Advertisement
ಚಿಕ್ಕಬಳ್ಳಾಪುರ: ರಾಮಾಯಣದಲ್ಲಿ ರಾಮನ ಜೀವನದ ವೃತ್ತಾಂತವನ್ನಷ್ಟೇ ಹೇಳದೆ ರಾಜನೀತಿ, ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆ ಮತ್ತು ಪರಿಶ್ರಮವನ್ನು ಸಮಾಜಕ್ಕೆ ಸಾರಿದ ಮಹಾನ್ ಮೇದಾವಿ ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳು, ಚಿಂತನೆಗಳು ಇಂದಿಗೂ ಜೀವಂತವಾಗಿವೆ ಎಂದು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
Related Articles
Advertisement
ಪಲ್ಲಕ್ಕಿಗಳ ಮೆರವಣಿಗೆ: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಅವರ ಭಾವಚಿತ್ರ, ಸ್ತಬ್ಧಚಿತ್ರಗಳು ಹಾಗೂ ಪಲ್ಲಕ್ಕಿಯೊಂದಿಗೆ ಶ್ರೀ ರಂಗನಾಥಸ್ವಾಮಿ ದೇವಾಲಯದಿಂದ ನಗರದ ಬಿ.ಬಿ. ರಸ್ತೆಯಲ್ಲಿರುವ ಒಕ್ಕಲಿಗರ ಕಲ್ಯಾಣ ಮಂಟಪದವರೆಗೆ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು. ಸುಮಾರು 50 ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ವಿಶೇಷ ಅಲಂಕಾರದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಮಹರ್ಷಿಗಳ ಜಯಂತಿಗೆ ಕಳೆ ತಂದುಕೊಟ್ಟವು. ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಗಾರಡಿಬೊಂಬೆ ಹಾಗೂ ಕೀಲುಕುದುರೆ ಮತ್ತಿತರ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು. ಮೆರವಣಿಗೆ ಉದ್ದಕ್ಕೂ ಪಟಾಕಿ ಸಿಡಿಸಿ ಸಮುದಾಯದ ಯುವಕರು ನೃತ್ಯ ಪ್ರದರ್ಶಿಸಿದರು.
ಸಂಸದರು ಬಂದರೂ ಸ್ವಾಗತಿಸಲು ಯಾರು ಇರಲಿಲ್ಲ: ಜಿಲ್ಲಾಡಳಿತದಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂಸದ ಬಿ.ಎನ್.ಬಚ್ಚೇಗೌಡ ಆಗಮಿಸಿದರೂ ಅವರನ್ನು ಸ್ವಾಗತಿಸಲು ಸ್ಥಳದಲ್ಲಿ ಯಾರು ಇರಲಿಲ್ಲ. ಸಂಸದರು ಬರುವಷ್ಟರದಲ್ಲಿ ಮೆರವಣಿಗೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ, ಸಿಇಒ ಉದ್ಘಾಟಿಸಿದ್ದರು. ಮೊದಲು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ಸಂಸದರಿಗೆ ಖಾಲಿ ಕುರ್ಚಿಗಳ ದರ್ಶನ ಆಯಿತು.
ಅಲ್ಲಿಂದ ಮೆರವಣಿಗೆ ಬಳಿ ಬರುವಷ್ಟರಲ್ಲಿ ಮೆರವಣಿಗೆ ಆರಂಭಗೊಂಡಿತು. ಕೊನೆಗೂ ಸಂಸದರು ಮೆರವಣಿಗೆಯಲ್ಲಿ ಕೆಲಕಾಲ ಪಾಲ್ಗೊಂಡು ಅಲ್ಲಿಂದ ದೇವನಹಳ್ಳಿ, ಹೊಸಕೋಟೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳಿಸಿದರು. ಸಂಸದರ ಆಪ್ತ ಸಹಾಯಕರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಫಲ ಕೊಡಲಿಲ್ಲ. ಸಂಸದರು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸದೇ ಮೆರವಣಿಗೆಯಲ್ಲಿದ್ದು ಹೊರಟರು. ಇನ್ನೂ ಅಧಿಕಾರಿಗಳು ಶಿಷ್ಟಾಚಾರ ಮರೆತು ತಾವೇ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿದ್ದು, ಚರ್ಚೆಗೆ ಗ್ರಾಸವಾಯಿತು.