Advertisement

ಉಪ್ಪು ನೀರಿನ ಸಮಸ್ಯೆ: ಅಧಿಕಾರಿಗಳ ಗೈರು; ಶಾಸಕರು ಗರಂ

11:48 PM Jun 14, 2019 | Team Udayavani |

ಉಡುಪಿ: ಕಿಂಡಿ ಅಣೆಕಟ್ಟು, ಉಪ್ಪು ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಸಂಬಂಧ ಉತ್ತರಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿಲ್ಲದ ಕಾರಣ ಅವರ ಮೇಲೆ ಕ್ರಮ ಜರಗಿಸುವಂತೆ ಶಾಸಕ ಕೆ.ರಘುಪತಿ ಭಟ್ ಸೂಚಿಸಿದರು.

Advertisement

ಉಡುಪಿ ತಾ.ಪಂ.ನ 18ನೇ ಸಾಮಾನ್ಯ ಸಭೆಯು ಶುಕ್ರವಾರ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್‌ ಸಭಾಂಗಣ ದಲ್ಲಿ ನಡೆಯಿತು.

ತಾ.ಪಂ.ಸದಸ್ಯ ಉಮೇಶ್‌ ಶೆಟ್ಟಿ ಬಾರ್ಕೂರು ಮಾತನಾಡಿ ಬಾರ್ಕೂರು ನಾಗರಮಠ ಕಿಂಡಿ ಅಣೆಕಟ್ಟಿನ ಸಮಸ್ಯೆ ಪರಿಹಾರವಾಗಿಲ್ಲ. ಹಲಗೆ ಇರಿಸುವ ಗೋದಾಮಿನ ಕೀಲಿಕೈ ಕೂಡ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಾರ್ಕೂರು ಗ್ರಾ.ಪಂ. ಅಧ್ಯಕ್ಷೆ ಶೈಲಾ ಡಿ’ಸೋಜಾ, ವಿವಿಧ ಅಳತೆಗಳ ಹಲಗೆಗಳನ್ನು ಕಿಂಡಿ ಅಣೆಕಟ್ಟಿಗೆ ಅಳವಡಿಸಲಾಗಿದೆ. ಆದರೆ ಶೇ. 30 ಹಲಗೆಗಳು ಮಾತ್ರ ಸರಿಯಾದ ಅಳತೆ ಹೊಂದಿದೆ. ವಾರಾಹಿಯ ನೀರನ್ನು ಸ್ವಲ್ಪ ಅಧಿಕ ಪ್ರಮಾಣದಲ್ಲಿ ಬಿಡುಗಡೆಗೊಳಿಸಿದರೆ ನಾಗರಮಠ ಕಿಂಡಿ ಅಣೆಕಟ್ಟಿಗೆ ನೀರು ಬರುತ್ತದೆ, ಇದರಿಂದ ಉಪ್ಪಿನ ಸಮಸ್ಯೆಯೂ ನಿವಾರಣೆಯಾಗಬಹುದು ಎಂದರು.

ಪ್ರತೀ ಸಭೆಯಲ್ಲೂ ಕಿಂಡಿ ಅಣೆಕಟ್ಟು ಸಮಸ್ಯೆ ಬಗ್ಗೆ ಪ್ರಸ್ತಾವ ಆಗುತ್ತಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ತಾ.ಪಂ.ಅಧ್ಯಕ್ಷರು ಸೂಚಿಸಿದರು. ಆದರೆ ನೀರಾವರಿಗೆ ಸಂಬಂಧಪಟ್ಟಂತೆ ಇಷ್ಟೆಲ್ಲ ದೂರುಗಳಿದ್ದರೂ ಕೂಡ ಇದಕ್ಕೆ ಉತ್ತರಿಸಲು ಅಧಿಕಾರಿಗಳು ಇಲ್ಲದ ಕಾರಣ ಶಾಸಕರ ಸಹಿತ ತಾ.ಪಂ. ಅಧ್ಯಕ್ಷರು ಅಧಿಕಾರಿಗಳ ಮೇಲೆ ಕ್ರಮ ಜರಗಿಸಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಇತ್ತೀಚೆಗೆ ನಿಧನ ಹೊಂದಿದ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರಿಗೆ ಸಂತಾಪ ಸೂಚಿಸ ಲಾಯಿತು. ಬಳಿಕ ಪರಿಶಿಷ್ಟ ಜಾತಿಯ 15 ಮಂದಿ ಫ‌ಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

