Advertisement

ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಂ52 5ಜಿ: ಸ್ಲಿಮ್‍ ಮತ್ತು ಪವರ್ ಫುಲ್‍

06:34 PM Oct 27, 2021 | Team Udayavani |

ಪ್ರತಿಸ್ಪರ್ಧಿ ಬ್ರಾಂಡ್‍ಗಳ ಸ್ಪರ್ಧೆಯನ್ನೆದರಿಸಲು ಸ್ಯಾಮ್‍ ಸಂಗ್ ಹಲವಾರು ಹೊಸ ಮಾದರಿಯ ಮೊಬೈಲ್‍ ಫೋನ್‍ ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಆರಂಭಿಕ ಮತ್ತು ಮಧ್ಯಮ ದರ ಪಟ್ಟಿಯ ಮೊಬೈಲ್‍ ಫೋನ್‍ ಗಳಲ್ಲಿ ತನ್ನ ಸ್ಪೆಷಿಫಿಕೇಷನ್‍ ಅನ್ನು ಉತ್ತಮಗೊಳಿಸುತ್ತಿದೆ. ಇತ್ತೀಚಿಗೆ ಅದು ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಎಂ 52 5ಜಿ ಅದರ ಹಿಂದಿನ ಎಂ ಸರಣಿಯ ಫೋನ್‍ಗಳಿಗಿಂತ ಸಾಕಷ್ಟು ಮೇಲ್ದರ್ಜೆಗೇರಿಸಿರುವ ಮೊಬೈಲ್‍ ಆಗಿದೆ.
ಈ ಫೋನ್‍ನ ಮೂಲ ಮಾರಾಟ ದರ 6 ಜಿಬಿ ಮತ್ತು 128 ಜಿಬಿ ಆವೃತ್ತಿಗೆ 29,999 ರೂ. ಹಾಗೂ 8ಜಿಬಿ ಮತ್ತು 128 ಜಿಬಿಗೆ 31,999 ರೂ. ಇದೆ. ಈಗ ಅಮೆಜಾನ್‍ ನಲ್ಲಿ ದೀಪಾವಳಿ ಮಾರಾಟದ ಆಫರ್‍ ನಲ್ಲಿ 6ಜಿಬಿ+128 ಜಿಬಿ ಆವೃತ್ತಿ 25,999 ರೂ.ಗೆ ಹಾಗೂ 8ಜಿಬಿ+128 ಜಿಬಿ ಆವೃತ್ತಿ 27,999 ರೂ.ಗೆ ದೊರಕುತ್ತಿದೆ. ಇದರ ಜೊತೆಗೆ ಕೂಪನ್‍ ರಿಯಾಯಿತಿ ಹಾಗೂ ಕೆಲವು ಕ್ರೆಡಿಟ್‍ ಕಾರ್ಡ್‍ ಮೂಲಕ ಕೊಂಡರೆ ಹೆಚ್ಚುವರಿಯಾಗಿ 2250 ರೂ. ರಿಯಾಯಿತಿ ಕೂಡ ದೊರಕುತ್ತದೆ.

