Advertisement

ಸ್ವಾಮೀಜಿ ನೀಡಿದ ಉಡುಗೊರೆ ದನ ಮರಳಿಸಿದ ಸಂಸದೆ, ಆಜಂ ಖಾನ್‌ ಪತ್ನಿ

03:47 PM Jul 25, 2018 | Team Udayavani |

ರಾಮಪುರ, ಉತ್ತರ ಪ್ರದೇಶ : ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಅವರ ಪತ್ನಿ, ರಾಜ್ಯಸಭಾ ಸದಸ್ಯೆ ತನ್‌ಜಿಮ್‌ ಫಾತಿಮಾ ಅವರು ತಮಗೆ ಕೆಲ ಸಮಯದ ಹಿಂದೆ ಗೋವರ್ಧನ ಪೀಠದ ಶ್ರೀ ಅಧೋಕ್ಷಜಾನಂದ ಮಹಾರಾಜ್‌ ಸ್ವಾಮೀಜಿ ಕೊಡುಗೆಯಾಗಿ ನೀಡಿದ್ದ ದನವನ್ನು ಅವರಿಗೇ ಮರಳಿಸಿದ್ದಾರೆ. 

Advertisement

ರಾಜಸ್ಥಾನದ ಅಳವಾರ್‌ ನಲ್ಲಿ ಗೋ ಕಳ್ಳಸಾಗಣೆಗಾರನೆಂಬ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಉದ್ರಿಕ್ತರ ಗುಂಪು ಚಚ್ಚಿಕೊಂದ ಗುಂಪು ಹಿಂಸೆ ಘಟನೆಯ ಹಿನ್ನೆಲೆಯಲ್ಲಿ, ಇದೇ ಬಗೆಯ ಹಿಂಸೆ ತನ್ನ ವಿರುದ್ಧವೂ ನಡೆದೀತೆಂಬ ಭಯದಲ್ಲಿ ಉಡುಗೊರೆಯಾಗಿ ಪಡೆದಿದ್ದ ಗೋವನ್ನು ಸ್ವಾಮೀಜಿಯವರಿಗೇ ತಾನು ಮರಳಿಸಿರುವುದಾಗಿ ಫಾತಿಮಾ ಹೇಳಿದ್ದಾರೆ. ತಾನು ಅನಿವಾರ್ಯವಾಗಿ ಹೀಗೆ ಮಾಡುತ್ತಿರುವುದು ತನ್ನ ಕುಟುಂಬಕ್ಕೆ ಅತ್ಯಂತ ನೋವಿನ ಸಂಗತಿಯಾಗಿದೆ ಎಂದಾಕೆ ಮಾಧ್ಯಮಕ್ಕೆ ಹೇಳಿದ್ದಾರೆ. 

ಬಿಜೆಪಿ ಆಡಳಿತೆಯ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಲ್ಪಸಂಖ್ಯಾಕ ಸಮುದಾಯದವರು ಜೀವಭಯದಿಂದ ಬದುಕುತ್ತಿದ್ದಾರೆ ಎಂದು ಫಾತಿಮಾ ಹೇಳಿದರು. 

ಕೆಲ ಸಮಯದ ಹಿಂದೆ ಫಾತಿಮಾ ಅವರು ಗೋ ರಕ್ಷಣೆ, ಗಂಗಾ ಮಾಲಿನ್ಯ ಮತ್ತು ಭಗವದ್ಗೀತೆಯೇ ಮೊದಲಾದ ವಿಷಯಗಳಿಗೆ ಮಹತ್ವ ನೀಡುವಂತೆ ಜನರನ್ನು ಒತ್ತಾಯಿಸಿದ್ದರು. ಮಥುರಾ ಜಿಲ್ಲೆಯ ಗೋವರ್ಧನದಲ್ಲಿನ ಗೋಶಾಲೆಗೆ ತಾನು 25 ಲಕ್ಷ ರೂ. ವಂತಿಗೆ ನೀಡುವುದಾಗಿಯೂ ಹೇಳಿದ್ದರು. 

ಈಗ ಅದೇ ಫಾತಿಮಾ ಅವರು ತಾನು ಇನ್ನೆಂದೂ ಗೋವರ್ಧನದ ಗೋಶಾಲೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. 

Advertisement

ಇದೇ ವೇಳೆ ಆಕೆಯ ಪತಿ, ಉರಿ ನಾಲಗೆಯ ವಿವಾದಾತ್ಮಕ ಎಸ್‌ಪಿ ನಾಯಕ ಆಜಂ ಖಾನ್‌ ಅವರು, “ಮುಸ್ಲಿಮ್‌ ಸಮುದಾಯದವರು ತಮ್ಮ ಮುಂದಿನ ತಲೆಮಾರಿನವರ ಸುರಕ್ಷೆಗಾಗಿ ಗೋ ಸಂಬಂಧಿ ಉದ್ಯಮದಲ್ಲಿ ತೊಡಗಿಕೊಳ್ಳಬಾರದು; ಹೈನು ಕೃಷಿಯನ್ನೂ ನಡೆಸಬಾರದು’ ಎಂದು ಕರೆ ನೀಡಿದ್ದಾರೆ. 

ಈ ನಡುವೆ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2014ರಿಂದ ಈ ವರ್ಷ ಮಾರ್ಚ್‌ 3ರ ವರೆಗಿನ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ 40 ವಿಭಿನ್ನ  ಗುಂಪು ಹಿಂಸೆ ಪ್ರಕರಣಗಳಲ್ಲಿ ಕನಿಷ್ಠ 45 ಮಂದಿ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next