Advertisement

ಗಂಗಾಕಲ್ಯಾಣ ಯೋಜನೆ ಅನುಷ್ಠಾನ ವಿಳಂಬ
ಗಂಗಾ ಕಲ್ಯಾಣ ಯೋಜನೆ ಸರಿ ಯಾಗಿ ಅನುಷ್ಠಾನವಾಗುತ್ತಿಲ್ಲ. ಕೊರೆದ ಬೋರ್‌ವೆಲ್ಗಳಿಗೆ ಮೀಟರ್‌ ಅಳವಡಿಕೆ ಯಾಗಿಲ್ಲ. ಈ ಬಗ್ಗೆ ಹಿಂದಿನ ಸಭೆಯಲ್ಲಿ ಪ್ರಸ್ತಾಪವಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯೆ ಡಾ| ಸುನೀತಾ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಕೆಲ ಅರ್ಜಿಗಳ ಮಾರ್ಗ ವಿಸ್ತರಣೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣ ಗೊಳ್ಳಲಿದೆ ಎಂದರು.

ಮರಗಳನ್ನು ತೆರವುಗೊಳಿಸಿ
ಕುತ್ಯಾರು ಗ್ರಾ.ಪಂ. ವ್ಯಾಪ್ತಿಯ ತೋಡಿನಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸ ಬೇಕು ಎಂದು ಸದಸ್ಯೆ ಶಶಿ ಪ್ರಭಾ ಶೆಟ್ಟಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಒಂದು ಸಲ ಮರ ಬಿದ್ದಿರುವುದನ್ನು ತೆರವುಗೊಳಿಸಲಾಗಿದೆ. ಇನ್ನು ಹೆಚ್ಚಿನ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯಲ್ಲಿ ಯಾವುದೇ ಅನುದಾನ ಲಭ್ಯವಿಲ್ಲ. ಅನುದಾನ ಒದಗಿಸಿಕೊಟ್ಟಲ್ಲಿ ಕ್ರಮವಹಿಸಬಹುದು ಎಂದರು. ಈ ಬಗ್ಗೆ ತಹಶೀಲ್ದಾರ್‌ ಮೂಲಕ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮನವಿ ಮಾಡಲು ತೀರ್ಮಾನಿಸಲಾಯಿತು.

ಪರಿಹಾರ ನೀಡಿಲ್ಲ
ಪಾದೂರು ಪೈಪ್‌ಲೈನ್‌ ಕಾಮಗಾರಿ ಯಿಂದ ಹಾನಿ ಸಂಭವಿಸಿದೆ ಎಂದು ಸರಕಾರಿ ವರದಿಯೇ ತಿಳಿಸುತ್ತದೆ. ಆದರೆ ಕಂಟ್ರಾಕ್ಟರ್‌ ನೀಡಿದ ಖಾಸಗಿ ವರದಿಯನ್ನು ಆಧಾರವಾಗಿಟ್ಟುಕೊಂಡು ಪರಿಹಾರ ನೀಡಿಲ್ಲ ಎಂದು ಮಜೂರು ಗ್ರಾ.ಪಂ. ಅಧ್ಯಕ್ಷ ಸಂದೀಪ್‌ ರಾವ್‌ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಪು ತಹಶೀಲ್ದಾರ್‌ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದರು.

ಅಂಗವಿಕಲರಿಗೆ ಬಸ್‌ಪಾಸ್‌ ಒದಗಿಸಿ
ಅಂಗವಿಕಲರಿಗೆ ಬಸ್‌ಪಾಸ್‌ ಪಡೆಯಲು ಮಂಗಳೂರಿಗೆ ಹೋಗಬೇಕಾದ ಅನಿ ವಾರ್ಯತೆಯಿದೆ. ಉಡುಪಿಯಲ್ಲೇ ಬಸ್‌ಪಾಸ್‌ ಮಾಡಿಸುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯೆ ಗೀತಾ ವಾಗ್ಲೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈಬಗ್ಗೆ ಸಂಬಂಧಿತ ಇಲಾಖೆಗೆ ಮನವಿ ಮಾಡಲಾಗುವುದು ಎಂದರು.

