Advertisement
ಮೊದಲ ದಿನ ಡಾ| ಸೌಂದರ್ಯಾ ಶ್ರೀವತ್ಸ ಅವರು “ದ್ರೌಪದಿ’ ಎಂಬ ವಸ್ತು ವಿಶ್ಲೇಷಣೆ ಸ್ವರೂಪದ ಭರತನಾಟ್ಯ ಪ್ರಸ್ತುತಪಡಿಸಿದರು. ಬೆಂಗಳೂರಿನ ಇವರು ಪ್ರತಿಭಾವಂತ ಕಲಾವಿದೆ. ಒಳ್ಳೆಯ ನೃತ್ಯಪಟು ಮತ್ತು ಬಂಧಗಳು ಉತ್ತಮವಾಗಿ ಮೂಡಿಬಂದವು. ದ್ರೌಪದಿಯ ವ್ಯಕ್ತಿ ವಿಶ್ಲೇಷಣೆ ಮಾಡಿದ ಪ್ರಯತ್ನ ಮೆಚ್ಚುವಂಥದ್ದು. ಆದರೆ ಸಾಹಿತ್ಯವು ವಾಚ್ಯವಾಗಿದ್ದು, ನರ್ತನದಲ್ಲೂ ಅದೇ ವಾಚ್ಯತೆ ಒಡಮೂಡಿ, ಹೊಸತನ ಕಾಣಿಸಲಿಲ್ಲ. ದ್ರೌಪದಿಯ ವ್ಯಕ್ತಿತ್ವವನ್ನು ಹೊಸ ಕಾಲದ ಅಪೇಕ್ಷೆಗೆ ತಕ್ಕಂತೆ ಹೊಸ ಒಳನೋಟದಿಂದ ನೋಡಬಹುದಾಗಿತ್ತು ಅನಿಸಿತು.
Related Articles
Advertisement
ಎರಡನೇ ದಿನದ ಆರಂಭದಲ್ಲಿ ಮಂಗಳೂರಿನ ಇನ್ನೋರ್ವ ಭರವಸೆಯ ಯುವ ಕಲಾವಿದೆ ಶ್ರೀಯಾ ಮಯ್ಯ ಅವರ ಭರತನಾಟ್ಯ ಪ್ರದರ್ಶನವಿತ್ತು. ಇವರು “ನೃತ್ಯಾಂಗನ್’ನ ನಿರ್ದೇಶಕಿ ರಾಧಿಕಾ ಅವರ ಮೊದಲ ಶಿಷ್ಯೆಯೂ ಹೌದು. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರದರ್ಶನ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಎರಡನೇ ಪ್ರದರ್ಶನದಲ್ಲಿ ಬೆಂಗಳೂರಿನ ನೃತ್ಯ ಗುರು ರಾಧಾ ಶ್ರೀಧರ್ ಅವರ ಶಿಷ್ಯೆ ಐಶ್ವರ್ಯಾ ನಿತ್ಯಾನಂದ ಅವರು ಅರ್ಧನಾರೀಶ್ವರ ಸ್ತೋತ್ರದೊಂದಿಗೆ ನೃತ್ಯ ಆರಂಭಿಸಿದರು. ಸಾಂಪ್ರದಾಯಿಕ ಸ್ವರಜತಿ “ವರ್ಣ’ದಲ್ಲಿ ಈಕೆ ಸುಂದರವಾಗಿ ಅಭಿನಯಿಸಿದರು.
ಗಮನ ಸೆಳೆದ ಇನ್ನೊಂದು ನೃತ್ಯವೆಂದರೆ ದೆಹಲಿಯ ಹಿಮಾಂಶು ಶ್ರೀವಾಸ್ತವ ಪ್ರಸ್ತುತಪಡಿಸಿದ ಭರತನಾಟ್ಯ ಶೈಲಿಯ “ಶಿಖಂಡಿ’ ಎಂಬ ವಸ್ತುರೂಪದ ಪ್ರಸ್ತುತಿ. ಶಿಖಂಡಿ ಮಹಾಭಾರತದ ಕಥೆಯಲ್ಲಿ ಎದುರಾಗುವ ಒಂದು ಪ್ರಮುಖ ಪಾತ್ರ. ಇದನ್ನು ಅಭಿನಯಿಸಲು ಹಿಮಾಂಶು ಅವರು ಮಂಗಳಮುಖೀಯರನ್ನು ಭೇಟಿ ಮಾಡಿ ಅವರ ಜೀವನಶೈಲಿ, ಒಳತೋಟಿಗಳನ್ನು ಹತ್ತಿರದಿಂದ ಅಭ್ಯಸಿಸಿದ್ದರು. ಅವರ ಪ್ರಯತ್ನ ಹುಸಿಯಾಗಲಿಲ್ಲ. ಉತ್ತಮ ಚಿತ್ರ ಕಲಾವಿದರೂ ಆಗಿರುವ ಹಿಮಾಂಶು ಮಂಗಳಮುಖೀಯರ ದುಗುಡ, ದುಃಖ ಮತ್ತು ಭಿನ್ನವಾದ ನಡವಳಿಕೆಗಳನ್ನು ಪರಿಣಾಮಕಾರಿಯಾಗಿ ಅಭಿನಯಿಸಿದರು.
