Advertisement
Related Articles
Advertisement
ಹತ್ತಾರು ಕಿ.ಮೀ. ದೂರದಿಂದ ರೈತರ ಬೋರ್‌ವೆಲ್, ಕೈಪಂಪು, ಕೆರೆ, ರಸ್ತೆ ಪಕ್ಕದಲ್ಲಿ ಗುಂಡಿಯಲ್ಲಿ ನಿಂತಿದ್ದ ಅಲ್ಪ ಸ್ವಲ್ಪ ಮಳೆ ನೀರನ್ನೇ ಸೈಕಲ್‌ನಲ್ಲಿ ತಂದು ಗಿಡಗಳಿಗೆ ಹಾಕಿ, ಅವುಗಳನ್ನು ಕುರಿ ಮೇಕೆ ತಿನ್ನದಂತೆ ನೋಡಿಕೊಂಡು ಹೆಮ್ಮರವಾಗಿ ಬೆಳೆಸಿದ್ದಾರೆ. ಶಿರಾ- ತುಮಕೂರು ಮಧ್ಯೆ ಬರುವ ಸೀಬಿ ಗ್ರಾಮದ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಬಳಿ ಇವರು ಬೆಳೆಸಿರುವ ಹತ್ತಾರು ಆಲದ ಮರಗಳು ಇಂದಿಗೂ ಸಾವಿರಾರು ಭಕ್ತರು, ಕುರಿಗಾಹಿಗಳಿಗೆ ನೆರಳು ನೀಡುತ್ತಿವೆ. ಇಲ್ಲಿನ ಜನ ಈಗಲೂ ಶಿವಣ್ಣನನ್ನು ನೆನೆಯುತ್ತಾರೆ.
30 ವರ್ಷಗಳಿಂದ ಅರಣ್ಯ ರಕ್ಷಣೆ, ಸಸಿ ನೆಟ್ಟು ಮರಗಿಡಗಳನ್ನು ಬೆಳೆಸುವುದಕ್ಕೇ ತಮ್ಮ ಜೀವನ ಮುಡುಪಿಟ್ಟಿರುವ ಶಿವಣ್ಣರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ಇತ್ತೀಚೆಗೆ ಸರ್ಕಾರ ಅವರ ಸೇವೆಯನ್ನು ಕಾಯಂ ಮಾಡಿದೆ. ಆದರೆ, ಇನ್ನೂ ಆದೇಶ ಬಂದಿಲ್ಲ ಎಂದು ನೊಂದು ನುಡಿಯುತ್ತಾರೆ ಶಿವಣ್ಣ.
ಕಾಯ್ದಿಟ್ಟ ಅರಣ್ಯ, ಗುಂಡು ತೋಪು, ರಸ್ತೆ ಬದಿಗಳಲ್ಲಿ ಸಹಸ್ರಾರು ಸಸಿಗಳನ್ನು ನೆಟ್ಟು ಪೋಷಿಸುತ್ತಿರುವ ಶಿವಣ್ಣ, ರೇಂಜರ್ ಸುರೇಶ್ ಅವರ ಸಹಕಾರದಿಂದಾಗಿ ಶಿರಾ-ಅಮರಾಪುರ ಮತ್ತು ತಾವರೇಕೆರೆ ಸಂಪರ್ಕಿಸುವ ಭೂತಪ್ಪನಗುಡಿ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 6 ಕಿ.ಮೀ.ವರೆಗೆ 1000 ಬೇವು, 200 ನೇರಳೆ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಕಳೆದ ಮುಂಗಾರು ಮಳೆಗಾಲದಲ್ಲಿ ನೆಟ್ಟಿದ್ದ ಸಸಿಗಳು ಈಗ ಉತ್ತಮವಾಗಿ ಬೆಳೆದಿವೆ. ಇವುಗಳಿಗೆ ಔಷಧಿ ಸಿಂಪಡಿಸಿ, ಅಕ್ಕಪಕ್ಕದ ರೈತರ ಬೋರ್‌ವೆಲ್‌ನಿಂದ ನೀರು ಖರೀದಿಸಿ ಸಕಾಲಕ್ಕೆ ಟ್ಯಾಂಕರ್‌ನಲ್ಲಿ ತಂದು ಸಸಿಗಳಿಗೆ ಹಾಕುತ್ತಿದ್ದಾರೆ.
ಇದಕ್ಕೇನೋ ಇಲಾಖೆ ಹಣ ಕೊಡುತ್ತದೆ. ಆದರೆ, ಸಸಿ ನೆಡಲು, ಗುಂಡಿ ತೋಡಲು, ಗಾಳಿ ಮಳೆಗೆ ಮುರಿದು ಬೀಳದಂತೆ ಗಿಡಗಳಿಗೆ ಕಡ್ಡಿಗಳನ್ನು ಕಟ್ಟಲು, ಇತರೆ ಸಣ್ಣಪುಟ್ಟ ಕೆಲಸಗಳಿಗೆ ಕೂಲಿಯಾಳು ಬೇಕಾಗುತ್ತಾರೆ. ಇವರಿಗೆಲ್ಲ ಶಿವಣ್ಣ ತಮ್ಮ ಕೈಯಿಂದಲೇ ಹಣ ನೀಡುತ್ತಾರೆ. ತಮಗೆ ಬರುವ 13 ಸಾವಿರ ರೂ. ವೇತನದಲ್ಲಿ ಸಂಸಾರ ನಡೆಸುವುದೇ ದುಸ್ತರ. ಇಂತಹದರಲ್ಲಿ, ರೈತರಿಗೆ ಅನುಕೂಲವಾಗಲಿ, ಜನರಿಗೆ ನೆರಳಿನ ವ್ಯವಸ್ಥೆಯಾಗಲಿ ಎಂಬ ಕಾರಣಕ್ಕೆ ಕೈಯಿಂದಲೇ ಹಣ ಖರ್ಚು ಮಾಡಿಕೊಂಡು ಸಸಿಗಳನ್ನು ಬೆಳೆಸುತ್ತಿದ್ದೇನೆ ಎನ್ನುತ್ತಾರೆ ಶಿವಣ್ಣ.