ಜಾಗದ ನಕ್ಷೆ ಕಾಣೆ!
ಕುದಿ ಗ್ರಾಮದಲ್ಲಿ 1996ನೇ ಇಸವಿಯಲ್ಲಿ ಹಕ್ಕುಪತ್ರ ವಿತರಿಸಿರುವ ಜಾಗದ ನಕ್ಷೆ , ದಾಖಲೆಗಳು ಸಿಗುತ್ತಿಲ್ಲ ಎಂದು ಸದಸ್ಯ ಲಕ್ಷ್ಮೀನಾರಾಯಣ ಪ್ರಭು ತಿಳಿಸಿದರು. ಇದಕ್ಕೆ ತಹಶೀಲ್ದಾರ್‌ ಪ್ರತಿಕ್ರಿಯಿಸಿ ಸದ್ಯ ದಾಖಲೆಯು ಗ್ರಾ.ಪಂ.ನಲ್ಲಿ ಲಭ್ಯವಿಲ್ಲ ಎಂದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ ತಾ.ಪಂ.ನಲ್ಲೂ ಮಿಸ್ಸಿಂಗ್‌ ಫೈಲ್ ಮಾಡಿಡುವಂತೆ, ಫ‌ಲಾನುಭವಿಗಳ ಸಭೆ ನಡೆಸುವಂತೆ ಸೂಚಿಸಿದರು. ಪಿಡಿಒ ಅವರೊಂದಿಗೆ ಚರ್ಚಿಸ ಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.ಅಂಗನವಾಡಿ ಕಟ್ಟಡ ಸ್ಥಳಾಂತರಿಸ ಬಹುದೇ?

ಭಾಸ್ಕರ ನಗರ ಅಂಗನವಾಡಿ ಕಟ್ಟಡ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಉಚ್ಚಿಲದಲ್ಲಿರುವ ತಾಲೂಕು ಪಂಚಾಯತ್‌ ಕಟ್ಟಡಕ್ಕೆ ಸ್ಥಳಾಂತರಿಸಲು ಅವಕಾಶ ನೀಡಬಹುದೇ ಎಂದು ಸದಸ್ಯ ಯು.ಸಿ. ಶೇಖಬ್ಬ ಪ್ರಶ್ನಿಸಿದರು. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಹಕ್ಕುಪತ್ರ ಸಮಸ್ಯೆ
ಹಂದಾಡಿ ಗ್ರಾ.ಪಂ.ವ್ಯಾಪ್ತಿಯ ರುಕ್ಮಿಣಿ ಬಾಯಿ ಅವರಿಗೆ ದೊರೆತ ಹಕ್ಕುಪತ್ರದಲ್ಲಿ ಎಚ್ಎಸ್‌ಡಿಆರ್‌ ಸಂಖ್ಯೆ ಇಲ್ಲ. ಹಕ್ಕು ಪತ್ರ ಇದೆ ಎಂದು ತಿಳಿಸಿದಾಗ ಉತ್ತರಿಸಿದ ತಹಶೀಲ್ದಾರ್‌ ಇದು ಬಹಳ ವರ್ಷದ ಹಿಂದಿನ ದಾಖಲೆಯಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಅಪಾಯಕಾರಿ ಮರಗಳನ್ನು ತೆರವುಗೊಳಿಸಿ
ಉದ್ಯಾವರ ಗ್ರಾ.ಪಂ.ವ್ಯಾಪ್ತಿಯಲ್ಲಿ ಅಪಾಯಕಾರಿ ಮರಗಳಿವೆ. ಇದನ್ನು ತೆರವುಗೊಳಿಸಬೇಕು ಎಂದು ಇಲ್ಲಿನ ಸದಸ್ಯರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಅಧ್ಯಕ್ಷರು ಈ ಬಗ್ಗೆ ಪಿಡಿಒ ಹಾಗೂ ಅರಣ್ಯ ಇಲಾಖೆಗೆ ಪತ್ರಬರೆಯುವಂತೆ ತಿಳಿಸಿದರು.

