದೇ ರಾಮಸಮುದ್ರ ಕೆರೆಯಲ್ಲಿ ನಡೆಯುತ್ತಿವೆ. ಪವಿತ್ರವಾದ ನದಿಯನ್ನು ಅಪವಿತ್ರಗೊಳಿಸಿದಲ್ಲಿ ಧಾರ್ಮಿಕ ವಿಧಿವಿಧಾನಕ್ಕೂ ಅಡಚಣೆಯಾಗಿ ಹಿನ್ನಡೆಯಾಗುತ್ತದೆ ಎನ್ನುವ ಆತಂಕ ಭಕ್ತರಲ್ಲಿದೆ.

ಆರೋಗ್ಯದ ಮೇಲೆ ಪರಿಣಾಮ
ತ್ಯಾಜ್ಯಗಳಿಂದ ಕೆರೆ ಮಲಿನಗೊಳ್ಳುವು ದ ರೊಂದಿಗೆ ನೀರನ್ನು ಬಳಸಲಾಗದಂತಾ ಗುತ್ತದೆ. ರೋಗರುಜಿನಗಳು ಹಬ್ಬಲು ಅದು ಕಾರಣವಾಗುತ್ತದೆ. ಜತೆಗೆ ಪ್ಲಾಸ್ಟಿಕ್‌ ತ್ಯಾಜ್ಯ ಗಳನ್ನು ಸುಡುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಮಾಲಿನ್ಯವಾಗುತ್ತದೆ. ಇದು ಒಂದು ಎರಡು ದಿನಗಳ‌ ಸಮಸ್ಯೆಯಲ್ಲ. ಪ್ರತಿದಿನವೂ ಇಂತಹದ್ದೇ ತೊಂದರೆಗಳು ಇಲ್ಲಿ ಇರುವುದಾಗಿ ನಾಗರಿಕರೊಬ್ಬರು ಹೇಳುತ್ತಾರೆ.

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next