Advertisement

ಭತ್ತದ ಪೈರು ಕಟಾವು ಮಾಡಿಟ್ಟ ಗದ್ದೆಗೆ ನುಗ್ಗಿದ ಉಪ್ಪು ನೀರು

10:22 PM Nov 21, 2019 | Sriram |

ಕುಂದಾಪುರ: ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಮೂಡುಬೈಲು ಎನ್ನುವಲ್ಲಿ ಗದ್ದೆಯಲ್ಲಿ ಕಟಾವು ಮಾಡಿ ಇಟ್ಟಿದ್ದ ಭತ್ತದ ಪೈರಿಗೆ ಬುಧವಾರ ಒಮ್ಮಿಂದೊ ಮ್ಮೆಲೆ ಉಪ್ಪು ನೀರು ನುಗ್ಗಿದ ಪರಿಣಾಮ ಸುಮಾರು ಏಳೆಂಟು ಎಕರೆಯಷ್ಟು ಕೃಷಿ ಉಪ್ಪು ನೀರಿನಿಂದ ಜಲಾವೃತಗೊಂಡಿದೆ. ಗುರುವಾರ ಮತ್ತಷ್ಟು ಅಬ್ಬರವಿದ್ದು, ಗದ್ದೆಗೆ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ನೀರು ನುಗ್ಗಿದೆ.

Advertisement

ರೈತರು ಕಷ್ಟಪಟ್ಟು ಬೆಳೆಸಿದ್ದ ಬೆಳೆಯನ್ನು ಕಟಾವು ಮಾಡಿ, ಪೈರು ಸ್ವಲ್ಪ ಒಣಗಲಿ ಎನ್ನುವ ಕಾರಣಕ್ಕೆ ಅದನ್ನು ಮನೆಗೆ ತರದೆ ಗದ್ದೆಯಲ್ಲಿಯೇ ಬಿಟ್ಟಿದ್ದರು. ಆದರೆ ಅಷ್ಟರೊಳಗೆ ಭತ್ತದ ಪೈರು ಉಪ್ಪು ನೀರಿನಲ್ಲಿ ಮುಳುಗಿ ಹೋಗಿದೆ. ಈಗ ಮಳೆ ಕಡಿಮೆಯಿದ್ದರೂ, ಗದ್ದೆಯಲ್ಲಿ ಉಪ್ಪು ನೀರು ಇರುವುದರಿಂದ ಕಟಾವು ಮಾಡಲು ಸಮಸ್ಯೆಯಾಗಿದೆ.

ರೈತರ ಅಳಲು
ಹುಣ್ಣೆಮೆ -ಅಮಾವಾಸ್ಯೆ ಸಮಯದಲ್ಲಿ ಉಬ್ಬರ- ಇಳಿತಕ್ಕೆ ಸ್ವಲ್ಪ ಮಟ್ಟಿಗೆ ಕೃಷಿ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಎಂದಿಗೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಉಪ್ಪು ನೀರು ನುಗ್ಗಿದ ಉದಾಹಾರಣೆಗಳಿಲ್ಲ. ಭತ್ತದ ಗದ್ದೆಯಲ್ಲಿ ಮೊಣಕಾಲು ಮಟ್ಟದಲ್ಲಿ ನೀರು ನಿಂತಿದ್ದರಿಂದ ಭತ್ತ ಕಟಾವು ಮಾಡಿ ಇಟ್ಟಿದ್ದ ಭತ್ತದ ಪೈರಿನ ಮೇಲೆ ನೀರು ನಿಂತಿದ್ದರಿಂದ ಹುಲ್ಲು ಹಾಳಾಗುವ ಜತೆಗೆ ಭತ್ತವೂ ನಷ್ಟವಾಗಿದೆ. ಅದಲ್ಲದೇ ಗದ್ದೆಗಳೆಲ್ಲ ಒಣಗಿ ಕಟಾವಿಗೆ ಸಜ್ಜಾಗಿದ್ದ ಭತ್ತದ ಪೈರು ಕೂಡ ಉಪ್ಪು ನೀರಿನಿಂದಾಗಿ ನಾಶವಾಗಿದೆ ಎನ್ನುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ.