ಉದ್ಯೋಗಖಾತ್ರಿ ಯೋಜನೆ: ಫ‌ಲಾನುಭವಿಗಳಿಗೆ ಸಿಗುತ್ತಿಲ್ಲ ಸೌಲಭ್ಯ
ಉದ್ಯೋಗಖಾತ್ರಿ ಯೋಜನೆಯಡಿ ಉಡುಪಿ ತಾಲೂಕಿನ ಗ್ರಾ.ಪಂ.ಗಳಲ್ಲಿ ಕೃಷಿ ಉಪಯೋಗಕ್ಕಾಗಿ ಕಡಿಮೆ ಜಮೀನಿರುವ ಫ‌ಲಾನುಭವಿಗಳಿಗೂ ಬಾವಿ ರಚನೆಗೆ ಅವಕಾಶ ನೀಡಲಾಗುತ್ತಿತ್ತು. ಈ ಆಧಾರದಲ್ಲಿ ಬೇಡಿಕೆಗಳು ಬಂದು ಕ್ರಿಯಾಯೋಜನೆಗಳೂ ತಾ.ಪಂ.ನಲ್ಲಿ ಅನುಮೋದನೆಗೊಂಡು ಜಿ.ಪಂ.ಗೂ ಸಲ್ಲಿಸಲಾಗಿದೆ. ಇಂತಹ ಸಂದರ್ಭದಲ್ಲಿ 50 ಸೆಂಟ್ಸ್‌ ಜಾಗಕ್ಕಿಂತ ಹೆಚ್ಚಿನ ಭೂಮಿ ಇದ್ದಲ್ಲಿ ಮಾತ್ರ ನರೇಗಾ ಯೊಜನೆಯಡಿ ಬಾವಿ ರಚನೆಗೆ ಅವಕಾಶ ಅಂತ ಹೇಳಿದರೆ ಸಮಸ್ಯೆಗಳು ಉದ್ಭವವಾಗುತ್ತದೆ ಎಂದು ತಾ.ಪಂ.ಸದಸ್ಯ ಸುಧೀರ್‌ ಕುಮಾರ್‌ ಶೆಟ್ಟಿ ತಿಳಿಸಿದರು.

ಶಾಸಕರು ಮಾತನಾಡಿ ಜಿಲ್ಲೆಯಲ್ಲಿ ಇಂದು 5-10 ಸೆಂಟ್ಸ್‌ ಜಾಗದಲ್ಲಿ ಕೃಷಿ ಮಾಡುವವರು ಅಧಿಕಸಂಖ್ಯೆಯಲ್ಲಿದ್ದಾರೆ. ಕೃಷಿಕರು 50 ಸೆಂಟ್ಸ್‌ ಜಾಗ ಹೊಂಡುವುದು ಕಷ್ಟ. ಇದರಿಂದ ಫ‌ಲಾನುಭವಿಗಳು ಸವಲತ್ತುಗಳಿಂದ ವಂಚಿತರಾಗುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈಗ 50 ಸೆಂಟ್ಸ್‌ ಜಾಗ ಇರಲೇಬೇಕು ಎಂದು ಮೌಖೀಕ ಆದೇಶ ನೀಡಲಾಗಿದೆ. ಈ ಬಗ್ಗೆ 2-3 ದಿನದೊಳಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಧಿಕೃತವಾಗಿ ತಿಳಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಧನಂಜಯ ಕುಂದರ್‌, ನರೇಗಾ ಯೋಜನೆಯಡಿ ಶಾಲಾ ಆವರಣಗೋಡೆ ನಿರ್ಮಾಣಕ್ಕೂ ಅವಕಾಶ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಅಧ್ಯಕ್ಷರು 5-10 ಸೆಂಟ್ಸ್‌ ಜಾಗಗಳಲ್ಲಿ ಕೃಷಿ ಬಾವಿ ಹಾಗೂ ಅಂಗನವಾಡಿ ಆವರಣಗೋಡೆ ಎರಡನ್ನೂ ಕೂಡ ತರುವುದು ಅವಶ್ಯಕವಾಗಿದೆ ಎಂದರು. ನರೇಗಾ ಯೋಜನೆಯಡಿ 5-10 ಸೆಂಟ್ಸ್‌ ಜಾಗಗಳಲ್ಲಿಯೂ ಕೃಷಿ ಭೂಮಿಗೆ ಹಾಗೂ ಅಂಗನವಾಡಿ ಆವರಣಗೋಡೆಗಳಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ನಿರ್ಣಯಿಸಲಾಯಿತು.

