Advertisement

ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಉದ್ಘಾಟನೆಗೆ ಸಿದ್ಧ 

04:18 AM Dec 30, 2018 | |

ಪುತ್ತೂರು : ಇಲ್ಲಿನ ಬಿರುಮಲೆ ಗುಡ್ಡದಲ್ಲಿ ನಿರ್ಮಾಣ ಹಂತದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಫೆಬ್ರವರಿ ತಿಂಗಳಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. 2ನೇ ಹಂತದ ಕಾಮಗಾರಿಗೆ ಅನುದಾನವೂ ಬಿಡುಗಡೆಗೊಂಡಿದೆ. ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರು ಅಭಿವೃದ್ಧಿಯ ಕನವರಿಕೆಯಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ಮುಂದೆ ಉಸಿರಾಡುವ ಗಾಳಿಗೂ ತತ್ವಾರ ಎದುರಾಗ ಬಹುದು. ಜಾಗತಿಕ ತಾಪಮಾನದ ಬಿಸಿ ಬಹುವಾಗಿ ಕಾಡಬಹುದು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಪುತ್ತೂರಿನ ಎತ್ತರದ ಪ್ರದೇಶದಲ್ಲಿ ಸಸ್ಯೋದ್ಯಾನ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿತ್ತು.

Advertisement

ಅರಣ್ಯ ಇಲಾಖೆಯ ಈ ಮಹತ್ವ ಪೂರ್ಣ ಯೋಜನೆಗೆ ಪುತ್ತೂರು ತಾಲೂಕಿನಲ್ಲಿ ಬಿರುಮಲೆ ಗುಡ್ಡವೇ ಸೂಕ್ತ ಎಂದು ಅಧಿಕಾರಿಗಳು ನಿಶ್ಚಯಿಸಿದ್ದರು. ಅದರಂತೆ ಬಿರುಮಲೆ ಗುಡ್ಡದ ತುದಿಯಲ್ಲಿ ಸಸ್ಯೋದ್ಯಾನಕ್ಕೆಂದು ಜಾಗವನ್ನು ಗೊತ್ತುಪಡಿಸಲಾಯಿತು. ಈ ಹಿಂದೆ ಬಿರುಮಲೆ ಗುಡ್ಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬಿರುಮಲೆ ಗುಡ್ಡ ಅಭಿವೃದ್ಧಿ ಸಮಿತಿಯೂ ಅರಣ್ಯ ಇಲಾಖೆಯ ಯೋಜನೆಗೆ ಸಮ್ಮತಿಸಿತು.

ಒಂದನೇ ಹಂತದ ಅನುದಾನವಾಗಿ 40 ಲಕ್ಷ ರೂ. ಬಿಡುಗಡೆಗೊಂಡಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಇದಕ್ಕೆ ಮೊದಲೇ 2ನೇ ಹಂತದ ಕಾಮಗಾರಿಯೂ ಪೂರ್ಣಗೊಳ್ಳಬೇಕಿತ್ತು. ಆದರೆ ಸರಕಾರದ ಹಂತದಲ್ಲಿ ಅನುದಾನ ಬಿಡುಗಡೆಗೆ ಕೆಲ ಅಡ್ಡಿ ಎದುರಾಯಿತು. ಸರಕಾರ ಬದಲಾದದ್ದು, ಅರಣ್ಯ ಇಲಾ ಖೆಯ ಸಚಿವರ ಆಯ್ಕೆ ಮೊದಲಾದ ವಿಚಾರಗಳಿಂದಾಗಿ 2ನೇ ಹಂತದ ಅನುದಾನ ಬಿಡುಗಡೆಗೆ ವಿಳಂಬವಾಯಿತು. ಪ್ರಸ್ತಾವನೆ, ಕ್ರಿಯಾಯೋಜನೆಗಳು ಸರಕಾರದ ಮಟ್ಟದಲ್ಲೇ ಬಾಕಿ ಆಗತೊಡಗಿತು. ಸದ್ಯಕ್ಕೆ ಸರಕಾರ ಸ್ಥಿಮಿತಕ್ಕೆ ಬಂದಂತೆ ಭಾಸವಾಗುತ್ತಿದೆ. ಅರಣ್ಯ ಇಲಾಖೆ 2ನೇ ಹಂತದ ಅನುದಾನವಾಗಿ 20 ಲಕ್ಷ ರೂ. ಅನ್ನು ಬಿಡುಗಡೆ ಮಾಡಿದೆ. ಇದರ ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ 3ನೇ ಹಂತದ ಅನುದಾನ ಬಿಡುಗಡೆ ಆಗಲಿದೆ. ಅದಕ್ಕೆ ಮೊದಲು ಉದ್ಘಾಟನೆಗೊಳ್ಳಲಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಜನವರಿ ಕೊನೆ ವಾರ ಅಥವಾ ಫೆಬ್ರವರಿ ತಿಂಗಳ ಪ್ರಾರಂಭದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಕಾಮಗಾರಿ ಪೂರ್ಣ
1ನೇ ಹಂತದಲ್ಲಿ ಹೆಚ್ಚಿನ ಕೆಲಸಗಳು ಪೂರ್ಣಗೊಂಡಿವೆ. ಪೆರಾಗೋಲ, ವಾಕಿಂಗ್‌ ಪಾಥ್‌ ವೇ, ಕಟ್ಟಡ ಮರು ನಿರ್ಮಾಣ, ಆರ್ಕ್‌ ವಿಸ್ತರಣೆ, ಬೋರ್‌ವೆಲ್‌ ಮೊದಲಾದ ಕೆಲಸಗಳನ್ನು ನಡೆಸಲಾಗಿದೆ. ಗುಡ್ಡದಂತೆ ಭಾಸವಾಗುತ್ತಿದ್ದ ಬಿರುಮಲೆಗೆ ಹೊಸ ಕಳೆಯನ್ನು ತಂದುಕೊಡುವಲ್ಲಿ ಮೊದಲ ಹಂತದ ಕಾಮಗಾರಿ ಯಶಸ್ವಿಯಾಗಿದೆ.