Advertisement

ವಿನ್ಯಾಸ ಮತ್ತು ಪರದೆ: ಸಾಮಾನ್ಯವಾಗಿ ಸ್ಯಾಮ್‍ ಸಂಗ್‍ನ ಮಧ್ಯಮ ಸರಣಿಯ ಫೋನ್‍ ಗಳು ಕೊಂಚ ದಪ್ಪ ಹಾಗೂ ತೂಕ ಹೊಂದಿರುತ್ತವೆ. ಆದರೆ ಈ ಮೊಬೈಲ್‍ ಫೋನ್‍ ತುಂಬಾ ತೆಳುವಾಗಿದ್ದು, ಕೈಯಲ್ಲಿ ಹಿಡಿದರೆ ಬಹಳ ಹಗುರವಾಗಿದೆ. “ಮೊಬೈಲ್‍ ಇಷ್ಟು ಲೈಟ್‍ ಆದ್ರೆ ಹೇಗೆ ಸ್ವಾಮಿ?!”’ ಎನ್ನುವಂತಿದೆ! ಪ್ರತಿಸ್ಪರ್ಧಿ ಬ್ರಾಂಡ್‍ಗಳು ಸ್ಲಿಮ್‍ ಆದ ಫೋನ್‍ ನೀಡುತ್ತಿರುವುದರಿಂದ ತಾನೇನು ಕಡಿಮೆ ಎಂದು ಸ್ಯಾಮ್‍ ಸಂಗ್‍ 7.4 ಮಿ.ಮೀ.ನಷ್ಟು ತೆಳುವಾದ ಫೋನ್‍ ಹೊರತಂದಂತಿದೆ.ಹಿಂಬದಿ ಪಾಲಿಕಾರ್ಬೊನೆಟ್‍ ದೇಹ ಹೊಂದಿದ್ದರೂ, ಗಾಜನ್ನು ಹೋಲುವ ಪ್ರೀಮಿಯಂ ನೋಟವಿದೆ. ಹಿಂಬದಿಯಲ್ಲಿ ಎಡ ಮೂಲೆಯಲ್ಲಿ ಮೂರು ಕ್ಯಾಮರಾ ಲೆನ್ಸ್ ಗಳಿಗಾಗಿ ಉಬ್ಬಿದ ವಿನ್ಯಾಸವಿದೆ. ಮುಂಬದಿಯಲ್ಲಿ ಮಧ್ಯದಲ್ಲಿ ಸೆಲ್ಫಿ ಕ್ಯಾಮರಾಗಾಗಿ ಪಂಚ್‍ ಹೋಲ್‍ ಡಿಸ್‍ ಪ್ಲೇ ಇದೆ. ಫೋನಿನ ಅಂಚುಗಳು ಹೆಚ್ಚು ವೃತ್ತಾಕಾರ ಇಲ್ಲದ ಕಾರಣ ಪರದೆ ಆಕರ್ಷಕವಾಗಿ ಕಾಣುತ್ತದೆ. ಆನ್‍ ಆಫ್‍ ಬಟನ್‍ನಲ್ಲಿ ಬೆರಳಚ್ಚು ಸ್ಕ್ಯಾನರ್ ನೀಡಲಾಗಿದೆ.

6.7 ಇಂಚಿನ ಎಫ್‍ಎಚ್‍ಡಿ ಪ್ಲಸ್ ರೆಸ್ಯೂಲೇಷನ್ ಪರದೆ ಹೊಂದಿದ್ದು, ಸೂಪರ್ ಅಮೋಲೆಡ್‍ ಪರದೆಗೆ ಗೊರಿಲ್ಲಾ ಗ್ಲಾಸ್‍ 5 ರಕ್ಷಣೆ ಇದೆ. 120 ಹರ್ಟ್ಜ್ ರಿಫ್ರೆಶ್‍ ರೇಟ್‍ ಇದ್ದು, ಒಟ್ಟಾರೆ ಪರದೆಯ ಗುಣಮಟ್ಟ ಚೆನ್ನಾಗಿದೆ. ಸ್ಯಾಮ್‍ ಸಂಗ್‍ ಫೋನುಗಳು ಅಮೋಲೆಡ್‍ ಪರದೆಗೆ ಹೆಸರಾಗಿದ್ದು, ಈ ಫೋನ್‍ ಸಹ ಡಿಸ್ ಪ್ಲೇ ವಿಷಯದಲ್ಲಿ ಅದನ್ನು ಸುಳ್ಳು ಮಾಡುವುದಿಲ್ಲ. ಚಿತ್ರಗಳು, ವೆಬ್‍ ಪುಟಗಳು, ಆಪ್‍ಗಳ ನೋಟ ಎಲ್ಲವೂ ಶ್ರೀಮಂತಿಕೆಯಿಂದ ಕಾಣುತ್ತದೆ.

