ಬೆಂಗಳೂರು: ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಹೆಸರು ಬಳಸಿಕೊಂಡು ದರೋಡೆಗೆ ಸಂಚು ರೂಪಿಸಿ ತನ್ನ ಎಂಟು ಮಂದಿ ತಂಡದ ಜತೆ ಮಂಗಳೂರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಪ್ರಮುಖ ಆರೋಪಿ ಕೇರಳ ಮೂಲದ ಟಿ. ಸ್ಯಾಮ್ ಪೀಟರ್ ಬೆಂಗಳೂರಿನಲ್ಲಿಯೂ ವಂಚಿಸಿರುವ ಸಂಗತಿ ಬಯಲಾಗಿದೆ.
ಕಳೆದ ಐದಾರು ತಿಂಗಳಿಂದ ಮಳಿಗೆಯ ಬಾಡಿಗೆ ಕೊಡದೆ ಮಾಲೀಕರಿಗೆ ವಂಚಿಸಿ ಪರಾರಿಯಾಗಿರುವ ಸಂಬಂಧ ಯಲಹಂಕ ನ್ಯೂಟೌನ್ ನಿವಾಸಿ ರೋಸಿ ಆರ್.ಪಿ.ದೇವಸಗಾಯಂ ಎಂಬವರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರ ವಿಚಾರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದರು.
ದೂರುದಾರರಾದ ರೋಸಿ ಪಿ.ದೇವಸಗಾಯಂ ಅವರು ಯಲಹಂಕ ಉಪನಗರದಲ್ಲಿ ಇಂಟರ್ ಬಿಯಿಂಗ್ ಕಂಪನಿ ನಡೆಸುತ್ತಿದ್ದಾರೆ. ಈ ಮಧ್ಯೆ 2018ರ ಏಪ್ರಿಲ್‌ನಲ್ಲಿ ರೋಸಿ ಅವರ ಬಳಿ ಬಂದು, ತಾನೂ ಸ್ಥಳೀಯ ನಿವಾಸಿ ಎನ್‌ಸಿಬಿಯಲ್ಲಿ ನಿರ್ದೇಶಕನಾಗಿದ್ದೇನೆ ಎಂದು ಆರೋಪಿ ಪರಿಚಯಿಸಿಕೊಂಡಿದ್ದಾನೆ. ನಂತರ ರೋಸಿ ಅವರ ಕಂಪನಿಯ ಒಂದು ಭಾಗದ ಜಾಗವನ್ನು ಬಾಡಿಗೆಗೆ ಪಡೆದುಕೊಂಡು ಎನ್‌ಸಿಬಿ ಕಚೇರಿ ತೆರೆದಿದ್ದು, ನಾಲ್ಕು ತಿಂಗಳವರೆಗೆ ಬಾಡಿಗೆ ಪಾವತಿಸಿದ್ದಾನೆ.
ಅನಂತರ ಮೂರು ತಿಂಗಳು ಬಾಡಿಗೆ ಕೊಡದೆ ತಲೆಮರೆಸಿಕೊಂಡಿದ್ದ. ಬಾಡಿಗೆ ಹಣ ಕೊಡುವಂತೆ ಕೇಳಿದಾಗ ಏಪ್ರಿಲ್ 2019ರ ಒಳಗಾಗಿ ಬಾಕಿ ಬಾಡಿಗೆ ಹಣ 67,741 ರೂ. ಕೊಟ್ಟು ಖಾಲಿ ಮಾಡುವುದಾಗಿ ಭರವಸೆ ನೀಡಿದ್ದ. ಆದರೆ, ಇದುವರೆಗೂ ಹಣ ಕೊಡದೆ, ಕಚೇರಿ ಖಾಲಿ ಮಾಡಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಎನ್‌ಸಿಬಿ ಅಧಿಕಾರಿ ಎಂದು ಹೇಳಿಕೊಂಡು ಮೋಸ ಮಾಡಿದ್ದಾನೆ ಎಂದು ರೋಸಿ ಅವರು ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸರು ಹೇಳಿದರು.
ತಿಂಗಳಿಗೆ ಒಂದೆರಡು ಬಾರಿ ಮಾತ್ರ ಭೇಟಿ: ಎನ್‌ಸಿಬಿ ಅಧಿಕಾರಿ ಎಂದು ಹೇಳಿಕೊಂಡಿದ್ದ ಆರೋಪಿ ತಿಂಗಳಿಗೆ ಒಂದೆರಡು ಬಾರಿ ಮಾತ್ರ ಕಚೇರಿಗೆ ಬರುತ್ತಿದ್ದ. ತಾನೂ ಎನ್‌ಸಿಬಿ ಅಧಿಕಾರಿ, ನೆರೆ ಜಿಲ್ಲೆ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಕಾರ್ಯನಿಮಿತ್ತ ಹೋಗುತ್ತಿರುತ್ತೇನೆ. ಹೀಗಾಗಿ ಕಚೇರಿಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ಇದೊಂದು ಕೇಂದ್ರ ಸರ್ಕಾರದ ಇಲಾಖೆಯಾದರಿಂದ ತಾನೂ ಯಾರೊಂದಿಗೂ ಹೆಚ್ಚು ಬೆರೆಯುವಂತಿಲ್ಲ.
ಯಾವುದೇ ವಿಚಾರವನ್ನು ಹಂಚಿಕೊಳ್ಳುವಂತಿಲ್ಲ ಎಂದು ಸ್ಥಳೀಯರಿಗೆ ಹೇಳಿಕೊಳ್ಳುತ್ತಿದ್ದ. ಹೀಗಾಗಿ ಆತನ ಬಳಿ ಯಾರು ಮಾತನಾಡುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು. ಸ್ಯಾಮ್ ಪೀಟರ್ ವಿರುದ್ಧ ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ಕೇರಳ ಸೇರಿ ದೇಶದ ವಿವಿಧೆಡೆ ನಾನಾ ಪ್ರಕರಣಗಳು ದಾಖಲಾಗಿದ್ದು, ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದಾನೆ. ಈತನ ವಿರುದ್ಧ ಸಿಬಿಐನಲ್ಲಿಯೂ ಪ್ರಕರಣ ದಾಖಲಾಗಿದ್ದು, ಸದ್ಯದಲ್ಲೇ ಸಿಬಿಐ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.