ಶಾಸಕ ಕೆ.ರಘುಪತಿ ಭಟ್, ತಾ.ಪಂ.ಉಪಾಧ್ಯಕ್ಷ ರಾಜೇಂದ್ರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣ ಅಧಿಕಾರಿ ರಾಜು, ತಹಶೀಲ್ದಾರ್‌ರಾದ ಕಾಪುವಿನ ಸಂತೋಷ್‌, ಉಡುಪಿಯ ಪ್ರದೀಪ್‌ ಕುರ್ಡೇಕರ್‌ ಉಪಸ್ಥಿತರಿದ್ದರು.

ಆಯುಷ್ಮಾನ್‌, ಆರೋಗ್ಯ ಕರ್ನಾಟಕ ಪ್ರತ್ಯೇಕಕ್ಕೆ ನಿರ್ಣಯ
ಕೇಂದ್ರ ಸರಕಾರದ ಆಯುಷ್ಮಾನ್‌ ಭಾರತ್‌ ಹಾಗೂ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಯನ್ನು ವಿಲೀನಗೊಳಿಸಿದ್ದರಿಂದ ಜನಸಾಮಾನ್ಯರಿಗೆ, ಬಡರೋಗಿಗಳಿಗೆ ತೊಂದರೆಯುಂಟಾಗುತ್ತಿದೆ. ಇದನ್ನು ಪ್ರತ್ಯೇಕಗೊಳಿಸಬೇಕು ಎಂದು ನಿರ್ಣಯಿಸಲಾಯಿತು. ಕಾರ್ಡ್‌ ಮುಖಾಂತರ ಎಲ್ಲ ರೀತಿಯ ಚಿಕಿತ್ಸೆಗಳೂ ಲಭ್ಯವಾಗಬೇಕು ಎಂದು ಶಾಸಕರು ಆಗ್ರಹಿಸಿದರು.

ಪಿಂಚಣಿ ಸಮಸ್ಯೆ
ಪಿಂಚಣಿ ಪಾವತಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಶ್ನಿಸಲು ಆಧಾರ್‌ ಡುಪ್ಲಿಕೇಶನ್‌ನಿಂದ ಸಮಸ್ಯೆ ಉಂಟಾಗಿದೆ. ಹಾಸಿಗೆಯಲ್ಲಿರುವ ಅಂಗವಿಕಲರಿಗೆ ಪಿಂಚಣಿ ಸ್ವೀಕರಿಸಲು ಕಚೇರಿಗಳಿಗೆ ಹೋಗಲು ಆಗುತ್ತಿಲ್ಲ ಎಂದು ಸದಸ್ಯೆ ಡಾ| ಸುನೀತಾ ಶೆಟ್ಟಿ ತಿಳಿಸಿದರು. ತಿರಸ್ಕೃತ ಪಟ್ಟಿಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದರು. ಗ್ರಾಮ ಕರಣಿಕರಿಂದ ಶೇ.80ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಇರುವ ಫ‌ಲಾನುಭವಿಗಳ ಪಟ್ಟಿಯನ್ನು ಪಡೆದು ಫ‌ಲಾನುಭವಿಗಳಿಗೆ ಮನೆಯಲ್ಲಿಯೇ ಪಿಂಚಣಿ ಪಡೆಯುವಂತಹ ಅವಕಾಶ ನೀಡಬೇಕು ಎಂದು ಅಧ್ಯಕ್ಷರು ತಿಳಿಸಿದರು. ಈ ಬಗ್ಗೆ ವಾರದೊಳಗೆ ಅಂಚೆ ಕಚೇರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next