ಪ್ರೊಸೆಸರ್-ಕಾರ್ಯಾಚರಣೆ: ಇದರಲ್ಲಿ ಅಳವಡಿಸಿರುವುದು ಸ್ನಾಪ್‍ಡ್ರಾಗನ್‍ 778ಜಿ ಪ್ರೊಸೆಸರ್. ಇದು ಮಧ್ಯಮ ಸರಣಿಯ ಪ್ರೊಸೆಸರ್‍ ಗಳಲ್ಲಿ ಉನ್ನತವಾದುದು. ಎಂಟು ಕೋರ್‍ ಗಳ. 6 ನ್ಯಾನೋಮೀಟರ್‍ ನ ಈ ಪ್ರೊಸೆಸರ್ ಗರಿಷ್ಠ 2.4 ಗಿಗಾಹರ್ಟ್ಜ್ ವೇಗ ಹೊಂದಿದೆ. 5ಜಿ ನೆಟ್‍ ವರ್ಕ್‍ 11 ಬ್ಯಾಂಡ್‍ ಗಳನ್ನು ಹೊಂದಿದೆ. ಹಾಗಾಗಿ ಆಪ್‍ಗಳು ತೆರೆದುಕೊಳ್ಳುವಿಕೆ, ವೆಬ್‍ ಪುಟಗಳ ತೆರೆದುಕೊಳ್ಳುವಿಕೆ ವೇಗವಾಗಿದೆ. ಆಂಡ್ರಾಯ್ಡ್ 11 ಯೂಐಗೆ ಸ್ಯಾಮ್‍ಸಂಗ್‍ನ ಒನ್‍ ಯೂಐ 3.1 ಸಂಯೋಜನೆ ಮಾಡಲಾಗಿದೆ.