ಕುರಿ ಮೇಕೆಗಳ ಕಾಟಈಗ 1200 ಸಸಿ ನೆಟ್ಟು ಪೋಷಿಸುತ್ತಿರುವ ಶಿವಣ್ಣನವರಿಗೆ ಕುರಿ, ಮೇಕೆಗಳ ಕಾಟವೇ ಹೆಚ್ಚು. ಸಮರ್ಪಕ ಮಳೆಯಾಗದ ಕಾರಣ ಕುರಿ ಮೇಕೆಗಳಿಗೆ ಮೇವು ಸಿಗುತ್ತಿಲ್ಲ. ಹೀಗಾಗಿ ಕುರಿಗಾಹಿಗಳು ಕೆಲವೊಮ್ಮೆ ತಾವು ಕಷ್ಟಪಟ್ಟು ಬೆಳೆಸಿದ್ದ ಗಿಡಗಳನ್ನೇ ಕಡಿದು ಕುರಿ ಮೇಕೆಗಳಿಗೆ ಹಾಕುತ್ತಾರೆ. ಇವರನ್ನು ಜೋರಾಗಿ ಗದರಿದರೆ ಬೆಳಗಾಗುವುದರೊಳಗೆ ಗಿಡವನ್ನೇ ಇಲ್ಲವಾಗಿಸುತ್ತಾರೆ. ಹೀಗಾಗಿ ತಾವು ಯಾರನ್ನೂ ಎದುರುಹಾಕಿಕೊಳ್ಳದೇ ಪ್ರೀತಿಯಿಂದ ಗಿಡಗಳನ್ನು ಕಡಿಯದಂತೆ ಮನವಿ ಮಾಡುತ್ತೇನೆ ಎನ್ನುತ್ತಾರೆ ಕಾವಲುಗಾರ ಶಿವಣ್ಣ. ಮೂರು ವರ್ಷದ ನಂತರ ರೈತರಿಗೆ
ಶಿರಾ ತಾಲೂಕಿನ ಹುಳಿಗೆರೆ, ಗಿಡುಗನಹಳ್ಳಿ, ಭೂತಪ್ಪನ ಗುಡಿ, ಅಮರಾಪುರ ಹೀಗೆ ಹಲವು ರಸ್ತೆ ಬದಿಯಲ್ಲಿ ರೈತರ ಜಮೀನಿನಲ್ಲಿ ಸಸಿಗಳನ್ನು ನೆಟ್ಟಿರುವ ಸಸಿಗಳನ್ನು ಮೂರುವರ್ಷದವರೆಗೆ ಬೆಳೆಸಿ. ನಂತರ ಅವುಗಳನ್ನು ರೈತರ ಸುಪರ್ದಿಗೆ ನೀಡುತ್ತೇವೆ. ಅವುಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಎನ್ನುತ್ತಾರೆ ಶಿವಣ್ಣ. ಕಾವಲುಗಾರ ಶಿವಣ್ಣ ಒಳ್ಳೆಯ ಕೆಲಸಗಾರ, ನೆಟ್ಟ ಸಸಿಗಳನ್ನು ಉತ್ತಮವಾಗಿ ಪೋಷಣೆ ಮಾಡುತ್ತಾರೆ. ರಾತ್ರಿ ಗಾಳಿಮಳೆಗೆ ವಾಲಿದ್ದ ಗಿಡಗಳನ್ನು ಮುಂಜಾನೆಯೇ ಬಂದು ನೆಟ್ಟಗೆ ಕಟ್ಟಿ ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಾರೆ. ಇವರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ಇಲಾಖೆಯಿಂದ ಸನ್ಮಾನ ಕೂಡ ಮಾಡಿದ್ದೇವೆ.
-ಸುರೇಶ್, ವಲಯ ಅರಣ್ಯಾಧಿಕಾರಿ ರೇಂಜರ್ ಸುರೇಶ್ ಅವರ ಸಹಕಾರದಿಂದ ಭೂತಪ್ಪನ ಗುಡಿ ರಸ್ತೆಯಲ್ಲಿ 1200 ಸಸಿ ನೆಟ್ಟು ಪೋಷಣೆ ಮಾಡುತ್ತಿದ್ದೇನೆ. ಸಕಾಲಕ್ಕೆ ಔಷಧಿ, ನೀರು ಹಾಕುತ್ತಿದ್ದೇನೆ. ಇದುವರೆಗೆ ಕೇವಲ ಒಂದು ಸಸಿ ಮಾತ್ರ ಒಣಗಿದೆ. ಉಳಿದ ಎಲ್ಲವೂ ಉತ್ತಮವಾಗಿಯೇ ಬೆಳೆದಿವೆ. ಮುಂದಿನ ಎರಡು ವರ್ಷದಲ್ಲಿ ಇವೆಲ್ಲಾ ದೊಡ್ಡ ದೊಡ್ಡ ಮರವಾಗಿ ರಸ್ತೆಯಲ್ಲಿ ಓಡಾಡುವರಿಗೆ ನೆರಳು ಕೊಡುತ್ತವೆ’
-ಕಾವಲುಗಾರ ಶಿವಣ್ಣ * ಭೋಗೇಶ್ ಮೇಲುಕುಂಟೆ