ಮಣಿಪಾಲ: ಉತ್ತಮ ಪರಿಸರವಿದ್ದಾಗ ಸಕಾಲದಲ್ಲಿ ಮಳೆ, ಬೆಳೆಯೊಂದಿಗೆ ಆರೋಗ್ಯವೂ ವೃದ್ಧಿಯಾಗುತ್ತದೆ. ಅದಕ್ಕಾಗಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಕರೆ ನೀಡಿದರು.
ಮಣಿಪಾಲ ಸರಳೇಬೆಟ್ಟಿನ ಶಿವಪ್ರೇರಣ ಚಾರಿ ಟೆಬಲ್ ಟ್ರಸ್ಟ್, ಸ್ನೇಹ ಸಂಗಮ, ಉಡುಪಿಯ ಪರಿವಾರ್ ಚಾರಿಟೆಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ಸರಳೇಬೆಟ್ಟು ರತ್ನ ಸಂಜೀವ ಕಲಾ ಮಂಡಲದ ಆವರಣದಲ್ಲಿ ರವಿವಾರ ನಡೆದ ಉತ್ತಮ ತಳಿಯ ಗಿಡಗಳನ್ನು ಉಚಿತವಾಗಿ ವಿತರಿಸುವ “ಸಸ್ಯೋತ್ಸವ’ವನ್ನು ಅಶ್ವತ್ಥ ಗಿಡಕ್ಕೆ ನೀರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನೆಟ್ಟ ಗಿಡಗಳ ಉಳಿವಿಗಾಗಿ ಪರಿಸರ ದಲ್ಲಿರುವ ಬಾವಿ, ಕೆರೆ, ತೊರೆಗಳನ್ನು ರಕ್ಷಿಸಿಕೊಳ್ಳಬೇಕು. ಅರಣ್ಯ ಸಂಪತ್ತು ಸಮೃದ್ಧವಾದರೆ ಸಮೃದ್ಧ ದೇಶದ ಕನಸು ಸಾಕಾರವಾಗಲಿದೆ ಎಂದರು. ಶಾಸಕ ಯಶ್‌ಪಾಲ್ ಎ. ಸುವರ್ಣ ಅವರು, ಸಸ್ಯ ನೆಡುವ ಮೂಲಕ ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಗೌರವಾ ಧ್ಯಕ್ಷ, ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಗಿಡ ಮರಗಳನ್ನು ಕಡಿಯುತ್ತಿದ್ದೇವೆ. ಇದನ್ನು ಸರಿದೂಗಿಸಬೇಕಾದರೆ ಗಿಡಗಳನ್ನು ನೆಟ್ಟು ಪೋಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ತಿಮ್ಮಕ್ಕನವರ ಸಾಕು ಮಗ ಉಮೇಶ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಉದ್ಯಮಿ ಫರ್ವೇಜ್, ಮಾಹೆ ವಿ.ವಿ. ಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು, ನಗರ ಸಭೆ ಸದಸ್ಯೆ ವಿಜಯಲಕ್ಷ್ಮೀ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಶಿವಾನಂದ ಪ್ರಭು, ಅಶ್ವಿನಿ ಪೂಜಾರಿ, ಸ್ನೇಹ ಸಂಗಮದ ಅಧ್ಯಕ್ಷ ಗುರುರಾಜ ಭಂಡಾರಿ ಸರಳೇಬೆಟ್ಟು, ಪ್ರಧಾನ ಕಾರ್ಯದರ್ಶಿ ಸಂದೇಶ ಪ್ರಭು, ಮಂಜುನಾಥ ಮಣಿಪಾಲ, ರಮಾ ನಂದ ಸಾಮಂತ ಉಪಸ್ಥಿತರಿದ್ದರು.
ನಮಾಮಿ ಗಂಗೆ ಯೋಜನೆಯ ರೂಪರೇಖೆಗಳ ಬಗ್ಗೆ ಎಂಐಟಿ ಸಹಾಯಕ ನಿರ್ದೇಶಕ ರಾಘವೇಂದ್ರ ಹೊಳ್ಳ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಧನಂಜಯ ಗಿಡ ನೆಡುವ, ಸಂರಕ್ಷಿಸುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಸಮ್ಮಾನ: ಸಾಲುಮರದ ತಿಮ್ಮಕ್ಕ ಅವರನ್ನು ಸಮ್ಮಾನಿಸ ಲಾಯಿತು. ಕೇದಾರೋತ್ಥಾನ ಟ್ರಸ್ಟ್ ಮೂಲಕ ಹಡಿಲು ಭೂಮಿ ಯಲ್ಲಿ ಕೃಷಿ ಮಾಡಿದ ರಘುಪತಿ ಭಟ್ ಅವರನ್ನು ಸಾಲುಮರದ ತಿಮ್ಮಕ್ಕ ಸಮ್ಮಾನಿಸಿದರು. ತಿಮ್ಮಕ್ಕನವರ 112ನೇ ಜನ್ಮ ದಿನೋತ್ಸವದ ಕೈಪಿಡಿ ಯನ್ನು ರಘುಪತಿ ಭಟ್ ಬಿಡುಗಡೆಗೊಳಿಸಿದರು. ಎಲ್ಲ ಪ್ರಕಾರದ ಹೂವಿನ ಗಿಡಗಳು, ವಿವಿಧ ಜಾತಿಯ ಹಣ್ಣಿನ ಗಿಡಗಳು ಹಾಗೂ ಇನ್ನಿತರ ಪರಿಸರಸ್ನೇಹಿ ಸುಮಾರು 15 ಸಾವಿರ ಗಿಡಗಳನ್ನು ವಿತರಿಸಲಾಯಿತು.
ಶಿವಪ್ರೇರಣ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ ದರು. “ಉದಯವಾಣಿ’ಯ ನಿವೃತ್ತ ಹಿರಿಯ ಉಪಸಂಪಾದಕ ಎಸ್. ನಿತ್ಯಾನಂದ ಪಡ್ರೆ ನಿರೂಪಿಸಿದರು. ಮಮತಾ ಸಾಮಂತ್ ವಂದಿಸಿದರು.