Advertisement

ಉಪ್ಪುನೀರು ಸಂಸ್ಕರಣ ಘಟಕಕ್ಕೆ ಎಳ್ಳುನೀರು!

09:57 AM Mar 28, 2020 | mahesh |

ಮಹಾನಗರ: ಔದ್ಯೋಗಿಕ ನಗರವಾಗಿ ಬೆಳೆಯುತ್ತಿರುವ ಮಂಗಳೂ ರಿಗೆ ಕುಡಿಯುವ ನೀರಿನ ಸವಾಲನ್ನು ಎದುರಿಸಲು ಅಗತ್ಯವಿದ್ದ ಸಮುದ್ರದ ಉಪ್ಪು  ನೀರು ಸಂಸ್ಕರಣ ಘಟಕ ಸ್ಥಾಪನೆಗೆ ಹೂಡಿಕೆ ದಾರರು ಮನಸ್ಸು ಮಾಡದ ಕಾರಣ ಯೋಜನೆ ಕಡತದಲ್ಲೇ ಬಾಕಿಯಾಗಿದೆ.

Advertisement

ನಗರಕ್ಕೆ 100 ಎಂಎಲ್‌ಡಿ ಸಾಮರ್ಥ್ಯದ ಸಮುದ್ರ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಪಿಪಿಪಿ ಮಾದರಿಯಲ್ಲಿ ಯೋಜನೆ ಅನುಷ್ಠಾನಿಸಲು 2018ರ ಮಾ. 24ರಂದು ರಾಜ್ಯ ಸರಕಾರ ಆದೇಶಿಸಿತ್ತು. ಇದಕ್ಕಾಗಿ 206 ಕೋ.ರೂ.ಗಳ ಯೋಜನೆಗೆ ಅನುಮೋದನೆಯನ್ನೂ ನೀಡಿದೆ. ಆದರೆ ಯೋಜನೆ ಅನುಷ್ಠಾನ ಸಂಬಂಧ ಯಾವುದೇ ಹೂಡಿಕೆದಾರರು ಮುಂದೆ ಬಾರದಿರುವುದರಿಂದ ಮುಂದುವರಿಸಲು ಆಗಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರು ಇತ್ತೀಚೆಗೆ ವಿ. ಪ.ನಲ್ಲಿ ಸದಸ್ಯ ಐವನ್‌ ಡಿ’ಸೋಜಾ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

2016ರ ಕನಸು
ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಿಸಿ ಕುಡಿಯುವ, ಕೈಗಾರಿಕೆಗಳಿಗೆ ನೀಡುವ ಪ್ರಸ್ತಾವನೆ ಕೆಲವು ವರ್ಷಗಳಿಂದ ಕೇಳಿಬಂದಿತ್ತು. ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು 2016ರ ಮೇ 25ರಂದು ನಗರದಲ್ಲಿ ಕೈಗಾರಿಕೆಗಳ ಸಭೆ ಕರೆದು ಸಮುದ್ರದ ನೀರು ಸಂಸ್ಕರಿಸಿ ನೀರು ಪಡೆಯುವ ಬಗ್ಗೆ ಕಾರ್ಯಯೋಜನೆ ರೂಪಿಸುವ ಚರ್ಚೆ ನಡೆಸಿದ್ದರು. ಸುಮಾರು 20 ಮಿಲಿಯನ್‌ ಲೀ. ಸಂಸ್ಕ  ರಣ ಘಟಕ ಸ್ಥಾಪನೆಗೆ 95ರಿಂದ 100 ಕೋ.ರೂ. ಅವಶ್ಯವಿದೆ.

