ಬಲರಾಮ್ ಪುರ್: ಸಮಾಜವಾದಿ ಪಕ್ಷದ ಮುಖಂಡ, ತುಳಸಿಪುರ್ ನಗರ ಪಂಚಾಯತ್ ನ ಮಾಜಿ ಅಧ್ಯಕ್ಷ ಫಿರೋಜ್ ಪಪ್ಪು ಅವರನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಎರಡು ಡೋಸ್ ಪಡೆಯದವರಿಗೆ ಒಮಿಕ್ರಾನ್ ಆತಂಕ ಹೆಚ್ಚು: ಡಾ. ಸುಧಾಕರ್
ಪೊಲೀಸ್ ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಫಿರೋಜ್ ಪಪ್ಪು(41ವರ್ಷ)ವನ್ನು ಹತ್ಯೆಗೈಯಲಾಗಿತ್ತು. ತುಳಸಿ ನಗರ್ ಪಂಚಾಯತ್ ಗೆ ಪಪ್ಪು ಪತ್ನಿ ಕಹ್ ಕಶನ್ ಹಾಲಿ ಅಧ್ಯಕ್ಷರಾಗಿದ್ದಾರೆ.
ಫಿರೋಜ್ ಪಪ್ಪು ಜಾರ್ವಾದಿಂದ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಮಾರಾಕಾಯುಧಗಳಿಂದ ದಾಳಿ ನಡೆಸಿ, ಹತ್ಯೆಗೈದಿರುವುದಾಗಿ ವರದಿ ತಿಳಿಸಿದೆ. ಕೂಡಲೇ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದರಾದರೂ ಕೂಡಾ ಪಪ್ಪು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
ಫಿರೋಜ್ ಸಾವಿನ ಸುದ್ದಿ ಹರಡುತ್ತಿದ್ದಂತೆಯೇ, ಬೆಂಬಲಿಗರು ಗುಂಪುಗೂಡಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಘಟನಾ ಸ್ಥಳದಲ್ಲಿ ಉದ್ನಿಗ್ನ ವಾತಾವರಣ ನೆಲೆಸಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.