Advertisement

ಶಿವರಾಮ ಜೋಗಿಗೆ ಸಾಮಗ ಪ್ರಶಸ್ತಿ 

06:00 AM Jul 06, 2018 | |

ಉಡುಪಿ ತುಳುಕೂಟವು ಪ್ರತಿವರ್ಷ ನೀಡುವ ಮಲ್ಪೆ ರಾಮದಾಸ ಸಾಮಗ ಸ್ಮರಣಾರ್ಥ ಪ್ರಶಸ್ತಿಯು ಈ ಬಾರಿ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅವರಿಗೆ ಒಲಿದಿದ್ದು, ಜು. 7ರಂದು ಉಡುಪಿಯ ರಾಜಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು.

Advertisement

13ನೇ ವರ್ಷದಲ್ಲಿಯೇ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿರುವ ಶಿವರಾಮ ಜೋಗಿ ಅವರು ಕಲಿತದ್ದು ಕೇವಲ 6ನೇ ತರಗತಿ ಮಾತ್ರವಾದರೂ ಈಗ ಯಕ್ಷಗಾನದ ಪ್ರಬುದ್ಧ ಮತ್ತು ಮೇಧಾವಿ ಕಲಾವಿದರಲ್ಲಿ ಓರ್ವರಾಗಿ ಗುರುತಿಸಿಕೊಂಡಿದ್ದಾರೆ. ಶೇಣಿ ಗೋಪಾಲಕೃಷ್ಣ ಭಟ್‌, ವಿಟ್ಲ ಗೋಪಾಲಕೃಷ್ಣ ಜೋಷಿ ಮತ್ತು ಕುಡಾಣ ಗೋಪಾಲಕೃಷ್ಣ ಭಟ್‌ ಎಂಬ ಮೂವರು ಗೋಪಾಲಕೃಷ್ಣರನ್ನು ಗುರುಗಳಾಗಿ ಸ್ವೀಕರಿಸಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಉತ್ತಮ ವಾಗ್ಮಿಯಾಗಿರುವ ಅವರು ತನ್ನ ಮಾತುಗಾರಿಕೆಯಿಂದಲೆ ಪ್ರೇಕ್ಷಕರನ್ನು ಸೆಳೆದು ನಿಲ್ಲಿಸಬಲ್ಲ ಕಲಾವಿದರು. ಸುಮಾರು 63 ವರ್ಷಗಳಿಂದ ಯಕ್ಷಗಾನ ರಂಗದಲ್ಲಿರುವ ಅವರು ಸುರತ್ಕಲ್‌ ಮೇಳವೊಂದರಲ್ಲೇ 40 ವರ್ಷ ಸೇವೆ ಸಲ್ಲಿಸಿರುವುದು ಗಮನಾರ್ಹ ಸಂಗತಿ.

 ಕೂಡ್ಲು, ಮೂಲ್ಕಿ, ಕರ್ನಾಟಕ, ಮಂಗಳಾದೇವಿ, ಎಡನೀರು, ಕುಂಟಾರು ಹಾಗೂ ಹೊಸನಗರ ಮೇಳಗಳಲ್ಲೂ ಸೇವೆ ಸಲ್ಲಿಸಿದ್ದು, ಪ್ರಸ್ತುತ ಹನುಮಗಿರಿ ಮೇಳದಲ್ಲಿದ್ದಾರೆ. 77ರ ಹರಯದಲ್ಲೂ ಅದ್ಭುತವಾದ ಅಭಿನಯ ಮತ್ತು ಆಕರ್ಷಕ ಮಾತಿನಿಂದ ಪ್ರೇಕ್ಷಕರನ್ನು ಹಿಡಿದಿಡುವಂಥ ಪ್ರತಿಭಾಸಂಪನ್ನ. 

ಯಕ್ಷಗಾನಕ್ಕೆ ಅಗತ್ಯವಾಗಿರುವ ಕುಣಿತ, ಅರ್ಥಗಾರಿಕೆ ಮತ್ತು ಗಾಂಭೀರ್ಯವನ್ನು ಅಳವಡಿಸಿಕೊಂಡಿರುವ ಇವರು ದುಶ್ಯಾಸನ, ಹಿರಣ್ಯಾಕ್ಷ, ದುಷ್ಯಂತ, ರಾವಣ, ಕರ್ಣ, ಕೋಟಿ ಮುಂತಾದ ಪ್ರಮುಖ ಪಾತ್ರಗಳಿಗೆ ಮನೋಜ್ಞವಾಗಿ ರಂಗದಲ್ಲಿ ಜೀವ ತುಂಬಿದ್ದಾರೆ. ಜತೆಗೆ ಬಪ್ಪ ಬ್ಯಾರಿಯ ಪಾತ್ರದಲ್ಲೂ ಮಿಂಚಿದವರು. ನಾಯಕ ಮತ್ತು ಖಳನಾಯಕ ಪಾತ್ರಕ್ಕೂ ಸೈ ಎನಿಸಿಕೊಂಡವರು. ಮತ್ತೆ ಮತ್ತೆ ಕೇಳಬೇಕು ಎನಿಸುವಂಥ ಅವರ ಮಾತಿನ ಶೈಲಿಯೇ ಅವರಿಗೆ ದೊಡ್ಡ ಅಭಿಮಾನಿ ವರ್ಗವನ್ನು ಹುಟ್ಟು ಹಾಕಿದೆ. ರಂಗಕ್ಕೆ ಒಂದು ಗಾಂಭೀರ್ಯ ತಂದುಕೊಡುವಲ್ಲಿ ಸಫ‌ಲರಾಗಿರುವ ಕೆಲವು ಅಪರೂಪದ ಕಲಾವಿದರ ಸಾಲಿಗೆ ಸೇರಿರುವ ಇವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಒಲಿದಿದೆ.

1941 ಜೂನ್‌ 7ರಂದು ಗುರುವಪ್ಪ ಜೋಗಿ ಮತ್ತು ಸೀತಮ್ಮ ದಂಪತಿಯ ಪುತ್ರನಾಗಿ ಜನಿಸಿರುವ ಇವರು ಪ್ರಸ್ತುತ ಬಿ.ಸಿ.ರೋಡ್‌ನ‌ಲ್ಲಿ ನೆಲೆಸಿದ್ದಾರೆ. 

Advertisement

ಪ್ರಶಸ್ತಿಗಳು
ಇವರ ಸಾಧನೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಜತೆಗೆ ಡಾ| ಕಿಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳು ಸಂದಿವೆ. ಅವುಗಳ ಸಾಲಿಗೆ ಈಗ ತುಳುಕೂಟದ ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಯೂ ಸೇರುತ್ತಿದೆ.

ಪದುಮ 

Advertisement

Udayavani is now on Telegram. Click here to join our channel and stay updated with the latest news.

Next