ಈ ಯೋಜನೆಗೆ 1ರಿಂದ 2 ಎಕ್ರೆ ಜಾಗ ಸಾಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಅಂದಿನ ನಗರಾಭಿವೃದ್ಧಿ ಸಚಿವ ಆರ್‌. ರೋಶನ್‌ ಬೇಗ್‌ ಅವರು ಉಪ್ಪು ನೀರು ಸಂಸ್ಕರಣ ಸ್ಥಾವರ ಸ್ಥಾಪಿಸುವ ಕುರಿತು ಪಾಲಿಕೆ ಸದ ಸ್ಯರು, ಅಧಿಕಾರಿಗಳ ತಂಡ ಚೆನ್ನೈಗೆ ಭೇಟಿ ನೀಡಿ ಪರಿಶೀಲಿಸುವಂತೆ ತಿಳಿಸಿದ್ದರು. ಅದ ರಂತೆ ಅಂದಿನ ಮೇಯರ್‌ ಕವಿತಾ ಸನಿಲ್‌ ನೇತೃತ್ವದಲ್ಲಿ ಕಾರ್ಪೊರೇಟರ್‌ಗಳು, ಅಧಿ ಕಾರಿ ಗಳ ತಂಡ ಚೆನ್ನೈಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು. ನೀರಿಗೆ ಪರ್ಯಾಯ ಮೂಲವಾಗಿ ಸಮುದ್ರದ ಸಂಸ್ಕರಿತ ನೀರು ಬಳಕೆ ನಮ್ಮ ದೇಶದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಚೆನ್ನೈನಲ್ಲಿ ಸಮುದ್ರದ ಉಪ್ಪುನೀರು ಸಂಸ್ಕರಿಸಿ ಕುಡಿಯುವ ಉದ್ದೇಶ, ಕೈಗಾರಿ ಕೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಅಲ್ಲಿ ಯೋಜನೆ ಪಿಪಿಪಿ ಮಾದರಿಯಲ್ಲೆ ಕಾರ್ಯ ನಿರ್ವಹಿಸುತ್ತಿದೆ. ಮಿಂಜೂರು ಉಪ್ಪುನೀರು ಸಂಸ್ಕರಣ ಘಟಕ 2010ರಿಂದ ಕಾರ್ಯಾಚರಿಸುತ್ತಿದೆ. ದಿನ ವೊಂದಕ್ಕೆ 100 ಮಿಲಿಯನ್‌ ಲೀ. ಕುಡಿ ಯುವ ಸಂಸ್ಕರಿತ ನೀರು ಉತ್ಪಾದನೆ ಸಾಮರ್ಥ್ಯವನ್ನು ಹೊಂದಿದೆ. ಇದೇ ರೀತಿ ಗುಜರಾತ್‌ನ ಜಾಮ್‌ನಗರದಲ್ಲಿ ಭಾರತದ ಅತೀ ದೊಡ್ಡ ಉಪ್ಪು ನೀರು ಸಂಸ್ಕರಣ ಘಟಕ ಕಾರ್ಯಾಚರಿಸುತ್ತಿದೆ.

ಮಂಗಳೂರಿಗೆ ಯಾಕೆ ಅಗತ್ಯ?
ನಗರದಲ್ಲಿ 15 ಬೃಹತ್‌ ಉದ್ದಿಮೆಗಳಿದ್ದು, ಎಸ್‌ಇಝಡ್‌, ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ವಿಸ್ತರಣೆಯಲ್ಲಿ ಇನ್ನಷ್ಟು ಉದ್ದಿಮೆ ಬರಲಿವೆ. ಸುಮಾರು 6ರಿಂದ 8 ಸಾವಿರದವರೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಇವುಗಳಿಗೆ ಬಹುತೇಕ ನೀರಿನ ಮೂಲ ನೇತ್ರಾವತಿ-ಫ‌ಲ್ಗುಣಿ ನದಿ. ನಗರಕ್ಕೆ ಏಕೈಕ ಕುಡಿಯುವ ನೀರಿನ ಮೂಲವಾಗಿರುವ ತುಂಬೆ ವೆಂಟೆಡ್‌ ಡ್ಯಾಂನಿಂದ ಉಳ್ಳಾಲ, ಮೂಲ್ಕಿವರೆಗೆ ನೀರು ಸರಬರಾಜಾಗುತ್ತಿದೆ. ಮಂಗಳೂರು ವಿ.ವಿ., ಇನ್ಫೋಸಿಸ್‌ಗೆ ಪಾಣೆಮಂಗಳೂರು ಸಮೀಪ ಸಜೀಪ ಮುನ್ನೂರುನಿಂದ ನೇತ್ರಾವತಿ ನದಿಯ ನೀರು ಸರಬರಾಜಾಗುತ್ತಿದೆ. ನಗರಕ್ಕೆ ನೀರಿನ ಆವಶ್ಯಕತೆ, ಮುಖ್ಯವಾಗಿ ನೇತ್ರಾವತಿ ನದಿಯ ಮೇಲಿರುವ ಒತ್ತಡ, ಪ್ರಸ್ತುತ ಮಳೆಚಕ್ರದಲ್ಲಾಗುತ್ತಿರುವ ವೈಪರೀತ್ಯ ಕುಡಿಯುವ ನೀರಿಗೆ ಪರ್ಯಾಯ ಮೂಲದ ವ್ಯವಸ್ಥೆಯ ಆವಶ್ಯಕತೆಯನ್ನು ಹೆಚ್ಚಿಸಿದೆ. ಈಗಾಗಲೇ ದ.ಕ. ಜಿಲ್ಲೆಯಲ್ಲಿ ಅಂತರ್‌ಜಲ ಕುಸಿತವಾಗಿದೆ. 800 ಅಡಿವರೆಗೆ ಕೊರೆದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಕೊಳವೆ ಬಾವಿ ತೆಗೆಯಲು ಸರಕಾರದ ನಿರ್ಬಂಧವಿದೆ. ಈ ಪರಿಸ್ಥಿತಿಯಲ್ಲಿ ಈಗಾಗಲೇ ಪರ್ಯಾಯ ನೀರಿನ ಮೂಲವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಸಮುದ್ರ ನೀರು ಸಂಸ್ಕರಣೆ ಮಂಗಳೂರಿಗೆ ಹೊಸ ಸಾಧ್ಯತೆಯಾಗಿ ಗೋಚರಿಸಿತ್ತು. ತಲಪಾಡಿಯಿಂದ ಮೂಲ್ಕಿವರೆಗೆ ಇರುವ 42 ಕಿ.ಮೀ. ಸಮುದ್ರ ತೀರ ಇದಕ್ಕೆ ಪೂರಕವಾಗಿತ್ತು. ಆದರೆ ಸರಕಾರ ಇದನ್ನು ಕಾರ್ಯಗತಗೊಳಿಸಲು ಮನಸ್ಸು ಮಾಡುತ್ತಿಲ್ಲ.