2ನೇ ಹಂತದ ಕಾರ್ಯ
ಬಿಡುಗಡೆಗೊಂಡ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ ಆವರಣ ಗೋಡೆ, ಆರ್ಕ್‌, ಬೋರ್ಡ್‌ಗಳು ಮತ್ತು ಮಾಹಿತಿ ಕೇಂದ್ರ, ನೀರಿನ ಟ್ಯಾಂಕ್‌, ಫೌಂಟೈನ್‌ ರಿಪೇರಿ, ಟಿಕೆಟ್‌ ಕೌಂಟರ್‌, ಶೌಚಾಲಯ ನಿರ್ವಹಣೆ, ಮಕ್ಕಳ ಪಾರ್ಕ್‌ಗೆ ಸಾಮಗ್ರಿ ಖರೀದಿ, ಕಾವಲುಗಾರರ ನೇಮಕ ಹಾಗೂ 800 ಗಿಡಗಳ ನೆಡುವ ಕಾರ್ಯ ನಡೆಯಲಿದೆ. 

Advertisement

ಸಮಿತಿ ರಚನೆ
ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಸಹಕಾರಿ ಆಗಲಿದೆ. ಉತ್ತಮ ಗಾಳಿ ಪಡೆದುಕೊಳ್ಳಲು ಜನರು ಇಲ್ಲಿಗೆ ಆಗಮಿಸಬಹುದು. ಉದ್ಘಾಟನೆ ಬಳಿಕ ನಿರ್ವಹಣೆಗೆಂದು ಸಾರ್ವಜನಿಕ ಸಮಿತಿ ರಚಿಸುತ್ತೇವೆ. ಇದರ ಸಲಹೆ ಮೇರೆಗೆ ಮುಂದಿನ ಅಭಿವೃದ್ಧಿ ಕೆಲಸ ಮಾಡುತ್ತೇವೆ.
-ಎನ್‌. ಸುಬ್ರಹ್ಮಣ್ಯ ರಾವ್‌,
ಎಸಿಎಫ್‌, ಅರಣ್ಯ ಇಲಾಖೆ

ಉದ್ಘಾಟನೆ ಬಳಿಕ
ಉದ್ಘಾಟನೆ ನಡೆಯುತ್ತಿದ್ದಂತೆ ಸಾರ್ವ ಜನಿಕರ ಪ್ರವೇಶಕ್ಕೆ ಸಸ್ಯೋದ್ಯಾನ ಮುಕ್ತವಾಗಲಿದೆ. ಆದರೆ ಈಗಲೇ ಟಿಕೆಟ್‌ ನಿಗದಿ ಮಾಡಬೇಕೋ ಬೇಡವೋ ಎನ್ನುವ ತೀರ್ಮಾನ ಇನ್ನೂ ನಡೆದಿಲ್ಲ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ, ಮಕ್ಕಳ ಪ್ರವೇಶಕ್ಕೆ ಸಸ್ಯೋದ್ಯಾನ ಮುಕ್ತವಾಗಿರಲಿದೆ. ಬಿಡುವಿನ ವೇಳೆಯಲ್ಲಿ ಸಸ್ಯೋದ್ಯಾನಕ್ಕೆ ಆಗಮಿಸಿ ಶುದ್ಧವಾದ ಗಾಳಿ ಸೇವಿಸಿಬಹುದು. ವಾಕಿಂಗ್‌ ನಡೆಸ ಬಹುದು. ಮನಃಶಾಂತಿ ಪಡೆಯಬಹುದು. ಮಕ್ಕಳು ಮನಸೋ  ಇಚ್ಛೆ ಆಟ ಆಡಬಹುದು.

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next