ಬದು ನಿರ್ಮಿಸಲಿ
ಅದಲ್ಲದೇ ನದಿ ತೀರದಲ್ಲಿ ಬದು ನಿರ್ಮಿಸದೆ ಇರುವುದರಿಂದ ಪ್ರತೀ ಬಾರಿಯೂ ಈ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ, ನದಿ ತೀರದಲ್ಲಿ ಬದು ನಿರ್ಮಿಸಿ ಉಪ್ಪು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿ ಎನ್ನುವುದಾಗಿ ಕೃಷಿಕರು ಆಗ್ರಹಿಸಿದ್ದಾರೆ.

ಶೀಘ್ರ ಹಲಗೆ ಜೋಡಿಸಿ
ಗದ್ದೆಗೆ ನೀರು ನುಗ್ಗಲು ಹೊಸಾಡು ಗ್ರಾ.ಪಂ. ಬೇಜವಾಬ್ದಾರಿಯೇ ಕಾರಣ ಎಂದು ಈ ಭಾಗದ ಜನ ಆರೋಪಿಸಿದ್ದು, ಅರಾಟೆ ಬಳಿ ಕಳುವಿನ ಬಾಗಿಲಿನಲ್ಲಿ ಸೌಪರ್ಣಿಕಾ ನದಿಗೆ ನಿರ್ಮಿಸಿದ ಕಿರು ಅಣೆಕಟ್ಟಿಗೆ ಪ್ರತಿ ವರ್ಷ ಹಲಗೆ ಹಾಕಲಾಗುತ್ತಿತ್ತು. ಆದರೆ ಈ ವರ್ಷ ಅದು ಸಂಪೂರ್ಣ ಹಾಳಾಗಿರುವುದರಿಂದ ಹೊಸದಾಗಿ ಹಲಗೆ ಜೋಡಣೆ ಕಾರ್ಯ ಆಗಬೇಕಾಗಿದೆ. ಅದನ್ನು ಸ್ಥಳೀಯ ಪಂಚಾಯತ್‌ ಮಾಡಬೇಕಿತ್ತು. ಇದರೊಂದಿಗೆ ಕಿರು ಅಣೆಕಟ್ಟು ಶಿಥಿಲಗೊಂಡಿದ್ದು, ಗ್ರಾ.ಪಂ. ಕಿಂಡಿ ಅಣೆಕಟ್ಟು ದುರಸ್ತಿ ಮಾಡಿ, ಹಲಗೆಗಳನ್ನು ಹಾಕಿ ಗದ್ದೆಗಳಿಗೆ ಉಪ್ಪು ನೀರು ನುಗ್ಗದಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Advertisement

ಅನುದಾನ ಇಡಲಾಗಿದೆ
ಮೂಡುಬೈಲು ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿರುವುದು ಬುಧವಾರ ಗಮನಕ್ಕೆ ಬಂದಿದೆ. ಪ್ರತೀ ಬಾರಿಯೂ ಕಿಂಡಿ ಅಣೆಕಟ್ಟಿನಲ್ಲಿ ಹಲಗೆ ಜೋಡಣೆಯನ್ನು ಸ್ಥಳೀಯರೇ ಮಾಡುತ್ತಿದ್ದರು. ಅಣೆಕಟ್ಟಿನ ಗೇಟ್‌ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ಸರಿಪಡಿಸಲು ಪಂಚಾಯತ್‌ನ ಅನುದಾನ ಇಡಲಾಗಿದೆ. ಅಣೆಕಟ್ಟು ದುರಸ್ತಿಯಾದರೆ ನೀರು ನುಗ್ಗುವ ಸಮಸ್ಯೆ ಪರಿಹಾರ ಆಗಲಿದ್ದು, ಶೀಘ್ರ ದುರಸ್ತಿ ಕಾಮಗಾರಿ ಮಾಡಲಾಗುವುದು.
-ಪಾರ್ವತಿ, ಹೊಸಾಡು ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next