Advertisement

ಎಂಆರ್‌ಪಿಎಲ್‌ ಘಟಕ ಶೀಘ್ರ ಕಾರ್ಯಾರಂಭ
ರಾಜ್ಯದ ಮೊದಲ ಸಮುದ್ರ ನೀರು ಸಂಸ್ಕರಣ ಘಟಕ ಎಂಆರ್‌ ಪಿಎಲ್‌ ವತಿಯಿಂದ ನಗರದ ತಣ್ಣೀರುಬಾವಿಯಲ್ಲಿ ನಿರ್ಮಾಣ ವಾಗುತ್ತಿದೆ. ಎಂಆರ್‌ಪಿಎಲ್‌ಗೆ ಬೇಸಗೆ ಕಾಲದಲ್ಲಿ ನೀರಿನ ಕೊರತೆ ಎದುರಾಗುವ ಹಿನ್ನೆಲೆಯಲ್ಲಿ ಸಮು ದ್ರದ ನೀರನ್ನು ಸಂಸ್ಕರಣೆ ಮಾಡಿ ಬಳ ಸುವ ಯೋಜನೆಯಿದು. ಸದ್ಯ ಕಾಮ ಗಾರಿ ಕೊನೆಯ ಹಂತದಲ್ಲಿದ್ದು, ಈ ವರ್ಷಾ ಂತ್ಯಕ್ಕೆ ನೂತನ ಪ್ಲ್ಯಾಂಟ್‌ ಕಾರ್ಯಾ ಚರಿಸಲಿದೆ. ತಣ್ಣೀರು ಬಾವಿಯಿಂದ ಎಂಆರ್‌ಪಿಎಲ್‌ಗೆ ನೀರಿನ ಪೈಪ್‌ಲೈನ್‌ ಹಾಕುವ ಕಾರ್ಯನಡೆಯಲಿದೆ. ಪ್ರತೀದಿನ 5 ಮಿಲಿಯನ್‌ ಗ್ಯಾಲನ್‌ ನೀರು ಸಂಸ್ಕರಿಸುವ ಸಾಮರ್ಥ್ಯದ ಸ್ಥಾವರ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿ ನಡೆಯುತ್ತಿದೆ.

ಸಚಿವರ ಜತೆಗೆ ಚರ್ಚಿಸಿಕ್ರಮ
ನಗರಕ್ಕೆ ಎಡಿಬಿ ಎರಡನೇ ಹಂತದಲ್ಲಿ ಸಮಗ್ರವಾಗಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಇದು ಪೂರ್ಣ ವಾದರೆ ನಗರಕ್ಕೆ ಪೂರ್ಣ ಪ್ರಮಾಣ ದಲ್ಲಿ ಕುಡಿಯುವ ನೀರು ಲಭ್ಯ ವಾಗಲಿದೆ. ಈ ಮಧ್ಯೆ ಸಮು ದ್ರದ ಉಪ್ಪು ನೀರು ಸಂಸ್ಕರಣ ಯೋಜನೆ ಅನುಷ್ಠಾನ ಸಂಬಂಧ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿ ಸಚಿವರ ಜತೆಗೆ ಚರ್ಚಿಸಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು.
 - ವೇದವ್ಯಾಸ ಕಾಮತ್‌, ಶಾಸಕರು

  ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next