ಪೂರ್ವಾಹ್ನ “ಭರತನಾಟ್ಯದಲ್ಲಿ ವಸ್ತುರೂಪದ ಪ್ರಸ್ತುತಿ’ ಎಂಬ ವಿಷಯವಾಗಿ ವಿಚಾರ ಸಂಕಿರಣವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಪ್ರದಾಯಿಕ ಶೈಲಿಯಲ್ಲೇ ಇದ್ದರೂ ವಿಶಿಷ್ಟವಾದ ವಸ್ತು ವಿಷಯಗಳನ್ನು ತೆಗೆದುಕೊಂಡು ಅವುಗಳನ್ನು ಹೇಗೆ ವಿಸ್ತರಿಸಬಹುದು, ಪುರಾಣದ ವಿಶಿಷ್ಟ ವ್ಯಕ್ತಿಗಳನ್ನು ಹೇಗೆ ಹೊಸ ದೃಷ್ಟಿಯಿಂದ ನಾಟ್ಯದಲ್ಲಿ ಅಭಿವ್ಯಕ್ತಿಸಬಹುದು ಎಂಬುದು ಭರತನಾಟ್ಯ ಕ್ಷೇತ್ರದಲ್ಲಿ ಮೊದಲಿನಿಂದಲೂ ಚರ್ಚೆಗೆ ಒಳಗಾಗುತ್ತಲೇ ಇದೆ. ವಿಚಾರ ಸಂಕಿರಣದಲ್ಲಿ ಉತ್ತಮ ವಿಚಾರಗಳು ಚರ್ಚೆಗೆ ಬಂದವು. ಇದೊಂದು ಸಕಾಲಿಕ ಪ್ರಯತ್ನ ಮತ್ತು ಭರತನಾಟ್ಯದ ಅಧ್ಯಯನಕಾರರಿಗೆ ಇಂತಹ ಅಕಡೆಮಿಕ್ ಚರ್ಚೆ ತೀರ ಅಗತ್ಯವಾಗಿದೆ.
“ಸಮರ್ಪಣ್ – 2018′ ಎಂಬ ಎರಡು ದಿನಗಳ ಕಾರ್ಯಕ್ರಮದಲ್ಲಿ “ನೃತ್ಯಾಂಗನ್’ನ ಸ್ಮರಣ ಸಂಚಿಕೆ ‘ಪಯಣ’ ಬಿಡುಗಡೆಗೊಂಡಿತು. ಶಾಸ್ತ್ರೀಯ ನೃತ್ಯ ಕಲೆಗಳ ಕುರಿತು ಉಪಯುಕ್ತ ಲೇಖನಗಳಿರುವ ಈ ಸಂಚಿಕೆಯು ಸಂಗ್ರಹ ಯೋಗ್ಯವಾಗಿ ಮೂಡಿಬಂದಿದೆ.
ರಾಧಿಕಾ ಈ ಕಾರ್ಯಕ್ರಮದ ಮೂಲಕ ಶಾಸ್ತ್ರೀಯ ನೃತ್ಯಕಲೆಗಳ ಕುರಿತ ತನ್ನ ಬದ್ಧತೆಯನ್ನು ಪ್ರದರ್ಶಿಸಿ¨ªಾರೆ. ಕರಾವಳಿ ಜಿಲ್ಲೆಗಳ ಭರತನಾಟ್ಯ ಕಲಾವಿದರಿಗೆ ಹೊಸತನಗಳಿಗೆ ತೆರೆದುಕೊಳ್ಳಲು ವಸ್ತುರೂಪದ ಅಧ್ಯಯನ, ವಿಶ್ಲೇಷಣೆ ಮತ್ತು ಪ್ರಸ್ತುತಿಗಳ ತಿಳಿವಳಿಕೆ ತುಂಬ ಅಗತ್ಯವಾಗಿದೆ. ಹಾಗಾದಾಗ ಮಾತ್ರ ಈ ಕ್ಷೇತ್ರ ಬೆಳೆಯಲು ಸಾಧ್ಯ. ಅದನ್ನು ಆಗುಮಾಡಿಕೊಟ್ಟ ರಾಧಿಕಾ ಅವರ ಪ್ರಯತ್ನ ಶ್ಲಾಘನೀಯ. ವಿ| ಅರ್ಥಾ ಪೆರ್ಲ