Advertisement

Nawab Singh Yadav: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ; ಸಮಾಜವಾದಿ ಪಕ್ಷದ ಮುಖಂಡ ಬಂಧನ

01:47 PM Aug 13, 2024 | Team Udayavani |

ಲಕ್ನೋ: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ (Samajwadi Party) ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸೋಮವಾರ (ಆ.12ರಂದು) ಮಧ್ಯರಾತ್ರಿ 1:30ರ ಸುಮಾರಿಗೆ ಪೊಲೀಸರ 112 ಸಹಾಯವಾಣಿ ಸಂಖ್ಯೆಗೆ ಕರೆಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ನವಾಬ್ ಸಿಂಗ್ ಯಾದವ್ (Nawab Singh Yadav) ಎನ್ನುವ ಸಮಾಜವಾದಿ ಪಕ್ಷದ ಮುಖಂಡನನ್ನು ಬಂಧಿಸಿದ್ದಾರೆ.

ಪೊಲೀಸ್‌ ಸಹಾಯವಾಣಿಗೆ ಅಪ್ರಾಪ್ತೆ ಕರೆ ಮಾಡಿ, ಆಕೆಯನ್ನು ವಿವಸ್ತ್ರಗೊಳಿಸಿ, ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಹೇಳಿದ್ದಾಳೆ. ಕೂಡಲೇ ಪೊಲೀಸರು ವಿಳಾಸವನ್ನು ಪತ್ತೆ ಹಚ್ಚಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಕನೌಜ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಮಿತ್ ಕುಮಾರ್ ಆನಂದ್ ಹೇಳಿದ್ದಾರೆ.

ಪೊಲೀಸರು ಭೇಟಿ ನೀಡಿದಾಗ ನವಾಬ್‌ ಸಿಂಗ್‌ ಯುವತಿ ಜತೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಉದ್ಯೋಗಾವಕಾಶ ನೆಪದಲ್ಲಿ ನನ್ನ ಚಿಕ್ಕಮ್ಮ ಇವರ ನಿವಾಸಕ್ಕೆ ಕರೆದುಕೊಂಡು ಬಂದಿದ್ದರು ಎಂದು ಬಾಲಕಿ ಪೊಲೀಸರ ಬಳಿ ಹೇಳಿದ್ದಾಳೆ.

Advertisement

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.

ನ್ಯಾಯಾಲಯವು ಎಸ್ಪಿ ನಾಯಕನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಂಧನದ ವೇಳೆ ನವಾಬ್‌ ಸಿಂಗ್‌ ಇದೊಂದು ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

ನವಾಬ್ ಸಿಂಗ್ ಬಂಧನದ ಸುದ್ದಿ ಹೊರಬೀಳುವಂತೆ, ಪಕ್ಷ ಅವರಿಂದ ಅಂತರ ಕಾಯ್ದುಕೊಂಡಿದೆ. ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವೆಂದು ಎಸ್ಪಿ ಕನೌಜ್ ಜಿಲ್ಲಾಧ್ಯಕ್ಷ ಕಲೀಂ ಖಾನ್ ಹೇಳಿದ್ದಾರೆ.

ಚಂದನ್ ಸಿಂಗ್ ಯಾದವ್ ಅವರ ಪುತ್ರ ನವಾಬ್ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸದಸ್ಯರಲ್ಲ. ಅವರನ್ನು ಪಕ್ಷದೊಂದಿಗೆ ಜೋಡಿಸುವ ಪ್ರಯತ್ನಗಳ ಹೊರತಾಗಿಯೂ, ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅವರೊಂದಿಗೆ ನಮಗೆ ಯಾವುದೇ ಸಂಪರ್ಕವಿಲ್ಲವೆಂದು  ಕಲೀಂ ಹೇಳಿದ್ದಾರೆ.

ನವಾಬ್ ಸಿಂಗ್ ವಿರುದ್ಧ ಕನೌಜ್ ನಗರ ಪೊಲೀಸ್ ಠಾಣೆ ಮತ್ತು ತಿರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಮತ್ತು ಗೂಂಡಾ ಕಾಯ್ದೆಯಡಿ ಇತರ ಮೂರು ಪ್ರಕರಣಗಳು ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next