ಸ್ಯಾಮ್‍ ಸಂಗ ಇತ್ತೀಚಿಗೆ ಯೂಸರ್ ಇಂಟರ್ ಫೇಸ್‍ನಲ್ಲಿ ವಾಲ್‍ ಪೇಪರ್ ಗಳು, ಲಾಕ್‍ ಸ್ಕ್ರೀನ್‍ ವಾಲ್‍ ಪೇಪರ್‍ ಗಳ ಅಳವಡಿಕೆಯಲ್ಲೆಲ್ಲ ಅಪ್ ಡೇಟ್‍ ಆಗಿದ್ದು, ಪರದೆ ತೆರೆದರೆ ವರ್ಣರಂಜಿತವಾಗಿ ಕಾಣುತ್ತೆ. ಫೋನನ್ನು ಬಳಸುತ್ತಿದ್ದರೆ ಒಂದು ಮಧ್ಯಮ ವರ್ಗದ ಮೊಬೈಲ್‍ ಫೋನ್‍ಗಳಿಗಿಂತ ಸ್ವಲ್ಪ ಹೆಚ್ಚಿನ ವೇಗದ ಕಾರ್ಯಾಚರಣೆ ಅನುಭವಕ್ಕೆ ಬರುತ್ತದೆ.
ಕ್ಯಾಮರಾ: ಸ್ಯಾಮ್‍ ಸಂಗ್‍ನ ಆರಂಭಿಕ ದರ್ಜೆಯ ಫೋನ್‍ಗಳು ಕೂಡ ಕ್ಯಾಮರಾದಲ್ಲಿ ಸೈ ಎನಿಸಿಕೊಳ್ಳುತ್ತವೆ. ಈ ಫೋನು ಹಿಂಬದಿಯಲ್ಲಿ ಮೂರು ಲೆನ್ಸ್ ಹೊಂದಿದೆ. 64 ಮೆ.ಪಿ. ಮುಖ್ಯ ಸೆನ್ಸರ್, 12 ಮೆಪಿ. ಅಲ್ಟ್ರಾವೈಡ್‍ ಹಾಗೂ 5 ಮೆಪಿ. ಮ್ಯಾಕ್ರೋ ಸೆನ್ಸರ್ ಹೊಂದಿದೆ. ಕ್ಯಾಮರಾದಲ್ಲಿ ಚಿತ್ರಗಳ ಗುಣಮಟ್ಟ ಉತ್ತಮವಾಗಿದೆ. ಸ್ಪಷ್ಟವಾದ ಮತ್ತು ಹೈ ರೆಸ್ಯೂಲೇಷನ್‍ ಚಿತ್ರಗಳು ಮೂಡಿಬರುತ್ತವೆ.
ಸಿಂಗಲ್‍ ಟೇಕ್‍: ಕ್ಯಾಮರಾ ಆಪ್‍ ನಲ್ಲಿ ಸಿಂಗಲ್‍ ಟೇಕ್‍ ಎಂಬ ಆಯ್ಕೆ ಇದ್ದು, ಅದನ್ನು ಆಯ್ಕೆ ಮಾಡಿಕೊಂಡು ನೀವು ಚಲಿಸುವ ದೃಶ್ಯಗಳ ಫೋಟೋ ತೆಗೆದರೆ ಅದು ಮೂರ್ನಾಲ್ಕು ವಿಡಿಯೋ ತುಣುಕುಗಳನ್ನು, ನಾಲ್ಕೈದು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತದೆ. ಒಂದೇ ಶಾಟ್‍ ನಲ್ಲಿ ನಿಮಗೆ ಏಳೆಂಟು ರೀತಿಯ ಫೋಟೋಗಳು, 10 ಸೆಕೆಂಡ್‍ ಗಳ ಮೂರು ನಾಲ್ಕು ವಿಡಿಯೋ ತುಣುಕುಗಳು ದೊರಕುತ್ತವೆ. ಮುಂಬದಿಯಲ್ಲಿ 32 ಮೆಪಿ. ಕ್ಯಾಮರಾ ಇದೆ. ಇದರ ಗುಣಮಟ್ಟವೂ ಚೆನ್ನಾಗಿದೆ. ಸಂಜೆಯ ಮಬ್ಬು ಬೆಳಕಿನಲ್ಲೂ ಸೆಲ್ಫಿ ಸ್ಪಷ್ಟವಾಗಿ ಮೂಡಿ ಬರುತ್ತದೆ.
ಬ್ಯಾಟರಿ: ಇದರಲ್ಲಿ 5000 ಎಂಎಎಚ್‍ ಬ್ಯಾಟರಿ ಇದ್ದು, ಒಂದೂವರೆಯಿಂದ ಎರಡು ದಿನದ ಬಳಕೆಗೆ ಅಡ್ಡಿಯಿಲ್ಲ. ಇದು 25 ವ್ಯಾಟ್ಸ್ ವೇಗದ ಚಾರ್ಜರ್ ಅನ್ನು ಬೆಂಬಲಿಸುತ್ತದೆ. ಆದರೆ ಬಾಕ್ಸ್ ನಲ್ಲಿ 15 ವ್ಯಾಟ್ಸ್ ಚಾರ್ಜರ್‍ ನೀಡಲಾಗಿದೆ. ಈ ಚಾರ್ಜರ್ ನಲ್ಲಿ ಪೂರ್ತಿ ಚಾರ್ಜ್ ಆಗಲು ಸುಮಾರು ಒಂದೂ ಮುಕ್ಕಾಲು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಪ್ರತ್ಯೇಕವಾಗಿ 25 ವ್ಯಾಟ್ಸ್ ಚಾರ್ಜರ್‍ ನಲ್ಲಿ ಚಾರ್ಜ್ ಮಾಡಿದರೆ 1 ಗಂಟೆ 25 ನಿಮಿಷ ಹಿಡಿಯುತ್ತದೆ. ಸುಮಾರು 30 ಸಾವಿರ ರೂ. ದರದ ಫೋನಿನಲ್ಲೂ ಸ್ಯಾಮ್‍ ಸಂಗ್‍ 25 ವಾಟ್ಸ್ ವೇಗದ ಚಾರ್ಜರ್ ನೀಡುತ್ತಿಲ್ಲವೇಕೆ? ಎಂದು ಅನಿಸದಿರದು.

Advertisement

                                                                                                                                                – ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next